ಚಿತ್ರದುರ್ಗ: ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಉದ್ಯೋಗ ಸೃಷ್ಟಿಸುವ ವ್ಯವಸ್ಥೆಯನ್ನೇ ನಾಶ ಮಾಡಿವೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದರು.
ಮೊಳಕಾಲ್ಮೂರು ತಾಲೂಕು ಗಿರಿಯಮ್ಮನಹಳ್ಳಿ ಬಳಿ ಭಾರತ್ ಜೋಡೋ ಯಾತ್ರೆ ಕ್ಯಾಂಪ್‌ನಲ್ಲಿ ಯುವ ಕಾಂಗ್ರೆಸ್ ಕಾರ್ಯಕರ್ತರ ಜತೆಗೆ ನಡೆಸಿದ ನಿರುದ್ಯೋಗ ಸಮಸ್ಯೆ ಕುರಿತ ಸಂವಾದದಲ್ಲಿ ಮಾತನಾಡಿದ ಅವರು, ಯಾವುದೇ ಉದ್ಯೋಗ ಅದಾಗಿಯೇ ಆಗುವುದಿಲ್ಲ. ಅದಕ್ಕಾಗಿ ಒಂದು ಯೋಜನೆ ರೂಪಿಸಬೇಕು. ಕರ್ನಾಟಕ ಸರ್ಕಾರದಲ್ಲಿ ಉದ್ಯೋಗ ಸೃಷ್ಟಿಗೆ ಯಾವುದೇ ರೂಪುರೇಷೆಗಳೇ ಇಲ್ಲ. ನೋಟು ಅಮಾನ್ಯಿಕರಣದಿಂದಾಗಿ ಎಷ್ಟು ಉದ್ಯೋಗ ನಾಶವಾದವು, ಕೆಟ್ಟ ಜಿಎಸ್‌ಟಿಯಿಂದಾಗಿ ಎಷ್ಟು ಉದ್ಯೋಗ, ಕೈಗಾರಿಕೆಗಳು ಮುಚ್ಚಿ ಹೋದವು ಎನ್ನುವುದನ್ನು ಗಮನಿಸಿ. ನಿರುದ್ಯೋಗಿ ಯುವಕರಿಗೆ ಕೆಲಸ ಕೊಡಲು ಸರ್ಕಾರಕ್ಕೆ ಇಷ್ಟವಿಲ್ಲ. ಈ ಹಿನ್ನೆಲೆಯಲ್ಲಿ ನಮ್ಮ ದೇಶದ ಶಕ್ತಿ ವ್ಯರ್ಥವಾಗುತ್ತಿದೆ. ಇದೊಂದು ಅಪರಾಧ ಎಂದರು.
ಕೇವಲ ಎರಡು ಅಥವಾ ಮೂರು ಜನರಿಗೆ ಉದ್ಯೋಗ-ವ್ಯವಹಾರ ನೀಡುವುದಲ್ಲ. ರಾಷ್ಟ್ರ ಮತ್ತು ರಾಜ್ಯದಲ್ಲಿ ಲಕ್ಷಾಂತರ ಯುವಕರು ನಿರುದ್ಯೋಗಿಗಳಾಗಿದ್ದಾರೆ. ಅವರಿಗೆಲ್ಲ ಉದ್ಯೋಗ ನೀಡುವ ನಿಟ್ಟಿನಲ್ಲಿ ಕಾಂಗ್ರೆಸ್ ಕಾರ್ಯತಂತ್ರ ರೂಪಿಸಲಿದೆ. ಮೊದಲು ಖಾಲಿಯಿರುವ ಹುದ್ದೆಗಳನ್ನು ಭರ್ತಿ ಮಾಡುತ್ತೇವೆ. ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚು ಆದ್ಯತೆ ನೀಡುತ್ತೇವೆ ಎಂದರು.
ಯುವ ಪೀಳಿಗೆ ಮೊದಲು ನಮ್ಮ ನಮ್ಮಲ್ಲಿ ಕಿತ್ತಾಡುವುದು, ಹೀಗೆಳೆಯುವುದನ್ನು ಬಿಟ್ಟು ದೇಶ ಕಟ್ಟುವ ಕೆಲಸ ಮಾಡಬೇಕು. ಹೀಗೆ ಮಾಡಿದಾಗ ಪಾರ್ಟ್ ಟೈಂ ಜಾಬ್ ಮಾಡುವುದು, ವಾಟ್ಸ್‌ಆ್ಯಪ್ ಗ್ರೂಪ್‌ಗಳಲ್ಲಿ ಕೆಲಸ ಹುಡುಕುವ ಸ್ಥಿತಿ ಬರುವುದಿಲ್ಲ. ಭಾರತದ ಯುವಶಕ್ತಿಗೆ ಸಾಕಷ್ಟು ಬುದ್ಧಿವಂತಿಕೆ ಇದೆ. ಕರ್ನಾಟಕದ ರಸ್ತೆಗಳಲ್ಲಿ ನಡೆದು ಬರುವಾಗ ನಾನು ಗಮನಿಸುತ್ತಿದ್ದೇನೆ. ಎಲ್ಲರೂ ಸಮರ್ಥರಿದ್ದಾರೆ. ಸರ್ಕಾರ ನಿಮ್ಮನ್ನು ನಂಬಬೇಕು. ನಿಮ್ಮನ್ನು ಸಶಕ್ತರನ್ನಾಗಿ ಮಾಡಬೇಕು. ಆದರೆ, ನಿಮ್ಮ ಕನಸು ನಾಶ ಮಾಡುತ್ತಿದ್ದಾರೆ ಎಂದರು.
ಸಂವಾದದಲ್ಲಿ ಯುವಕನೋರ್ವ ನಾನು ಎಂಬಿಎ ಓದಿದ್ದೇನೆ. 26 ವರ್ಷವಾಗಿದ್ದು, ಉದ್ಯೋಗ ಸಿಗುತ್ತಿಲ್ಲ. ಝೋಮ್ಯಾಟೋದಲ್ಲಿ ಪಾರ್ಟ್ ಟೈಂ ಕೆಲಸ ಮಾಡುತ್ತಿದ್ದೇನೆ. ಅಪ್ಪ, ಅಮ್ಮನಿಗೆ ಇದನ್ನು ಹೇಳಲು ಆಗುತ್ತಾ ಎಂದು ಪ್ರಶ್ನಿಸಿದರೆ, ಮತ್ತೋರ್ವ ಯುವಕ ನಾವು ಬಡವರು ಸಾಕಷ್ಟು ಶ್ರಮಪಟ್ಟು ಓದಿ ಪರೀಕ್ಷೆ ಬರೆಯುತ್ತೇವೆ. ಆದರೆ, ಉನ್ನತ ಮಟ್ಟದ ಪೊಲೀಸ್ ಅಧಿಕಾರಿಗಳೇ ಶಾಮಿಲಾಗಿ ಪಿಎಸ್‌ಐ ಪರೀಕ್ಷೆಯಲ್ಲಿ ಅವ್ಯವಹಾರ ನಡೆಸಿದ್ದಾರೆ. ಇದಕ್ಕೆಲ್ಲಾ ತಡೆ ಹಾಕಲು ಸಾಧ್ಯವಿದೆಯೇ ಎಂದು ಪ್ರಶ್ನಿಸಿದರು.
ಯುವ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಬಿ.ವಿ.ಶ್ರೀನಿವಾಸ್, ರಾಜ್ಯ ಅಧ್ಯಕ್ಷ ಮಹಮ್ಮದ್ ನಲಪಾಡ್, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಎಐಸಿಸಿ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೆವಾಲಾ, ಕೇಂದ್ರದ ಮಾಜಿ ಸಚಿವ ಜೈರಾಮ್ ರಮೇಶ್, ಪರಿಷತ್ ವಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್, ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮ್ಮದ್, ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಕಾರೇಹಳ್ಳಿ ಉಲ್ಲಾಸ್ ಇತರರಿದ್ದರು.