Advertisement

ರಾಜ್ಯದ “ಬರ’ಹೋರಾಟಕ್ಕೆ ಮಣಿದ ಕೇಂದ್ರ

06:20 AM May 27, 2018 | |

ಬೆಂಗಳೂರು: ಬರಗಾಲ ಘೋಷಣೆಗೆ ಕಠಿಣ ನಿಯಮ ಜಾರಿಗೊಳಿಸಿ ರಾಜ್ಯಕ್ಕೆ ಶಾಕ್‌ ನೀಡಿದ್ದ ಕೇಂದ್ರ ಸರ್ಕಾ
ರದ ವಿರುದ್ಧ ರಾಜ್ಯ ಸರ್ಕಾರ ನಡೆಸಿದ ಹೋರಾಟಕ್ಕೆ ಜಯ ಲಭಿಸಿದಂತಾಗಿದ್ದು, ಬರಗಾಲ ಘೋಷಣೆ ಸಂಬಂಧ ಜಾರಿಗೊಳಿಸಿದ್ದ ಕಠಿಣ ನಿಯಮಗಳನ್ನು ಸಡಿಲಿಸಲು ಕೇಂದ್ರ ಸರ್ಕಾರ ಒಪ್ಪಿಕೊಂಡಿದೆ.

Advertisement

ಆದರೆ, ಕೇಂದ್ರದ ಕಠಿಣ ನಿಯಮದಿಂದಾಗಿ 2017ರ ಮುಂಗಾರು ಹಂಗಾಮಿನಲ್ಲಿ ರಾಜ್ಯ ಸರ್ಕಾರವೇ ಗುರುತಿಸಿದ್ದ ಸುಮಾರು 60 ತಾಲೂಕುಗಳಲ್ಲಿ ಆದ ಬೆಳೆ ನಷ್ಟಕ್ಕೆ ಯಾವುದೇ ಪರಿಹಾರ ದೊರೆಯುವುದಿಲ್ಲ. ಈ ವರ್ಷದಲ್ಲಿ ಮಳೆ ಕೊರತೆ ಉಂಟಾದರೆ ಬರಪೀಡಿತ ತಾಲೂಕುಗಳನ್ನು ಘೋಷಿಸಲು ಕೇಂದ್ರದ ನಿಯಮಾವಳಿ ಸಡಿಲಿಕೆಯಿಂದ ಸಹಕಾರಿಯಾಗುತ್ತದೆ.

2016 ಡಿಸೆಂಬರ್‌ನಲ್ಲಿ ಬರ ಘೋಷಣೆಗೆ ಕೆಲವು ಮಾನದಂಡಗಳನ್ನು ಕಡ್ಡಾಯಗೊಳಿಸಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿತ್ತು. ಅದರಂತೆ, ಕೇಂದ್ರದ ಹೊಸ ನಿಯಮಗಳ ಪ್ರಕಾರ ಒಟ್ಟು ಬಿತ್ತನೆಯ ಪ್ರದೇಶದಲ್ಲಿ ಶೇ.50ಕ್ಕಿಂತ ಕಡಿಮೆ ಪ್ರದೇಶದಲ್ಲಿ ಬಿತ್ತನೆಯಾಗಿರಬೇಕು. ಶೇ.25ಕ್ಕಿಂತಲೂ ಕಡಿಮೆ ತೇವಾಂಶ ಇರಬೇಕು. ಸತತ 3 ವಾರಕ್ಕಿಂತ ಹೆಚ್ಚು ವಾರಗಳಲ್ಲಿ ಒಣ ಹವೆ ಇರಬೇಕು.

ಬರ ಪೀಡಿತ ಪ್ರದೇಶದ ಅಂತರ್ಜಲಮಟ್ಟ ಕುಸಿತ ಆಗಿರಬೇಕು. ಅಲ್ಲದೇ ಜಲಾಶಯಗಳಲ್ಲಿ ನೀರಿನ ಮಟ್ಟವೂ ಕಡಿಮೆಯಾಗಿರಬೇಕು ಎಂಬ ನಿಯಮ ರೂಪಿಸಲಾಗಿತ್ತು. ಇದರಿಂದ ಎಚ್ಚೆತ್ತುಕೊಂಡ ರಾಜ್ಯ ಸರ್ಕಾರ, ಕೇಂದ್ರದ ಹೊಸ ನಿಯಮಗಳ ಪ್ರಕಾರ ಯಾವುದೇ ಪರಿಸ್ಥಿತಿಯಲ್ಲಿಯೂ ಬರ ಘೋಷಣೆ ಮಾಡಲು ಸಾಧ್ಯವಾಗುವುದಿಲ್ಲ. ನಿಯಮಗಳನ್ನು ಸಡಿಲಿಸುವಂತೆ ಪತ್ರ ಬರೆದು ಒತ್ತಾಯ ಮಾಡಿತ್ತು.

ಕೇವಲ ಒಂದೇ ರಾಜ್ಯ ವಿರೋಧ ವ್ಯಕ್ತಪಡಿಸಿದರೆ, ಕೇಂದ್ರ ಒಪ್ಪುವುದಿಲ್ಲ ಎನ್ನುವ ಕಾರಣಕ್ಕೆ ರಾಜ್ಯದ ಅಧಿಕಾರಿಗಳು ಮೇಲಿಂದ ಮೇಲೆ ಬರ ಪರಿಸ್ಥಿತಿ ಎದುರಿಸುವ ಎಲ್ಲ ರಾಜ್ಯಗಳಿಂದಲೂ ಕೇಂದ್ರದ ಹೊಸ ನಿಯಮಗಳ ವಿರುದಟಛಿ ಪತ್ರ ಬರೆದು ಒತ್ತಡ ಹೇರುವಂತೆ ಮನವಿ ಮಾಡಿಕೊಂಡಿದ್ದರು. ಅದರ ಪರಿಣಾಮ ಬಿಜೆಪಿ ಆಡಳಿತವಿರುವ ಗುಜರಾತ್‌, ರಾಜಸ್ಥಾನ, ಮಹಾರಾಷ್ಟ್ರ ರಾಜ್ಯಗಳು ಕೇಂದ್ರದ ಕಠಿಣ ನಿಯಮ ಗಳನ್ನು ಬದಲಾಯಿಸುವಂತೆ ಒತ್ತಡ ಹೇರಿದ್ದವು.

Advertisement

ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಬರ ಘೋಷಣೆಗೆ ಬಳಸಬೇಕಾದ ಮಾನದಂಡಗಳ ಕುರಿತು ಸಂಬಂಧ ಪಟ್ಟ ರಾಜ್ಯಗಳ ಅಧಿಕಾರಿಗಳ ಸಭೆ ಕರೆದು ಚರ್ಚಿಸಿ ಕಠಿಣ ಮಾನದಂಡಗಳನ್ನು ಸಡಿಲಿಸಲು ಒಪ್ಪಿಕೊಂಡಿದ್ದಾರೆಂದು ಸರ್ಕಾರದ ಉನ್ನತ ಮೂಲಗಳಿಂದ ತಿಳಿದು ಬಂದಿದೆ.

ಒಟ್ಟು ಬಿತ್ತನೆ ಪ್ರದೇಶದಲ್ಲಿ ಶೇ. 50ರಷ್ಟು ಬಿತ್ತನೆಯ ಬದಲು ಶೇ.75 ರಷ್ಟು ಪ್ರದೇಶ ಬಿತ್ತನೆಯಾಗಿರಬೇಕು.
ಶೇ. 25ಕ್ಕಿಂತ ಕಡಿಮೆ ತೇವಾಂಶ ಇರಬೇಕೆಂಬ ಮಾನದಂಡ ಸಡಿಲಿಸಿ ಶೇ.50ಕ್ಕೆ ಹೆಚ್ಚಳ ಮಾಡಲು
ಒಪ್ಪಿಕೊಂಡಿದ್ದಾರೆ. ಶೇ. 50 ಕ್ಕಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಬೆಳೆ ನಾಶವಾಗಿರಬೇಕು ಎಂಬ ನಿಯಮ ಸಡಿಲುಗೊಳಿಸಿ ಶೇ. 33ರಷ್ಟು ಬೆಳೆ ನಾಶವಾದರೂ ಬರ ಪರಿಗಣಿಸಲು ಕೇಂದ್ರ ಸರ್ಕಾರ ಒಪ್ಪಿಕೊಂಡಿದೆ.

ಹವಾಮಾನ ಇಲಾಖೆಯ ಪ್ರಕಾರ ಈ ವರ್ಷ ವಾಡಿಕೆಯಂತೆ ಮಳೆಯಾಗುವ ಮುನ್ಸೂಚನೆ ನೀಡಿದೆ.ಜೂನ್‌ನಿಂದ ಅಕ್ಟೋಬರ್‌ವರೆಗೂ ಮುಂಗಾರು ಹಂಗಾಮು ಇರುವುದರಿಂದ ಈ ಸಂದರ್ಭದಲ್ಲಿ ಈ ವರ್ಷದ ಮಳೆ ಆಧರಿಸಿ ರಾಜ್ಯ ಸರ್ಕಾರ ಬರ ಪೀಡಿತ ಪ್ರದೇಶಗಳ ಪಟ್ಟಿ ಸಿದ್ಧಪಡಿಸಿ ಕೇಂದ್ರ ಸರ್ಕಾರಕ್ಕೆ ಕಳುಹಿಸಿ ಕೊಡಲಿದೆ.

ನಿಯಮಗಳು ಕಠಿಣವಾಗಿದ್ದನ್ನು ದಾಖಲೆಗಳ ಮೂಲಕ ಕೇಂದ್ರಕ್ಕೆ ಮನವರಿಕೆ ಮಾಡಿಕೊಟ್ಟಿದ್ದೆವು. ನಮ್ಮ
ಮನವಿಗೆ ಕೇಂದ್ರ ಸರ್ಕಾರ ಸ್ಪಂದಿಸಿದೆ. ಇದರಿಂದ ಮುಂದಿನ ದಿನಗಳಲ್ಲಿ ರಾಜ್ಯದ ಬರ ಪೀಡಿತ ಪ್ರದೇಶಗಳಿಗೆ
ಪರಿಹಾರ ಘೋಷಣೆ ಮಾಡಲು ಅನುಕೂಲವಾಗಲಿದೆ.

– ಬಿ.ಎಸ್‌.ಶ್ರೀನಿವಾಸ ರೆಡ್ಡಿ,
ನಿರ್ದೇಶಕರು, ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ

– ಶಂಕರ ಪಾಗೋಜಿ

Advertisement

Udayavani is now on Telegram. Click here to join our channel and stay updated with the latest news.

Next