Advertisement

Tax Injustice: 5 ವರ್ಷದ ತೆರಿಗೆ ಹಂಚಿಕೆಯಲ್ಲಿ ರಾಜ್ಯಕ್ಕೆ 60 ಸಾವಿರ ಕೋಟಿ ಅನ್ಯಾಯ: ಸಿಎಂ

01:58 AM Oct 14, 2024 | Team Udayavani |

ಮೈಸೂರು/ ಬೆಳಗಾವಿ: ಐದು ವರ್ಷಗಳ ತೆರಿಗೆ ಹಂಚಿಕೆಯಲ್ಲಿ ರಾಜ್ಯಕ್ಕೆ ಸುಮಾರು 60 ಸಾವಿರ ಕೋಟಿ ರೂ. ಅನ್ಯಾಯ ವಾಗಿದೆ. ಬಿಜೆಪಿ ಸಂಸದರು ಕರ್ನಾಟಕದ ಪರ ಧ್ವನಿ ಎತ್ತದೆ, ರಾಜ್ಯದ ಜನರಿಗೆ ದ್ರೋಹ ಎಸಗುತ್ತಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕಿಡಿಕಾರಿದರು.

Advertisement

ರವಿವಾರ ಸುದ್ದಿಗಾರರ ಜತೆ ಮಾತನಾಡಿ, ಕೇಂದ್ರ ಬಿಜೆಪಿ ಸರಕಾರ ರಾಜ್ಯಕ್ಕೆ ದ್ರೋಹ ಬಗೆಯುತ್ತಿದೆ. ನಮಗೆ ತೆರಿಗೆ ಪಾಲಿನಲ್ಲಿ ಅನ್ಯಾಯ ಆಗಿರುವುದಕ್ಕೆ ರಾಜ್ಯದ ಜನರು ಕೇಂದ್ರದ ವಿರುದ್ಧ ಧ್ವನಿ ಎತ್ತಬೇಕು. ಬಿಜೆಪಿಯವರು, ಕೇಂದ್ರ ಸರಕಾರವನ್ನು ಸಮರ್ಥಿಸುತ್ತಿರುವುದು ಕರ್ನಾಟಕದ ಜನರಿಗೆ ಮಾಡುವ ದ್ರೋಹ ಎಂದು ಟೀಕಿಸಿದರು.

ತೆರಿಗೆ ಪಾಲಿನ ಹಂಚಿಕೆಯಲ್ಲಿ ಕೇಂದ್ರ ಮತ್ತೆ ಅನ್ಯಾಯ ಮಾಡಿದೆ. ನಮಗೆ 6,498 ಕೋಟಿ ರೂ.ಬಿಡುಗಡೆ ಮಾಡಿದ್ದಾರೆ. ಆದರೆ ಉತ್ತರಪ್ರದೇಶಕ್ಕೆ 31 ಸಾವಿರ ಕೋಟಿ ರೂ.ಗೂ ಹೆಚ್ಚು ಹಣ ಕೊಟ್ಟಿದ್ದಾರೆ. ನಮಗೂ ಅವರಿಗೂ ಎಷ್ಟೊಂದು ತಾರತಮ್ಯ ಯಾಕೆ? ಎಂದು ಪ್ರಶ್ನಿಸಿದರು. ರಾಜ್ಯದಲ್ಲಿ ಅಷ್ಟೊಂದು ಜನ ಸಂಸದರನ್ನು ಗೆಲ್ಲಿಸಿಕೊಟ್ಟರಲ್ಲಾ ಆ ಸಂಸದರೆಲ್ಲರೂ ಕರ್ನಾಟಕದ ಪರ ಧ್ವನಿ ಎತ್ತಬೇಕಲ್ಲವೇ? ಇವತ್ತಿನವರೆಗೂ ಅವರು ಧ್ವನಿ ಎತ್ತಿಲ್ಲ ಎಂದು ಹೇಳಿದರು.

ಜನರೂ ಧ್ವನಿ ಎತ್ತಬೇಕು
ಸಿದ್ದರಾಮಯ್ಯ ಸವದತ್ತಿಯಲ್ಲಿ ಸುದ್ದಿಗಾರರ ಜತೆ ಮಾತನಾಡಿ, ಕೇಂದ್ರ ಸರಕಾರ ತೆರಿಗೆ ಹಂಚಿಕೆ ವೇಳೆ ನಮ್ಮ ಬೇಡಿಕೆಗೆ ತಕ್ಕಷ್ಟು ಹಣ ನೀಡಿಲ್ಲ. ನ್ಯಾಯಯುತವಾಗಿ ಬರಬೇಕಾದ ಹಣ ರಾಜ್ಯಕ್ಕೆ ಬಂದಿಲ್ಲ. ಈ ಸಂಬಂಧ ಕರ್ನಾಟಕದ ಜನರು ಧ್ವನಿ ಎತ್ತಬೇಕು ಎಂದು ತಿಳಿಸಿದರು. ಒಕ್ಕೂಟ ವ್ಯವಸ್ಥೆ ಮೇಲೆ ನಂಬಿಕೆ ಇದೆ. ಹೀಗಾಗಿ ನ್ಯಾಯಯುತ ಪಾಲು ಕೊಟ್ಟರೆ ನಮಗೆ ಅನುಕೂಲ. ಬಿಜೆಪಿ ಅಧಿಕಾರಕ್ಕೆ ಬಂದಾಗಿನಿಂದ ನ್ಯಾಯಯುತ ತೆರಿಗೆ ಪಾಲು ವಿತರಣೆ ಆಗುತ್ತಿಲ್ಲ. ಇದನ್ನು ಪ್ರಶ್ನಿಸಬೇಕದಾ ಬಿಜೆಪಿ ಸಂಸದರು ಕೋಮುವಾದ ವಿಚಾರದಲ್ಲಿ ಮಾತ್ರ ಪ್ರತಿಭಟನೆ ನಡೆಸುತ್ತಾರೆ ಎಂದರು.

ಮುಂದಿನ ಸಂಸತ್‌ ಅಧಿವೇಶನದಲ್ಲಿ “ತೆರಿಗೆ ಅನ್ಯಾಯ’ ಪ್ರಶ್ನೆ
ಕಲಬುರಗಿ: ಕೇಂದ್ರ ಸರಕಾರ ತೆರಿಗೆ ಪಾಲನ್ನು ಕೊಡುವಾಗ ಕರ್ನಾಟಕಕ್ಕೆ ಪುನಃ ಅನ್ಯಾಯ ಮಾಡಿದೆ. ಇದು ಪ್ರತೀ ಬಾರಿಯೂ ನಡೆಯುತ್ತಿದೆ. ಇದನ್ನು ಪದೇಪದೆ ಬೇಕೆಂದೇ ಪ್ರಧಾನಿ ಅವರ ಸಂಪುಟ ಮಾಡುತ್ತಿದೆ ಎಂದು ಎಐಸಿಸಿ ಅಧ್ಯಕ್ಷ ಡಾ| ಮಲ್ಲಿಕಾರ್ಜುನ ಖರ್ಗೆ ಸುದ್ದಿಗಾರರ ಬಳಿ ಆಕ್ರೋಶ ವ್ಯಕ್ತಪಡಿಸಿದರು.

Advertisement

ಈ ನಿಟ್ಟಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕೇಂದ್ರಕ್ಕೆ ಸರಿಯಾಗಿಯೇ ಉತ್ತರ ನೀಡಿದ್ದಾರೆ. ದೇಶದ ಎಲ್ಲ ರಾಜ್ಯಗಳಿಗೆ ತೆರಿಗೆ ಪಾಲು ಹೆಚ್ಚಿದೆ. ಕರ್ನಾಟಕಕ್ಕೆ ಮಾತ್ರ ಕಡಿಮೆ. ಅದರಲ್ಲೂ ಕೊನೇ ಸ್ಥಾನ. ಏಕೆ ಈ ಅನ್ಯಾಯ ಮಾಡಲಾಗುತ್ತಿದೆ. ಮುಂದಿನ ಸಂಸತ್‌ ಅಧಿವೇಶನದಲ್ಲಿ ನಾವು ಕೂಡ ಧ್ವನಿ ಎತ್ತಿ, ಪ್ರಧಾನಿಗಳಿಗೆ ಈ ಕುರಿತು ಉತ್ತರ ಕೊಡಲು ಆಗ್ರಹಿಸುತ್ತೇವೆ ಎಂದರು.

ದಕ್ಷಿಣ ರಾಜ್ಯಗಳ “ತೆರಿಗೆ ಬಂಡಾಯ’ ಶೃಂಗ?
ಬೆಂಗಳೂರು: ದಕ್ಷಿಣದ ರಾಜ್ಯಗಳಿಗೆ ತೆರಿಗೆ ಪಾಲು ಹಂಚಿಕೆಯಲ್ಲಿ ಮತ್ತೂಮ್ಮೆ ಅನ್ಯಾಯವಾಗಿದೆ ಎಂಬ ವಿಚಾರವನ್ನು ಮುಂದಿಟ್ಟುಕೊಂಡು ದಕ್ಷಿಣದ ರಾಜ್ಯಗಳ ಶೃಂಗ ನಡೆಸುವುದಕ್ಕೆ ರಾಜ್ಯ ಸರಕಾರ ಸದ್ದಿಲ್ಲದೆ ತಯಾರಿ ನಡೆಸಿದೆ.

ಈ ಬಾರಿಯ ಹಂಚಿಕೆ ಪಟ್ಟಿ ಬಿಡುಗಡೆಯಾಗುವುದಕ್ಕೆ ಮುನ್ನವೇ ಸರಕಾರ ಈ ಬಗ್ಗೆ ಚಿಂತನೆ ನಡೆಸಿತ್ತು. ಆದರೆ ಕೆಲವು ದಿನಗಳ ಹಿಂದೆ ಕೇಂದ್ರ ಸರಕಾರ ರಾಜ್ಯಗಳಿಗೆ ತೆರಿಗೆ ಪಾಲು ಬಿಡುಗಡೆ ಮಾಡಿದ ಬಳಿಕ “ನನ್ನ ತೆರಿಗೆ, ನನ್ನ ಹಕ್ಕು’ ಮಾದರಿಯಲ್ಲಿ ಮತ್ತೂಮ್ಮೆ ಹೋರಾಟ ನಡೆಸುವುದಕ್ಕೆ ಸರಕಾರ ಮುಂದಾಗಿದೆ. ದಕ್ಷಿಣದ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳನ್ನು ಈ ಸಮಾವೇಶಕ್ಕೆ ಆಹ್ವಾನಿಸಿ ಕೇಂದ್ರದ ವಿರುದ್ಧ ರಣಕಹಳೆ ಮೊಳಗಿಸುವುದು ಇದರ ಉದ್ದೇಶವಾಗಿದೆ.

ಈ ಶೃಂಗ ಇದೇ ತಿಂಗಳು 18 ಅಥವಾ 19ರಂದು ನಡೆಸಬೇಕೆಂದು ಸಂಭಾವ್ಯ ದಿನಾಂಕ ನಿಗದಿಪಡಿಸಲಾಗಿದೆ. ಇದೇ ಸಂದರ್ಭದಲ್ಲಿ ರಾಜ್ಯದ ಮೂರು ಕ್ಷೇತ್ರಗಳ ಉಪ ಚುನಾವಣೆಗೆ ದಿನಾಂಕ ಘೋಷಣೆಯಾಗುವ ಸಾಧ್ಯತೆ ಇರುವುದರಿಂದ ಮಾಸಾಂತ್ಯದಲ್ಲಿ ದಕ್ಷಿಣದ ರಾಜ್ಯಗಳ ಸಮಾವೇಶ ನಡೆಯುವ ಸಾಧ್ಯತೆ ಇದೆ.

Advertisement

Udayavani is now on Telegram. Click here to join our channel and stay updated with the latest news.

Next