ಮಂಡ್ಯ: ಕಳೆದ ಐದು ವರ್ಷಗಳಿಂದ ಕೇಂದ್ರ ಸರ್ಕಾರದ ಬಜೆಟ್ ಜಿಲ್ಲೆಗೆ ನಿರಾಸೆ ತಂದಿದೆ. ಯಾವುದೇ ಪ್ರತ್ಯೇಕ ಹೊಸ ಯೋಜನೆಗಳನ್ನು ಘೋಷಣೆ ಮಾಡಿಲ್ಲ. ಸಂಪೂರ್ಣ ಶೂನ್ಯ ಬಜೆಟ್ ಆಗಿತ್ತು. ಆದರೆ, ಈ ಬಾರಿ ಫೆ.1ರಂದು ಮಂಡಿಸುತ್ತಿರುವ ಬಜೆಟ್ ಚುನಾವಣೆ ವರ್ಷವಾಗಿರುವುದರಿಂದ ನಿರೀಕ್ಷೆಯ ಭಾರ ಹೆಚ್ಚಿದೆ.
Advertisement
ದೊಡ್ಡಹಳ್ಳಿಯಂತಾಗಿರುವ ಮಂಡ್ಯ ನಗರಕ್ಕೆ ಕೇಂದ್ರದಿಂದ ಮೈಸೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಬಿಟ್ಟರೆ ಯಾವುದೇ ಹೊಸ ಯೋಜನೆಗಳನ್ನು ಜಿಲ್ಲೆಗೆ ನೀಡಿಲ್ಲ. ಪ್ರತೀ ಬಜೆಟ್ ನಲ್ಲೂ ನಿರೀಕ್ಷೆ ಹೆಚ್ಚಿರುತ್ತದೆ. ಆದರೆ, ಆ ನಿರೀಕ್ಷೆಗಿಂತನಿರಾಸೆಯೇ ಹೆಚ್ಚಾಗಿದೆ. ಹೆದ್ದಾರಿ ನಿರ್ಮಾಣದಿಂದ ಮಂಡ್ಯ ನಗರಕ್ಕೆ ಆರ್ಥಿಕ ಹೊಡೆತ ಬಿದ್ದಿದ್ದು, ಮತ್ತಷ್ಟು
ಅಭಿವೃದ್ಧಿಯಿಂದ ವಂಚಿತವಾಗುವಂತೆ ಮಾಡಿದೆ.
Related Articles
Advertisement
ಕೈಗಾರಿಕೆಗಳ ಸ್ಥಾಪನೆಗೆ ಒತ್ತು: ಮಂಡ್ಯ ನಗರ ಸೇರಿದಂತೆ ಜಿಲ್ಲೆಯಲ್ಲಿ ಯಾವುದೇ ಹೇಳಿಕೊಳ್ಳುವಂಥ ದೊಡ್ಡ ದೊಡ್ಡ ಕೈಗಾರಿಕೆಗಳು ಸ್ಥಾಪನೆಯಾಗಿಲ್ಲ. ಇಲ್ಲಿನ ಜನರು ಉದ್ಯೋಗಕ್ಕಾಗಿ ಬೇರೆ ಜಿಲ್ಲೆಗಳನ್ನು ಅವಲಂಬಿಸಿದ್ದಾರೆ. ಆದ್ದರಿಂದ ಉದ್ಯೋಗ ಸೃಷ್ಟಿಗೆ ಹಾಗೂ ಅಭಿವೃದ್ಧಿಗೆ ಕೈಗಾರಿಕೆಗಳ ಸ್ಥಾಪನೆಗೆ ಹೆಚ್ಚು ಒತ್ತು ನೀಡಬೇಕಾಗಿದೆ. ಹೆದ್ದಾರಿ ನಿರ್ಮಾಣ ವಾಗಿರುವುದರಿಂದ ಕೃಷಿಯೇತರ ಭೂಮಿಯಲ್ಲಿ ಕೈಗಾರಿಕೆಗಳು ಹೆಚ್ಚಾದಂತೆ ಸಾಕಷ್ಟು ಉದ್ಯೋಗಗಳು ಸೃಷ್ಟಿಯಾಗಲಿವೆ. ಇದರಿಂದ ಸ್ಥಳೀಯ ಪ್ರತಿಭಾವಂತ ಯುವಕ-ಯುವಕರಿಗೆ ಉದ್ಯೋಗಗಳು ಸಿಗಲಿದ್ದು, ಗುಳೆ ಹೋಗುವುದನ್ನು ತಪ್ಪಿಸಬಹುದಾಗಿದೆ.
ಸಾಕಾರವಾಗದ ಸಾವಯವ ಬೆಲ್ಲ ಉದ್ಯಮ:ಆತ್ಮನಿರ್ಭರ್ ಯೋಜನೆಯಡಿ ಒಂದು ಜಿಲ್ಲೆ ಒಂದು ಉತ್ಪನ್ನಕ್ಕೆ ಮಂಡ್ಯ ಬೆಲ್ಲ ಆಯ್ಕೆ ಮಾಡಲಾಗಿದೆ. ಆದರೆ ಅದನ್ನು ಇನ್ನೂ ಸಮರ್ಪಕವಾಗಿ ಅನುಷ್ಠಾನ ಮಾಡಲು ಸಾಧ್ಯವಾಗಿಲ್ಲ. ಉದ್ಯಮವನ್ನಾಗಿ ಮಾಡಲು ಸಬ್ಸಿಡಿ ಸಾಲ ಯೋಜನೆಗೆ ಹಲವು
ತೊಡಕುಗಳಿಂದ ಸಂಪೂರ್ಣವಾಗಿ ಜಾರಿಯಾಗಿಲ್ಲ. ಆಧುನಿಕ ತಂತ್ರಜ್ಞಾನ ಬಳಕೆಯಿಂದ ಬೆಲ್ಲ ಉದ್ಯಮವನ್ನು ಅಭಿವೃದ್ಧಿಪಡಿಸಬಹುದು. ಇದರಿಂದ ಪ್ರತಿ ಯೊಂದು ಗ್ರಾಮದಲ್ಲೂ ಆಲೆಮನೆಗಳು ತಲೆ ಎತ್ತಲಿದ್ದು, ಕೈಗಾರಿಕೆಯಂತೆ ಉದ್ಯೋಗಗಳು ಹೆಚ್ಚ ಲಿದೆ. ಅಲ್ಲದೆ, ಗುಣಮಟ್ಟದ ಬೆಲ್ಲಕ್ಕೆ ಅಂತಾರಾಷ್ಟ್ರೀಯ ಮಾನ್ಯತೆ ಸಿಗಲಿದ್ದು, ರಫ್ತು ಹೆಚ್ಚಾಗಲಿದೆ. ಕಬ್ಬಿಗೆ ಉತ್ತೇಜನ ಅಗತ್ಯ: ಜಿಲ್ಲೆಯು ಕೃಷಿ ಪ್ರದಾನವಾಗಿದ್ದು, ಅತಿ ಹೆಚ್ಚು ರೈತರು ಕೃಷಿಯನ್ನೇ ಅವಲಂಬಿಸಿದ್ದಾರೆ. ವಾಣಿಜ್ಯ ಬೆಳೆಗಳಾದ ಕಬ್ಬು ಹಾಗೂ ಭತ್ತ ಹೆಚ್ಚಾಗಿ ಬೆಳೆಯುತ್ತಿರುವುದರಿಂದ ಉತ್ತೇಜನ ನೀಡುವ ನಿಟ್ಟಿನಲ್ಲಿ ವಿಶೇಷ ಪ್ಯಾಕೇಜ್ ಘೋಷಿಸುವ ಮೂಲಕ ರೈತರನ್ನು ಕೃಷಿಗೆ ಪೋ›ತ್ಸಾಹಿಸಬಹುದಾಗಿದೆ. ಭತ್ತ, ರಾಗಿಗೆ ಬೆಂಬಲ ಬೆಲೆಯಡಿ ಖರೀದಿಸುವ ಪ್ರಕ್ರಿಯೆ ತ್ವರಿತಗತಿಯಲ್ಲಿ ಸಾಗುವಂತೆ ಮಾಡಬೇಕಾಗಿದೆ. ಕಿಸಾನ್ ಸಮ್ಮಾನ್ ಯೋಜನೆಯಡಿ ರೈತರಿಗೆ ನೀಡುತ್ತಿರುವ ಪ್ರೋತ್ಸಾಹಧನ ಹೆಚ್ಚಿಸಬೇಕಾಗಿದೆ. ಒಂದು ಬೆಳೆ ಬೆಳೆಯಲು ಶ್ರಮ, ಖರ್ಚು ಹೆಚ್ಚಿದೆ. ಅದರ ಆಧಾರದ ಮೇಲೆ ಪೋ›ತ್ಸಾಹಧನ ನಿಗದಿಯಾಗಬೇಕು. ಎಂಎಸ್‌ಪಿ ನಿಗದಿ ಮಾಡಬೇಕು: ರೈತರು ಬೆಳೆದಿರುವ ಬೆಳೆಗಳಿಗೆ ಎಂಎಸ್‌ಪಿ ನಿಗದಿ ಮಾಡಬೇಕು. ಅದನ್ನು ಬಜೆಟ್‌ನಲ್ಲಿ ಘೋಷಿಸಬೇಕು. ಇಲ್ಲದಿದ್ದರೆ ರೈತರು ಮತ್ತಷ್ಟು ಸಂಕಷ್ಟಕ್ಕೆ ಸಿಲುಕಲಿದ್ದಾರೆ. ಈಗಾಗಲೇ ಜಿಲ್ಲೆಯಲ್ಲಿ ಬರ ಆವರಿಸಿದೆ. ಇದರಿಂದ ರೈತರು ಕೃಷಿಯಿಂದ ವಿಮುಖರಾಗುವ ಭೀತಿ ಕಾಡುತ್ತಿದೆ. ಮಳವಳ್ಳಿ ರೈಲು ಬರುವುದು ಯಾವಾಗ?: ಬೆಂಗಳೂರು-ಕನಕಪುರ-ಮಳ್ಳವಳ್ಳಿ-ಕೊಳ್ಳೇಗಾಲಕ್ಕೆ ರೈಲು ಸಂಚಾರ ಮಾಡಲು ಕಳೆದ 15 ವರ್ಷಗಳಿಂದ ಯುಪಿಎ ಸರ್ಕಾರದಲ್ಲೇ ಬಜೆಟ್‌ನಲ್ಲಿ ಘೋಷಿಸಿ ಕೋಟ್ಯಂತರ ರೂ. ಅನುದಾನ ಮೀಸಲಿಡಲಾಗಿತ್ತು.
ಆದರೆ ಇದುವರೆಗೂ ಆ ಯೋಜನೆ ಸಾಕಾರವಾಗಿಲ್ಲ. ಪ್ರಸ್ತುತ ಇರುವ ಕೇಂದ್ರ ಸರ್ಕಾರವೂ ಇತ್ತ ಗಮನಹರಿಸಿಲ್ಲ. ಈ ಬಾರಿಯಾದರೂ ಯೋಜನೆ ಕಾಯಕಲ್ಪ ಸಿಗುವ ನಿರೀಕ್ಷೆ ಇದೆ. ಅಗತ್ಯ ವಸ್ತುಗಳ ಬೆಲೆ ಇಳಿಕೆಯಾಗಲಿದೆಯೇ?:
ಈಗಾಗಲೇ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿರುವುದರಿಂದ ಜನ ಸಾಮಾನ್ಯರ ಮೇಲೆ ಹೊರೆ ಹೆಚ್ಚುತ್ತಿದೆ. ಗ್ಯಾಸ್ ಸಿಲಿಂಡರ್ ಬೆಲೆ
ಇಳಿಸಬೇಕು. ಪೆಟ್ರೋಲ್, ಡಿಸೇಲ್ ದರಗಳ ಇಳಿಕೆಯಿಂದ ಅಗತ್ಯ ವಸ್ತುಗಳ ಬೆಲೆಯೂ ಇಳಿಯಲಿದೆ. ಇದರಿಂದ ಜನರ ಕೊಳ್ಳುವಿಕೆ ಸಾಮರ್ಥ್ಯ ಹೆಚ್ಚುವಂತೆ ಮಾಡಬೇಕು. ಸಾರ್ವಜನಿಕ ಉದ್ದಿಮೆಗಳನ್ನು ಖಾಸಗೀಕರಣ ಮಾಡಬಾರದು. ಜನಸಾಮಾನ್ಯರ ಕೈಗೆಟುವಂತೆ ಮಾಡಬೇಕು. ಆಹಾರ ಭದ್ರತೆ, ಆರೋಗ್ಯ, ಶಿಕ್ಷಣಕ್ಕೆ ಹೆಚ್ಚು ಪೋ›ತ್ಸಾಹ ನೀಡಬೇಕು. ಬಜೆಟ್
ನಲ್ಲಿ ಹೆಚ್ಚು ಅನುದಾನ ಮೀಸಲಿಡಬೇಕು ಎಂದು ಸಾರ್ವಜನಿಕರ ಆಗ್ರಹಿಸಿದ್ದಾರೆ. ಕೇಂದ್ರ ಬಜೆಟ್ ನಿರೀಕ್ಷೆಗಳು
*ಹೆದ್ದಾರಿಯ ಅಪಘಾತದಿಂದ ಗಾಯಗೊಂಡವರಿಗೆ ಚಿಕಿತ್ಸೆ ನೀಡಲು 100 ಬೆಡ್ ಗಳ ಟ್ರಾಮಾಕೇರ್ ಸೆಂಟರ್ ಘೋಷಣೆ.
*ಟನ್ ಕಬ್ಬಿಗೆ ಎಸ್‌ಎಪಿ ಘೋಷಿಸಬೇಕು.
*ಬೆಂಗಳೂರು-ಕನಕಪುರ-ಮಳ್ಳವಳ್ಳಿ-ಕೊಳ್ಳೇಗಾಲ ರೈಲು ಸಂಚಾರಕ್ಕೆ ಗ್ರೀನ್ ಸಿಗ್ನಲ್ ನಿರೀಕ್ಷೆ
*ಮಂಡ್ಯ ನಗರದ ದಕ್ಷಿಣ ಭಾಗದಲ್ಲೂ ಬೈಪಾಸ್ ರಸ್ತೆ ನಿರ್ಮಾಣ
* ಜಿಲ್ಲೆಯ ಪ್ರವಾಸೋದ್ಯಮ ಅಭಿವೃದ್ಧಿಗೆ ಹೊಸ ಯೋಜನೆಗಳ ಘೋಷಣೆ
*ಹೆದ್ದಾರಿ ಅಪೂರ್ಣ ಕಾಮಗಾರಿಗಳ ಪೂರ್ಣಗೊಳಿಸಬೇಕು.
*ಹೊಸ ಕೈಗಾರಿಕೆಗಳ ನಿರ್ಮಾಣ