ಬೆಂಗಳೂರು: ಭ್ರಷ್ಟಾಚಾರ ದೊಡ್ಡ ಅಂಟುಜಾಡ್ಯದಂತೆ, ಇದರ ಪಿತಾಮಹರು ಯಾರ‍್ಯಾರು ಎಂಬುದು ಎಲ್ಲರಿಗೂ ತಿಳಿಸಿದೆ. ಭ್ರಷ್ಟಾಚರ ತಡೆಯಲು ಕೇಂದ್ರ ಸರ್ಕಾರ ಐಟಿ, ಇಡಿ ಇಲಾಖೆಗಳನ್ನು ಚುರುಕುಗೊಳಿಸಿದೆ ಎಂದು ವಸತಿ ಸಚಿವ ವಿ. ಸೋಮಣ್ಣ ಹೇಳಿದರು.
ಮಲ್ಲೇಶ್ವರದ ರಾಜ್ಯ ಬಿಜೆಪಿ ಕಾರ್ಯಾಲಯದಲ್ಲಿ ಶನಿವಾರ ಕಾರ್ಯಕರ್ತರು ಮತ್ತು ಸಾರ್ವಜನಿಕರನ್ನು ಭೇಟಿ ಮಾಡಿ ನಂತರ ಮಾತನಾಡಿದ ಅವರು, ಭ್ರಷ್ಟಾಚಾರ ತಡೆಯಲು ಕೇಂದ್ರ ಐಟಿ, ಇಡಿ ಇಲಾಖೆಗಳನ್ನು ಚುರುಕುಗೊಳಿಸಿ ಯಾರೇ ಭ್ರಷ್ಟರಿದ್ದರೂ ಅದನ್ನು ಸಹಿಸಲು ಸಾಧ್ಯವಿಲ್ಲ ಎಂಬ ಸಂದೇಶ ನೀಡಿದೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನನ್ನ ಸ್ನೇಹಿತರು ಮತ್ತು ಬುದ್ಧಿವಂತರು. ಅವರ ಬಳಿ ಇರುವ ಮಾಹಿತಿ ಕುರಿತು ನನಗೆ ತಿಳಿದಿಲ್ಲ. ಸಚಿವರು ಐಟಿ ದಾಳಿ ನಡೆಸದಂತೆ ಒತ್ತಾಯಿಸಿದ್ದರೆ ಆ ಸಚಿವರ ಹೆಸರನ್ನು ಏಕೆ ಉಲ್ಲೇಖಿಸಿಲ್ಲ ಎಂದು ಪ್ರಶ್ನಿಸಿದರು.
ಆದಾಯ ತೆರಿಗೆ ಇಲಾಖೆ ಸ್ವಾಯತ್ತ ಸಂಸ್ಥೆ. ಅದು ಯಾರ ಹಂಗಿನಲ್ಲೂ ಇಲ್ಲ. ಸಮರ್ಪಕವಾಗಿ ಮಾಹಿತಿ ಕ್ರೋಡೀಕರಿಸಿ ನಿರ್ದಿಷ್ಟ ದಾಳಿ ನಡೆಸಿ, ಸೂಕ್ತ ಕ್ರಮ ಕೈಗೊಳ್ಳುತ್ತದೆ. ಇದೊಂದು ಸಹಜವಾದ ಪ್ರಕ್ರಿಯೆ. ಆ ಪ್ರಕ್ರಿಯೆಗೆ ಸುಣ್ಣ- ಬಣ್ಣ ಬಡಿಯು ಅಗತ್ಯವಿಲ್ಲ. ಸರ್ಕಾರ ಯಾವುದೇ ಇದ್ದರೂ ಎಲ್ಲರನ್ನೂ ಒಂದೇ ರೀತಿಯಿಂದ ನೋಡುತ್ತದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ನಿಂತ ನೀರಲ್ಲ. ಕೇಂದ್ರದ ಆದಾಯ ತೆರಿಗೆ ಇಲಾಖೆ ತನ್ನ ಕರ್ತವ್ಯ ಮಾಡುವಾಗ ಅವನು ಯಾವ ಪಕ್ಷ, ಯಾರ ಜತೆ ಇದ್ದ, ಯಾರ ಪಿಎ ಎಂದು ನೋಡುವುದಿಲ್ಲ. ಅವೆಲ್ಲವೂ ಇಲ್ಲಿ ಗೌಣ ಎಂದು ಹೇಳಿದರು.
ಬಿ
ಜೆಪಿ ಅಭ್ಯರ್ಥಿಗಳು ಜಯ ಸಾಧಿಸಲಿದ್ದಾರೆ:
ಸಿಂದಗಿಯ ಅಲಮೇಲದಲ್ಲಿ ಉಪ ಚುನಾವಣೆ ಪ್ರಚಾರ ಮಾಡಿದ್ದೇನೆ. ಅಭಿವೃದ್ಧಿ ಪರವಾಗಿ ಮತ್ತು ಬಿಜೆಪಿ ಪರವಾಗಿ ಜನರು ಬೆಂಬಲ ನೀಡಲಿದ್ದಾರೆ. ಹತ್ತಾರು ಸಾವಿರ ಮತಗಳ ಅಂತರದಲ್ಲಿ ಬಿಜೆಪಿ ಅಭ್ಯರ್ಥಿಗಳು ಜಯ ಸಾಧಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಇದೇವೇಳೆ ಪ್ರಧಾನಿ ನರೇಂದ್ರ ಮೋದಿ ಅವರ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ರೈತ ಮೋರ್ಚಾ ವತಿಯಿಂದ ಪ್ಲಾಸ್ಟಿಕ್ ಬಳಕೆಗೆ ನಿಷೇಧ ಮತ್ತು ಪ್ಲಾಸ್ಟಿಕೇತರ ಬ್ಯಾಗ್ ಬಳಕೆ ಮಾಡುವ ಕಾರ್ಯಕ್ಕೆ ಚಾಲನೆ ನೀಡಲಾಯಿತು.