Advertisement

ಕಾಂಚಾಣದ ಮೇಲೆ ಕೇಂದ್ರ ತಂಡಗಳ ನಿಗಾ

11:32 PM Apr 02, 2023 | Team Udayavani |

ಬೆಂಗಳೂರು: ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಹೆಚ್ಚಾಗುತ್ತಿರುವ ಚುನಾವಣಾ ಅಕ್ರಮ ಹಾಗೂ ಹಣ ಬಲದ ಪ್ರಭಾವವನ್ನು ಸವಾಲಾಗಿ ತೆಗೆದುಕೊಂಡಿರುವ ಕೇಂದ್ರ ಚುನಾವಣಾ ಆಯೋಗ ರಾಜಕೀಯ ಪಕ್ಷಗಳು ಮತ್ತು ಅಭ್ಯರ್ಥಿಗಳ ಚುನಾವಣಾ ವೆಚ್ಚದ ಮೇಲೆ ಹದ್ದಿನ ಕಣ್ಣಿಡಲು ವಿಶೇಷ ತಂಡಗಳನ್ನು ರವಾನಿಸಲಿದೆ.

Advertisement

ಅದರಂತೆ, ಉತ್ತರ ಭಾರತದ ರಾಜ್ಯಗಳಾದ ಉತ್ತರಪ್ರದೇಶ, ಬಿಹಾರ, ಪಶ್ಚಿಮ ಬಂಗಾಳ ಸೇರಿದಂತೆ ನೆರೆ ರಾಜ್ಯಗಳಾದ ಆಂಧ್ರಪ್ರದೇಶ, ತೆಲಂಗಾಣ, ತಮಿಳುನಾಡು, ಮಹಾರಾಷ್ಟ್ರ ರಾಜ್ಯಗಳಿಂದ “ಭಾರತೀಯ ಕಂದಾಯ ಸೇವೆ’ (ಐಆರ್‌ಎಸ್‌) ಅಧಿಕಾರಿಗಳ ಜೊತೆಗೆ ಐಎಎಸ್‌, ಐಪಿಎಸ್‌ ಅಧಿಕಾರಿಗಳ ತಂಡಗಳು ಶೀಘ್ರದಲ್ಲೇ ರಾಜ್ಯಕ್ಕೆ ಬಂದಿಳಿಯಲಿವೆ.

ಕರ್ನಾಟಕದಲ್ಲಿನ ಹಣ ಬಲದ್ದೇ ನಮಗೆ ಚಿಂತೆ ಮತ್ತು ಸವಾಲು ಎಂದು ಕಳೆದ ತಿಂಗಳು ರಾಜ್ಯಕ್ಕೆ ಆಗಮಿಸಿದ್ದ ಕೇಂದ್ರ ಚುನಾವಣಾ ಆಯೋಗ ಮುಖ್ಯ ಆಯುಕ್ತರು ಹೇಳಿದ್ದರು. ಅದಕ್ಕೆ ನಿದರ್ಶನವೆಂಬಂತೆ ಒಂದು ತಿಂಗಳ ಅವಧಿಯಲ್ಲಿ ಚುನಾವಣಾ ಅಕ್ರಮಗಳ ಮೊತ್ತ 80 ಕೋಟಿ ರೂ. ತಲುಪಿದೆ. ಈ ಹಿನ್ನೆಲೆಯಲ್ಲಿ ಶೀಘ್ರದಲ್ಲೇ ಕೇಂದ್ರ ಚುನಾವಣಾ ಆಯೋಗದ ವಿಶೇಷ ತಂಡಗಳು ರಾಜ್ಯಕ್ಕೆ ಬರಲಿದ್ದು, 2018ರಲ್ಲಿ ಇದ್ದ ಈ ತಂಡಗಳ ಸಂಖ್ಯೆ ಈ ಬಾರಿ ದುಪ್ಪಟ್ಟು ಆಗಲಿದೆ ಎಂದು ಹೇಳಲಾಗಿದೆ.

ಚುನಾವಣೆ “ಅಕ್ರಮ ಮುಕ್ತ’ ವಾಗಿ ನಡೆಯಬೇಕು ಎಂದು ಪಣತೊಟ್ಟಿರುವ ಚುನಾವಣಾ ಆಯೋಗ ರಾಜಕೀಯ ಪಕ್ಷಗಳು ಮತ್ತು ಅಭ್ಯರ್ಥಿಗಳ ಚುನಾವಣಾ ವೆಚ್ಚದ ಮೇಲೆ ನಿಗಾ ಇಡಲು ಪ್ರತಿ ಎರಡು ವಿಧಾನಸಭಾ ಕ್ಷೇತ್ರಕ್ಕೆ ಒಬ್ಬರು ಐಆರ್‌ಎಸ್‌ ಅಧಿಕಾರಿಗಳನ್ನು ರಾಜ್ಯಕ್ಕೆ ನಿಯೋಜನೆ ಮಾಡುತ್ತಿದೆ. ಇವರಿಗೆ ಆದಾಯ ತೆರಿಗೆ, ವಾಣಿಜ್ಯ ತೆರಿಗೆ, ಅಬಕಾರಿ, ಕಂದಾಯ, ಪೊಲೀಸ್‌ ಇಲಾಖೆಯ ಅಧಿಕಾರಿಗಳ ತಂಡ ಸಾಥ್‌ ನೀಡಲಿವೆ.

ಚುನಾವಣಾ ವೆಚ್ಚ ಸೇರಿದಂತೆ ಅಕ್ರಮ ಹಣ ವರ್ಗಾವಣೆ ಮತ್ತು ಹಂಚಿಕೆ, ಮತದಾರರಿಗೆ ಆಮಿಷವೊಡ್ಡಲು ಹಣ ಮತ್ತು ಹೆಂಡ ಹಂಚುವುದು, ಗಿಫ್ಟ್ ಗಳನ್ನು ವಿತರಣೆ ಮಾಡುವುದಕ್ಕೆ ಕಡಿವಾಣ ಹಾಕಲು ಈಗಾಗಲೇ ಎಲ್ಲ ಜಿಲ್ಲಾ ಚುನಾವಣಾಧಿಕಾರಿಗಳ ನೇತೃತ್ವದಲ್ಲಿ “ಚುನಾವಣಾ ವೆಚ್ಚ ನಿಗಾ ಸಮಿತಿ’ಗಳನ್ನು ರಚಿಸಲಾಗಿದೆ. ಇದಕ್ಕಾಗಿ “ಚುನಾವಣಾ ವೆಚ್ಚ ನಿರ್ವಹಣೆ’ (ಇಇಎಂ) ವ್ಯವಸ್ಥೆ ಜಾರಿಗೆ ತರಲಾಗಿದೆ. ಇದರ ಜೊತೆಗೆ ಹೆಚ್ಚುವರಿಯಾಗಿ ಐಆರ್‌ಎಸ್‌ ಅಧಿಕಾರಿಗಳನ್ನು ಚುನಾವಣಾ ಆಯೋಗದಿಂದ ನಿಯೋಜಿಸಲಾಗುತ್ತಿದೆ. ಇದರ ಜೊತೆಗೆ ಬೇರೆ ರಾಜ್ಯಗಳ ಐಎಎಸ್‌ ಅಧಿಕಾರಿಗಳನ್ನು ಸಾಮಾನ್ಯ ವೀಕ್ಷಕರು ಮತ್ತು ಐಪಿಎಸ್‌ ಅಧಿಕಾರಿಗಳನ್ನು ಪೊಲೀಸ್‌ ವೀಕ್ಷಕರನ್ನಾಗಿ ನೇಮಕ ಮಾಡಲಾಗುತ್ತದೆ ಎಂದು ಹೇಳಲಾಗುತ್ತಿದೆ.

Advertisement

ತಂಡಗಳ ಸಂಖ್ಯೆ ಹೆಚ್ಚಳ:
2018ರ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಬೇರೆ ರಾಜ್ಯಗಳ ಅಧಿಕಾರಿಗಳ ತಂಡವನ್ನು ರಾಜ್ಯಕ್ಕೆ ಕಳಿಸಿಕೊಡಲಾಗಿತ್ತು. ಉತ್ತರಪ್ರದೇಶ, ಬಿಹಾರ, ಪಶ್ಚಿಮ ಬಂಗಾಳ ಸೇರಿದಂತೆ ನೆರೆ ರಾಜ್ಯಗಳಾದ ಆಂಧ್ರಪ್ರದೇಶ, ತೆಲಂಗಾಣ, ತಮಿಳುನಾಡು, ಮಹಾರಾಷ್ಟ್ರ ರಾಜ್ಯಗಳಿಂದ 136 ಐಆರ್‌ಎಸ್‌ ಅಧಿಕಾರಿಗಳನ್ನು ಮತ್ತು ಉತ್ತರ ಭಾರತ ರಾಜ್ಯಗಳಿಂದ 154 ಐಎಎಸ್‌ ಮತ್ತು 35 ಐಪಿಎಸ್‌ ಅಧಿಕಾರಿಗಳನ್ನು ರಾಜ್ಯಕ್ಕೆ ನಿಯೋಜಿಸಲಾಗಿತ್ತು. ಈ ಬಾರಿಯ ಚುನಾವಣೆಯ ಈ ಸಂಖ್ಯೆ ಇನ್ನೂ ಹೆಚ್ಚಾಗಲಿದೆ ಎಂದು ಮೂಲಗಳು ತಿಳಿಸಿವೆ.

“ಏರ್‌ ಇಂಟಲಿಜೆನ್ಸ್‌ ಯುನಿಟ್‌’
ಆದಾಯ ತೆರಿಗೆ ಇಲಾಖೆಯಿಂದ ಬೆಂಗಳೂರು, ಬೆಳಗಾವಿ, ಮಂಗಳೂರು, ಹುಬ್ಬಳ್ಳಿ ಸೇರಿದಂತೆ ರಾಜ್ಯದ ಪ್ರಮುಖ ವಿಮಾನ ನಿಲ್ದಾಣಗಳಲ್ಲಿ “ಏರ್‌ ಇಂಟಲಿಜೆನ್ಸ್‌ ಯುನಿಟ್‌’ಗಳನ್ನು ಸ್ಥಾಪಿಸಲಾಗುವುದು. ಅಲ್ಲದೇ ಹಣ ವರ್ಗಾವಣೆ ಬಗ್ಗೆ ನಿಗಾ ಇಡಲು ರಾಜ್ಯದ ಪ್ರಮುಖ ರೈಲು ನಿಲ್ದಾಣಗಳಲ್ಲಿ “ರೈಲ್ವೆ ಭದ್ರತಾ ಪಡೆ’ಯ ತಂಡಗಳನ್ನು ವಿಶೇಷವಾಗಿ ನಿಯೋಜಿಸಲಾಗುತ್ತದೆ ಎಂದು ತಿಳಿದು ಬಂದಿದೆ.

” ವಿಶೇಷ ವೀಕ್ಷಕ ಅಧಿಕಾರಿಗಳು ಮತ್ತು ತಂಡಗಳನ್ನು ಕೇಂದ್ರ ಚುನಾವಣಾ ಆಯೋಗ ನಿಯೋಜಿಸುತ್ತದೆ. ಯಾವಾಗ, ಎಷ್ಟು ತಂಡಗಳನ್ನು ನಿಯೋಜಿಸಬೇಕು ಎಂಬ ಬಗ್ಗೆ ಚುನಾವಣಾ ಆಯೋಗವೇ ನಿರ್ಧರಿಸುತ್ತದೆ’.
– ಮನೋಜ್‌ ಕುಮಾರ್‌ ಮೀನಾ, ರಾಜ್ಯ ಮುಖ್ಯ ಚುನಾವಣಾಧಿಕಾರಿ.

-ರಫೀಕ್‌ ಅಹ್ಮದ್‌

Advertisement

Udayavani is now on Telegram. Click here to join our channel and stay updated with the latest news.

Next