Advertisement

ಹೈಕೋರ್ಟ್‌ ಸಿಬ್ಬಂದಿಗೆ ಕೇಂದ್ರ ಸರ್ಕಾರಿ ವೇತನ

09:30 AM Jan 03, 2018 | |

ಬೆಂಗಳೂರು: ರಾಜ್ಯ ಹೈಕೋರ್ಟ್‌ ಸಿಬ್ಬಂದಿಗೆ ಹೊಸ ವರ್ಷದಲ್ಲಿ ಬಂಪರ್‌ ಕೊಡುಗೆ ಸಿಕ್ಕಿದೆ. ಸುಪ್ರೀಂ ಕೋರ್ಟ್‌ ಆದೇಶದಂತೆ ಹೈಕೋರ್ಟ್‌ ಸಿಬ್ಬಂದಿಗೆ ಕೇಂದ್ರ ಸರ್ಕಾರದ ವೇತನ ಶ್ರೇಣಿ ಮಂಜೂರು ಮಾಡಲು ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ.

Advertisement

ವಿಶೇಷವೆಂದರೆ, ಈ ವೇತನ ಶ್ರೇಣಿ 2004ರ ಅಕ್ಟೋಬರ್‌ನಿಂದ ಪೂರ್ವಾನ್ವಯವಾಗಿ ಜಾರಿಗೆ ಬರಲಿದ್ದು, ಇದರಿಂದ ಸರ್ಕಾರದ ಬೊಕ್ಕಸಕ್ಕೆ 319.46 ಕೋಟಿ ರೂ. ಹೊರೆ ಬೀಳಲಿದೆ. ಹೈಕೋರ್ಟ್‌ ನೌಕರರಿಗೆ ಕೇಂದ್ರ ಸರ್ಕಾರದ ವೇತನ ಶ್ರೇಣಿ ಮಂಜೂರು ಮಾಡಬೇಕು ಎಂಬುದು ಹಲವು ದಶಕಗಳ ಬೇಡಿಕೆ. ಈ ಕುರಿತಂತೆ 2004ರ ಅ. 6ರಂದು ಹೈಕೋರ್ಟ್‌ನ ಅಂದಿನ 
ನ್ಯಾಯಮೂರ್ತಿಗಳು ಶಿಫಾರಸು ಮಾಡಿದ್ದರು. ಆದರೆ, ಇದು ನ್ಯಾಯಾಲಯದ ಮೆಟ್ಟಿಲೇರಿತ್ತು. ಕೊನೆಗೆ ಸುಪ್ರೀಂಕೋರ್ಟ್‌ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿಗಳ ಶಿಫಾರಸು ಎತ್ತಿಹಿಡಿದಿತ್ತು. ಈ ಹಿನ್ನೆಲೆಯಲ್ಲಿ ಸಚಿವ ಸಂಪುಟ ಸಭೆ ಈ ತೀರ್ಮಾನ
ಕೈಗೊಂಡಿದೆ.

ಅಕ್ರಮ ಗಣಿಗಾರಿಕೆ: ಗೂಂಡಾ ಕಾಯ್ದೆ ವ್ಯಾಪ್ತಿಗೆ ನಿರ್ಧಾರ
ಬೆಂಗಳೂರು: ಅಕ್ರಮ ಗಣಿಗಾರಿಕೆಯನ್ನು ತಡೆಯಲು ರಾಜ್ಯ ಸರ್ಕಾರ ಕಠಿಣ ನಿಲುವು ತಳೆದಿದ್ದು, ಇದನ್ನು ಗೂಂಡಾ ಕಾಯ್ದೆ ವ್ಯಾಪ್ತಿಗೆ
ಒಳಪಡಿಸಲು ನಿರ್ಧರಿಸಿದೆ. ಈ ಸಂಬಂಧ ಸುಗ್ರೀವಾಜ್ಞೆ ಹೊರಡಿಸಲು ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿದೆ. ಕರ್ನಾಟಕ ಅಪಾಯಕಾರಿ ಚಟುವಟಿಕೆಗಳು, ಡ್ರಗ್ಸ್‌ ಮಾಫಿಯಾ, ಗ್ಯಾಂಬ್ಲಿರ್, ಅನೈತಿಕ ಚಟುವಟಿಕೆ ನಡೆಸುವವರು, ವಿಡಿಯೋ ಮತ್ತು ಆಡಿಯೋ
ನಕಲು ತಡೆ ಕಾಯ್ದೆ 2017ಕ್ಕೆ ಸುಗ್ರೀವಾಜ್ಞೆ ಹೊರಡಿಸಲು ಸಂಪುಟ ನಿರ್ಧರಿಸಿದೆ. ಇತ್ತೀಚೆಗೆ ಅಕ್ರಮ ಗಣಿಗಾರಿಕೆ ಅದರಲ್ಲೂ ವಿಶೇಷವಾಗಿ ಅಕ್ರಮ ಮರಳುಗಾರಿಕೆ ಮತ್ತು ಅದನ್ನು ತಡೆಯಲು ಹೋಗುವ ಅಧಿಕಾರಿಗಳ ಮೇಲೆ ಹಲ್ಲೆ ಹಾಗೂ ಕೊಲೆಗೆ ಪ್ರಯತ್ನ ಹೆಚ್ಚಾಗುತ್ತಿದ್ದು, ಅದನ್ನು ತಡೆಗಟ್ಟಲು ಅಕ್ರಮ ಮರಳು ಗಣಿಗಾರಿಕೆ ಮಾಡುವವರನ್ನು ಗೂಂಡಾ ಕಾಯ್ದೆ ವ್ಯಾಪ್ತಿಗೆ ತಂದು ಅಕ್ರಮ
ಮರಳುಗಾರಿಕೆಗೆ ಕಡಿವಾಣ ಹಾಕಲು ಮುಂದಾಗಿದೆ. ಅಕ್ರಮ ಮರಗಳ್ಳತನವನ್ನೂ ಗೂಂಡಾ ಕಾಯ್ದೆ ವ್ಯಾಪ್ತಿಗೆ ಸೇರಿಸಿದ್ದು, ಟಿಂಬರ್‌ ಲಾಬಿಯನ್ನು ಮಟ್ಟ ಹಾಕಲು ಸರ್ಕಾರ ಈ ಮೂಲಕ ಮುಂದಾಗಿದೆ. ಈ ಮೊದಲು ಭೂಗಳ್ಳರು, ಬಡ್ಡಿ ವ್ಯವಹಾರ ನಡೆಸುವವರು, ವೇಶ್ಯಾವಾಟಿಕೆ ನಡೆಸುವವರ ವಿರುದ್ಧ ಗೂಂಡಾ ಕಾಯ್ದೆಯಡಿ ಕ್ರಮ ಕೈಗೊಳ್ಳಲಾಗುತ್ತಿತ್ತು. ಈಗ ಗಣಿಗಾರಿಕೆ, ವಿಶೇಷವಾಗಿ ಅಕ್ರಮ ಗಣಿಗಾರಿಕೆ ಮತ್ತು ಅಕ್ರಮ ಮರ ಸಾಗಣೆ ತಡೆಯಲು ಹೊಸ ಅಸ್ತ್ರ ಪ್ರಯೋಗಿಸಲು ರಾಜ್ಯ ಸರ್ಕಾರ ಮುಂದಾಗಿದೆ. ಚುನಾವಣೆ ಸಂದರ್ಭದಲ್ಲಿ ಅಕ್ರಮ ಮರಳುಗಾರಿಕೆ ತಡೆಗೆ ಕಠಿಣ ಕ್ರಮಕ್ಕೆ ಮುಂದಾದರೆ, ಸ್ಥಳೀಯವಾಗಿ ಜಿಲ್ಲಾಮಟ್ಟದಲ್ಲಿ ಸಮಸ್ಯೆಯಾಗುವ ಆತಂಕದಿಂದ ಹಿರಿಯ ಸಚಿವರು ಈ ಬಗ್ಗೆ ಆಲೋಚಿಸುವಂತೆ ಸಲಹೆ ನೀಡಿದ್ದರು ಎಂದು ತಿಳಿದು ಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next