Advertisement

ರಾಜತಾಂತ್ರಿಕತೆ, ವಿದೇಶಾಂಗ ವ್ಯವಹಾರಗಳಲ್ಲಿ ಕೇಂದ್ರ ಸಂಪೂರ್ಣ ವಿಫ‌ಲ : ಯು.ಟಿ. ಖಾದರ್‌

09:08 PM Mar 02, 2022 | Team Udayavani |

ಬೆಂಗಳೂರು: ಕೇಂದ್ರ ಸರಕಾರದ ನಿರ್ಲಕ್ಷ್ಯ ಹಾಗೂ ವೈಫಲ್ಯವೇ ಉಕ್ರೇನ್‌ನಲ್ಲಿ ನವೀನ್‌ ಸಾವಿಗೆ ಪ್ರಮುಖ ಕಾರಣ ಎಂದು ವಿಧಾನಸಭೆಯ ವಿಪಕ್ಷ ಉಪ ನಾಯಕ ಯು.ಟಿ. ಖಾದರ್‌ ಹೇಳಿದರು.

Advertisement

ಕೆಪಿಸಿಸಿ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜತಾಂತ್ರಿಕತೆ ಹಾಗೂ ವಿದೇಶಾಂಗ ವ್ಯವಹಾರಗಳಲ್ಲಿ ಕೇಂದ್ರ ಸರಕಾರ ಸಂಪೂರ್ಣ ವಿಫಲವಾಗಿದೆ ಎಂದರು. ಉಕ್ರೇನ್‌ನಲ್ಲಿ ನಮ್ಮ ರಾಜ್ಯದಿಂದ ಬಹಳ ವಿದ್ಯಾರ್ಥಿಗಳಿದ್ದರೂ ರಾಜ್ಯ ಸರಕಾರ ಕೇಂದ್ರ ಸರಕಾರದ ಮೇಲೆ ಒತ್ತಡ ಹಾಕಿ ಕನ್ನಡಿಗರನ್ನು ಕರೆ ತರುವಲ್ಲಿ ವಿಫಲವಾಗಿದೆ. ಕೇಂದ್ರ ಸರಕಾರ ಕೇವಲ ಪ್ರಚಾರ ವಿಚಾರದಲ್ಲಿ ಗಮನಹರಿಸುತ್ತಿದೆಯೇ ಹೊರತು, ಮಾಡಬೇಕಿರುವ ಕೆಲಸದ ಬಗ್ಗೆ ಯೋಚಿಸುತ್ತಿಲ್ಲ ಎಂದು ಹೇಳಿದರು.

ಈ ಯುದ್ಧ ಕುವೈತ್‌ ಮೇಲೆ ಆದ ರಾತ್ರೋರಾತ್ರಿ ಆದ ಯುದ್ಧವಲ್ಲ. ಕುವೈತ್‌ ಮೇಲೆ ಏಕಾಏಕಿ ದಾಳಿ ಆದಾಗಲೂ ಭಾರತೀಯರನ್ನು ಸುರಕ್ಷಿತವಾಗಿ ವಾಪಸ್‌ ಕರೆತರಲಾಗಿತ್ತು. ನಾಗರಿಕ ದಂಗೆ ಎದ್ದಾಗ ರಕ್ಷಣೆ ಕಷ್ಟ. ಲಿಬಿಯಾದಲ್ಲಿ ನಾಗರಿಕ ದಂಗೆ ಎದ್ದಾಗಲೂ ಮನಮೋಹನ್‌ ಸಿಂಗ್‌ ಅವರ ಸರಕಾರ ಭಾರತೀಯರನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದರು. ಆಗ ಯಾವುದೇ ಪ್ರಚಾರ ಮಾಡಲಿಲ್ಲ. ಈಗ ಪ್ರಯಾಣಿಕರ ವಿಮಾನಕ್ಕೆ ರಕ್ಷಣೆಯಾಗಿ ಜೆಟ್‌ ವಿಮಾನಗಳನ್ನು ಕಳುಹಿಸುವ ಸೌಕರ್ಯಗಳಿದ್ದರೂ ಕೇಂದ್ರ ಸರಕಾರ ಯಾವುದೇ ರೀತಿಯ ಕ್ರಮ ಕೈಗೊಂಡಿಲ್ಲ. ಈ ಯುದ್ಧ ನಡೆಯಲಿದೆ ಎಂದು ಒಂದು ತಿಂಗಳ ಮುಂಚಿಯೇ ಗೊತ್ತಾಗಿದೆ. ಮಾಧ್ಯಮಗಳು ಕೂಡ ಯುದ್ಧ ನಡೆಯುವ ಮುನ್ಸೂಚನೆ ಬಗ್ಗೆ ವರದಿ ಮಾಡುತ್ತಲೇ ಇದ್ದವು. ಆದರೆ ಸರಕಾರ ಏನು ಮಾಡುತ್ತಿತ್ತು ಎಂದು ಪ್ರಶ್ನಿಸಿದರು.

ಸರಕಾರದ ಬಳಿ ಮಾಹಿತಿ ಇಲ್ಲ
ಮಾಜಿ ಸಚಿವ ಪ್ರಿಯಾಂಕ್‌ ಖರ್ಗೆ ಮಾತನಾಡಿ, ಉಕ್ರೇನ್‌ನಲ್ಲಿ ಇದುವರೆಗೂ 406 ಕನ್ನಡಿಗರು ನೋಂದಣಿ ಮಾಡಿದ್ದರೆ, ಅದರಲ್ಲಿ 125 ಜನ ಬೆಂಗಳೂರಿಗರು. ನೋಂದಣಿ ಮಾಡದೇ ಇರುವ ಸಾವಿರಾರು ಜನ ಅಲ್ಲಿ ಇದ್ದಾರೆ. ವಿದ್ಯಾವಂತ ಯುವಕರಿಗೆ ರಾಜ್ಯ ಸರಕಾರ ಈ ಮಾಹಿತಿ ತಿಳಿದಿಲ್ಲ ಎಂದರೆ ಇವರು ಎಷ್ಟರ ಮಟ್ಟಿಗೆ ಕಾರ್ಯಪ್ರವೃತ್ತರಾಗಿದ್ದಾರೆ ಎಂಬುದು ತಿಳಿಯುತ್ತದೆ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next