Advertisement
ಮಂಗಳವಾರ ನಗರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಕಾವೇರಿ ಜಲ ವಿವಾದ ಬಗೆಹರಿಸುವ ವಿಷಯದಲ್ಲಿ ಕೇಂದ್ರಕ್ಕೆ ಕಳಕಳಿ, ಕಾಳಜಿ, ಆತುರ ಇಲ್ಲವಾಗಿದೆ. ಕರ್ನಾಟಕದಲ್ಲಿ ಮಳೆ ಇಲ್ಲದೇ ಭೀಕರ ಬರ ಆವರಿಸಿದ್ದು, ಕೇಂದ್ರದ ನಿಯಮದಂತೆಯೇ ರಾಜ್ಯದಲ್ಲಿ 215 ಕ್ಕೂ ಹೆಚ್ಚು ತಾಲೂಕುಗಳು ಬರ ಪೀಡಿತ ಎಂದು ಘೋಷಿಸಿಲಾಗಿದೆ. ಕಾವೇರಿ ನದಿಯ ಹರಿವು ಇಲ್ಲವಾಗಿ, ಜಲಾಶಯಗಳಲ್ಲಿ ನೀರಿನ ಪ್ರಮಾಣ ಕಡಿಮೆಯಿದೆ. ಭವಿಷ್ಯದ ದಿನಗಳಲ್ಲಿ ಬೆಂಗಳೂರಿಗೆ ಕುಡಿಯುವ ನೀರಿಗೂ ತತ್ವಾರ ಎದುರಾಗಲಿದೆ. ಕರ್ನಾಟಕದ ಪರಿಸ್ಥಿತಿ ನೀರಿನ ವಿಷಯದಲ್ಲಿ ಗಂಭೀರವಾಗಿದ್ದರೂ ನಿತ್ಯವೂ 2600 ಕ್ಯೂಸೆಕ್ ನೀರು ಹರಿಸುವಂತೆ ಸಿ.ಡಬ್ಲ್ಯೂ.ಆರ್.ಸಿ. ನಿರ್ದೇಶನ ನೀಡುತ್ತಿದೆ. ಇಷ್ಟಾದರೂ ಕೇಂದ್ರ ಗಮನ ಹರಿಸುತ್ತಿಲ್ಲ ಎಂದು ಸಚಿವ ಎಚ್.ಕೆ.ಪಾಟೀಲ ಹರಿಹಾಯ್ದರು.
Related Articles
Advertisement
ಈ ವಿಷಯವಾಗಿ ಕೇಂದ್ರಕ್ಕೆ ನಿಯೋಗ ಕೊಂಡೊಯ್ಯುಯ್ದು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡುವ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ, ಜಲಸಂಪನ್ಮೂಲ ಖಾತೆ ಹೊಂದಿರುವ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಪ್ರಯತ್ನಿಸಿದರೂ ಪ್ರಧಾನಿ ಅವಕಾಶ ನೀಡುತ್ತಿಲ್ಲ ಎಂದು ದೂರಿದರು.
ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗುವ ವಿಷಯದಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ ಎಂದು ವಿರೋಧ ಪಕ್ಷಗಳ ಆರೋಪ ಅರ್ಥಹೀನ. ಪ್ರಧಾನಿ ಅವರನ್ನು ಭೇಟಿಯಾಗಲು ಅವಕಾಶ ನೀಡಿದರೂ ನಮ್ಮ ಮುಖ್ಯಮಂತ್ರಿ, ಸಚಿವರು ಹೋಗದಿದ್ದರೆ ವಿಫಲ ಎನ್ನಬಹುದು. ಆದರೆ ಪ್ರಧಾನಿ ನರೇಂದ್ರ ಮೋದಿ ಅವರೇ ತಮ್ಮ ಭೇಟಿಗೆ ಅವಕಾಶ ನೀಡುತ್ತಿಲ್ಲ. ಇಂಥ ಸ್ಥಿತಿಯಲ್ಲಿ ಕರ್ನಾಟಕ ರಾಜ್ಯದ ಬಿಜೆಪಿ 25 ಸಂಸದರು ಏನು ಮಾಡುತ್ತಿದ್ದಾರೆ. ರಾಜ್ಯದ ಸಂಸದರೇ ಪ್ರಧಾನಿ ಮೋದಿ ಅವರನ್ನು ಭೇಟಿಯಾಗಿ ರಾಜ್ಯದ ವಾಸ್ತವಿಕ ಸಮಸ್ಯೆ ಮನವರಿಕೆ ಮಾಡಿಕೊಡಲು ಮುಂದಾಗಬೇಕಿತ್ತು. ರಾಜ್ಯದಲ್ಲಿ ಭೀಕರ ಬರ ಎಂದು ಘೋಷಿಸಿದ ಬಳಿಕವೂ 2600 ಕ್ಯೂಸೆಕ್ ನೀರು ಬಿಡುವಂತೆ ಆದೇಶ ಮಾಡಿದ್ದು ಸರಿಯಲ್ಲ ಎಂದು ಕೇಂದ್ರಕ್ಕೆ ತಿಳಿಸಿ ಹೇಳಲು ಸಾಧ್ಯವಾಗಲಿಲ್ಲ ಏಕೆ ಎಂದು ಪ್ರಶ್ನಿಸಿದರು.
ಮಹಾದಾಯಿ ಯೋಜನೆ ಕಾಮಗಾರಿಗೆ ಕೇಂದ್ರಕ್ಕೆ ಸರಿಯಾದ ದಾಖಲೆಗಳನ್ನು ರಾಜ್ಯ ಸರ್ಕಾರ ನೀಡಿಲ್ಲ ಎಂಬ ಆರೋಪವೂ ಅರ್ಥಹೀನ. ನಾವು ಇಂಥ ದಾಖಲೆ ಕೊಟ್ಟಿಲ್ಲ ಎಂದು ಕೇಂದ್ರ ಸರ್ಕಾರವೇನು ಕೇಳಿದೆಯೆ? ಮಹದಾಯಿ ಯೋಜನೆ ಘೋಷಣೆ ಮಾಡುವುದಕ್ಕೆ ಇವರಿಗೆ ಏನು ತೊಂದರೆ ಎಂದು ಹರಿಹಾಯ್ದರು.