ಬೆಂಗಳೂರು:ಕೋವಿಡ್-19 ಲಾಕ್ ಡೌನ್ ಸಮಯದಲ್ಲಿ ವಲಸೆ ಕಾರ್ಮಿಕರ ಹಿತ ಕಾಯುವಲ್ಲಿ ಕೇಂದ್ರ ಸರ್ಕಾರ ವಿಫಲವಾಗಿದ್ದು ಕೇಂದ್ರ ರೈಲ್ವೆ ಸಚಿವರು ರಾಜಿನಾಮೆ ನೀಡಬೇಕು ಎಂದು ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಆಗ್ರಹಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೋವಿಡ್-19 ಸಂಕಷ್ಟಗಳನ್ನು ಎದುರಿಸುವಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ವಿಫಲವಾಗಿದ್ದು, ಸಮರ್ಪಕ ಯೋಜನೆಗಳನ್ನು ಕೈಗೊಳ್ಳದಿರುವುದರಿಂದ ಕಾರ್ಮಿಕ ವರ್ಗ ಸಾಕಷ್ಟು ತೊಂದರೆಗೆ ಸಿಲುಕಿಕೊಂಡಿದೆ.
ಕೋವಿಡ್ 19 ನಿಂದ ಇಡೀ ದೇಶ ಅಲ್ಲೋಲ ಕಲ್ಲೋಲವಾಗಿದೆ. ಕೂಲಿ ಕಾರ್ಮಿಕರು ಹಾಗೂ ವೃತ್ತಿಪರ ಕುಶಲ ಕರ್ಮಿಗಳು ಬಹಳ ತೊಂದರೆಯಲ್ಲಿದ್ದಾರೆ. ಸಣ್ಣ ಕೈಗಾರಿಕೆಗಳು ಮತ್ತು ಅಸಂಘಟಿತ ಕಾರ್ಮಿಕರು, ರೈತರು ಮತ್ತು ರೈತ ಕಾರ್ಮಿಕರು ತೊಂದರೆ ಅನುಭವಿಸುತ್ತಿದ್ದಾರೆ ಎಂದು ಹೇಳಿದರು.
ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಒತ್ತಾಯಿಸಿದ ಮೇಲೆ ಕಾರ್ಮಿಕರಿಗೆ ರೈಲು ಸಂಚಾರ ಆರಂಭಿಸಲಾಯಿತು. ಕೋವಿಡ್ 19 ಪ್ರಕರಣಗಳು ಕಡಿಮೆ ಇದ್ದಾಗ ಲಾಕ್ ಡೌನ್ ಬಿಗಿಗೊಳಿಸಿ ಈಗ ಪ್ರಕರಣ ಹೆಚ್ಚಾದ ಬಳಿಕ ಲಾಕ್ ಡೌನ್ ಸಡಿಲಿಸಿದ್ದು, ದೇಶದ ಎಲ್ಲ ವರ್ಗದ ಜನರಿಗೆ ತೊಂದರೆಗೆ ಸಿಲುಕಿಸಲು ಕೇಂದ್ರ ಸರ್ಕಾರ ಇಂತಹ ನಿರ್ಣಯ ಮಾಡಿದೆ ಎಂದು ಖರ್ಗೆ ಆಕ್ರೋಶ ವ್ಯಕ್ತಪಡಿಸಿದರು.
13 ಸಾವಿರ ಪ್ಯಾಸೆಂಜರ್ ಟ್ರೈನ್ ನಲ್ಲಿ 2.30 ಕೋಟಿ ಜನ ಪ್ರತಿದಿನ ಸಂಚರಿಸುತ್ತಾರೆ. ಸರ್ಕಾರಗಳು ವಲಸೆ ಕಾರ್ಮಿಕರನ್ನು ಲಾಕ್ ಡೌನ್ ಘೋಷಣೆಗೂ ಮೊದಲೇ ಅವರ ಊರುಗಳಿಗೆ ಪ್ಯಾಸೆಂಜರ್ ರೈಲಿನಲ್ಲಿ ಕಳುಹಿಸಿ ಕೊಡಬಹುದಿತ್ತು. ಲಾಕ್ ಡೌನ್ ಸಮಯದಲ್ಲಿ ಸರ್ಕಾರ ಮುಂಜಾಗ್ರತ ಕ್ರಮಗಳನ್ನು ಕೈಗೊಂಡಿದ್ದರೆ ಬೀದಿಗಳಲ್ಲಿ ಕಾರ್ಮಿಕರ ಸಾವು, ರಸ್ತೆಯಲ್ಲಿ ಹೆರಿಗೆ ಆಗುವುದು ಕಾಣುತ್ತಿರಲಿಲ್ಲ. ರೈಲ್ವೆ ಹಳಿಗಳ ಮೇಲೆ ಸಾವುಗಳು ಸಂಭವಿಸುತ್ತಿರಲಿಲ್ಲ. ಅನ್ನ ಮತ್ತು ನೀರಿಲ್ಲದೇ ಜನರು ಸಾಯುತ್ತಿರಲಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಬಾಂಬೆಯಿಂದ ಲಕ್ನೊಗೆ ಹೋಗುವ ರೈಲು ಬಿಹಾರಕ್ಕೆ ಹೋಯಿತು. 24ಗಂಟೆಗೆ ಹೋಗಬೇಕಿದ್ದ ರೈಲು 74 ಗಂಟೆಗೆ ತಲುಪಿದೆ. ಇಷ್ಟೊಂದು ವಿಳಂಬವಾದರೆ ರೈಲಿನಲ್ಲಿ ಪ್ರಯಾಣಿಸುವವರ ಗತಿಯೇನು ಎನ್ನುವುದನ್ನು ಸರ್ಕಾರ ಯೋಚಿಸಲಿಲ್ಲ. ಸರ್ಕಾರ ವಲಸೆ ಕಾರ್ಮಿಕರಿಗೆ ಮೋಸ ಮಾಡಿದೆ. ಕೂಡಲೇ ರೈಲ್ವೆ ಸಚಿವರು ರಾಜೀನಾಮೆ ಕೊಡಬೇಕು ಎಂದು ಆಗ್ರಹಿಸಿದರು.
ಬಿಜೆಪಿ ನಾಯಕರ ಕಿವಿ , ಕಣ್ಣು ಮುಚ್ಚಿವೆ. ಆದರೆ ಬಾಯಿ ಮಾತ್ರ ತೆರೆದಿದೆ. ಕೇಂದ್ರ ಸರ್ಕಾರದ ಆರ್ಥಿಕ ಸಲಹೆಗಾರ ಅರವಿಂದ್ ಸುಬ್ರಹ್ಮಣ್ಯ ಅವರೇ ಹೇಳಿರುವಂತೆ ದೇಶದ ಜಿಡಿಪಿ ಕೆಳಮಟ್ಟಕ್ಕೆ ಕುಸಿದಿದೆ ಎಂದರು.
ಪ್ರಧಾನಿ ನರೇಂದ್ರ ಮೋದಿ ಗುಜರಾತಿಗೆ ಅಮೇರಿಕಾದ ಅಧ್ಯಕ್ಷ ಟ್ರಂಪ್‌ರನ್ನು ಕರೆಯಿಸಿ ಶೋ ಮಾಡಿದರು. ಆಮೇಲೆ ಲಾಕ್ ಡೌನ್ ಮಾಡಿದರು. ಸರ್ಕಾರ ತೋರಿಕೆಗೆ ಕೆಲಸ ಮಾಡುತ್ತಿದೆಯೇ ಹೊರತು ನಿಜಕ್ಕೂ ಜನರಿಗಾಗಿ ಕೆಲಸ ಮಾಡುತ್ತಿಲ್ಲ ಎಂದು ಖರ್ಗೆ ಆರೋಪಿಸಿದರು.