Advertisement
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತೈಲ ಬೆಲೆ ನಿರ್ವಹಣೆಯಲ್ಲಿ ಅನೇಕ ವರ್ಷಗಳಿಂದ ಇರುವ ಪದ್ಧತಿಯನ್ನೇ ನಾವು ಮುಂದುವರಿಸಿದ್ದೇವೆ. ಆದರೆ, ಪಾರದರ್ಶಕತೆಗೆ ಒತ್ತು ನೀಡಿದ್ದೇವೆ ಎಂದರು. ಸಂಕಷ್ಟದಲ್ಲಿ ಆತ್ಮನಿರ್ಭರದ ಬಲ ಕೋವಿಡ್-19 ವಿಶ್ವದ ಅನೇಕ ದೇಶಗಳನ್ನು ಕಾಡುತ್ತಿದೆ. ಇಂತಹ ಸಂಕಷ್ಟ ಸ್ಥಿತಿಯಲ್ಲಿ ಸುಮಾರು 137 ಕೋಟಿಯಷ್ಟು ಜನಸಂಖ್ಯೆ ಹೊಂದಿರುವ ಭಾರತ ಕೋವಿಡ್ ನಿರ್ವಹಣೆಯಲ್ಲಿ ವಿಶ್ವಕ್ಕೆ ಮಾದರಿಯಾಗಿದೆ. ಕೋವಿಡ್-19 ಸಂಕಷ್ಟ ಸ್ಥಿತಿಯಲ್ಲಿ ಆರ್ಥಿಕ ಬಲವರ್ಧನೆ ದೃಷ್ಟಿಯಿಂದ ಪ್ರಧಾನಿ ನರೇಂದ್ರ ಮೋದಿಯವರು ಮೇ 12ರಂದು ಘೋಷಿಸಿದ ಆತ್ಮನಿರ್ಭರ ವಿಶೇಷ ಪ್ಯಾಕೇಜ್ ಕೃಷಿ, ಉದ್ಯಮ, ಮೂಲಭೂತ ಸೌಕರ್ಯ, ಕಲ್ಲಿದ್ದಲು-ಗಣಿ, ಉದ್ಯೋಗ, ಕಾರ್ಮಿಕರು ಇತ್ಯಾದಿ ಕ್ಷೇತ್ರಗಳಿಗೆ ಮಹತ್ವದ ವರದಾನವಾಗಿ ಪರಿಣಮಿಸಿದೆ ಎಂದು ತಿಳಿಸಿದರು.
Related Articles
Advertisement
ಆತ್ಮನಿರ್ಭರ ಅಡಿಯಲ್ಲಿ ಸುಮಾರು 41 ಕಲ್ಲಿದ್ದಲು ಬ್ಲಾಕ್‌ಗಳನ್ನು ವಾಣಿಜ್ಯ ಉದ್ದೇಶಗಳಿಗೆ ಹರಾಜು ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ. ದೇಶದಲ್ಲಿ ತಲಾವಾರು ವಿದ್ಯುತ್ ಬಳಕೆ ಪ್ರಮಾಣ 3,000 ಕಿಲೋ ವ್ಯಾಟ್ ಇದ್ದು, ಅಮೆರಿಕದಲ್ಲಿ ಇದು 30 ಸಾವಿರ ಕಿಲೋವ್ಯಾಟ್, ಇತರೆ ದೇಶಗಳಲ್ಲಿ 11-12 ಸಾವಿರ ಕಿಲೋವ್ಯಾಟ್ ಇದ್ದು, ವಿದ್ಯುತ್ ಉತ್ಪಾದನೆ ಸುಧಾರಣೆಗೆ ಮಹತ್ವದ ಸಹಕಾರಿ ಆಗಲಿದೆ. ಕಲ್ಲದ್ದಲು ವಾಣಿಜ್ಯ ಗಣಿಗಾರಿಕೆಗೆ ಎಲ್ಲಿಯೂ ಲೋಪ ಆಗದಂತೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಬಳ್ಳಾರಿಯಲ್ಲಿ ಆಗಿರುವ ಗಣಿಗಾರಿಕೆ ಆವಾಂತರವೇ ಬೇರೆ. ಕಲ್ಲಿದ್ದಲು ಗಣಿಗಾರಿಕೆಯಲ್ಲಿ ಅಂತಹ ತಪ್ಪುಗಳಿಗೆ ಅವಕಾಶವೇ ಇಲ್ಲ. ಪ್ರತಿ ಬ್ಲಾಕ್‌ಗಳ ನಿಗದಿ, ಅದೇ ಜಾಗದಲ್ಲಿ ಗಣಿಗಾರಿಕೆ, ಸ್ಯಾಟ್ ಲೈಟ್ ಕ್ಯಾಮೆರಾಗಳ ನಿಗಾ, ಲೋಪ ಕಂಡು ಬಂದಲ್ಲಿ ತಕ್ಷಣವೇ ಸಂಬಂಧಿಸಿದ ರಾಜ್ಯಗಳಿಗೆ ಮಾಹಿತಿ ರವಾನೆ ಸೇರಿದಂತೆ ಏನೆಲ್ಲಾ ಪಾರದರ್ಶಕ ಕ್ರಮಗಳು ಸಾಧ್ಯವೋ ಅವುಗಳೆಲ್ಲವನ್ನು ಕೈಗೊಂಡಿದ್ದೇವೆ ಎಂದರು.
ಜಿಪಿಎಸ್‌ನಲ್ಲಿ ಲೋಪ : ರೈತರ ಬೆಳೆವಿಮೆ ಸಮೀಕ್ಷೆಯನ್ನು ಇದೇ ಮೊದಲ ಬಾರಿಗೆ ಜಿಪಿಎಸ್‌ನಡಿ ಕೈಗೊಳ್ಳಲಾಗುತ್ತಿದೆ. ಈ ಹಿಂದೆ ಆಗುತ್ತಿರುವ ಲೋಪ ತಡೆಗೆ ತಂತ್ರಜ್ಞಾನ ವ್ಯವಸ್ಥೆ ಕೈಗೊಳ್ಳಲಾಗಿದೆ. ಪ್ರಥಮ ವರ್ಷ ಆಗಿರುವುದರಿಂದ ಜಿಪಿಎಸ್‌ನಲ್ಲಿ ಕೆಲವೊಂದು ಲೋಪಗಳು ಕಂಡುಬಂದಿರುವುದು ನಮ್ಮ ಗಮನಕ್ಕೂ ಬಂದಿದ್ದು, ಈ ಕುರಿತು ಈಗಾಗಲೇ ರಾಜ್ಯ ಸರಕಾರದ ಕಾರ್ಯದರ್ಶಿಯವರಿಗೆ ಮಾತನಾಡಿದ್ದು, ಈ ಬಾರಿ ಸರಳೀಕರಣದೊಂದಿಗೆ ವಿಮೆ ವಿತರಿಸಿ ರೈತರು ಯಾವ ಬೆಳೆ ಬಿತ್ತಿದ್ದಾರೋ ಅದೇ ಬೆಳೆ ಅವರ ಪಹಣಿಯಲ್ಲಿ ನೋಂದಣಿ ಆಗುವಂತೆ ಮಾಡಬೇಕೆಂದು ಸೂಚಿಸಿದ್ದು, ಶೀಘ್ರದಲ್ಲೇ ಈ ನಿಟ್ಟಿನಲ್ಲಿ ಕ್ರಮ ಜಾರಿಯಾಗುವ ವಿಶ್ವಾಸವಿದೆ ಎಂದು ಜೋಶಿ ತಿಳಿಸಿದರು.
ಕಾಂಗ್ರೆಸ್ ಭ್ರಷ್ಟಾಚಾರದ ಮೂಲ ಸೆಲೆ : ರಾಜ್ಯದಲ್ಲಿ ಕೋವಿಡ್-19 ಸಲಕರಣೆಗಳ ಖರೀದಿಯಲ್ಲಿ ಅವ್ಯವಹಾರ ನಡೆದಿದ್ದರೆ, ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಮಾಧ್ಯಮ ಹೇಳಿಕೆ ನೀಡುವ ಬದಲು ಅಗತ್ಯ ದಾಖಲೆಗಳನ್ನು ಕೊಡಲಿ. ತಪ್ಪು ನಡೆದಿದ್ದರೆ ತಕ್ಕ ಶಿಕ್ಷೆ ಅನುಭವಿಸುತ್ತಾರೆ. ಕಾಂಗ್ರೆಸ್ ಪಕ್ಷ ಎಂದರೇನೆ ಭ್ರಷ್ಟಾಚಾರದ ಮೂಲ ಸೆಲೆಯಾಗಿದೆ. ಅವರು ಭ್ರಷ್ಟಾಚಾರ ಬಗ್ಗೆ ಮಾತನಾಡುತ್ತಿದ್ದಾರೆ. ಪ್ರತಿ ವಿಚಾರದಲ್ಲೂ ರಾಜಕಾರಣ ಮಾಡುವುದು ಕಾಂಗ್ರೆಸ್ಸಿಗರ ಗುಣ ಎಂದರು. ಹುಬ್ಬಳ್ಳಿ-ಅಂಕೋಲಾ ರೈಲ್ವೆ ಮಾರ್ಗ ಜಾರಿಗೆ ಕೆಲ ಪಟ್ಟಭದ್ರ ಹಿತಾಸಕ್ತಿಗಳು ಅಡ್ಡಿಯಾಗುತ್ತಿವೆ. ಈ ವಿಚಾರವನ್ನು ಹಸಿರು ನ್ಯಾಯಾಧಿಕರಣದಲ್ಲಿ ಪರಿಹಾರ ಕಂಡುಕೊಳ್ಳಲು ಯತ್ನಿಸಲಾಗುವುದು ಎಂದು ತಿಳಿಸಿದರು.