Advertisement
ನಗರದಲ್ಲಿ ರವಿವಾರ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಉಜ್ವಲ ಯೋಜನೆಯಲ್ಲಿ ಕೇಂದ್ರ ಸರಕಾರ ಉಚಿತವಾಗಿ ಅಡುಗೆ ಅನಿಲ ಸಂಪರ್ಕ ಮಾತ್ರ ನೀಡುತ್ತದೆ. ಸ್ಟವ್ ಫಲಾನುಭವಿಗಳೇ ಖರೀದಿಸಬೇಕಾಗಿದ್ದು ಇದು ಅವರಿಗೆ ಹೊರೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ಅವರಿಗೆ ಉಚಿತವಾಗಿ ಸ್ಟವ್ ನೀಡುವುದಾಗಿ ತಿಳಿಸಿ ಯೋಜನೆಯಲ್ಲಿ ರಾಜ್ಯವನ್ನು ಕೂಡ ಸಹಭಾಗಿಯಾಗಿ ಪರಿಗಣಿಸುವಂತೆ ಕೋರಿತ್ತು. ಆದರೆ ಇದಕ್ಕೆ ಕೇಂದ್ರ ಸರಕಾರ ಆಕ್ಷೇಪ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಸರಕಾರದ ಪ್ರಸ್ತಾವನೆಗೆ ಹಿನ್ನಡೆಯಾಗಿತ್ತು. ಇದೀಗ ಕೇಂದ್ರ ಸರಕಾರ ರಾಜ್ಯ ಸರಕಾರದ ಪ್ರಸ್ತಾವಕ್ಕೆ ಸಮ್ಮತಿ ಸೂಚಿಸಿ ಪತ್ರ ರವಾನಿಸಿದೆ ಎಂದು ಹೇಳಿದರು. ಕೇಂದ್ರ ಸರಕಾರದ ಪ್ರಸ್ತಾವವನ್ನು ಮುಖ್ಯಮಂತ್ರಿಯವರ ಗಮನಕ್ಕೆ ತಂದು ಚರ್ಚಿಸಿ ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು ಎಂದವರು ತಿಳಿಸಿದರು.
ರಾಜ್ಯ ಸರಕಾರ ಮಹತ್ವದ ಯೋಜನೆಯಾಗಿರುವ ಇಂದಿರಾ ಕ್ಯಾಂಟೀನ್‌ಗೆ ಆ. 15ರಂದು ಚಾಲನೆ ನೀಡಲು ಎಲ್ಲ ಸಿದ್ಧತೆಗಳನ್ನು ಮಾಡಲಾಗಿದೆ. ಯೋಜನೆ ಅನುಷ್ಠಾನಕ್ಕೆ ಸಚಿವ ಕೆ.ಜೆ. ಜಾರ್ಜ್ ಅವರ ಅಧ್ಯಕ್ಷತೆಯಲ್ಲಿ ನಾನೂ ಸೇರಿದಂತೆ ಐವರು ಸದಸ್ಯರ ಸಮಿತಿ ರಚಿಸಲಾಗಿದೆ. ಈಗಾಗಲೇ ಕ್ಯಾಂಟೀನ್ ಸ್ಥಾಪನೆಗೆ ಜಾಗ ಗುರುತಿಸಲಾಗಿದ್ದು ಕಟ್ಟಡ ನಿರ್ಮಾಣ ಪ್ರಕ್ರಿಯೆ ಆರಂಭಗೊಂಡಿದೆ ಎಂದು ಸಚಿವರು ವಿವರಿಸಿದರು. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ 198 ವಾರ್ಡ್‌ಗಳಲ್ಲಿ ವಾರ್ಡ್‌ಗೆ ಒಂದರಂತೆ ಕ್ಯಾಂಟೀನ್ ಸ್ಥಾಪನೆಯಾಗಲಿದೆ. ಬೆಂಗಳೂರಿನಲ್ಲಿ ಒಟ್ಟು 28 ವಿಧಾನಸಭಾ ಕ್ಷೇತ್ರಗಳಲ್ಲಿ ಪ್ರತಿಯೊಂದು ಕ್ಷೇತ್ರದಲ್ಲಿ 7ರಿಂದ 8 ಕ್ಯಾಂಟೀನ್‌ಗಳು ಸ್ಥಾಪನೆಯಾಗಲಿವೆ. ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಒಂದು ಕೇಂದ್ರೀಕೃತ ಅಡುಗೆ ಮನೆ ಇರುತ್ತದೆ. 5 ರೂ.ಗಳಲ್ಲಿ ಬೆಳಗ್ಗಿನ ಉಪಾಹಾರ, 10 ರೂ.ಗಳಲ್ಲಿ ಊಟ ನೀಡಲಾಗುವುದು. ಸುಮಾರು 1.80 ಲಕ್ಷ ಮಂದಿಗೆ ಅತ್ಯಂತ ಕಡಿಮೆ ದರದಲ್ಲಿ ಬೆಳಗ್ಗಿನ ಉಪಾಹಾರ, ಮಧ್ಯಾಹ್ನದ ಹಾಗೂ ರಾತ್ರಿ ಊಟ ದೊರೆಯಲಿರುವುದು. ವಿದ್ಯಾರ್ಥಿಗಳು, ದುಡಿಯುವ ವರ್ಗ, ಜನಸಾಮಾನ್ಯರಿಗೆ ಇದರಿಂದ ಪ್ರಯೋಜನವಾಗಲಿದೆ ಎಂದು ಸಚಿವರು ವಿವರಿಸಿದರು. ಮಂಗಳೂರು ತಾಲೂಕು ಪಂಚಾಯತ್ ಅಧ್ಯಕ್ಷ ಮಹಮ್ಮದ್ ಮೋನು ಉಪಸ್ಥಿತರಿದ್ದರು.
Related Articles
ರಾಜ್ಯದಲ್ಲಿ 1.31 ಕೋಟಿ ಕುಟುಂಬಗಳಿವೆ. ಇದರಲ್ಲಿ 1.10 ಕೋಟಿ ಕುಟುಂಬಗಳಿಗೆ ಅಡುಗೆ ಅನಿಲ ಸಂಪರ್ಕವಿದೆ. 21 ಲಕ್ಷ ಕುಟುಂಬಗಳಿಗೆ ಅನಿಲ ಸಂಪರ್ಕವಿಲ್ಲ. ಉಜ್ವಲ ಯೋಜನೆಗೆ ಕೇಂದ್ರ ಸರಕಾರ 2011ರ ಸಾಮಾಜಿಕ – ಆರ್ಥಿಕ ಗಣತಿಯನ್ನು ಪರಿಗಣಿಸಿದ್ದು ಇದರಲ್ಲಿ ಕೇವಲ 2. 5 ಲಕ್ಷ ಮಂದಿಗೆ ಮಾತ್ರ ಅವಕಾಶವಿದೆ. ಉಳಿದ ಕುಟುಂಬಗಳು ಸಂಪರ್ಕದಿಂದ ವಂಚಿತವಾಗುತ್ತವೆ. ರಾಜ್ಯ ಸರಕಾರ ಜಾರಿಗೆ ತರುತ್ತಿರುವ ಅನಿಲ ಭಾಗ್ಯ ಯೋಜನೆಯಲ್ಲಿ ಅಡುಗೆ ಅನಿಲ ಸಂಪರ್ಕವಿಲ್ಲದ ಎಲ್ಲ ಬಿಪಿಎಲ್ ಕುಟುಂಬಗಳಿಗೆ ಉಚಿತವಾಗಿ ಅಡುಗೆ ಅನಿಲ ಸಂಪರ್ಕ ಹಾಗೂ ಗ್ಯಾಸ್‌ಸ್ಟವ್ ನೀಡಲಾಗುವುದು ಎಂದು ಸಚಿವ ಖಾದರ್ ತಿಳಿಸಿದರು. ಅನಿಲ ಭಾಗ್ಯ ಯೋಜನೆಗೆ ವಿಶೇಷ ಸಾಫ್ಟ್‌ವೇರ್ ಸಿದ್ಧಪಡಿಸಲಾಗುತ್ತಿದೆ. ಅರ್ಹ ಫಲಾನುಭವಿಗಳು ಸಂಬಂಧಪಟ್ಟ ಗ್ರಾಮ ಪಂಚಾಯತ್‌ನಲ್ಲಿ ಆಧಾರ್ ಸಂಖ್ಯೆಯೊಂದಿಗೆ ಅರ್ಜಿ ಸಲ್ಲಿಸಬೇಕು. ಅರ್ಜಿಯನ್ನು ಪರಿಶೀಲಿಸಿ ಬಳಿಕ ವಿತರಣೆ ನಡೆಯಲಿರುವುದು ಎಂದವರು ಹೇಳಿದರು.
Advertisement