Advertisement

ಸಹಕಾರಿ ಬ್ಯಾಂಕ್‌ಗಳು RBI ಸುಪರ್ದಿಗೆ ; ಠೇವಣಿಗೆ ಭದ್ರತೆ, ಭ್ರಷ್ಟಾಚಾರಕ್ಕೂ ಕಡಿವಾಣ

03:04 AM Jun 25, 2020 | Hari Prasad |

ಹೊಸದಿಲ್ಲಿ: ಮಹತ್ವದ ನಿರ್ಧಾರವೆಂಬಂತೆ ದೇಶದ 1,540 ಸಹಕಾರಿ ಬ್ಯಾಂಕ್‌ಗಳನ್ನು ಭಾರತೀಯ ರಿಸರ್ವ್‌ ಬ್ಯಾಂಕ್‌ ನ (ಆರ್‌ಬಿಐ) ಸುಪರ್ದಿಗೆ ತಂದು ಕೇಂದ್ರ ಸರಕಾರ ಬುಧವಾರ ಆದೇಶ ಹೊರಡಿಸಿದೆ.

Advertisement

ಈ ಮೂಲಕ ಸಹಕಾರಿ ಬ್ಯಾಂಕ್‌ಗಳ ವಿಚಾರದಲ್ಲಿ ಆರ್‌ಬಿಐಗೆ ಹೆಚ್ಚಿನ ಅಧಿಕಾರ ನೀಡಲಾಗಿದೆ.

ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆದ ಕೇಂದ್ರ ಸಂಪುಟ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.

ಈ ಮೂಲಕ ದೇಶದ 1,482 ನಗರ ಸಹಕಾರಿ ಬ್ಯಾಂಕ್‌ಗಳು ಮತ್ತು 58 ಬಹು ರಾಜ್ಯ ಸಹಕಾರಿ ಬ್ಯಾಂಕ್‌ಗಳು ಇನ್ನು ಮುಂದೆ ನೇರವಾಗಿ ಆರ್‌ಬಿಐ ಮೇಲ್ವಿಚಾರಣೆಗೆ ಬರಲಿವೆ. ಪ್ರಸ್ತುತ ಶೆಡ್ನೂಲ್ಡ್‌ ಬ್ಯಾಂಕ್‌ಗಳಿಗೆ ಅನ್ವಯವಾಗುವ ಎಲ್ಲ ಅಧಿಕಾರವನ್ನೂ ಇನ್ನು ಸಹಕಾರಿ ಬ್ಯಾಂಕ್‌ಗಳ ಮೇಲೂ ಚಲಾಯಿಸಲು ಆರ್‌ಬಿಐಗೆ ಅಧಿಕಾರವಿರುತ್ತದೆ.
ಇದಕ್ಕೆ ಸಂಬಂಧಿಸಿದ ಅಧ್ಯಾದೇಶವನ್ನು ಬುಧವಾರವೇ ಹೊರಡಿಸಲಾಗಿದೆ. ರಾಷ್ಟ್ರಪತಿ ರಾಮನಾಥ ಕೋವಿಂದ್‌ ಅವರು ಅಂಕಿತ ಹಾಕಿದ ಕ್ಷಣದಲ್ಲೇ ಇದು ಜಾರಿಗೆ ಬರಲಿದೆ ಎಂದು ಕೇಂದ್ರ ಸಚಿವ ಪ್ರಕಾಶ್‌ ಜಾಬ್ಡೇಕರ್‌ ತಿಳಿಸಿದ್ದಾರೆ.

ಠೇವಣಿ ಸುರಕ್ಷಿತ
ಈ ಸಹಕಾರಿ ಬ್ಯಾಂಕ್‌ಗಳಲ್ಲಿ ಸದ್ಯ ಒಟ್ಟಾರೆ 8.6 ಕೋಟಿ ಖಾತೆದಾರರ 4.84 ಲಕ್ಷ ಕೋ.ರೂ. ಠೇವಣಿ ಇದೆ. ಈಗ ಈ ಬ್ಯಾಂಕ್‌ಗಳು ಆರ್‌ಬಿಐ ವ್ಯಾಪ್ತಿಗೆ ಬರುವ ಕಾರಣ ಖಾತೆದಾರರ ಉಳಿತಾಯ (ಠೇವಣಿ) ಸುರಕ್ಷಿತವಾಗಿರುತ್ತದೆ ಮತ್ತು ಬ್ಯಾಂಕ್‌ಗಳ ನಿರ್ವಹಣೆಯಲ್ಲಿನ ಲೋಪ, ಭ್ರಷ್ಟಾಚಾರವನ್ನೂ ತಗ್ಗಿಸಲು ಸಾಧ್ಯವಾಗುತ್ತದೆ ಎಂದೂ ಜಾಬ್ಡೇಕರ್‌ ತಿಳಿಸಿದ್ದಾರೆ. ಸಹಕಾರಿ ಬ್ಯಾಂಕ್‌ಗಳು ಆರ್‌ಬಿಐ ಸುಪರ್ದಿಗೆ ಬರುವ ಕಾರಣ ಇನ್ನು ಮುಂದೆ ಇಂಥ ಬ್ಯಾಂಕ್‌ಗಳಿಗೆ ಸಿಇಒ (ಮುಖ್ಯ ಕಾರ್ಯ ನಿರ್ವಹಣಾಧಿಕಾರಿ) ನೇಮಕ ಮಾಡಬೇಕೆಂದರೆ ಆರ್‌ಬಿಐ ಅನುಮತಿ ಅಗತ್ಯ.

Advertisement

ಫೆಬ್ರವರಿಯಲ್ಲೇ ಮಾಹಿತಿ
ಕಳೆದ ಫೆಬ್ರವರಿಯಲ್ಲಿ ಮಂಡಿಸಿದ ಬಜೆಟ್‌ನಲ್ಲೇ ಈ ಕುರಿತು ಮಾಹಿತಿ ನೀಡಿದ್ದ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌, ಸಹಕಾರಿ ಬ್ಯಾಂಕ್‌ಗಳನ್ನು ಆರ್‌ಬಿಐ ವ್ಯಾಪ್ತಿಗೆ ತರಲು ಸರಕಾರ ಚಿಂತನೆ ನಡೆಸಿದ್ದು, ಬ್ಯಾಂಕಿಂಗ್‌ ರೆಗ್ಯುಲೇಶನ್‌ ಕಾಯ್ದೆಗೆ ತಿದ್ದುಪಡಿ ಮೂಲಕ ಜಾರಿ ಮಾಡ ಲಾಗುತ್ತದೆ ಎಂದಿದ್ದರು. ಕಳೆದ ವರ್ಷ ಪಂಜಾಬ್‌, ಮಹಾರಾಷ್ಟ್ರ ಸಹಕಾರಿ ಬ್ಯಾಂಕ್‌ (ಪಿಎಂಸಿಬಿ) ಹಗರಣ ಬೆಳಕಿಗೆ ಬಂದ ಬಳಿಕ ಈ ಕಾಯ್ದೆಗೆ ತಿದ್ದುಪಡಿ ತಂದು, ದೇಶದ ಸಹಕಾರಿ ಬ್ಯಾಂಕ್‌ಗಳನ್ನು ಬಲಿಷ್ಠಗೊಳಿಸುವತ್ತ ಮೊದಲ ಹೆಜ್ಜೆ ಇಡಲಾಗಿತ್ತು.

ಆರ್‌ಬಿಐ ವ್ಯಾಪ್ತಿಗೆ ಏಕೆ?
– ಸಹಕಾರಿ ಬ್ಯಾಂಕ್‌ಗಳ ಆಡಳಿತ ದ್ವಿ ನೀತಿ ನಿಯಮಕ್ಕೆ ಅನುಗುಣವಾಗಿದೆ.

– ಆರ್‌ಬಿಐ ಅಡಿಗೆ ಬಂದರೆ ಬ್ಯಾಂಕ್‌ಗಳಲ್ಲಿ ವೃತ್ತಿಪರತೆ ಹೆಚ್ಚಳ

– ಬ್ಯಾಂಕಿನಲ್ಲಿ ಕಾರ್ಪೊರೆಟ್‌ ಮಾದರಿಯ ಆಡಳಿತ ಬರಲಿದೆ

– ಸಹಕಾರಿ ಸಂಘಗಳು ವಿಫ‌ಲವಾದರೆ ಸೂಪರ್‌ಸೀಡ್‌ ಮಾಡಬಹುದು

– ಹೂಡಿಕೆದಾರರ ಹಿತಾಸಕ್ತಿ ಕಾಪಾಡುವಲ್ಲಿ ಪ್ರಮುಖ ಪಾತ್ರ

– ಆರ್‌ಬಿಐಯ ನಿಯಮಗಳ ಅಡಿಯಲ್ಲೇ ಸಹಕಾರಿ ಬ್ಯಾಂಕ್‌ಗಳ ಲೆಕ್ಕಪತ್ರ ಪರಿಶೋಧನೆ

– ಸಿಇಒಗಳ ನೇಮಕದ ಸಮಯದಲ್ಲಿ ಆರ್‌ಬಿಐ ಒಪ್ಪಿಗೆ ಬೇಕೇಬೇಕು

1,540 ಸಹಕಾರಿ ಬ್ಯಾಂಕ್‌ಗಳು ಆರ್‌ಬಿಐ ವ್ಯಾಪ್ತಿಗೆ

ಈ ಬ್ಯಾಂಕ್‌ಗಳಲ್ಲಿರುವ ಖಾತೆದಾರರು: 8.6 ಕೋಟಿ

ಠೇವಣಿಯಲ್ಲಿರುವ ಒಟ್ಟು ಮೊತ್ತ: 4.84 ಲಕ್ಷ ಕೋಟಿ ರೂ.

ದೇಶದ 1,482 ನಗರ ಮತ್ತು 58 ಬಹುರಾಜ್ಯ ಸಹಕಾರಿ ಬ್ಯಾಂಕ್‌ಗಳು ಆರ್‌ಬಿಐ ಮೇಲುಸ್ತುವಾರಿಗೆ ಬರಲಿವೆ. ಇದರಿಂದ 8.6 ಕೋಟಿ ಖಾತೆದಾರರ ಹಣ ಸುರಕ್ಷಿತವಾಗಿರಲಿದೆ ಎಂಬ ಭರವಸೆ ನೀಡುತ್ತಿದ್ದೇನೆ.
– ಪ್ರಕಾಶ್‌ ಜಾಬ್ಡೇಕರ್‌, ಕೇಂದ್ರ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next