Advertisement

GST ನಷ್ಟ ತುಂಬಲು ಕೇಂದ್ರ ಸರಕಾರ 1.58 ಲಕ್ಷ ಕೋಟಿ ರೂ. ಸಾಲ ಪಡೆಯಲು ನಿರ್ಧಾರ

02:52 AM May 29, 2021 | Team Udayavani |

ಹೊಸದಿಲ್ಲಿ: ಜಿಎಸ್‌ಟಿಯಿಂದ ಬರುವ ಆದಾಯ ನಷ್ಟವನ್ನು ರಾಜ್ಯಗಳಿಗೆ ತುಂಬಿಕೊಡಲು ಕೇಂದ್ರ ಸರಕಾರವು 1.58 ಲಕ್ಷ ಕೋಟಿ ರೂ.ಗಳನ್ನು ಸಾಲದ ರೂಪದಲ್ಲಿ ಪಡೆಯಲು ನಿರ್ಧರಿಸಿದೆ.

Advertisement

ಶುಕ್ರವಾರ ನಡೆದ ಜಿಎಸ್‌ಟಿ ಮಂಡಳಿ ಸಭೆಯಲ್ಲಿ ಈ ನಿರ್ಧಾರ ಕೈಗೊಂಡಿರುವುದಾಗಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಹೇಳಿದ್ದಾರೆ. ಜಿಎಸ್ಟಿ ಪರಿಹಾರ ಸೆಸ್‌ ಕುರಿತು ಚರ್ಚಿಸಲು ವಿಶೇಷ ಸಭೆ ಕರೆಯಲಾಗುವುದು. 2022ರ ಜುಲೈನಾಚೆಗೂ ಪರಿಹಾರವನ್ನು ವಿಸ್ತರಿಸುವ ಕುರಿತು ಈ ಸಭೆಯಲ್ಲಿ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುವುದು. ಸುಮಾರು 1.58 ಲಕ್ಷ ಕೋಟಿ ರೂ.ಗಳ ಪರಿಹಾರ ಸೆಸ್‌ ಕುರಿತು ಲೆಕ್ಕಾಚಾರ ನಡೆಯುತ್ತಿದೆ. ರಾಜ್ಯಗಳಿಗೆ ಒಂದರ ಮೇಲೊಂದು ಸಾಲದ ರೂಪದಲ್ಲಿ ಹಣವನ್ನು ನೀಡಲಾಗುತ್ತದೆ. ಜಿಎಸ್‌ಟಿ ಪರಿಹಾರ ಸೆಸ್‌ ವಿಚಾರದಲ್ಲಿ ಕಳೆದ ವರ್ಷದ ನಿಯಮವನ್ನೇ ಈ ಬಾರಿಯೂ ಅನುಸರಿಸಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.

ಕ್ಷಮಾದಾನ ಯೋಜನೆ: ಸಣ್ಣ ತೆರಿಗೆದಾರರಿಗೆ ರಿಲೀಫ್ ನೀಡುವ ಸಲುವಾಗಿ “ಕ್ಷಮಾದಾನ ಯೋಜನೆ’ ಜಾರಿ ಮಾಡಲು ನಿರ್ಧರಿಸಲಾಗಿದೆ. ಅದರಂತೆ, ರಿಟರ್ನ್ ಸಲ್ಲಿಕೆ ವಿಳಂಬವಾದರೆ ಪಾವತಿಸಬೇಕಾದ ದಂಡದ ಮೊತ್ತವನ್ನು ಕಡಿತಗೊಳಿಸಲು ಉದ್ದೇಶಿಸಲಾಗಿದೆ. ಇದರಿಂದ ಶೇ.89ರಷ್ಟು ಜಿಎಸ್ಟಿ ತೆರಿಗೆದಾರರಿಗೆ ಅನುಕೂಲವಾಗಲಿದೆ. ಅಂಥವರು ಸಲ್ಲಿಸಲು ಬಾಕಿಯಿರುವ ರಿಟರ್ನ್(ಜಿಎಸ್‌ ಟಿಆರ್‌ 1 ಮತ್ತು ಜಿಎಸ್‌ ಟಿಆರ್‌ 3ಬಿ) ಅನ್ನು ಸಲ್ಲಿಸಿ, ಈ ಯೋಜನೆಯ ಲಾಭ ಪಡೆಯಬಹುದು ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಹೇಳಿದ್ದಾರೆ. 2020-21ರ ವಿತ್ತ ವರ್ಷದಲ್ಲೂ ವಾರ್ಷಿಕ ರಿಟರ್ನ್ ಸಲ್ಲಿಕೆಯನ್ನು ಸಣ್ಣ ತೆರಿಗೆದಾರರ(2 ಕೋಟಿ ರೂ.ಗಳಿಗಿಂತಲೂ ಕಡಿಮೆ ವಹಿವಾಟು ಹೊಂದಿರುವವರು) ಆಯ್ಕೆಗೆ ಬಿಡಲಾಗಿದೆ. 5 ಕೋಟಿ ಅಥವಾ ಅದಕ್ಕಿಂತಲೂ ಹೆಚ್ಚಿನ ವಹಿವಾಟು ಹೊಂದಿರುವ ತೆರಿಗೆದಾರರು 2020-21ರ ಹೊಂದಾಣಿಕೆ ವಿವರ (ರಿಕನ್ಸಿಲಿಯೇಷನ್‌)ವನ್ನು ಸಲ್ಲಿಸಬೇಕು ಎಂದು ಸೂಚಿಸಲಾಗಿದೆ.

ಲಸಿಕೆ ಉತ್ಪಾದನೆಗೆ ವೇಗ: ಕೇಂದ್ರ ಸರಕಾರವು ಜಗತ್ತಿನಾದ್ಯಂತದ ಲಸಿಕೆ ಉತ್ಪಾದಕ ಕಂಪನಿಗಳೊಂದಿಗೆ ಮಾತುಕತೆ ನಡೆಸುತ್ತಿದೆ. ಮುಂಬರುವ ತಿಂಗಳುಗಳಲ್ಲಿ ಉತ್ಪಾದನೆಯ ವೇಗ ಹೆಚ್ಚಲಿದೆ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next