ಬೆಂಗಳೂರು: ಮುಂಬೈ, ದೆಹಲಿ ಸೇರಿದಂತೆ ಹಲವು ನಗರಗಳಲ್ಲಿ ಲಾಕ್‌ಡೌನ್‌ನಿಂದ ಕೊರೋನಾ ನಿಯಂತ್ರಣಕ್ಕೆ ಬಂದಿದ್ದು, ಬೆಂಗಳೂರಿನಲ್ಲಿ ಇದೇ ರೀತಿ ಲಾಕ್‌ಡೌನ್ ಮಾಡಿದ ಮೇಲೆ ಸೋಂಕು ಕಡಿಮೆಯಾಗುತ್ತಿದೆ. ಆದ್ದರಿಂದ ಮೇ ೨೪ರಂದು ಲಾಕ್ ಡೌನ್ ಕೊನೆಗೊಳ್ಳುವ ಮೊದಲು ಅನಿವಾರ್ಯವಾದರೆ ಲಾಕ್‌ಡೌನ್‌ನ್ನು ಮುಂದುವರೆಸಬೇಕು ಎಂದು ಕೇಂದ್ರ ರಾಸಾಯನಿಕ ಹಾಗೂ ರಸಗೊಬ್ಬರ ಖಾತೆಯ ಸಚಿವರಾದ ಡಿ.ವಿ. ಸದಾನಂದಗೌಡರು ರಾಜ್ಯ ಸರ್ಕಾರಕ್ಕೆ ಸಲಹೆ ನೀಡಿದರು.
ನಗರದ ಮಹಾಲಕ್ಷ್ಮೀ ಲೇಔಟ್ ವಿಧಾನ ಸಭಾ ಕ್ಷೇತ್ರದ ನಂದಿನಿ ಬಡಾವಣೆಯಲ್ಲಿ ಬಿಬಿಎಂಪಿಯಿಂದ ಕೆಂಪೇಗೌಡ ಸಮುದಾಯ ಭವನ ಉಚಿತ ಕೋವಿಡ್ ಕೇರ್ ಸೆಂಟರ್ ಉದ್ಘಾಟಿಸಿ ಮಾತನಾಡಿದರು.
ಲಸಿಕೆ ವಿಚಾರದಲ್ಲಿ ಯಾವುದೇ ಗೊಂದಲವಿಲ್ಲ. ಲಸಿಕೆ ಉತ್ಪಾದನೆ ಕಡಿಮೆ ಇರುವುದರಿಂದ ಸಮಸ್ಯೆಯಾಗಿದೆ. ಆದಷ್ಟು ಬೇಗ ಎಲ್ಲ ವಯಸ್ಸಿನವರಿಗೂ ಲಸಿಕೆ ನೀಡಲಾಗುವುದು. ಲಸಿಕೆ ಉತ್ಪಾದಕ ಕಂಪನಿಗಳ ಜೊತೆ ನಿರಂತರ ಸಂಪರ್ಕದಲ್ಲಿದ್ದು, ಮುಂದಿನ ದಿನಗಳಲ್ಲಿ ಎಲ್ಲವೂ ಸರಿ ಹೋಗಲಿದೆ ಎಂದರು.
ಲಸಿಕೆ ವಿಚಾರದಲ್ಲಿ ರಾಜ್ಯ ಸರ್ಕಾರ ಸಮರ್ಪಕವಾಗಿ ಕಾರ್ಯ ನಿರ್ವಹಿಸುತ್ತಿಲ್ಲ ಎಂದಾದರೆ ರಾಜೀನಾಮೆ ಕೊಟ್ಟು ಮನೆಗೆ ಹೋಗಿ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್ ಕೆಳುತ್ತಿದ್ದಾರಲ್ಲ ಎಂದು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಕೆಲಸವಿಲ್ಲದವರು ರಾಜೀನಾಮೆ ಕೇಳುತ್ತಾರೆ. ನಮಗೆ ಕೋವಿಡ್ ಕೆಲಸವಿದೆ ಎಂದು ತಿರುಗೇಟು ನೀಡಿದರು.
ಸಚಿವ ಕೆ.ಗೋಪಾಲಯ್ಯ ಮಾತನಾಡಿ, ನಮ್ಮ ಕ್ಷೇತ್ರದ ಜನರ ರಕ್ಷಣೆಗೆ ೫೦ ಬೆಡ್‌ಗಳ ಆಕ್ಸಿಜನ್ ವ್ಯವಸ್ಥೆ, ೪೦ ಸಾಮಾನ್ಯ ಬೆಡ್ ಒಟ್ಟು ೯೦ ಬೆಡ್ ಸುಸಜ್ಜಿತವಾದ ಕೋವಿಡ್ ಕೇರ್ ಸೆಂಟರ್ ಇಂದು ವಿಧ್ಯುಕ್ತವಾಗಿ ಚಾಲನೆ ನೀಡಲಾಗಿದ್ದು, ಇಂದಿನಿಂದ ನೋಂದಣಿ ಆರಂಭವಾಗಿದ್ದು, ಈಗಾಗಲೇ ೩ ಉಚಿತ ಮೊಬೈಲ್ ಆಕ್ಸಿಜನ್ ಆಂಬ್ಯುಲೆನ್ಸ್ ವಾಹನಗಳನ್ನು ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುತ್ತಿದೆ ಎಂದು ಹೇಳಿದರು.
ಬಿಬಿಎಂಪಿ ಆಯುಕ್ತ ಗೌರವ ಗುಪ್ತಾ ಮಾತನಾಡಿದರು. ರಾಜ್ಯ ಒಬಿಸಿ ಮೋರ್ಚಾ ಅಧ್ಯಕ್ಷ ನರೇಂದ್ರ ಬಾಬು, ಬಿಬಿಎಂಪಿ ಮಾಜಿ ಉಪ ಮಹಾಪೌರ ಎಸ್. ಹರೀಶ್, ಬೆಂಗಳೂರು ಉತ್ತರ ಜಿಲ್ಲಾ ಬಿಜೆಪಿ ಅಧ್ಯಕ್ಷ ನಾರಾಯಣ ಗೌಡ, ಉಪಾಧ್ಯಕ್ಷ ಎನ್. ಜಯರಾಂ, ಮಂಡಲ ಬಿಜೆಪಿ ಅಧ್ಯಕ್ಷ ರಾಘವೇಂದ್ರ ಶೆಟ್ಟಿ, ಪಾಲಿಕೆ ಮಾಜಿ ಸದಸ್ಯ ಕೆ.ವಿ. ರಾಜೇಂದ್ರ ಕುಮಾರ್, ಬಿಬಿಎಂಪಿ ವಲಯ ಆಯುಕ್ತ ಬಸವರಾಜು, ವಲಯ ಸಂಯೋಜಕ ಉಜ್ವಲ್ ಘೋಷ್, ಬಿಬಿಎಂಪಿ ಪಶ್ಚಿಮ ವಲಯ ಜಂಟಿ ಆಯುಕ್ತ ಶಿವಸ್ವಾಮಿ, ಬಿಬಿಎಂಪಿ ಹಿರಿಯ ಆರೋಗ್ಯ ಅಧಿಕಾರಿ ಮನೋರಂಜನ್ ಹೆಗ್ಡೆ, ಕ್ಷೇತ್ರ ಆರೋಗ್ಯ ಅಧಿಕಾರಿ ಮಂಜುಳಾ ತಿಮ್ಮರಸು ಉಪಸ್ಥಿತರಿದ್ದರು.