ಶಿವಮೊಗ್ಗ: ಈ ಹಿಂದೆ ಬಿಜೆಪಿ ಸರ್ಕಾರವಿದ್ದಾಗ ಯಾವ ಗ್ಯಾರಂಟಿ ನೀಡಿದ್ದಾರೆ? ಕೇಂದ್ರ ಸರ್ಕಾರ ಜನಸಾಮಾನ್ಯರಿಗೆ ಅನುಕೂಲವಾಗುವ ಕೆಲಸ ಮಾಡಿಲ್ಲ. ಯುವಕರಿಗೆ ಎರಡು ಕೋಟಿ ಉದ್ಯೋಗ ಕೋಡುತ್ತೇವೆ ಎಂದಿದ್ದರು, ಆದರೆ ಯುವಕರಿಗೆ ಉದ್ಯೋಗ ನೀಡುವಲ್ಲಿ ಕೇಂದ್ರ ಸರ್ಕಾರ ವಿಫಲವಾಗಿದೆ. ಕಾಂಗ್ರೆಸ್ ಪಕ್ಷ ನುಡಿದಂತೆ ನಡೆದ ಸರ್ಕಾರ. ಈ ಹಿಂದೆಯು ನಾವು ನೀಡಿದ್ದ ಭರವಸೆಯನ್ನು ಈಡೇರಿಸಿದ್ದೇವೆ. ಏಳು ತಿಂಗಳಲ್ಲೇ ನಾವು ನೀಡಿದ ಗ್ಯಾರಂಟಿ ನೀಡಿದ್ದೇವೆ ಎಂದು ವೈದ್ಯಕೀಯ ಸಚಿವ ಡಾ.ಶರಣ ಪ್ರಕಾಶ್ ಪಾಟೀಲ್ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯುವನಿಧಿ ಯೋಜನೆಗೆ ಸೇವಾ ಕೇಂದ್ರಗಳಲ್ಲಿ ಹೋಗಿ ಯುವಕರು ನೋಂದಣಿ ಮಾಡಿಕೊಳ್ಳುತ್ತಿದ್ದಾರೆ. ಈಗಾಗಲೇ 61 ಸಾವಿರ ಯುವಕರು ನೋಂದಣಿ ಮಾಡಿಕೊಂಡಿದ್ದಾರೆ. 5 ಲಕ್ಷ 29 ಸಾವಿರ ಯುವಕರು ಪದವಿ ಪಡೆದು ತೇರ್ಗಡೆಯಾಗಿದ್ದಾರೆ. ಮುಂದಿನ ವರ್ಷದ ಟಾರ್ಗೆಟ್ 10 ಲಕ್ಷ ಇದೆ. ಐತಿಹಾಸಿಕ ಕಾರ್ಯಕ್ರಮ ಇದಾಗಲಿದೆ. ವಿವೇಕಾನಂದರ ಜಯಂತಿ ದಿನದಂದೇ ಈ ಕಾರ್ಯಕ್ರಮ ಮಾಡುತ್ತಿದ್ದೇವೆ. ನಿರುದ್ಯೋಗ ಹೊಗಲಾಡಿಸಲು ಸಹ ಈ ಕಾರ್ಯಕ್ರಮ ಸಹಕಾರಿಯಾಗಲಿದೆ ಎಂದರು.
ಗಣರಾಜೋತ್ಸವದಲ್ಲಿ ಕರ್ನಾಟಕಕ್ಕೆ ಅನ್ಯಾಯ ವಿಚಾರಕ್ಕೆ ಮಾತನಾಡಿದ ಅವರು, ನಮ್ಮ ರಾಜ್ಯಕ್ಕೆ ಪ್ರತಿ ಭಾರಿ ಮಲತಾಯಿ ಧೋರಣೆಯಾಗುತ್ತಿದೆ. ಕೇಂದ್ರ ಸರ್ಕಾರಕ್ಕೆ ಕರ್ನಾಟಕದ ಬಗ್ಗೆ ಇರುವ ಅಸಡ್ಡೆ ತೋರಿಸುತ್ತಿದೆ. ರಾಜ್ಯದ 27 ಸಂಸದರು ಈ ಬಗ್ಗೆ ಮಾತಾಡಬೇಕು. ಕರ್ನಾಟಕ ರಾಜ್ಯಕ್ಕೆ ಕೇಂದ್ರ ಸರ್ಕಾರ ಅನ್ಯಾಯ ಮಾಡುತ್ತಿದೆ. ಕರ್ನಾಟಕದಲ್ಲಿ ಕಾಂಗ್ರೆಸ್ ಬಂದಿದೆ ಅಂತ ಸಿಟ್ಟು ಬಂದಿದೆ. ಹಾಗಾಗಿ ಈ ರೀತಿಯ ಧೋರಣೆ ಅನುಸರಿಸುತ್ತಿದ್ದಾರೆ. ಬಿಜೆಪಿಯವರಿಗೆ ನಮ್ಮ ಕಾರ್ಯಕ್ರಮಗಳನ್ನು ಸಹಿಸಿಕೊಳ್ಳಲಾಗುತ್ತಿಲ್ಲ. ಮೊಸರಲ್ಲಿ ಕಲ್ಲು ಹುಡುಕುವ ಕೆಲಸ ಮಾಡಬಾರದು. ರಾಜ್ಯದ ಜನರು ಬಿಜೆಪಿಯ ಸುಳ್ಳಿಗೆ ಮರುಳಾಗುವುದಿಲ್ಲ. ಬಿಜೆಪಿ ಮಾಡಿದ ಭ್ರಷ್ಟಾಚಾರದಿಂದ ಜನ ತಿರಸ್ಕಾರ ಮಾಡಿದ್ದಾರೆ. ಪ್ರಜಾಪ್ರಭುತ್ವ ವಿರೋಧಿ ಕೆಲಸದ ಮೂಲಕ ಸರ್ಕಾರ ಬಿಳಿಸಿದ್ದರು. 40 ಪರ್ಸೇಂಟ್ ಭ್ರಷ್ಟಾಚಾರ ಮಾಡಿದ್ದರು ಎಂದು ಸಚಿವ ಪಾಟೀಳ ಹೇಳಿದರು.
ಯೋಜನೆಗಳೇ ಉತ್ತರ: ಶಿಕ್ಷಣ ಸಚಿವ ಮಧು ಬಂಗಾರಪ್ಪ ಮಾತನಾಡಿ, ಜ.12 ರಂದು ಯುವನಿಧಿ ಐದನೇ ಕಾರ್ಯಕ್ರಮ ಜಾರಿ ಆಗುತ್ತಿದೆ. ಪ್ರಣಾಳಿಕೆಯ ಉಪಾಧ್ಯಕ್ಷನಾಗಿ ಯುವನಿಧಿ ಕಾರ್ಯಕ್ರಮ ಶಿವಮೊಗ್ಗದಲ್ಲಿ ಆಗಲಿ ಎಂದಿದ್ದೆ. ಟೀಕೆ ಟಿಪ್ಪಣಿಗಳಿಗೆ ನಮ್ಮ ಯೋಜನೆಗಳು ಜನರಿಗೆ ತಲುಪುತ್ತಿರುವುದೇ ಉತ್ತರ. 75 ಲಕ್ಷ ಅನುಧಾನ ಪ್ರತಿ ಗ್ರಾಮ ಪಂಚಾಯತಿ ಗೆ ಹೋಗುತ್ತಿದೆ. ಈ ಐದು ಗ್ಯಾರಂಟಿ ಯೋಜನೆಗಳಿಂದಾಗಿ ಒಂದು ಕುಟುಂಬಕ್ಕೆ ಪ್ರತಿ ತಿಂಗಳು ಐದು ಸಾವಿರದಂತೆ ಪ್ರಯೋಜನವಾಗುತ್ತಿದೆ ಎಂದರು.
ವರ್ಷಕ್ಕೆ 8 ಕೋಟಿ ಅನುದಾನ ಗ್ರಾಮ ಪಂಚಾಯತಿಗೆ ಹೋಗುತ್ತಿದೆ. ಇದು ಖಜಾನೆ ಖಾಲಿಯಾಗಿದೆ ಎನ್ನುವರಿಗೆ ಉತ್ತರ. ಟೀಕೆ ಟಿಪ್ಪಣಿಗಳು ಕಾರ್ಯಕ್ರಮವಾದ ಮೇಲೆ ಹೇಳ್ತಾರೆ. ಇನ್ನುಂದೆ ಅಭಿವೃದ್ಧಿ ಕಾರ್ಯಕ್ರಮ ಪ್ರಾರಂಭವಾಗುತ್ತದೆ ಎಂದರು.
ಯುವಕರ ಭವಿಷ್ಯದ ಸರ್ಕಾರ ನಮ್ಮದು. ಬೇರೆ, ಬೇರೆ ಜಿಲ್ಲೆಗಳಿಂದ ಯುವಕರು ಈ ಕಾರ್ಯಕ್ರಮಕ್ಕೆ ಆಗಮಿಸಲಿದ್ದಾರೆ. ಒಂದೂವರೆ ಲಕ್ಷ ಯುವಕರು ಸೇರುವ ಸಾಧ್ಯತೆ ಇದೆ. ನಮ್ಮ ಸರ್ಕಾರದಿಂದ ಈ ಕಾರ್ಯಕ್ರಮ ನೀಡುತ್ತಿರುವುದಕ್ಕೆ ಬಹಳ ಹೆಮ್ಮೆಯಾಗುತ್ತಿದೆ ಎಂದರು.