Advertisement

ಸೆಂಟ್ರಲ್‌ ರೈಲು ನಿಲ್ದಾಣ; ಟಿಕೆಟ್‌ಗಾಗಿ ಪ್ರಯಾಣಿಕರ ಪಡಿಪಾಟಲು!

12:06 PM Sep 15, 2022 | Team Udayavani |

ಸ್ಟೇಟ್‌ಬ್ಯಾಂಕ್‌: ಮಂಗಳೂರು ಸೆಂಟ್ರಲ್‌ ರೈಲು ನಿಲ್ದಾಣದ “ಅನ್‌ ರಿಸರ್ವ್ಡ್‌ ಟಿಕೆಟ್‌ ಕೇಂದ್ರ’ ಪ್ರತ್ಯೇಕ ಕಟ್ಟಡಕ್ಕೆ ಸ್ಥಳಾಂತರವಾದ ಪರಿಣಾಮ ರೈಲು ಪ್ರಯಾಣಿಕರಿಗೆ ಎದುರಾಗಿರುವ ಕಿರಿಕಿರಿಗೆ ಇನ್ನೂ ಮುಕ್ತಿ ದೊರೆತಿಲ್ಲ!

Advertisement

ರೈಲು ನಿಲ್ದಾಣದ ಪ್ರವೇಶ ದ್ವಾರದಲ್ಲೇ ಸ್ವಯಂ ಚಾಲಿತ ಟಿಕೆಟ್‌ ನೀಡುವ ಯಂತ್ರವನ್ನು ಇರಿಸಲಾಗಿದ್ದರೂ ಅದರ ಮುಂಭಾಗ ಪ್ರಯಾಣಿಕರು ದೊಡ್ಡ ಸರತಿ ಸಾಲಿನಲ್ಲಿ ನಿಲ್ಲಬೇಕಾದ ಪರಿಸ್ಥಿತಿ ಇದೆ. ಅದರಲ್ಲೂ ವಾರಾಂತ್ಯ, ರಜೆ ಇದ್ದಾಗ ನಿಲ್ದಾಣದ ಹೊರಗೆ ಕೂಡ ನಿಲ್ಲುವಂತಹ ಪರಿಸ್ಥಿತಿಯಿದೆ. ವಿಶ್ವದರ್ಜೆಯ ರೈಲು ನಿಲ್ದಾಣ ಮಾಡಲಾಗುವುದು ಎಂದು ಜನಪ್ರತಿನಿಧಿಗಳು ಆಗೊಮ್ಮೆ-ಈಗೊಮ್ಮೆ ಹೇಳುತ್ತಲೇ ಇದ್ದಾರೆ. ಆದರೆ ಮಂಗಳೂರಿನಲ್ಲಿ ರೈಲು ಪ್ರಯಾಣಿಕರ ನಿತ್ಯ ಕ್ಯೂ ನಿಲ್ಲುವ ಪ್ರಮೇಯ ತಪ್ಪಿಲ್ಲ.

ಯಾಕೆ ಸಮಸ್ಯೆ?

ಈ ಹಿಂದೆ ಸೆಂಟ್ರಲ್‌ ರೈಲು ನಿಲ್ದಾಣದ ಪ್ರವೇಶ ದ್ವಾರದ ಬಳಿ ಲೋಕಲ್‌ ಟಿಕೆಟ್‌ ಕೌಂಟರ್‌ ಹಾಗೂ ಅದೇ ಕಟ್ಟಡದ ಕೊನೆಯಲ್ಲಿ ಬುಕಿಂಗ್‌ ಕೇಂದ್ರವಿತ್ತು. ಪ್ರಸ್ತುತ ಇವೆರಡನ್ನೂ ಸುಮಾರು 200 ಮೀಟರ್‌ ದೂರ ಪ್ರತ್ಯೇಕ ಕಟ್ಟಡಕ್ಕೆ ಸ್ಥಳಾಂತರಿಸಲಾಗಿದೆ. ರೈಲು ಹೊರಡುವ ಸಮಯದ ಕೊನೆಯ ಘಳಿಗೆಯಲ್ಲಿ ಟಿಕೆಟ್‌ ಗಾಗಿ ರೈಲು ನಿಲ್ದಾಣಕ್ಕೆ ಬಂದವರು ಮಾಹಿತಿ ದೊರೆಯದೆ ಕಕ್ಕಾಬಿಕ್ಕಿಯಾಗುತ್ತಿದ್ದಾರೆ.

ರೈಲು ಹೋದ ಬಳಿಕ ಟಿಕೆಟ್‌!

Advertisement

ಟಿಕೆಟ್‌ ಪಡೆಯುವುದಕ್ಕೆ ಬರುವವರು ತನ್ನ ವಾಹನ ಪಾರ್ಕಿಂಗ್‌ ಜಾಗದಲ್ಲಿ ನಿಲ್ಲಿಸಿ ಟಿಕೆಟ್‌ ಪಡೆಯಲು ಟಿಕೆಟ್‌ ಕೇಂದ್ರಕ್ಕೆ ಕಾಲ್ನಡಿಗೆಯಲ್ಲಿ ತೆರಳಬೇಕು. ಅಲ್ಲಿಂದ ಮತ್ತೆ ರೈಲು ನಿಲ್ದಾಣಕ್ಕೆ ಬರಬೇಕು. ಕೊನೆಯ ಹಂತದಲ್ಲಿ ಟಿಕೆಟ್‌ ಮಾಡುವವರಿಗೆ ಟಿಕೆಟ್‌ ಸಿಗುವ ವೇಳೆಗೆ ರೈಲು ಹೋಗಿರುತ್ತದೆ!

ಎಲ್ಲೆಡೆಯೂ ಕ್ಯೂ!

ರೈಲ್ವೇ ಹೋರಾಟಗಾರ ಹನುಮಂತ ಕಾಮತ್‌ ಅವರು “ಸುದಿನ’ ಜತೆಗೆ ಮಾತನಾಡಿ, “ಸೆಂಟ್ರಲ್‌ ರೈಲು ನಿಲ್ದಾಣದಲ್ಲಿ ಈ ಹಿಂದೆ ರಿಸರ್ವೇಶನ್‌ಗೆ ಪ್ರತ್ಯೇಕ ಕೌಂಟರ್‌ ಇತ್ತು. ನಿಲ್ದಾಣದಲ್ಲಿಯೇ ಅನ್‌ ರಿಸರ್ವ್ಡ್‌ ಟಿಕೆಟ್‌ ಕೌಂಟರ್‌ ಪ್ರತ್ಯೇಕ ಇತ್ತು. ಆದರೆ ಈಗ ಎರಡೂ ಕೇಂದ್ರಗಳನ್ನು ಒಂದೇ ಕಟ್ಟಡಕ್ಕೆ ಸ್ಥಳಾಂತರಿಸಿದ ಪರಿಣಾಮ ಟಿಕೆಟ್‌ ಪಡೆಯಲು ಪ್ರಯಾಣಿಕರು ಸಮಸ್ಯೆ ಅನುಭವಿಸುತ್ತಿದ್ದಾರೆ. ಜನರಿಗೆ ಮಾಹಿತಿ ಇಲ್ಲದೆ ಅನ್‌ ಅನ್‌ ರಿಸರ್ವ್ಡ್‌ ಟಿಕೆಟ್‌ಗಾಗಿ ಸ್ಟೇಷನ್‌ಗೆ ತೆರಳಿ ಕ್ಯೂ ನಿಲ್ಲಬೇಕಾದ ಪ್ರಮೇಯವಿದೆ. ಇಂತಹ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಬಗ್ಗೆ ರೈಲ್ವೇ ಇಲಾಖೆ ಗಮನ ಹರಿಸಬೇಕು’ ಎನ್ನುತ್ತಾರೆ.

ಕನ್ನಡವೇ ಮಾಯ!

ಟಿಕೆಟ್‌ ಕೌಂಟರ್‌ನಲ್ಲಿ ಇಂಗ್ಲಿಷ್‌ ಮಾತ್ರ ಪ್ರಾಧಾನ್ಯತೆ ಪಡೆದಿದೆ. ಕನ್ನಡ ಮಾಯವಾಗಿದೆ. ಹೀಗಾಗಿ ಸ್ಥಳೀಯ ಕೆಲವರು ಟಿಕೆಟ್‌ ಕೌಂಟರ್‌ನಲ್ಲಿಯೂ ಕಿರಿಕಿರಿ ಎದುರಿಸುತ್ತಿದ್ದಾರೆ. ಸ್ಥಳೀಯ ಭಾಷೆಗೆ ಪ್ರಾಧಾನ್ಯತೆ ನೀಡಬೇಕು ಎಂಬ ಸರಕಾರದ ನಿರ್ದೇಶನವೆಲ್ಲವೂ ಕಡತದಲ್ಲಿಯೇ ಬಾಕಿಯಾಗಿದೆ!

1 ಮೆಷಿನ್‌ನ ಎದುರು ಹಲವು ಜನ!

ಈ ಹಿಂದೆ ಸೆಂಟ್ರಲ್‌ ರೈಲು ನಿಲ್ದಾಣದಲ್ಲಿ 3 ಆಟೊಮೇಟೆಡ್‌ ಮೆಷಿನ್‌ಗಳು ಕಾರ್ಯ ನಡೆಸುತ್ತಿತ್ತು. ಈಗ ಕೇವಲ ಒಂದು ಮಾತ್ರ ಸರಿಯಿದೆ. ಅದನ್ನು ಪೀಕ್‌ ಅವರ್‌ನಲ್ಲಿ ನಿರ್ವಹಿಸಲು ಒಬ್ಬರಿಗೆ ವಹಿಸಲಾಗಿದೆ. ಮೆಷಿನ್‌ ಒಂದೇ ಇರುವುದರಿಂದ ಹಾಗೂ ಜನರೆಲ್ಲರೂ ಸೆಂಟ್ರಲ್‌ ಸ್ಟೇಶನ್‌ ಕಟ್ಟಡಕ್ಕೇ ಟಿಕೆಟ್‌ ಗಾಗಿ ಬರುವುದರಿಂದ ಬಹುತೇಕ ಸಮಯ ಇಲ್ಲಿ ಜನರ ಸಾಲು ದೊಡ್ಡದಿದೆ.

Advertisement

Udayavani is now on Telegram. Click here to join our channel and stay updated with the latest news.

Next