ಪಣಜಿ: ಬಾಂಬೋಲಿಂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕೇಂದ್ರ ಆಯುಷ್ ಮಂತ್ರಿ ಶ್ರೀಪಾದ ನಾಯ್ಕ್ ರವರು ಎಚ್ಚರವಾಗುತ್ತಿದ್ದಂತೆಯೇ ಕೇಳಿದ ಮೊದಲ ಪ್ರಶ್ನೆಯೆಂದರೆ ಪತ್ನಿ ವಿಜಯಾ ಹೇಗಿದ್ದಾಳೆ…? ಡಾ. ದೀಪಕ್ ಘುಮೆ ಹೇಗಿದ್ದಾರೆ, ಡ್ರೈವರ್ ಹೇಗಿದ್ದಾನೆ..? ಎಂಬ ಪ್ರಶ್ನೆಯನ್ನು ವೈದ್ಯರ ಬಳಿ ಕೇಳಿದರು ಎಂಬ ಮಾಹಿತಿ ಲಭ್ಯವಾಗಿದೆ.
ಮುಖ್ಯಮಂತ್ರಿ ಪ್ರಮೋದ್ ಸಾವಂತ್ ರವರ ಬಳಿಯೂ ಕೂಡ ಶ್ರೀಪಾದ ನಾಯ್ಕ್ ರವರು ಪತ್ನಿ ವಿಜಯಾ ನಾಯ್ಕ್ ರವರ ಬಗ್ಗೆ ವಿಚಾರಿಸಿದ್ದರು. ಆದರೆ ಪತ್ನಿ ವಿಜಯಾ ನಾಯ್ಕ ರವರು ಸಾವನ್ನಪ್ಪಿರುವುದಾಗಿ ಯಾರೂ ತಿಳಿಸಲಿಲ್ಲ, ಕಾರಣವೆಂದರೆ ಶ್ರೀಪಾದ ನಾಯ್ಕ್ ಅವರಿಗೆ ಇವೆಲ್ಲವನ್ನೂ ಸಹಿಸಿಕೊಳ್ಳುವ ಶಕ್ತಿ ಸದ್ಯ ಇಲ್ಲ. ವಿಜಯಾ ನಾಯ್ಕ್ ಅವರಿಗೆ ಗಂಭೀರ ಗಾಯವಾಗಿದ್ದು ಅವರಿಗೆ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ವೈದ್ಯರು ಶ್ರೀಪಾದ ನಾಯ್ಕ್ ರವರಿಗೆ ತಿಳಿಸಿದರು.
ವಿಜಯಾ ನಾಯ್ಕ ರವರು ನಿಧನರಾಗಿರುವ ವಿಷಯವನ್ನು ಶ್ರೀಪಾದ ನಾಯ್ಕ್ ರವರಿಗೆ ಸದ್ಯ ತಿಳಿಸುವುದು ಬೇಡ ಎಂದು ದೆಹೆಲಿಯ ಏಮ್ಸ್ಆಸ್ಪತ್ರೆಯ ವೈದ್ಯರ ತಂಡ ಸಲಹೆ ನೀಡಿದೆ. ಇದರಿಂದಾಗಿ ಯಾರೂ ಕೂಡ ಈ ಮಾಹಿತಿಯನ್ನು ಕೇಂದ್ರ ಸಚಿವ ನಾಯ್ಕ್ ರವರಿಗೆ ನೀಡಿಲ್ಲ. ಬಾಂಬೋಲಿಂ ಆಸ್ಪತ್ರೆಯ ಡೀನ್ ಡಾ. ಬಾಂದೇಕರ್ ಅವರು ನೀಡಿರುವ ಮಾಹಿತಿಯ ಅನುಸಾರ- ಮುಂಬರುವ 15 ದಿನಗಳಲ್ಲಿ ಕೇಂದ್ರ ಮಂತ್ರಿ ಶ್ರೀಪಾದ ನಾಯ್ಕ್ ಅವರನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗುವುದು. ದೆಹಲಿಯ ಏಮ್ಸ್ ಆಸ್ಪತ್ರೆಯ ವೈದ್ಯರ ತಂಡವು ಎರಡು ಬಾರಿ ಶ್ರೀಪಾದ ನಾಯ್ಕ್ ರವರ ಆರೋಗ್ಯ ತಪಾಸಣೆ ನಡೆಸಿದ್ದಾರೆ. ನಾಯ್ಕ ರವರ ಆರೋಗ್ಯ ಸ್ಥಿರವಾಗಿದೆ. ದೆಹಲಿಗೆ ಕರೆದೊಯ್ಯುವ ಅಗತ್ಯವಿಲ್ಲ ಎಂಬುದು ಖಚಿತವಾಗಿದೆ ಎಂಬ ಮಾಹಿತಿ ನೀಡಿದರು.
ಕೇಂದ್ರ ಆಯುಷ್ ಮಂತ್ರಿ ಶ್ರೀಪಾದ ನಾಯ್ಕ್ ಅವರ ವಾಹನ ಚಾಲಕ ಸೂರಜ್ ನಾಯ್ಕ್ ರವರು ಬಾಂಬೊಲಿಂ ಆಸ್ಪತ್ರೆಯ 144 ವಾರ್ಡ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅಂದು ಅಪಘಾತ ಹೇಗೆ ಸಂಭವಿಸಿತು ಎಂಬುದನ್ನು ವಾಹನ ಚಾಲಕ ಮಾಹಿತಿ ನೀಡಿರುವುದಾಗಿ ಬಿಜೆಪಿ ಮೂಲಗಳು ತಿಳಿಸಿವೆ. ಮುಂದೆ ಸಾಗುತ್ತಿದ್ದ ಪೋಲಿಸರ ವಾಹನವನ್ನು ಓವರ್ ಟೇಕ್ ಮಾಡುವ ಸಂದರ್ಭದಲ್ಲಿ ಈ ಅಪಘಾತ ಸಂಭವಿಸಿದೆ. ಅಲ್ಲಿ ರಸ್ತೆ ಕೂಡ ಸರಿಯಾಗಿರಲಿಲ್ಲ, ರಸ್ತೆ ದುರಸ್ತಿ ಕಾರ್ಯ ನಡೆಯುತ್ತಿತ್ತು ಎಂದು ವಾಹನ ಚಾಲಕ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ.
ಬಾಂಬೋಲಿಂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕೇಂದ್ರ ಆಯುಷ್ ಮಂತ್ರಿ ಶ್ರೀಪಾದ ನಾಯ್ಕ್ ರವರ ಆರೋಗ್ಯ ಸ್ಥಿತಿ ದಿನದಿಂದ ದಿನಕ್ಕೆ ಸುಧಾರಿಸುತ್ತಿದ್ದು, ನಿನ್ನೆಗಿಂತ ಇಂದು ಆರೋಗ್ಯ ಸ್ಥಿತಿ ಉತ್ತಮವಾಗಿದೆ ಎಂದು ಗೋವಾ ವೈದ್ಯಕೀಯ ಕಾಲೇಜು (ಬಾಂಬೋಲಿಂ ಆಸ್ಪತ್ರೆ) ಬಿಡುಗಡೆ ಮಾಡಿರುವ ಹೆಲ್ತ್ ಬುಲೆಟಿನ್‍ನಲ್ಲಿ ಮಾಹಿತಿ ನೀಡಲಾಗಿದೆ.
ಸಚಿವ ಶ್ರೀಪಾದ ನಾಯ್ಕ್ ಅವರ ಆರೋಗ್ಯದ ಬಗ್ಗೆ ಮಾಹಿತಿ ನೀಡಿರುವ ಆಸ್ಪತ್ರೆಯ ಡೀನ್. ಡಾ. ಶಿವಾನಂದ ಬಾಂದೇಕರ್- ಅವರ ಆರೋಗ್ಯ ಸ್ಥಿತಿ ಸುಧಾರಿಸುತ್ತಿದೆ. ರಕ್ತದೊತ್ತಡ ಸಾಮಾನ್ಯವಾಗಿದೆ. ಮೂಗಿನ ಮೂಲಕ ಪೈಪ್‍ನಲ್ಲಿ ಆಮ್ಲಜನಕ ಪೂರೈಕೆ ಮುಂದುವರೆಸಲಾಗಿದೆ. ಗಾಯಗಳು ಗುಣವಾಗುತ್ತಿದೆ. ಅವರಿಗೆ ಇಂದು ಫಿಜಿಯೊಥೆರಿಪಿ ಮಾಡಲಾಯಿತು ಮತ್ತು ಎಕ್ಸರೆ ಮಾಡಲಾಯಿತು ಎಂದು ಆಸ್ಪತ್ರೆಯ ವೈದ್ಯರು ಬಿಡುಗಡೆಗೊಳಿಸಿರುವ ಹೆಲ್ತ್ ಬುಲೆಟಿನ್‍ನಲ್ಲಿ ಮಾಹಿತಿ ನೀಡಲಾಗಿದೆ.