ಚಿತ್ರದುರ್ಗ: ರೈತ ವಿರೋಧಿ ಕೇಂದ್ರ ಸರ್ಕಾರ ರೈತರ ಮೇಲೆ ಲಾಠಿಚಾರ್ಜ್, ಜಲಫೀರಂಗಿ ದಾಳಿ ಮಾಡಿಸಿ ದೌರ್ಜನ್ಯವೆಸಗಿದೆ ಎಂದು ಆರೋಪಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ವತಿಯಿಂದ ಬುಧವಾರ ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.
ಭಾರತೀಯ ಕಿಸಾನ್ ಯೂನಿಯನ್ ನೇತೃತ್ವದಲ್ಲಿ ರೈತರ ಸಾಲ ಮನ್ನಾ, ಕಬ್ಬಿಗೆ ಬೆಂಬಲ ಬೆಲೆ ನಿಗದಿ ಮಾಡುವಂತೆ
ಪಾದಯಾತ್ರೆ ಮಾಡುತ್ತ ದೆಹಲಿಯತ್ತ ರೈತರು ಪ್ರಯಾಣ ಬೆಳೆಸಿದ್ದರು. ಶಾಂತಿಯುವಾಗಿ ತೆರಳುತ್ತಿದ್ದ ರೈತರ ಪಾದಯಾತ್ರೆಯನ್ನು ದೆಹಲಿಯ ಹೊರಭಾಗದ ಉತ್ತರಪ್ರದೇಶದ ಗಡಿ ಭಾಗದಲ್ಲೇ ತಡೆದು ಪಾದಯಾತ್ರೆಗೆ
ಅಡ್ಡಿಪಡಿಸಿದೆ. ಅಲ್ಲದೆ ರೈತರ ಮೇಲೆ ಮನಬಂದಂತೆ ಲಾಠಿಚಾರ್ಜ್ ಮಾಡುವ ಮೂಲಕ ಮತ್ತೂಂದು ಮುಖವನ್ನು
ಪ್ರದರ್ಶಿಸಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತ ಪಡಿಸಿದರು.
ಕೇಂದ್ರ ಸರ್ಕಾರ ಅಧಿಕಾರಕ್ಕೆ ಬಂದ ನಂತರ ರೈತ ವಿರೋಧಿ ನೀತಿ ಅನುಸರಿಸುತ್ತಿದೆ. ಹರಿದ್ವಾರದಿಂದ ದೆಹಲಿಗೆ ಹೊರಟಿದ್ದ ರೈತರನ್ನು ಮೇಲೆ ಗಾಜಿಯಾಬಾದ್ ಪ್ರದೇಶದಲ್ಲಿ ತಡೆದು ಅವರ ಮೇಲೆ ಲಾಠಿ ಚಾರ್ಜ್, ಜಲಫೀರಂಗಿ, ಟಿಯರ್ ಗ್ಯಾಸ್ ಬಳಸಿ ದೌರ್ಜನ್ಯ ಎಸಗಿದೆ. ಚುನಾವಣಾ ಪೂರ್ವ ಪ್ರಣಾಳಿಕೆಯಲ್ಲಿ ಹಲವು ಭರವಸೆಗಳನ್ನು ನೀಡಿ ಇದೀಗ ಯಾವೊಂದು ಭರವಸೆಯನ್ನೂ ಈಡೇರಿಸಿಲ್ಲ ಎಂದು ಆರೋಪಿಸಿದರು.
ಕಳೆದ ನಾಲ್ಕೂವರೆ ವರ್ಷದ ಆಡಳಿತದ ಅವಯಲ್ಲಿ ರೈತರ ಪರವಾಗಿ ಯಾವುದೇ ಯೋಜನೆ ರೂಪಿಸದ ಪ್ರಧಾನಿ ಮೋದಿ, ಬರೀ ಕಾರ್ಪೋರೆಟ್ ವಲಯಕ್ಕೆ ಹೆಚ್ಚು ಉತ್ತೇಜನ ನೀಡಿದ್ದಾರೆ. ಕಾರ್ಪೋರೆಟ್ ಪರವಾದ ಮೋದಿ ನಿಲುವುಗಳಿಂದಾಗಿ ದೇಶದ ಆರ್ಥಿಕ ಪರಿಸ್ಥಿತಿ ದಿವಾಳಿಯತ್ತ ಸಾಗಿದೆ. ಮೋದಿ ಆಪ್ತರು ಸಾವಿರಾರು ಕೋಟಿ ರೂ.ಗಳನ್ನು ದೋಚಿ ದೇಶದಿಂದ ಪರಾರಿಯಾಗಿದ್ದಾರೆ ಎಂದು ಹರಿಹಾಯ್ದರು.
ಪ್ರತಿಭಟನೆಯಲ್ಲಿ ರೈತ ಸಂಘದ ಜಿಲ್ಲಾಧ್ಯಕ್ಷ ನುಲೇನೂರು ಎಂ. ಶಂಕರಪ್ಪ, ರಾಜ್ಯ ಉಪಾಧ್ಯಕ್ಷ ಕೆ.ಪಿ. ಭೂತಯ್ಯ, ತಾಲೂಕು ಅಧ್ಯಕ್ಷ ಬಸ್ತಿಹಳ್ಳಿ ಸುರೇಶ್‌ಬಾಬು, ಹಿರಿಯೂರು ತಾಲೂಕು ಘಟಕದ ಅಧ್ಯಕ್ಷ ಕೆ.ಸಿ. ಹೊರಕೇರಪ್ಪ, ಎಂ.ಆರ್. ಪುಟ್ಟಸ್ವಾಮಿ, ಸಿ. ಸಿದ್ಧರಾಮಣ್ಣ, ಪ್ರವೀಣ್‌ಕುಮಾರ್, ಶಿವಕುಮಾರ್, ಹನುಮಂತಪ್ಪ, ಧನಂಜಯ್ ಮೊದಲಾದವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.