Advertisement

ಕೇಂದ್ರ ಮಧ್ಯ ಪ್ರವೇಶಿಸದು: ಸಚಿವ ರಿಜಿಜು

10:41 PM Aug 12, 2019 | Team Udayavani |

ಹೊಸದಿಲ್ಲಿ: ಮುಂದಿನ ತಿಂಗಳು ಪಾಕಿಸ್ಥಾನದಲ್ಲಿ ನಡೆಯಲಿರುವ ಡೇವಿಸ್‌ ಕಪ್‌ ಪಂದ್ಯಾಟದಲ್ಲಿ ಭಾರತೀಯ ತಂಡ ಭಾಗವಹಿಸುವುದರ ಬಗ್ಗೆ ಕೇಂದ್ರ ಸರಕಾರ ಮಧ್ಯ ಪ್ರವೇಶಿಸದು ಎಂದು ಕೇಂದ್ರದ ಕ್ರೀಡಾ ಸಚಿವ ಕಿರಣ್‌ ರಿಜಿಜು ಹೇಳಿದ್ದಾರೆ.

Advertisement

ಪಾಕಿಸ್ಥಾನದ ಜತೆ ರಾಜಕೀಯವಾಗಿ ಉದ್ವಿಗ್ನ ಪರಿಸ್ಥಿತಿ ತಲೆದೋರಿದ ಹಿನ್ನೆಲೆ ಯಲ್ಲಿ ಭಾರತೀಯ ತಂಡ ಡೇವಿಸ್‌ ಕಪ್‌ ಏಶ್ಯ-ಒಶಿಯಾನಿಯ ಬಣ ಒಂದರ ಪಂದ್ಯಾಟದಲ್ಲಿ ಭಾಗವಹಿಸುವುದು ಇನ್ನೂ ಖಚಿತವಾಗಿಲ್ಲ. ಕಾಶ್ಮೀರಕ್ಕೆ ನೀಡಲಾದ 370 ವಿಧಿಯನ್ನು ಭಾರತ ರದ್ದುಮಾಡಿದ ಬಳಿಕ ಪಾಕಿಸ್ಥಾನವು ಭಾರತದ ಜತೆ ರಾಜತಾಂತ್ರಿಕ ಸಂಬಂಧವನ್ನು ಕಡಿದುಕೊಂಡಿದೆ.

ದ್ವಿಪಕ್ಷೀಯ ಒಪ್ಪಂದವಲ್ಲ
“ಡೇವಿಸ್‌ ಕಪ್‌ ಹೋರಾಟವು ದ್ವಿಪಕ್ಷೀಯ ಒಪ್ಪಂದವಲ್ಲ. ಒಂದು ವೇಳೆ ದ್ವಿಪಕ್ಷೀಯ ಕ್ರೀಡಾಸ್ಪರ್ಧೆಯಾಗಿದ್ದರೆ ಭಾರತ ಪಾಕ್‌ ವಿರುದ್ಧ ಆಡುವ ವಿಷಯವು ರಾಜಕೀಯ ನಿರ್ಧಾರವಾ ಗಿರುತ್ತದೆ. ಆದರೆ ಡೇವಿಸ್‌ ಕಪ್‌ ದ್ವಿಪಕ್ಷೀ ಯ ಸ್ಪರ್ಧೆಯಲ್ಲ. ಇದನ್ನು ವಿಶ್ವ ಕ್ರೀಡಾ ಮಂಡಳಿ ಸಂಘಟಿಸುತ್ತದೆ’ ಎಂದು ರಿಜಿಜು ಸಮಾರಂಭವೊಂದರಲ್ಲಿ ಹೇಳಿದ್ದಾರೆ.

ಭಾರತವು ಒಲಿಂಪಿಕ್‌ ಚಾರ್ಟರ್‌ ನಿಯಮಕ್ಕೆ ಬದ್ಧವಾಗಿರುವುದರಿಂದ ಭಾರತ ಡೇವಿಸ್‌ ಕಪ್‌ನಲ್ಲಿ ಭಾಗವಹಿಸು ವುದರ ಕುರಿತು ಸರಕಾರ ಅಥವಾ ರಾಷ್ಟ್ರೀಯ ಫೆಡರೇಶನ್‌ ಯಾವುದೇ ಪ್ರತಿಕ್ರಿಯೆ ನೀಡುವ ಸಾಧ್ಯತೆಯಿಲ್ಲ ಎಂದು ರಿಜಿಜು ತಿಳಿಸಿದ್ದಾರೆ.

ಸ್ಥಳಾಂತರಕ್ಕೆ ಒಪ್ಪಿಗೆ ಇಲ್ಲ
ಡೇವಿಸ್‌ ಕಪ್‌ ಪಂದ್ಯಾವಳಿಯನ್ನು ತಟಸ್ಥ ತಾಣದಲ್ಲಿ ಆಯೋಜಿಸಲು ಅಖೀಲ ಭಾರತ ಟೆನಿಸ್‌ ಅಸೋಸಿಯೇಶನ್‌ ಬಯಸಿದೆ ಮತ್ತು ಈ ಸಂಬಂಧ ಅಂತಾರಾಷ್ಟ್ರೀಯ ಟೆನಿಸ್‌ ಫೆಡರೇಶನ್‌ಗೆ ಮನವಿ ಮಾಡಿದೆ. ಆದರೆ ಇಸ್ಲಾಮಾಬಾದ್‌ನಲ್ಲಿ ಈಗಾಗಲೇ ಸಿದ್ಧತೆ ಸಾಗುತ್ತಿರುವ ಕಾರಣ ತಾಣ ಸ್ಥಳಾಂತರಿಸಲು ಒಪ್ಪಿಗೆ ಸೂಚಿಸುವುದಿಲ್ಲ ಎಂದು ಪಾಕಿಸ್ಥಾನ ಟೆನಿಸ್‌ ಫೆಡರೇಶನ್‌ ಈಗಾಗಲೇ ಸ್ಪಷ್ಟಪಡಿಸಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next