Advertisement

ಶೀಘ್ರ ಧಾರವಾಡಕ್ಕೆ ಕೇಂದ್ರ ಸಂಗೀತ-ನಾಟಕ ಅಕಾಡೆಮಿ: ಸಚಿವ ಜೋಶಿ

10:55 PM Jan 09, 2024 | Team Udayavani |

ಧಾರವಾಡ : ಧಾರವಾಡ ಸಂಗೀತದ ತವರು. ಹೀಗಾಗಿ ಇಲ್ಲಿ ಕೇಂದ್ರದ ಸಂಗೀತ- ನಾಟಕ ಅಕಾಡೆಮಿ ಕೂಡ ತರಲಾಗುವುದು ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಭರವಸೆ ನೀಡಿದರು.

Advertisement

ನಗರದ ಸೃಜನಾ ರಂಗಮಂದಿರದಲ್ಲಿ ಪಂ.ಕುಮಾರ ಗಂಧರ್ವರ ಜನ್ಮಶತಾಬ್ದಿ ಅಂಗವಾಗಿ ಧಾರವಾಡದ ಜಿ.ಬಿ.ಜೋಶಿ ಮೆಮೋರಿಯಲ್ ಟ್ರಸ್ಟ, ಹುಬ್ಬಳ್ಳಿಯ ಕ್ಷಮತಾ ಹಾಗೂ ಕೇಂದ್ರ ಸಂಸ್ಕೃತಿ ಇಲಾಖೆ, ಎಲ್‌ಐಸಿ ಸಹಯೋಗದಲ್ಲಿ ಮಂಗಳವಾರದಿಂದ (ಜ.೯) ಜ.೧೩ರವರೆಗೆ ಆಯೋಜಿಸಿರುವ ಐದು ದಿನಗಳ ಸಂಗೀತ ಕಾರ್ಯಕ್ರಮ ಉದ್ಘಾಟಿಸಿ, ಅವರು ಮಾತನಾಡಿದರು.

ಈಗಾಗಲೇ ಧಾರವಾಡಕ್ಕೆ ಬಂದಿರುವ ಲಲಿತ ಕಲಾ ಅಕಾಡೆಮಿಯಂತೆಯೇ ಕೇಂದ್ರ ಸಂಗೀತ ಹಾಗೂ ನಾಟಕ ಅಕಾಡೆಮಿಯನ್ನು ಧಾರವಾಡದಲ್ಲಿ ಸ್ಥಾಪಿಸುವುದಾಗಿ ಭರವಸೆ ನೀಡಿದ ಜೋಶಿ, ಫೆಬ್ರವರಿ ಒಳಗಾಗಿ ಅಂತರ್ ರಾಷ್ಟ್ರೀಯಮಟ್ಟದ ಕಲಾವಿದರನ್ನು ಆಹ್ವಾನಿಸಿ ಹುಬ್ಬಳ್ಳಿ- ಧಾರವಾಡದಲ್ಲಿ ತಲಾ ಒಂದೊಂದು ತೆರೆದ ಮೈದಾನದಲ್ಲಿ ಕಾರ್ಯಕ್ರಮ ಆಯೋಜಿಸಿದರೆ ಅದಕ್ಕೆ ಸಂಪೂರ್ಣ ವ್ಯವಸ್ಥೆ ಮಾಡಿಕೊಡುವುದಾಗಿ ತಿಳಿಸಿದರು.

ಸಂಗೀತ ಅಂದರೆ ಹಾಡಿ ಕುಣಿಯುವುದಲ್ಲ. ಹಾಗಾದರೆ ಅದು ವಿದೇಶಿ ಸಂಗೀತ. ನಮ್ಮ ಸಂಗೀತ ಕೇಳಿದರೆ ಆರೋಗ್ಯ ಸುಧಾರಿಸಲಿದೆ. ಕೆಲ ತಲೆನೋವು ಇರುವ ರೋಗಿಗಳಿಗೆ ಹಿಂದೂಸ್ಥಾನಿ ಸಂಗೀತ ಕೇಳಲು ವೈದ್ಯರು ಸೂಚಿಸುತ್ತಿದ್ದು, ಅಂತಹ ಶಕ್ತಿ ನಮ್ಮ ಸಂಗೀತಕ್ಕಿದೆ. ಹೀಗೆ ನಮ್ಮತನ ಹಾಗೂ ಭಾರತೀಯತೆಯನ್ನು ಕೀಳರಿಮೆಯಿಂದ ನೋಡುವ ಮನೋಸ್ಥಿತಿ ದೂರ ಮಾಡಿದ ಪ್ರಧಾನಿ ನರೇಂದ್ರ ಮೋದಿ ಭಾರತವನ್ನು
ಆರ್ಥಿಕವಾಗಿ ಸಬಲತೆ ಕಡೆಗೆ ಒಯ್ಯುತ್ತಿದ್ದಾರೆ ಎಂದರು.

ವಿಶ್ವಮಟ್ಟದಲ್ಲಿ ಭಾರತ ತಾಕತ್ವಾನ್ ದೇಶ ಆಗುತ್ತಿರುವುದರಿಂದ ಭಾರತದ ಕುಟುಂಬ ಪದ್ಧತಿ, ಆಹಾರ ಪದ್ಧತಿ, ಔಷಽಯ ಪದ್ಧತಿ, ಯೋಗ ಪದ್ಧತಿ ಉಳಿದ ದೇಶದವರಿಗೆ ಮಾದರಿ ಆಗುತ್ತಿದೆ. ಇದು ವ್ಯವಸ್ಥಿತ ಜೀವನಕ್ಕೆ ಪೂರಕಕೂಡ ಆಗಿದೆ. ಹೀಗಾಗಿ ನಾವು ನಮ್ಮತನದ ಬಗ್ಗೆ ಅಪಾರ ಗೌರವ, ನಂಬಿಕೆ ಇಟ್ಟುಕೊಳ್ಳಬೇಕು ಎಂದು ಸಲಹೆ ನೀಡಿದರು.

Advertisement

ವಿಧಾನಸಭಾ ಪ್ರತಿಪಕ್ಷ ಉಪನಾಯಕ ಅರವಿಂದ ಬೆಲ್ಲದ, ಧಾರವಾಡ ಸಂಸ್ಕೃತಿ ಇನ್ನೂ ಬಲವಾಗಿ ಬೆಳೆಯಬೇಕೆಂದರೆ ಬೇರೆ ಬೇರೆ ಕಲೆಗಳು ಇಲ್ಲಿ ನೆಲೆಯೂರಬೇಕು. ಅದಕ್ಕಾಗಿ ಲಲಿತಕಲಾ ಅಕಾಡೆಮಿಯಂತೆಯೇ ಸಂಗೀತ- ನಾಟಕ ಅಕಾಡೆಮಿಯನ್ನು ಧಾರವಾಡಕ್ಕೆ ತರಬೇಕು ಎಂದು
ಮನವಿ ಮಾಡಿದರು.

ಹು-ಧಾ ಮೇಯರ್‌ವೀಣಾ ಭರದ್ವಾಡ, ಎಲ್‌ಐಸಿಯ ದೊರೆಸ್ವಾಮಿ ನಾಯ್ಕ, ರಮಾಕಾಂತ ಜೋಶಿ, ಆನಂದ ಜುಂಜುರವಾಡ ಸೇರಿದಂತೆ ಹಲವರು ಇದ್ದರು. ಗೋವಿಂದ ಜೋಶಿ ಸ್ವಾಗತಿಸಿದರು. ರವಿ ಕುಲಕರ್ಣಿ ನಿರೂಪಿಸಿದರು.ನಂತರ ಅಂತರ ರಾಷ್ಟ್ರೀಯ ಮಟ್ಟದ ಸುವಿಖ್ಯಾತ ಕಲಾವಿದ ಪುಣೆಯ ಪಂ. ವಿಜಯ ಕೋಪರಕರ ಅವರ ಗಾಯನದೊಂದಿಗೆ ನಾದಲಹರಿ ಹರಿದುಬಂದಿತು. ನಂತರ ಸುವಿಖ್ಯಾತ ವಯೋಲಿನ್ ವಾದಕಿ ಡಾ.ಎನ್. ರಾಜಮ್ ಹಾಗೂ ಅವರ ಮೊಮ್ಮಗಳು ನಂದಿನಿ ಶಂಕರ ಅವರಿಂದ ವಯೋಲಿನ್ ಜುಗಲಬಂದಿ ಜರುಗಿತು.

Advertisement

Udayavani is now on Telegram. Click here to join our channel and stay updated with the latest news.

Next