ಹುಬ್ಬಳ್ಳಿ: ಆಲ್ ಇಂಡಿಯಾ ಆರ್‌ಎಂಎಸ್ ಆ್ಯಂಡ್ ಎಂಎಂಎಸ್ ಎಂಪ್ಲಾಯಿಸ್ ಯೂನಿಯನ್‌ನ 31ನೇ ರಾಜ್ಯ ಸಮಾವೇಶ ಇಲ್ಲಿನ ಮರಾಠ ಭನವದಲ್ಲಿ ರವಿವಾರ ನಡೆಯಿತು. ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಮಾತನಾಡಿ, ಸಂಘಟನೆಗಳು ಕಾರ್ಮಿಕರ ಸಮಸ್ಯೆಗಳ ವಿರುದ್ಧ ಹೋರಾಟ ಮಾಡುವಂತಿರಬೇಕು.
2004ರ ನಂತರ ನೇಮಕವಾದ ಕೇಂದ್ರ ಸರಕಾರದ ನೌಕರರಿಗೆ ಪಿಂಚಣಿ ಸೌಲಭ್ಯವಿಲ್ಲ. ಈ ಬಗ್ಗೆ ಯಾವುದೇ ಸಂಘಟಗಳು ಗಂಭೀರವಾಗಿ ಹೋರಾಟಕ್ಕೆ ಮುಂದಾಗುತ್ತಿಲ್ಲ. ಹೊಸ ಪಿಂಚಣಿ ವ್ಯವಸ್ಥೆ ಜಾರಿಗೆ ತರುವ ಮೂಲಕ ಖಾಸಗಿ ಕಂಪನಿಗಳಿಗೆ ಲಾಭ ಮಾಡಿಕೊಡುತ್ತಿದ್ದಾರೆ. ಇದರ ವಿರುದ್ಧ ನೌಕರರು ಒಗ್ಗಟ್ಟಾಗಿ ಹೋರಾಟ ಮಾಡಬೇಕು ಎಂದು ಹೇಳಿದರು.
ಕಾರ್ಮಿಕರ ಬಗ್ಗೆ ಕಾಳಜಿಯಿಲ್ಲದ ಕೇಂದ್ರ ಸರಕಾರ ವ್ಯಾಪಾರಕ್ಕೆ ಸೀಮಿತವಾಗಿದೆ. ಸರಕಾರಗಳನ್ನು ಎಚ್ಚರಿಸುವ ನಿಟ್ಟಿನಲ್ಲಿ ಎಲ್ಲ ಕಾರ್ಮಿಕ ಸಂಘಟನೆಗಳು ಒಗ್ಗೂಡಬೇಕು. ಎಲ್ಲ ಇಲಾಖೆ ಕಾರ್ಮಿಕ ಸಂಘಟನೆಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹೋರಾಟ ಮಾಡಬೇಕು. ಹಲವಾರು ಕೋರಿಯರ್ ಕಂಪನಿಗಳು ಕಾರ್ಯ ನಿರ್ವಹಿಸುತ್ತಿರುವುದರಿಂದ ಅಂಚೆ ಇಲಾಖೆಯ ಕಾರ್ಯಕ್ಕೆ ಧಕ್ಕೆ ಬಂದಿದೆ ಎಂದರು.
ಕಾರ್ಮಿಕ ಹೋರಾಟಗಾರ ಡಾ| ಕೆ.ಎಸ್. ಶರ್ಮಾ ಮಾತನಾಡಿ, ಇಂದಿನ ಕೇಂದ್ರ ಸರಕಾರ ಕಾರ್ಪೋರೇಟ್‌ಗಳ ಕ್ಷೇತ್ರದ ಪರವಾಗಿರುವ ಸರಕಾರ. ಕಾರ್ಮಿಕ ವಲಯವನ್ನು ಸಂಪೂರ್ಣ ನಿರ್ಲಕ್ಷಿಸಿದೆ. ಉದ್ಯೋಗಗಳನ್ನು ಕಡಿತಗೊಳಿಸಿ ಕಾರ್ಪೋರೇಟ್ ಕಂಪನಿಗಳಿಗೆ ಅನುಕೂಲ ಮಾಡಿಕೊಡುವಂತೆ ಕೆಲಸಗಳು ಕೇಂದ್ರ ಸರಕಾರದಿಂದ ನಡೆಯುತ್ತಿದೆ.
ಈ ಬಗ್ಗೆ ಸಂಘಟನೆಗಳು ದೊಡ್ಡ ಹೋರಾಟಕ್ಕೆ ಮುಂದಾಗಬೇಕಾಗಿದೆ ಎಂದರು. ಸಂಸದ ಪ್ರಹ್ಲಾದ ಜೋಶಿ ಮಾತನಾಡಿ, ಇಲಾಖೆ ಸಂಬಂಧಿಸಿದಂತೆ ಹೊಸ ಆಲೋಚನೆಗಳನ್ನು ನೇರವಾಗಿ ಕೇಂದ್ರ ಸರಕಾರಕ್ಕೆ ತಿಳಿಸಬಹುದಾಗಿದೆ. ದೇಶದಲ್ಲಿ ತಂತ್ರಜ್ಞಾನ ಸಾಕಷ್ಟು ಬದಲಾಗುತ್ತಿದ್ದು, ಅದಕ್ಕೆ ನೀವು ಮತ್ತು ನಿಮ್ಮ ಇಲಾಖೆ ಬದಲಾವಣೆಗೆ ಒಗ್ಗಿಕೊಳ್ಳುವುದು ಅನಿವಾರ್ಯ ಎಂದು ಹೇಳಿದರು.
ಯೂನಿಯನ್ ರಾಜ್ಯಾಧ್ಯಕ್ಷ ಬಿ.ಎಸ್. ಕೃಷ್ಣ ನಾಯಕ, ಟಿ.ಬಿ. ಹರೀಶ, ಅಧೀಕ್ಷಕ ಆರ್.ಜಿ. ಬ್ಯಾಟಪ್ಪನವರ, ಕಾರ್ಯದರ್ಶಿ ಕೃಷ್ಣನ, ಪ್ರಧಾನ ಕಾರ್ಯದರ್ಶಿ ಗಿರಿರಾಜ ಸಿಂಗ, ಪಿ.ಸುರೇಶ, ಪಿ.ವಿ. ರಾಜೇಂದ್ರನ, ಎ.ಶ್ರೀನಿವಾಸ, ಜಿ.ಉದಯಶಂಕರ ರಾವ, ಎಂ.ಚಿಕ್ಕಲಕ್ಷ್ಮಣ, ಎಸ್.ಕೆ. ಗುತ್ತಲ, ಕೆ.ಬಿ. ರೂಗಿಶೆಟ್ಟರ, ಎಸ್.ಬಿ. ವೈದ್ಯ, ನೂರಬಾಷಾ ಇದ್ದರು.