Advertisement

ಕೇಂದ್ರ ಯೋಜನೆ: 80 ಕೋಟಿ ಮಂದಿಗೆ ಪ್ರಯೋಜನ

01:47 AM Oct 31, 2021 | Team Udayavani |

ಬಂಟ್ವಾಳ: ದೇಶದ ಪ್ರತಿಯೊಬ್ಬ ಪ್ರಜೆಯ ಮನೆ ಬಾಗಿಲಿಗೂ ಸರಕಾರದ ಯೋಜನೆಗಳು ತಲುಪಬೇಕು ಎನ್ನುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಕಲ್ಪನೆಯಂತೆ ಕೇಂದ್ರದ ಸುಮಾರು 146 ಯೋಜನೆಗಳಿಂದ 80 ಕೋಟಿಗೂ ಅಧಿಕ ಮಂದಿ ಪ್ರಯೋಜನ ಪಡೆದಿದ್ದಾರೆ ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ರಾಜ್ಯ ಸಚಿವ ಭಗವಂತ್‌ ಖೂಬ ಹೇಳಿದರು.

Advertisement

ಅವರು ಶನಿವಾರ ಬಿ.ಸಿ.ರೋಡಿನ ಬಂಟರ ಭವನದಲ್ಲಿ ದ.ಕ. ಜಿಲ್ಲೆಯ ರಾಷ್ಟ್ರೀಕೃತ, ಖಾಸಗಿ, ಸ್ಥಳೀಯ ಬ್ಯಾಂಕ್‌ಗಳು, ನಬಾರ್ಡ್‌ ಹಾಗೂ ಇತರ ಸರಕಾರಿ ಇಲಾಖೆಗಳ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ ಜಿಲ್ಲಾ ಮಟ್ಟದ ಸಾಲ ಸಂಪರ್ಕ ಕಾರ್ಯಕ್ರಮ ಮತ್ತು ಕೇಂದ್ರ ಸರಕಾರದ ವಿವಿಧ ಯೋಜನೆಗಳ ಮಾಹಿತಿ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.

ತನ್ನ ದೀರ್ಘ‌ಕಾಲದ ಅನುಭವದಿಂದ ಪ್ರಧಾನಿಯವರು ಕಳೆದ 7 ವರ್ಷಗಳಲ್ಲಿ ದೇಶದ ಎಲ್ಲ ಭಾಗದ ಅಭಿವೃದ್ಧಿಯೂ ವಿಶೇಷ ಗಮನ ನೀಡಿದ್ದಾರೆ. ಕಾಂಗ್ರೆಸ್‌ ಪಕ್ಷವು ಜಾತಿ ರಾಜಕಾರಣದ ಮೂಲಕ ಯೋಜನೆಗಳನ್ನು ರೂಪಿಸಿದ್ದರೆ ಪ್ರಧಾನಿಯವರು 135 ಕೋಟಿ ಭಾರತೀಯರ ಏಳಿಗೆಗೆ ಯೋಜನೆಗಳನ್ನು ತರುತ್ತಿದ್ದಾರೆ ಎಂದರು.

ಜಿಲ್ಲೆಯ 10 ಲಕ್ಷ ಮಂದಿಗೆ ಪ್ರಯೋಜನ
ಸಂಸದ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲು ಮಾತನಾಡಿ, ಜಿಲ್ಲೆಯ ಹಿರಿಯ ನಾಯಕರಾಗಿದ್ದ ಜನಾರ್ದನ ಪೂಜಾರಿ ಅವರು ಸಾಲ ಮೇಳದ ಮೂಲಕ ಸಾಮಾನ್ಯರೂ ಬ್ಯಾಂಕಿಗೆ ಹೋಗುವಂತೆ ಮಾಡಿದ್ದು, ಪ್ರಸ್ತುತ ಪ್ರಧಾನಿ ಮೋದಿಯವರು ಸಾಮಾನ್ಯರಿಗೆ ಡಿಜಿಟಲ್‌ ಬ್ಯಾಂಕಿಂಗ್‌ ವ್ಯವಸ್ಥೆ ಕಲ್ಪಿಸಿದ್ದಾರೆ. ಜಿಲ್ಲೆಯಲ್ಲಿ 2 ಲಕ್ಷ ಮಂದಿಗೆ ಮುದ್ರಾ ಯೋಜನೆಯ ಮೂಲಕ ಸುಮಾರು 3 ಸಾವಿರ ಕೋ.ರೂ. ಸಾಲ ನೀಡಲಾಗಿದ್ದು, ಕಿಸಾನ್‌ ಸಮ್ಮಾನ್‌ ಯೋಜನೆಯಲ್ಲಿ 1.5 ಲಕ್ಷ ಮಂದಿಗೆ 215 ಕೋ.ರೂ. ಅನುದಾನ ನೀಡಲಾಗಿದೆ. ಒಂದು ತಿಂಗಳಲ್ಲಿ 500 ಕೋ.ರೂ. ಸಾಲ ವಿತರಣೆ ಮಾಡಿದ್ದು, ಒಟ್ಟು ಕೇಂದ್ರದ ಯೋಜನೆಗಳಿಂದ ಜಿಲ್ಲೆಯ ಸುಮಾರು 10 ಲಕ್ಷ ಮಂದಿ ಪ್ರಯೋಜನ ಪಡೆದಿದ್ದಾರೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಶಾಸಕ ರಾಜೇಶ್‌ ನಾೖಕ್‌ ಉಳಿಪ್ಪಾಡಿಗುತ್ತು ಮಾತನಾಡಿ, ಸರಕಾರದ ಯೋಜನೆಗಳ ಮೂಲಕ ಬ್ಯಾಂಕಿಂಗ್‌ ಕ್ಷೇತ್ರದಿಂದ ಜಿಲ್ಲೆಯ ಅಭಿವೃದ್ಧಿಗೆ ಯಾವ ರೀತಿಯ ಕೊಡುಗೆ ಲಭಿಸಿದೆ ಎಂದು ತಿಳಿಯುವ ನಿಟ್ಟಿನಲ್ಲಿ ಈ ಕಾರ್ಯಕ್ರಮ ಅಗತ್ಯವಾಗಿದ್ದು, ಮುದ್ರಾ ಸಾಲ ಯೋಜನೆಯ ಮೂಲಕ ದೇಶದ 12 ಕೋಟಿ ಮಂದಿಗೆ ಸ್ವ ಉದ್ಯೋಗ ಲಭಿಸಿರುವುದು ಹೆಮ್ಮೆಯ ವಿಚಾರ ಎಂದರು.

Advertisement

ರಾಜ್ಯ ಬಂದರು ಮತ್ತು ಮೀನುಗಾರಿಕಾ ಇಲಾಖೆ ಸಚಿವ ಎಸ್‌.ಅಂಗಾರ, ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಎಸ್‌ಸಿಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಡಾ| ಎಂ.ಎನ್‌. ರಾಜೇಂದ್ರ ಕುಮಾರ್‌ ಮಾತನಾಡಿದರು.

ಇದನ್ನೂ ಓದಿ:ಟಿ20 ವಿಶ್ವಕಪ್‌: ಬಟ್ಲರ್‌ ಬ್ಯಾಟಿಂಗಿಗೆ ನಡುಗಿದ ಆಸೀಸ್‌

ಶಾಸಕರಾದ ಡಿ. ವೇದವ್ಯಾಸ ಕಾಮತ್‌, ಡಾ| ವೈ. ಭರತ್‌ ಶೆಟ್ಟಿ, ಹರೀಶ್‌ ಪೂಂಜ, ಸಂಜೀವ ಮಠಂದೂರು, ವಿಧಾನ ಪರಿಷತ್‌ ಸದಸ್ಯ ಪ್ರತಾಪಸಿಂಹ ನಾಯಕ್‌, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಮೇಯರ್‌ ಪ್ರೇಮಾನಂದ ಶೆಟ್ಟಿ, ವಿವಿಧ ನಿಗಮಗಳ ಅಧ್ಯಕ್ಷರಾದ ಹರಿಕೃಷ್ಣ ಬಂಟ್ವಾಳ, ನಿತಿನ್‌ ಕುಮಾರ್‌, ಸಂತೋಷ್‌ ಕುಮಾರ್‌ ರೈ, ರವೀಂದ್ರ ಶೆಟ್ಟಿ ಉಳಿದೊಟ್ಟು, ಜಿ.ಪಂ. ಸಿಇಒ ಡಾ| ಕುಮಾರ್‌, ಮನಪಾ ಆಯುಕ್ತ ಅಕ್ಷಯ ಶ್ರೀಧರ್‌, ವಿವಿಧ ಬ್ಯಾಂಕ್‌ಗಳ ಪ್ರಮುಖರಾದ ಸಂಗೀತ ಎಸ್‌. ಕರ್ತ, ರಾಜೇಶ್‌ ಗುಪ್ತಾ, ಗಾಯತ್ರಿ, ವಿನಯ ಭಟ್‌ ವಿ.ಜೆ., ಸಿ.ಜೆ.ಮಹೇಶ್‌, ಸೂರ್ಯನಾರಾಯಣ, ಅಮಿತ್‌ ಕುಮಾರ್‌, ಶ್ರೀಕಾಂತ್‌ ಕೆ, ಪಿ.ಸಿ. ದಾಮೋದರ್‌, ರಾಘವ ನಾಯಕ್‌, ಎಸಿ ಮದನಮೋಹನ್‌, ತಹಶೀಲ್ದಾರ್‌ ರಶ್ಮಿ ಎಸ್‌.ಆರ್‌., ತಾ.ಪಂ. ಇಒ ರಾಜಣ್ಣ, ಮುಡಾ ಅಧ್ಯಕ್ಷ ರವಿಶಂಕರ ಮಿಜಾರು ಮೊದಲಾದವರು ಉಪಸ್ಥಿತರಿದ್ದರು.

ದ.ಕ. ಜಿಲ್ಲಾಧಿಕಾರಿ ಡಾ| ರಾಜೇಂದ್ರ ಕೆ.ವಿ. ಪ್ರಸ್ತಾವನೆಗೈದರು. ಜಿಲ್ಲಾ ಲೀಡ್‌ ಬ್ಯಾಂಕ್‌ ಮ್ಯಾನೇಜರ್‌ ಪ್ರವೀಣ್‌ ಎಂ.ಪಿ. ಸ್ವಾಗತಿಸಿದರು. ಡಾ| ಶಿವಪ್ರಕಾಶ್‌ ಹಾಗೂ ಐರಿನ್‌ ರೆಬೆಲ್ಲೊ ಕಾರ್ಯಕ್ರಮ ನಿರ್ವಹಿಸಿದರು.

ಸಮಾರಂಭದಲ್ಲಿ ಸಮ್ಮಾನ
ಕೇಂದ್ರ ಸಚಿವರು, ಸಂಸದರು, ಇಂಟರ್‌ ನ್ಯಾಶನಲ್‌ ಐಕಾನ್‌ ಪ್ರಶಸ್ತಿ ಪಡೆದ ಡಾ| ಎಂ.ಎನ್‌. ರಾಜೇಂದ್ರ ಕುಮಾರ್‌, ಪದ್ಮಶ್ರೀ ಪುರಸ್ಕೃತ ಹರೇಕಳ ಹಾಜಬ್ಬ ಅವರನ್ನು ಸಮ್ಮಾನಿಸಲಾಯಿತು. ಸಮಾರಂಭದಲ್ಲಿ ನಟ ಪುನೀತ್‌ ರಾಜ್‌ ಕುಮಾರ್‌ ಅವರಿಗೆ ಶ್ರದ್ಧಾಂಜಲಿ ಅರ್ಪಿಸಲಾಗಿದ್ದು, ಬುಡಾ ಅಧ್ಯಕ್ಷ ಬಿ. ದೇವದಾಸ್‌ ಶೆಟ್ಟಿ ನುಡಿನಮನ ಸಲ್ಲಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next