Advertisement

ಕೇಂದ್ರ ಕಚ್ಚಾ ಸಾಮಗ್ರಿ ಉತ್ಪಾದನಾ ನೀತಿ ಶೀಘ್ರ ಜಾರಿ

12:55 PM Dec 13, 2017 | Team Udayavani |

ಬೆಂಗಳೂರು: ಮೇಕ್‌ ಇನ್‌ ಇಂಡಿಯಾ ಭಾಗವಾಗಿ ಯುವಜನತೆಗೆ ಹೆಚ್ಚಿನ ಉದ್ಯೋಗ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ಕಚ್ಚಾ ಸಾಮಗ್ರಿ ಉತ್ಪಾದನಾ ನೀತಿಯನ್ನು ಶೀಘ್ರದಲ್ಲೇ ಜಾರಿಗೊಳಿಸಲಾಗುವುದು ಎಂದು ಕೇಂದ್ರ ಕೈಗಾರಿಕಾ ಸಚಿವ ಅನಂತ್‌ ಗೀತೆ ಹೇಳಿದರು.

Advertisement

ನಗರದ ಬೆಂಗಳೂರು ಅಂತಾರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರದಲ್ಲಿ ಆಯೋಜನೆಯಾಗಿರುವ ಐದು ದಿನಗಳ “ಎಕ್ಸ್‌ಕಾನ್‌- 2017′ ದಕ್ಷಿಣ ಏಷ್ಯಾದ ಅತಿ ದೊಡ್ಡ ನಿರ್ಮಾಣ ಸಲಕರಣೆ ಮತ್ತು ಯಂತ್ರೋಪಕರಣಗಳ ಮೇಳಕ್ಕೆ ಮಂಗಳವಾರ ಚಾಲನೆ ನೀಡಿ ಮಾತನಾಡಿದರು.

“ಕೈಗಾರಿಕಾ ಕ್ಷೇತ್ರದ ಬೆಳವಣಿಗೆಗೆ ಸಾಕಷ್ಟು ಆದ್ಯತೆ ನೀಡಲಾಗಿದೆ. ಹೆಚ್ಚು ಉದ್ಯೋಗ ಸೃಷ್ಟಿಗೆ ಪೂರಕ ವಾತಾವರಣ ನಿರ್ಮಿಸಲು, ಭಾರಿ ಉತ್ಪಾದನಾ ವಲಯಕ್ಕೆ ಅಗತ್ಯವಾದ ಬಿಡಿ ಭಾಗಗಳ ತಯಾರಿಕೆ, ಮೂಲ ಸೌಕರ್ಯ ಕಲ್ಪಿಸಲು ಪೂರಕವಾದ ಅಂಶಗಳನ್ನು ಕಚ್ಚಾ ಸಾಮಗ್ರಿ ಉತ್ಪಾದನಾ ನೀತಿ ಒಳಗೊಂಡಿರಲಿದೆ ಎಂದು ಹೇಳಿದರು.

ಟೂಲ್ಸ್‌ ಪಾರ್ಕ್‌: ದೇಶೀಯ ಮಾರುಕಟ್ಟೆಯ ಬಲವರ್ಧನೆಗೆ ಆದ್ಯತೆ ನೀಡಿ ಉತ್ಪಾದನಾ ವಲಯಕ್ಕೆ ಒತ್ತು ನೀಡಲಾಗುತ್ತಿದೆ. ಭಾರಿ ಸಂಖ್ಯೆಯಲ್ಲಿ ಉದ್ಯೋಗ ಸೃಷ್ಟಿಸುವ ಯೋಜನೆಗಳ ಅನುಷ್ಠಾನ ಕಾರ್ಯವೂ ನಡೆದಿದೆ. ತುಮಕೂರಿನ ಟೂಲ್ಸ್‌ ಪಾರ್ಕ್‌ ನಿರ್ಮಾಣಕ್ಕೆ ಚಾಲನೆ ದೊರಕಿದ್ದು, ಕಾಲಮಿತಿಯೊಳಗೆ ಕಾಮಗಾರಿ ಪೂರ್ಣಗೊಳ್ಳಲಿದೆ.

ಒಟ್ಟು 421 ಕೋಟಿ ರೂ. ವೆಚ್ಚದ ಯೋಜನೆಗೆ ಕೈಗಾರಿಕಾ ಸಚಿವಾಲಯ ಈಗಾಗಲೇ 55 ಕೋಟಿ ರೂ. ಬಿಡುಗಡೆ ಮಾಡಿದೆ. ಮುಂದಿನ ಮೂರು ವರ್ಷಗಳಲ್ಲಿ ಆರೇಳು ಕೋಟಿ ರೂ. ವೆಚ್ಚದಲ್ಲಿ ಹೆದ್ದಾರಿ ಅಭಿವೃದ್ಧಿ ಕಾರ್ಯ ನಡೆಯಲಿದ್ದು, ಸರಕು ಸಾಗಣೆಗೆ ಅಗತ್ಯ ಮೂಲ ಸೌಕರ್ಯ ಸಿಗಲಿದೆ ಎಂದು ಹೇಳಿದರು.

Advertisement

ಭಾರತೀಯ ಕೈಗಾರಿಕೆಗಳ ಒಕ್ಕೂಟ (ಸಿಐಐ) ಅಧ್ಯಕ್ಷೆ ಶೋಭನಾ ಕಾಮಿನೇನಿ, ಉಪ ಮಹಾನಿರ್ದೇಶಕ ವೀರೇಂದ್ರ ಗುಪ್ತ, ನೀತಿ ಆಯೋಗದ ಸಿಇಒ ಅಮಿತಾಬ್‌ ಕಾಂತ್‌ ಇತರರು ಉಪಸ್ಥಿತರಿದ್ದರು.

ಸುಧಾರಿತ ಯಂತ್ರೋಪಕರಣಗಳು: ಭಾರತ ಮಾತ್ರವಲ್ಲದೇ ದಕ್ಷಿಣ ಏಷ್ಯಾ ರಾಷ್ಟ್ರಗಳ ಪ್ರತಿಷ್ಠಿತ ಕಂಪನಿಗಳು ಒಳಗೊಂಡಂತೆ 900 ಪ್ರದರ್ಶನ ಮಳಿಗೆಗಳು ಮೇಳದಲ್ಲಿವೆ. ಸುಮಾರು 200 ವಿದೇಶಿ ಪ್ರತಿನಿಧಿಗಳು ಪಾಲ್ಗೊಳ್ಳುತ್ತಿರುವ ಮೇಳದಲ್ಲಿ ರಸ್ತೆ ನಿರ್ಮಾಣ, ರೈಲ್ವೆ ಯೋಜನೆ, ಗಣಿ, ಮೂಲ ಸೌಕರ್ಯ ಕಲ್ಪಿಸುವ ಕಾರ್ಯಗಳಲ್ಲಿ ಬಳಸುವ ಸುಧಾರಿತ ಯಂತ್ರೋಪಕರಣಗಳ ದೊಡ್ಡ ಸಂಗ್ರಹವೇ ಪ್ರದರ್ಶನದಲ್ಲಿದೆ. ಪ್ರಾತ್ಯಕ್ಷಿಕೆಗಳ ಮೂಲಕ ಕಾರ್ಯಕ್ಷಮತೆ ಪ್ರದರ್ಶನವು ಗಮನ ಸೆಳೆದಿದೆ.

Advertisement

Udayavani is now on Telegram. Click here to join our channel and stay updated with the latest news.

Next