ಹೊಸದಿಲ್ಲಿ: ಕೊರೊನಾ ಸೋಂಕು ದೃಢಪಟ್ಟ 30 ದಿನಗಳೊಳಗೆ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿಯ ಕುಟುಂಬ ದವರಿಗೂ 50 ಸಾವಿರ ರೂ. ಪರಿಹಾರ ಕೊಡಲಾಗುತ್ತದೆ ಎಂದು ಕೇಂದ್ರ ಸರಕಾರ ಸುಪ್ರೀಂ ಕೋರ್ಟ್‌ಗೆ ಅರಿಕೆ ಮಾಡಿಕೊಂಡಿದೆ.
ಸೋಂಕು ದೃಢಪಟ್ಟು ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿರುವ ವೇಳೆ ಅಥವಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯದೆ ಇದ್ದ ಸಂದರ್ಭದಲ್ಲಿ ಸೋಂಕಿತರು ಆತ್ಮಹತ್ಯೆ ಮಾಡಿಕೊಂಡಿದ್ದರೆ ಅವುಗಳನ್ನೂ “ಕೊರೊನಾ ಸಾವು’ ಎಂದು ಪರಿಗಣಿಸಿ, ಅವರ ಕುಟುಂಬಕ್ಕೆ ರಾಷ್ಟ್ರೀಯ ವಿಪತ್ತು ನಿರ್ವಹಣ ಸಂಸ್ಥೆಯ ಶಿಫಾರಸಿನ ಅನ್ವಯ ಪರಿಹಾರ ನೀಡಲಾಗುತ್ತದೆ ಎಂದು ನ್ಯಾ| ಎಂ.ಆರ್.ಶಾ ಮತ್ತು
ನ್ಯಾ| ಎ.ಎಸ್.ಬೋಪಣ್ಣ ನೇತೃತ್ವದ ನ್ಯಾಯಪೀಠಕ್ಕೆ ಸರಕಾರ ವಿವರಿಸಿದೆ. ಸೋಂಕಿನಿಂದ ಸಾವಿಗೀಡಾದ ವ್ಯಕ್ತಿಯ ಕುಟುಂಬ ಸದಸ್ಯರು ತಮ್ಮ ವ್ಯಾಪ್ತಿಯ ಜಿಲ್ಲಾ ಸಮಿತಿಯ ಮುಂದೆ ನಿಯಮಗಳ ಅನ್ವಯ ಪರಿಹಾರ ಕೋರಿ ಅರ್ಜಿ ಸಲ್ಲಿಕೆ ಮಾಡಬಹುದು ಎಂದೂ ಹೇಳಿದೆ.
ಸುಪ್ರೀಂ ಮೆಚ್ಚುಗೆ: ಕೊರೊನಾ ಸೋಂಕಿನ ಪರಿಸ್ಥಿತಿ ಯನ್ನು ಕೇಂದ್ರ ಸರಕಾರ ಉತ್ತಮವಾಗಿ ನಿಭಾಯಿಸಿದೆ ಎಂದು ಸುಪ್ರೀಂ ಕೋರ್ಟ್ ಮೆಚ್ಚುಗೆ ವ್ಯಕ್ತಪಡಿಸಿದೆ. “ಕೊರೊನಾ ಸ್ಥಿತಿಯನ್ನು ಇತರ ಎಲ್ಲ ದೇಶಗಳಿಗಿಂತಲೂ ನಮ್ಮ ದೇಶದಲ್ಲಿ ಉತ್ತಮವಾಗಿ ನಿಭಾಯಿಸಲಾಗಿದೆ’ ಎಂದು ನ್ಯಾ| ಎಂ.ಆರ್. ಶಾ ಹೇಳಿದ್ದಾರೆ. “ಸೋಂಕಿನಿಂದ ನೊಂದವರ ಸಮಸ್ಯೆಗೆ ಸ್ಪಂದಿಸುವುದಕ್ಕೆ ಪ್ರಯತ್ನ ನಡೆಸಲಾಗುತ್ತಿದೆ. ಇದರಿಂದ ನ್ಯಾಯಾಲಯ ತೃಪ್ತಿಗೊಂಡಿದೆ’ ಎಂದೂ ನ್ಯಾಯಪೀಠ ಹೇಳಿದೆ.