Advertisement

ಕೆಆರ್‌ಎಸ್ ಸುತ್ತಮುತ್ತ ಗಣಿಗಾರಿಕೆ ಪ್ರಾಯೋಗಿಕ ಸ್ಫೋಟಕ್ಕೆ ಸ್ಥಳ ಪರಿಶೀಲಿಸಿದ ಕೇಂದ್ರದ ತಂಡ

09:03 PM Mar 03, 2021 | Team Udayavani |

ಮಂಡ್ಯ: ಜಿಲ್ಲೆಯ ಜೀವನಾಡಿಯಾಗಿರುವ ಕೃಷ್ಣರಾಜಸಾಗರ ಜಲಾಶಯದ ಸುತ್ತಮುತ್ತ 20 ಕಿ.ಮೀ ವ್ಯಾಪ್ತಿಯಲ್ಲಿ ಕಲ್ಲುಗಣಿಗಾರಿಕೆಯಿಂದ ಅಪಾಯದ ದೂರು ಕೇಳಿ ಬಂದಿದ್ದು, ರಾಜ್ಯ ಸರ್ಕಾರ ಜಲಾಶಯದ ಸುತ್ತಮುತ್ತ ಸ್ಫೋಟ ನಡೆಸಿ ವರದಿ ನೀಡುವಂತೆ ಅನುಮತಿ ನೀಡಿದ ಹಿನ್ನೆಲೆಯಲ್ಲಿ ಬುಧವಾರ ಕೇಂದ್ರದ ವಿಜ್ಞಾನಿಗಳ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿತು.

Advertisement

ಜಾರ್ಖಂಡ್‌ನ ವಿಜ್ಞಾನಿ ಡಾ.ಸಿ.ಸೋಮಾದೀನ ಹಾಗೂ ರಾಕೇಶ್‌ಕುಮಾರ್‌ಸಿಂಗ ನೇತೃತ್ವದ ಸಿಎಸ್‌ಐಆರ್ ಹಾಗೂ ಸಿಐಎಂಎಆರ್ ತಂಡದ ಅಧಿಕಾರಿಗಳು ಬೇಬಿಬೆಟ್ಟ ಹಾಗೂ ಕೆಆರ್‌ಎಸ್ ಸುತ್ತಮುತ್ತ ಕಲ್ಲುಗಣಿಗಾರಿಕೆ ಸ್ಥಳಗಳಿಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿತು.

ತಾಂತ್ರಿಕ ಪರಿಶೀಲನೆ:

ಕೆಆರ್‌ಎಸ್ ಸುತ್ತಮುತ್ತಲ ಪ್ರದೇಶದಲ್ಲಿ ಕಲ್ಲು ಗಣಿಗಾರಿಕೆ ನಡೆಯುವುದರಿಂದ ಹಾಗೂ ಸ್ಫೋಟಕ ಮಾಡುವುದರಿಂದ ಜಿಲ್ಲೆಯ ರೈತರ ಜೀವನಾಡಿ, ವಿಶ್ವವಿಖ್ಯಾತ ಪ್ರವಾಸಿ ತಾಣ ಕೆಆರ್‌ಎಸ್ ಜಲಾಶಯಕ್ಕೆ ಅಪಾಯವಾಗಲಿದೆ ಎಂಬ ದೂರುಗಳು ಸಾಕಷ್ಟು ಬಾರಿ ಕೇಳಿ ಬಂದ ಹಿನ್ನೆಲೆಯಲ್ಲಿ ಕೇಂದ್ರದ ತಂಡ ಬುಧವಾರ ಭೇಟಿ ನೀಡಿತು. ಸ್ಥಳೀಯ ಅಧಿಕಾರಿಗಳ ಸಹಕಾರದೊಂದಿಗೆ ಜಲಾಶಯದ ಸುತ್ತಮುತ್ತಲ ಪ್ರದೇಶದಲ್ಲಿರುವ ತಾಲೂಕಿನ ಬನ್ನಂಗಾಡಿ ಗ್ರಾಮದ ಕಲ್ಲು ಗಣಿಗಾರಿಕೆ ಸ್ಥಳಗಳು, ಎಸ್‌ಎಲ್‌ವಿ ಕ್ರಷರ್, ಎಸ್‌ಟಿಜಿ ಕ್ರಷರ್, ಕರ್ನಾಟಕ ಕ್ರಷರ್ ಸೇರಿದಂತೆ ಇತರೆ ಕ್ರಷರ್‌ಗಳಿಗೆ ಭೇಟಿ ನೀಡಿ, ಬೆಟ್ಟಗುಡ್ಡ ಹಾಗೂ ಗಣಿಗಾರಿಕೆ ಸ್ಫೋಟದ ತೀವ್ರತೆ, ಎಷ್ಟು ಪ್ರಮಾಣದಲ್ಲಿ ಬಂಡೆಗಳನ್ನು ಸ್ಫೋಟಿಸಲಾಗುತ್ತಿದೆ ಎನ್ನುವ ಬಗ್ಗೆ ಸಂಪೂರ್ಣ ತಾಂತ್ರಿಕವಾಗಿ ಪರಿಶೀಲಿಸಿದರು.

ಪ್ರಾಯೋಗಿಕ ಸ್ಫೋಟಕ್ಕೆ ಸ್ಥಳ ನಿಗದಿ:

Advertisement

ಕಲ್ಲುಗಣಿಗಾರಿಕೆಗೆ ಉಪಯೋಗಿಸುವ ಸ್ಫೋಟದ ತೀವ್ರತೆ ಕಂಪನದಿಂದ ಕೆಆರ್‌ಎಸ್ ಅಣೆಕಟ್ಟಿಗೆ ತೊಂದರೆ ಉಂಟಾಗಬಹುದೇ ಎನ್ನುವ ಬಗ್ಗೆ ಪರಿಶೀಲಿಸಿ, ಕೆಲ ಕ್ರಷರ್‌ಗಳಲ್ಲಿ ಪ್ರಾಯೋಗಿಕವಾಗಿ ಸ್ಫೋಟಿಸಲು ಸ್ಥಳ ನಿಗದಿ ಮಾಡಲಾಗಿದೆ. ತಾಲೂಕಿನ ಬನ್ನಂಗಾಡಿ, ಕಾವೇರಿಪುರ, ಬೇಬಿಬೆಟ್ಟದ ಸುತ್ತಮುತ್ತಲ ಗಣಿಗಾರಿಕೆ ಸ್ಥಳದಲ್ಲಿ ಪ್ರಾಯೋಗಿಕವಾಗಿ ಸ್ಫೋಟ ಮಾಡಲು ಸ್ಥಳ ನಿಗದಿ ಮಾಡಲಾಯಿತು. ಶೀಘ್ರದಲ್ಲಿ ಅಧಿಕಾರಿಗಳ ತಂಡದ ನೇತೃತ್ವದಲ್ಲಿ ಸ್ಫೋಟಿಸಲು ನಿರ್ಧರಿಸಲಾಗಿದೆ.

ಕೇಂದ್ರಕ್ಕೆ ವರದಿ ರವಾನೆ:

ವಿಜ್ಞಾನಿಗಳ ತಂಡ ಸ್ಥಳ ಪರಿಶೀಲಿಸಿರುವ ತಾಂತ್ರಿಕ ವರದಿಯನ್ನು ಕೇಂದ್ರಕ್ಕೆ ರವಾನಿಸಲಾಗುವುದು. ಜತೆಗೆ ಪ್ರಾಯೋಗಿಕವಾಗಿ ಬ್ಲಾಸ್ಟಿಂಗ್ ಮಾಡಿದ ನಂತರ, ಕಲ್ಲುಗಣಿಗಾರಿಕೆ ಸ್ಫೋಟದಿಂದ ಕೆಆರ್‌ಎಸ್ ಜಲಾಶಯಕ್ಕೆ ಅಪಾಯ ಇದೆಯೋ ಅಥವಾ ಇಲ್ಲವೋ ಎನ್ನುವುದರ ಬಗ್ಗೆ ಅಧಿಕೃತವಾಗಿ ವಿಜ್ಞಾನಿಗಳ ತಂಡ ಕೇಂದ್ರಕ್ಕೆ ವರದಿ ನೀಡಲಿದೆ.

ಕಾವೇರಿ ನೀರಾವರಿ ಇಲಾಖೆಯ ಅಧೀಕ್ಷಕ ಅಭಿಯಂತರ ವಿಜಯ್‌ಕುಮಾರ್, ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಹಿರಿಯ ಅಧಿಕಾರಿ ಟಿ.ವಿ.ಪುಷ್ಪಾ, ಪಾಂಡವಪುರ ಉಪವಿಭಾಗಾಧಿಕಾರಿ ಬಿ.ಸಿ.ಶಿವಾನಂದಮೂರ್ತಿ, ತಹಶೀಲ್ದಾರ್ ಪ್ರಮೋದ್ ಎಲ್.ಪಾಟೀಲ್ ಹಾಗೂ ಸ್ಥಳೀಯ ಅಧಿಕಾರಿಗಳ ತಂಡ ಕೇಂದ್ರದ ವಿಜ್ಞಾನಿಗಳ ತಂಡಕ್ಕೆ ಸಾಥ್ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next