Advertisement

Central Government Project: ಕರಾವಳಿಗೆ ಏಕಲವ್ಯ ಮಾದರಿ ವಸತಿ ಶಾಲೆ?

03:28 AM Oct 22, 2024 | Team Udayavani |

ಮಂಗಳೂರು: ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ಗುಣಮಟ್ಟದ ವಸತಿಯುತ ಶಿಕ್ಷಣ ಒದಗಿಸುವ ಕೇಂದ್ರ ಸರಕಾರದ ವಿಶೇಷ ಯೋಜನೆ “ಏಕಲವ್ಯ ಮಾದರಿ ವಸತಿ ಶಾಲೆ’ ಯನ್ನು ಕರಾವಳಿಯಲ್ಲೂ ಆರಂಭಿಸಲು ಪ್ರಕ್ರಿಯೆ ನಡೆಯುತ್ತಿದೆ.

Advertisement

ಜವಾಹರ್‌ ನವೋದಯ ವಿದ್ಯಾಲಯದ ಮಾದರಿ ಯಲ್ಲೇ ವಿದ್ಯಾರ್ಥಿಗಳಿಗೆ ಉಚಿತ ವಸತಿಯುತ ಶಿಕ್ಷಣ ಇಲ್ಲಿ ದೊರೆಯಲಿದೆ. ಸದ್ಯ ರಾಜ್ಯದ 12 ಜಿಲ್ಲೆಗಳಲ್ಲಿ ಮಾತ್ರ ಏಕಲವ್ಯ ಮಾದರಿ ವಸತಿ ಶಾಲೆಗಳಿವೆ. ಪ.ಪಂಗಡಕ್ಕೆ ಸೇರಿದ ವಿದ್ಯಾರ್ಥಿಗಳಿಗೆ ಮಾತ್ರ ಇಲ್ಲಿ ಕಲಿಕೆಗೆ ಅವಕಾಶ. 6ರಿಂದ 12ನೇ ತರಗತಿಯ ವರೆಗೆ ಕೇಂದ್ರೀಯ ಪಠ್ಯಕ್ರಮ (ಸಿಬಿಎಸ್‌ಸಿ)ದೊಂದಿಗೆ ಕಲಿಯಲು ಅವಕಾಶ ವಿದ್ದು, 5ನೇ ತರಗತಿ ಪೂರ್ಣಗೊಳಿಸಿದ ವಿದ್ಯಾರ್ಥಿಗಳು 6ನೇ ತರಗತಿಗೆ ಪ್ರವೇಶ ಪಡೆಯಬಹುದು.

ಬೆಳ್ತಂಗಡಿ, ಕಡಬ ಅಥವಾ ಮೂಲ್ಕಿ ಸಹಿತ ಗ್ರಾಮಾಂತರ ಭಾಗದಲ್ಲಿ ಈ ಶಾಲೆ ನಿರ್ಮಾಣಕ್ಕೆ ಸೂಕ್ತ ನಿವೇಶನ ಗುರುತಿಸುವಂತೆ ಸಂಸದ ಕ್ಯಾ| ಬ್ರಿಜೇಶ್‌ ಚೌಟ ಇತ್ತೀಚೆಗೆ ದ.ಕ. ಜಿಲ್ಲಾಡಳಿತಕ್ಕೆ ನಿರ್ದೇಶನ ನೀಡಿದ್ದರು. ಅದರಂತೆ 15 ಎಕ್ರೆ ನಿವೇಶನ ಕಾಯ್ದಿರಿಸಲು ಮಂಗಳೂರು ಹಾಗೂ ಪುತ್ತೂರು ಉಪ ವಿಭಾಗಗಳ ಆಯುಕ್ತರಿಗೆ ಪ್ರಸ್ತಾವನೆಯೂ ಸಲ್ಲಿಕೆ ಆಗಿದೆ.

ಕಂದಾಯ ಇಲಾಖೆಯಿಂದ ಜಾಗ ದೊರಕಿದಾಕ್ಷಣ ವಸತಿ ಶಾಲೆ ಕುರಿತಂತೆ ಕೇಂದ್ರ ಸರಕಾರದ ಬುಡಕಟ್ಟು ವ್ಯವಹಾರಗಳ ಸಚಿವಾಲಯಕ್ಕೆ ವರದಿ ಸಲ್ಲಿಕೆಯಾಗಲಿದೆ. ಏಕಲವ್ಯದಲ್ಲಿ ವಸತಿ ಶಾಲೆ, ಕ್ರೀಡಾ ಶಾಲೆ ಹಾಗೂ ಡೇ ಸ್ಕೂಲ್‌ ಎಂಬ ಪರಿಕಲ್ಪನೆ ಇದೆ. ಈ ಪೈಕಿ ರಾಜ್ಯದ ಯಾವ ಜಿಲ್ಲೆಯಲ್ಲೂ ಕ್ರೀಡಾ ಶಾಲೆ ಇಲ್ಲ. ಹೀಗಾಗಿ ದಕ್ಷಿಣ ಕನ್ನಡದಲ್ಲಿ ವಸತಿ ಶಾಲೆ ಅಥವಾ ಕ್ರೀಡಾ ಶಾಲೆ ಆರಂಭದ ಬಗ್ಗೆಯೂ ಪ್ರಸ್ತಾವನೆಯಲ್ಲಿ ಉಲ್ಲೇಖಿಸಲು ಚಿಂತಿಸಲಾಗುತ್ತಿದೆ.

ಬುಡಕಟ್ಟು ಸಮುದಾಯಗಳಿಗೆ ಶೈಕ್ಷಣಿಕ ಬಲ ಈ ಮಧ್ಯೆ ದೇಶದಲ್ಲಿ ಅವನತಿಯ ಅಂಚಿನಲ್ಲಿರುವ 75 ದುರ್ಬಲ ಬುಡಕಟ್ಟು ಗುಂಪು (ಪಿವಿಟಿಜಿಸ್‌)ಗಳಲ್ಲಿ ಗುರುತಿಸ ಲಾಗಿರುವ, ಅವಿಭಜಿತ ದ.ಕ. ಜಿಲ್ಲೆಯ ಮೂಲ ನಿವಾಸಿಗಳಾಗಿ ಕರೆಯಲ್ಪಡುವ ಕೊರಗ ಸಮುದಾಯ ಸಹಿತ ಇತರ ಬುಡಕಟ್ಟು ಸಮುದಾಯಗಳ ಶೈಕ್ಷಣಿಕ ಅಭಿವೃದ್ಧಿಗೆ ಪೂರಕವಾಗಿ ಏಕಲವ್ಯ ಶಾಲೆಗಳು ಆರಂಭವಾದರೆ ಆ ವಿದ್ಯಾರ್ಥಿಗಳ ಭವಿಷ್ಯಕ್ಕೂ ಅವಕಾಶ ಸಿಗಲಿದೆ ಎಂಬ ಅಭಿಪ್ರಾಯದ ಹಿನ್ನೆಲೆಯಲ್ಲಿ ಕೇಂದ್ರಕ್ಕೆ ಪ್ರಸ್ತಾವ ಸಲ್ಲಿಕೆಯಾಗಲಿದೆ.

Advertisement

ಏಕಲವ್ಯ ಶಾಲೆ; 6ರಿಂದ 12ರ ವರೆಗೆ ಉಚಿತ ಶಿಕ್ಷಣ
6ರಿಂದ 10ನೇ ತರಗತಿಯವರೆಗೆ ಪ್ರತೀ ತರಗತಿಯಲ್ಲಿ ತಲಾ 40 ಮಕ್ಕಳಿಗೆ ಅವಕಾಶವಿದ್ದರೆ ವಿಜ್ಞಾನ ಮತ್ತು ವಾಣಿಜ್ಯ ವಿಭಾಗದಲ್ಲಿ ಪಿಯು ಶಿಕ್ಷಣಕ್ಕೆ ತಲಾ 80 ವಿದ್ಯಾರ್ಥಿಗಳಿಗೆ ಪ್ರವೇಶಾವಕಾಶ ದೊರಕಲಿದೆ. ರಾಜ್ಯ ಸರಕಾರ ನಿವೇಶನ ಹಾಗೂ ಕೇಂದ್ರ ಸರಕಾರದ ಅನುದಾನ ಇರುತ್ತದೆ. ತರಗತಿ ಕೊಠಡಿಗಳು, ವಿಜ್ಞಾನ ಪ್ರಯೋಗ ಶಾಲೆ, ಗ್ರಂಥಾಲಯ, ಆಡಿಟೋರಿಯಂ, ಕಂಪ್ಯೂಟರ್‌ ಲ್ಯಾಬ್‌, ಅಡುಗೆ ಕೋಣೆ, ಡೈನಿಂಗ್‌ ಜತೆಗೆ ಸಿಬಂದಿ ವಸತಿಗೃಹ ಇರಲಿದೆ.
ಪ್ರವೇಶ ಪರೀಕ್ಷೆ ಮೂಲಕ ಆಯ್ಕೆಯಾಗುವ ಪ್ರತೀ ವಿದ್ಯಾರ್ಥಿಯ ಆಹಾರ, ಸಮವಸ್ತ್ರ, ಶೂ, ಲೇಖನ ಸಾಮಗ್ರಿ, ಪಠ್ಯಪುಸ್ತಕ, ಇತರ ಸಾಮಗ್ರಿ ಸಹಿತ ವಾರ್ಷಿಕ 1.09 ಲಕ್ಷ ರೂ.ಗಳನ್ನು ಕೇಂದ್ರ ಸರಕಾರ ಒದಗಿಸಲಿದೆ. ಹಾಸ್ಟೆಲ್‌, ಸಿಬಂದಿ ವಸತಿಗೃಹ ಸಹಿತ ಶಾಲಾ ಸಂಕೀರ್ಣಕ್ಕಾಗಿ 20 ಕೋಟಿ ರೂ.ವರೆಗೆ ಖರ್ಚು ಮಾಡಬಹುದಾಗಿದೆ.

ಉಭಯ ಜಿಲ್ಲೆಗಳ ವಿದ್ಯಾರ್ಥಿಗಳಿಗೆ ಅನುಕೂಲ
“50 ಸಾವಿರ ಪರಿಶಿಷ್ಟ ಪಂಗಡ ಜನರು ಅಥವಾ 20 ಸಾವಿರ ಬುಡಕಟ್ಟು ಮಂದಿ ಇರುವ ತಾಲೂಕಿಗೆ ಸಂಬಂಧಿಸಿ ಏಕಲವ್ಯ ಶಾಲೆ ಜಿಲ್ಲೆಯಲ್ಲಿ ಆರಂಭಕ್ಕೆ ಅವಕಾಶ ಇದೆ. 2011ರ ಜನಗಣತಿ ಪ್ರಕಾರ 82 ಸಾವಿರ ಪರಿಶಿಷ್ಟ ಪಂಗಡ ಜನರು ದ.ಕ. ಜಿಲ್ಲೆಯಲ್ಲಿದ್ದಾರೆ. ಇವರಿಗೆ ಗುಣಮಟ್ಟದ ಶಿಕ್ಷಣಕ್ಕಾಗಿ ಏಕಲವ್ಯ ಶಾಲೆ ಅಗತ್ಯವಿದೆ ಎಂಬ ನೆಲೆಯಿಂದ ಕೇಂದ್ರಕ್ಕೆ ಪ್ರಸ್ತಾವ ಕಳುಹಿಸಲಾಗುತ್ತಿದೆ. ಪೂರ್ವಭಾವಿಯಾಗಿ ಜಿಲ್ಲೆಯಲ್ಲಿ ಸ್ಥಳ ಗುರುತಿಸಲು ಸೂಚನೆ ಬಂದಿದ್ದು, ಪರಿಶೀಲನೆಯೂ ನಡೆಯುತ್ತಿದೆ. ದ.ಕ. ಜಿಲ್ಲೆಯಲ್ಲಿ ಈ ಶಾಲೆ ಆರಂಭವಾದರೆ ಉಡುಪಿ ಸಹಿತ ಸಮೀಪದ ಜಿಲ್ಲೆಗಳ ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೂ ಅವಕಾಶ ದೊರಕಲಿದೆ.”
-ಬಸವರಾಜು ಎಚ್‌.ಸಿ., ಐಟಿಡಿಪಿ ಜಿಲ್ಲಾ ಅಧಿಕಾರಿ, ದ.ಕ.

Advertisement

Udayavani is now on Telegram. Click here to join our channel and stay updated with the latest news.

Next