Advertisement

Central Government ಕೃಷಿ ಸಿಂಚಾಯಿ ಯೋಜನೆ: ರಾಜ್ಯದಿಂದ ಹೆಚ್ಚುವರಿ ಸಬ್ಸಿಡಿ ಖೋತಾ

12:49 AM Jul 08, 2024 | Team Udayavani |

ಉಡುಪಿ: ಕೇಂದ್ರ ಸರಕಾರದ ಕೃಷಿ ಸಿಂಚಾಯಿ ಯೋಜನೆಗೆ ರಾಜ್ಯ ಸರಕಾರ ನೀಡುತ್ತಿದ್ದ ಸಬ್ಸಿಡಿ ಪ್ರಮಾಣವನ್ನು ಕಡಿಮೆ ಮಾಡುವ ಸಾಧ್ಯತೆಯಿದೆ. ಜತೆಗೆ ಈವರೆಗೆ ಯೋಜನೆಯಡಿ ಫ‌ಲಾನುಭವಿಗಳಿಗೆ ಯಾವುದೇ ಕಾರ್ಯಾದೇಶ ನೀಡಿಲ್ಲ.

Advertisement

ಕೃಷಿ ಮತ್ತು ತೋಟಗಾರಿಕೆ ಇಲಾಖೆ ಗಳ ಮೂಲಕ ರೈತರ ತೋಟಕ್ಕೆ ಹನಿ ನೀರಾವರಿ ವ್ಯವಸ್ಥೆ ಕಲ್ಪಿಸಲು ಪೈಪ್‌ ಸೆಟ್‌ ಮತ್ತು ಅದಕ್ಕೆ ಪೂರಕವಾದ 8 ವಿಧದ ಸಾಮಗ್ರಿಗಳನ್ನು ಸಬ್ಸಿಡಿ ಆಧಾರದಲ್ಲಿ ಕೃಷಿ ಸಿಂಚಾಯಿ ಯೋಜನೆಯಡಿ ನೀಡಲಾ ಗುತ್ತದೆ. ಕೃಷಿ ಇಲಾಖೆಯಿಂದ ಅರ್ಜಿ ಆಹ್ವಾನಿಸಲಾಗಿದೆಯೇ ವಿನಾ ರೈತರಿಗೆ ಯೋಜನೆ ಅನುಷ್ಠಾನಕ್ಕೆ ಅನುಮತಿ ನೀಡಿಲ್ಲ. ತೋಟಗಾರಿಕೆ ಇಲಾಖೆಯಿಂದ ಅರ್ಜಿಯನ್ನೇ ಆಹ್ವಾನಿಸಿಲ್ಲ.

ಸಬ್ಸಿಡಿ ಲೆಕ್ಕಾಚಾರ
ಕೇಂದ್ರ ಸರಕಾರದ ಯೋಜನೆ ಇದಾಗಿರುವುದರಿಂದ ಅನುಷ್ಠಾನದಲ್ಲಿಯೇ ಕೇಂದ್ರ ಸರಕಾರ ಶೇ. 33ರಷ್ಟು ಸಬ್ಸಿಡಿ ನೀಡುತ್ತದೆ. ಇದಕ್ಕೆ ರಾಜ್ಯ ಸರಕಾರ ಶೇ. 22ರಷ್ಟು ಕಡ್ಡಾಯವಾಗಿ ಕನಿಷ್ಠ ಸಬ್ಸಿಡಿ ನೀಡಬೇಕು.

ಅದಕ್ಕಿಂತ ಹೆಚ್ಚು ಎಷ್ಟು ಬೇಕಾದರೂ ನೀಡಲು ಅವಕಾಶವಿದ್ದು, ಗರಿಷ್ಠ ಶೇ. 90ರಷ್ಟು ನೀಡಬಹುದು. ಉಳಿದ ಶೇ. 10ರಷ್ಟನ್ನು ರೈತರು ಅಥವಾ ಕೃಷಿಕರು ಭರಿಸಬೇಕು. ರಾಜ್ಯದಲ್ಲಿ ಬಿಜೆಪಿ ಸರಕಾರ ಇದ್ದಾಗ ರಾಜ್ಯ ಸರಕಾರದ ಶೇ. 22ರಷ್ಟು ಕಡ್ಡಾಯ ಸಬ್ಸಿಡಿಯ ಜತೆಗೆ ಶೇ. 35ರಷ್ಟು ಹೆಚ್ಚುವರಿ ಸಬ್ಸಿಡಿ ಸೇರಿಸಿ, ಕೇಂದ್ರ ಸರಕಾರದ ಶೇ. 33ರಷ್ಟು ಒಳಗೊಂಡಂತೆ ಶೇ. 90ರಷ್ಟು ಸಬ್ಸಿಡಿ ದರಲ್ಲಿ ಯೋಜನೆಯನ್ನು ಅನುಷ್ಠಾನ ಮಾಡುತ್ತ ಬರಲಾಗಿತ್ತು. ಈಗ ಹೊಸ ಸರಕಾರ ಬಂದ ಬಳಿಕ ಎಲ್ಲವೂ ಬದಲಾಗಿದೆ.

ಅನುಷ್ಠಾನ ಹೇಗೆ?
ಈ ಯೋಜನೆಯಡಿ ರೈತರಿಗೆ ನೇರವಾಗಿ ಹಣ ನೀಡುವ ವ್ಯವಸ್ಥೆಯಿಲ್ಲ. ಬದಲಾಗಿ ಯೋಜನೆಗೆ ಅರ್ಜಿ ಸಲ್ಲಿಸಿದ ರೈತರ ಜಮೀನಿಗೆ ನಿರ್ದಿಷ್ಟ ಸಂಸ್ಥೆಯ ಮೂಲಕ ಹನಿ ನೀರಾವರಿಗೆ ಪೂರಕವಾದ ಪೈಪ್‌ಸೆಟ್‌ಗಳನ್ನು ಒದಗಿಸಿ, ಅಳವಡಿಸಲಾಗುತ್ತದೆ. ಶೇ. 90ರಷ್ಟು ಖರ್ಚನ್ನು ಸರಕಾರಗಳು ಭರಿಸಿದರೆ ಶೇ. 10ರಷ್ಟು ಖರ್ಚನ್ನು ರೈತರು ಅಥವಾ ಕೃಷಿಕರು ಭರಿಸಬೇಕು. ನಿರ್ದಿಷ್ಟ ಸಂಸ್ಥೆಯವರು ತೋಟಕ್ಕೆ ಆಗಮಿಸಿ ಪೈಪ್‌ ಅಳವಡಿಸಿ ಕೊಡುತ್ತಾರೆ.

Advertisement

ಈ ವರ್ಷ ಹೆಚ್ಚುವರಿ ಸಬ್ಸಿಡಿ ಇಲ್ಲ
ಪ್ರಸಕ್ತ ಸಾಲಿನಲ್ಲಿ ರೈತರಿಗೆ ಈ ಯೋಜನೆಯಡಿ ಸೌಲಭ್ಯ ನೀಡುವ ವ್ಯವಸ್ಥೆ ಆರಂಭವಾಗಿದೆ. ಆದರೆ ಕರಾವಳಿ ಭಾಗದಲ್ಲಿ ಮಳೆ ಇರುವುದರಿಂದ ಅಕ್ಟೋಬರ್‌ ಅನಂತರ ಅನುಷ್ಠಾನಕ್ಕೆ ಬರಲಿದೆ. ಹೀಗಾಗಿ ಸದ್ಯ ಕಾರ್ಯಾದೇಶ ನೀಡುತ್ತಿಲ್ಲ. ಮಳೆಗಾಲದಲ್ಲಿ ಕೆಲಸ ಮಾಡಲು ಸಾಧ್ಯವಿಲ್ಲ. ಈ ಹಿಂದೆ ರಾಜ್ಯ ಸರಕಾರವೇ ಶೇ. 57ರಷ್ಟು ಸಬ್ಸಿಡಿ ನೀಡುತಿತ್ತು. ಈ ವರ್ಷ ರಾಜ್ಯ ಸರಕಾರ ಶೇ. 22ರಷ್ಟು ಮಾತ್ರ ಸಬ್ಸಿಡಿ ನೀಡುವ ಸಾಧ್ಯತೆಯಿದೆ. ಅಂದರೆ ಕೇಂದ್ರ ಶೇ. 33 ಹಾಗೂ ರಾಜ್ಯದ ಶೇ. 22ರಷ್ಟು ಸೇರಿದಂತೆ ಶೇ. 55ರಷ್ಟು ಸಬ್ಸಿಡಿ ಸರಕಾರಗಳಿಂದ ಬರಲಿದೆ. ಶೇ. 45ರಷ್ಟು ರೈತರು ಹಾಕಬೇಕಾಗುತ್ತದೆ. ಹೀಗಾಗಿ ರೈತರಿಗೆ ಹೆಚ್ಚುವರಿ ಹೊರೆಯಾಗುವ ಸಾಧ್ಯತೆ ಇದೆ.

ಏನೇನು ಸೌಲಭ್ಯ?
ಒಂದು ಎಕ್ರೆಗಿಂತ ಕಡಿಮೆ ಜಮೀನು ಇರುವ ರೈತರಿಗೆ 18 ಪೈಪ್‌, 3 ಪೈಪ್‌ಕ್ಯಾಪ್‌, 3 ಸ್ಪ್ರಿಂಕ್ಲರ್‌, 1 ಬೆಂಡ್‌, 1 ಎಂಡ್‌ ಪ್ಲಗ್‌ ಹೀಗೆ 8 ಸಾಮಗ್ರಿಗಳನ್ನು ನೀಡಲಾಗುತ್ತದೆ. ಒಂದು ಎಕ್ರೆ ಗಿಂತ ಹೆಚ್ಚು ಜಮೀನು ಇದ್ದಾಗ 30ರಿಂದ 41 ಪೈಪ್‌, ತಲಾ 5ರಿಂದ 9 ಕ್ಯಾಪ್‌, ಸ್ಪ್ರಿಂಕ್ಲರ್‌ ಸಹಿತ 8 ಸಾಮಗ್ರಿ ನೀಡಲಾಗುತ್ತದೆ.

ಎಷ್ಟು ಅನುದಾನ?
ಒಂದು ಎಕ್ರೆಗಿಂತ ಕಡಿಮೆ ಜಮೀನು ಇದ್ದಾಗ ಗರಿಷ್ಠ 13,211 ರೂ. ಖರ್ಚಾದರೆ 2,496 ರೂ. ರೈತರು ನೀಡಬೇಕಾಗಿತ್ತು. ಜಮೀನು ಒಂದು ಎಕ್ರೆಗಿಂತ ಹೆಚ್ಚಿದ್ದಾಗ 19,429 ರೂ.ಗಳಿಂದ 28,050 ರೂ.ಗಳ ವರೆಗೂ ಖರ್ಚಾದಾಗ ರೈತರು 4,139ರಿಂದ 5,772 ರೂ.ಗಳ ವರೆಗೂ ಪಾವತಿ ಮಾಡಬೇಕಾಗಿ ಬರುತ್ತಿತ್ತು. ಇದು ಶೇ. 90ರ ಸಬ್ಸಿಡಿ ಲೆಕ್ಕಾಚಾರವಾಗಿದ್ದು. ಸಬ್ಸಿಡಿ ಕಡಿಮೆಯಾದಂತೆ ರೈತರಿಗೆ ಹೊರೆ ಜಾಸ್ತಿಯಾಗುತ್ತದೆ.

ಕೃಷಿ ಸಿಂಚಾಯಿ ಯೋಜನೆಯಡಿ ಅರ್ಜಿ ಪಡೆಯುತ್ತಿದ್ದೇವೆ. ಯಾರಿಗೂಕೆಲಸಕ್ಕೆ ಸಂಬಂಧಿಸಿದ ಕಾರ್ಯಾದೇಶ ನೀಡಿಲ್ಲ. ರಾಜ್ಯ ಸರಕಾರ ಕನಿಷ್ಠ ಸಬ್ಸಿಡಿ ನೀಡಬೇಕಾಗುತ್ತದೆ. ಅದರಂತೆ ಯೋಜನೆ ಅನುಷ್ಠಾನಗೊಳ್ಳಲಿದೆ.
-ಸತೀಶ್‌, ಹಿರಿಯ ತಾಂತ್ರಿಕ
ಅಧಿಕಾರಿ, ಕೃಷಿ ಇಲಾಖೆ, ಉಡುಪಿ

 

Advertisement

Udayavani is now on Telegram. Click here to join our channel and stay updated with the latest news.

Next