Advertisement

ಜಾಣ ಜಾಣೆಯರ ಜಾನಕಿ

12:30 AM Feb 27, 2019 | |

ಸ್ವಂತ ಮಕ್ಕಳನ್ನು ಒಂದು ದಿನ ಮರೆತರೂ “ಮಗಳು ಜಾನಕಿ’ಯನ್ನು ಮರೆಯಲಾರೆವು ಎನ್ನುತ್ತಿದ್ದಾರೆ ಜನ. ಅಷ್ಟರಮಟ್ಟಿಗೆ, ಟಿ.ಎನ್‌. ಸೀತಾರಾಮ್‌ರ “ಮಗಳು ಜಾನಕಿ’ ವೀಕ್ಷಕರ ಮನಸ್ಸಿನಲ್ಲಿ ಮನೆ ಮಾಡಿದ್ದಾಳೆ. ಜಾನಕಿ ಪಾತ್ರಕ್ಕೆ ಜೀವ ತುಂಬಿರುವ ಹುಡುಗಿಯೇ “ಗಾನವಿ’. ಇವರು ಚಿಕ್ಕಮಗಳೂರಿನ ಅವಥಿ ಹೊಸಹಳ್ಳಿ ಎಂಬ ಗ್ರಾಮದ ಹುಡುಗಿ. ಕನಸಿನ ಬೆನ್ನೇರಿ ಇಲ್ಲಿಯವರೆಗೆ ಬಂದಿದ್ದೇನೆ. ಸಾಗುವ ಹಾದಿ ಇನ್ನೂ ದೂರ ಇದೆ ಎಂಬ ವಿನಮ್ರ ಮಾತು ಗಾನವಿಯದು. ಸಿನಿಮಾದಲ್ಲಿ “ಹೀರೊ’ ಪಾತ್ರ ಸಿಕ್ಕರೆ ಒಪ್ಪಿಕೊಳ್ಳುತ್ತೇನೆ ಎಂದು ಸೂಚ್ಯವಾಗಿ ಹೇಳುವಲ್ಲಿಯೇ ತಾವು ಎದುರು ನೋಡುತ್ತಿರುವ ಪಾತ್ರಗಳು ಎಂಥವು ಎಂಬ ಸುಳಿವು ನೀಡುತ್ತಾರೆ. ಜಾನಕಿಯ ಜರ್ನಿ ವಿವರ ಇಲ್ಲಿದೆ. ಓದಿ…
 
ಗಾನವಿ ಮತ್ತು ಜಾನಕಿಗೆ ಇರುವ ಸಾಮ್ಯತೆಗಳು ಏನು?
ಗಾನವಿ ಜಾನಕಿಯಷ್ಟು ಸೌಮ್ಯ ಸ್ವಭಾವದವಳಲ್ಲ. ಅಷ್ಟು ಮೃದುಭಾಷಿಯಲ್ಲ. ಎಲ್ಲದಕ್ಕೂ ಹೆಚ್ಚಾಗಿ ಗಾನವಿಗೆ ಜಾನಕಿಯಂತೆ ಒಂದು ಕಡೆ ಕುಳಿತುಕೊಳ್ಳಲು ಸಾಧ್ಯವೇ ಇಲ್ಲ. ಆದರೆ, ಜೀವನದ ಧ್ಯೇಯಗಳು ಒಂದೇ ರೀತಿ ಇವೆ. ಆಂತರಿಕವಾಗಿ ಇಬ್ಬರಿಗೂ ತುಂಬಾ ಸಾಮ್ಯತೆ ಇದೆ. ನನ್ನ ಕಾಲ ಮೇಲೆ ನಿಲ್ಲಬೇಕು, ಜೀವನದಲ್ಲಿ ಏನಾದರೂ ಸಾಧಿಸಬೇಕು ಎಂಬ ಬಯಕೆ ಇಬ್ಬರಿಗೂ ಇದೆ. ಸಮಸ್ಯೆಯನ್ನು ಎದುರಿಸಿ ನಿಲ್ಲುವ ಛಲವಿರುವವರು. ಇಬ್ಬರೂ ತಮ್ಮ ಪರಿಸ್ಥಿತಿಗೆ ಅಥವಾ ತಾವು ಪಡುತ್ತಿರುವ ಕಷ್ಟಗಳಿಗೆ ಯಾರನ್ನೂ ದೂರುವ, ದ್ವೇಷಿಸುವ ಮನೋಭಾವ ಹೊಂದಿಲ್ಲದವರು.

Advertisement

ನಿಮ್ಮ ವಸ್ತ್ರವಿನ್ಯಾಸ ಕೂಡ ಹೈಲೈಟ್‌ ಆಗಿದೆ. ಯಾರು ನಿಮ್ಮ ವಸ್ತ್ರ ವಿನ್ಯಾಸಕಿ?
ನನ್ನ ಕಾಸ್ಟೂಮನ್ನು ನಾನು ಮತ್ತು ನನ್ನ ಕಸಿನ್‌ ಮಂಗಳ ಇಬ್ಬರೂ ಸೇರಿ ವಿನ್ಯಾಸ ಮಾಡುತ್ತೇವೆ. ಯಾವ ರೀತಿಯ ಸೀರೆ ಉಡಬೇಕು. ಅದಕ್ಕೆ ಯಾವ ರೀತಿಯ ಕಿವಿಯೋಲೆ ಧರಿಸಬೇಕು ಎಂದು ನಾವಿಬ್ಬರೂ ದಿನಗಟ್ಟಲೇ ಕೂತು ಚರ್ಚಿಸಿದ್ದೇವೆ. ನಾನು ಹಾಕುವ ವಸ್ತ್ರ ನನಗೆ ಚಂದ ಕಂಡರೆ ಸಾಲುವುದಿಲ್ಲ, ಜಾನಕಿಯ ಪಾತ್ರಕ್ಕೂ ಒಪ್ಪುವಂತಿರಬೇಕು. ಟಿ.ಎನ್‌. ಸೀತಾರಾಂ ಸರ್‌ಗೆ ಕೂಡ ನನ್ನ ಕಾಸ್ಟೂéಮ್‌ ಡಿಸೈನಿಂಗ್‌ ಇಷ್ಟ ಆಗಿದೆ. ಅವರೂ ನನಗೆ ಆ ವಿಷಯದಲ್ಲಿ ಸಂಪೂರ್ಣ ಸ್ವಾತಂತ್ರ್ಯ ನೀಡಿದ್ದಾರೆ. ನನಗೆ ಹಳೇ ವಿನ್ಯಾಸದ ಸೀರೆಗಳ ಮೇಲೆ ಮೊದಲಿನಿಂದಲೂ ವ್ಯಾಮೋಹ ಜಾಸ್ತಿ. ನನ್ನ ಅಮ್ಮ, ಅಜ್ಜಿ ಉಡುತ್ತಿದ್ದ ಸೀರೆಗಳೇ ನನಗೆ ಇಂದಿಗೂ ಅಚ್ಚುಮೆಚ್ಚು. ಹಾಗಾಗಿ, ಅಂಥ ಸೀರೆಗಳಿಗಾಗಿ ಹೆಚ್ಚು ಹುಡುಕಾಟ ನಡೆಸುತ್ತೇವೆ. 

ಬಾಲ್ಯ ಹೇಗಿತ್ತು? ಎಲ್ಲಿ ಕಳೆದಿರಿ?
ನನ್ನದು ಚಿಕ್ಕ ಮಗಳೂರಿನ ಅವಥಿ ಹೊಸಹಳ್ಳಿ. ನಮ್ಮಲ್ಲೆಲ್ಲಾ ಬಹುತೇಕ ಮಕ್ಕಳು ಬೆಳೆಯುವುದು ಹಾಸ್ಟೆಲ್‌ನಲ್ಲಿಯೇ. ನಾನು ಮಹಾನ್‌ ತರಲೆ ಇದ್ದೆ. ನಾನು ಸ್ಕೂಲಿನಲ್ಲಿ ಇರುವಾಗ ಕ್ರೀಡಾಪಟು. ಸದಾ ಬಿಸಿಲಿನಲ್ಲೇ ಇರುತ್ತಿದ್ದೆ. ಟ್ರಾಕ್‌ಪ್ಯಾಂಟ್‌, ಟೀ ಶರ್ಟ್‌ ಬಿಟ್ಟು ಬೇರೆ ಬಟ್ಟೆ ಹಾಕಿದ್ದು ಕಡಿಮೆ. ನೃತ್ಯ ಮಾಡುವುದು ನನ್ನ ನೆಚ್ಚಿನ ಹವ್ಯಾಸ. ಶಾಲೆ ವಾರ್ಷಿಕೋತ್ಸವಗಳಲ್ಲಿ ಹಲವಾರು ನೃತ್ಯಗಳಿಗೆ ನಾನೇ ಕೊರಿಯೋಗ್ರಫಿ ಮಾಡುತ್ತಿದ್ದೆ. ಮಂಗಳೂರಿನಲ್ಲಿ ಕಾಲೇಜು ಸೇರಿದ ಬಳಿಕವೂ ನೃತ್ಯ ಮುಂದುವರೆಯಿತು. ಶಾಸ್ತ್ರೀಯವಾಗಿ ಯಾವ ನೃತ್ಯವನ್ನೂ ಕಲಿಯದೇ ಇದ್ದರೂ ನಾನು ಉತ್ತಮ ನೃತ್ಯಪಟು ಎಂದು ಕರೆಸಿಕೊಂಡಿದ್ದೆ.

ಆಗೆಲ್ಲಾ ಬದುಕಿನ ಗುರಿ ಏನಾಗಿತ್ತು? 
ನಮ್ಮ ಊರ ಕಡೆ ಹೆಣ್ಣುಮಕ್ಕಳಿಗೆ ಕಾಲೇಜು ಶಿಕ್ಷಣ ಕೊಡಿಸಿ ಅವರಿಗೆ ಒಳ್ಳೆ ಸಂಬಂಧ ನೋಡಿ ಮದುವೆ ಮಾಡುವ ಬಗ್ಗೆ ಮಾತ್ರ ಯೋಚಿಸುತ್ತಾರೆ. ಕಲೆ, ಅಭಿನಯ, ನೃತ್ಯದಲ್ಲಿ ಆಸಕ್ತಿ ತೋರಿದರೆ ಮೂಗುಮುರಿಯುತ್ತಾರೆ. ಚಿಕ್ಕಂದಿನಿಂದಲೂ ನಾನು ಅಡುಗೆ ಮಾಡುವುದು, ಮನೆಯನ್ನು ಚೊಕ್ಕಟವಾಗಿ ಇಟ್ಟುಕೊಳ್ಳುವುದನ್ನು ಮಾಡುತ್ತಿದ್ದೆ. ಅದನ್ನು ನೋಡಿದವರೆಲ್ಲಾ, ಇವಳು ಮದುವೆಯಾದ ಮೇಲೆ ಚೆನ್ನಾಗಿ ಸಂಸಾರ ಸರಿದೂಗಿಸುತ್ತಾಳೆ ಎನ್ನುತ್ತಿದ್ದರು. ನಾನು ಬರೀ ಮದುವೆಯಾಗಲು ಹುಟ್ಟಿರುವವಳಲ್ಲ ಎಂದು ಸಿಟ್ಟು ಬರುತ್ತಿತ್ತು. ಕಡೆಗೆ ಅಡುಗೆ ಮಾಡುವುದನ್ನೇ ಬಿಟ್ಟುಬಿಟ್ಟೆ. ಡಿಗ್ರಿ ಮುಗಿಯುತ್ತಾ ಬಂದಂತೆ ಭವಿಷ್ಯದ ಬಗ್ಗೆ ಆತಂಕವೂ ಹೆಚ್ಚಾಯಿತು. ವಾಪಸು ಮನೆಗೆ ಹೋದರೆ ಮದುವೆ ಮಾಡಿ ಬಿಡುತ್ತಾರೆ ಎಂದು ಭಯವಾಗುತ್ತಿತ್ತು. ನಾನು ಡ್ಯಾನ್ಸ್‌ಅನ್ನೇ ಕೆರಿಯರ್‌ ಮಾಡಿಕೊಳ್ಳುತ್ತೇನೆ ಎಂದರೆ, “ಏನು ಕುಣಿಯುವುದಾ?’ ಎಂದು ಕೇಳುತ್ತಿದ್ದರು. ಆದರೂ ಡ್ಯಾನ್ಸ್‌ಅನ್ನೇ ನನ್ನ ಕೆ‌ರಿಯರ್‌ ಮಾಡಿಕೊಂಡೆ. ಚಿಕ್ಕಮಗಳೂರಿನ ಆ್ಯಂಬರ್‌ ವ್ಯಾಲಿ ಇಂಟರ್‌ನ್ಯಾಷನಲ್‌ ಸ್ಕೂಲ್‌ನಲ್ಲಿ ಡ್ಯಾನ್ಸ್‌ ಎಜುಕೇಟರ್‌ ಆಗಿ ಸೇರಿಕೊಂಡೆ. ಅಲ್ಲಿದ್ದಾಗಲೇ ಕಥಕ್‌ ನೃತ್ಯ ಕಲಿತೆ. 

ಬೆಂಗಳೂರಿಗೆ ಬಂದದ್ದು ಯಾವಾಗ? ಯಾವ ಉದ್ದೇಶ ಇಟ್ಟಕೊಂಡು ಬಂದಿರಿ?
ಬೆಂಗಳೂರಿಗೆ ಬಂದು 4ರಿಂದ 5 ವರ್ಷವಾದವು. ಇಲ್ಲೂ ನೃತ್ಯ ಶಿಕ್ಷಕಿಯಾಗಿಯೇ ಬಂದದ್ದು. ನಾನು ಆ್ಯಂಬರ್‌ವ್ಯಾಲಿ ಸ್ಕೂಲಿನಲ್ಲಿ ಶಿಕ್ಷಕಿಯಾಗಿದ್ದಾಗ ಅಲ್ಲಿ ಸಂವಹನ ನಡೆಸುತ್ತಿದ್ದದ್ದೆಲ್ಲ ಹೈಪ್ರೊಫೈಲ್‌ ಜನರ ಜೊತೆ. ಆದರೆ, ಬೆಂಗಳೂರಿನಲ್ಲಿ ಎಲ್ಲಾ ತರದ ಜನರ ಜೊತೆಯೂ ಮಾತನಾಡಬೇಕಿತ್ತು. ಕಲೆ ಎಂದರೇನು, ಅದರ ಆಳ ಅಗಲವೇನು ಎಂದು ತಿಳಿಯುತ್ತಾ ಹೋದೆ. ನಾನು ನೃತ್ಯಕ್ಕೇ ಸೀಮಿತವಾಗಬಾರದು ಅಂತನ್ನಿಸಿತು. ಆಗ ಒಂದು ಜಾಹೀರಾತಿನಲ್ಲಿ ನಟಿಸಿದೆ. ನನ್ನ ಮಾರ್ಗದರ್ಶಕರಾದ ವಿವೇಕ್‌ ವಿಜಯ್‌ ಕುಮಾರನ್‌ ಧಾರಾವಾಹಿ, ಸಿನಿಮಾ ಆಡಿಷನ್‌ಗಳನ್ನು ಕೊಡಲು ಹೇಳಿದರು. ಆಡಿಷನ್‌ಗಾಗಿ ಅಲೆದಾಟ ಶುರುವಾಯಿತು. ಆಗಲೇ ಗೊತ್ತಾಗಿದ್ದು; ನಾನು ನಟನೆ ವಿಷಯದಲ್ಲಿ ಎಷ್ಟು ಅಂಜುಬುರುಕಿ ಅಂತ. ನನಗೆ ನಾಚಿಕೆ ಮೀರಿ ನಟನೆ ಮಾಡಲು ಸಾಧ್ಯವೇ ಆಗುತ್ತಿರಲಿಲ್ಲ. ಏನೇ ಆದರೂ ಸಾಧಿಸಬೇಕು ಎಂಬ ಛಲ ಮಾತ್ರ ಹಾಗೆಯೇ ಇತ್ತು.

Advertisement

 ತಿಂಗಳಿಗೆ ಎಷ್ಟು ದಿನ ಶೂಟಿಂಗ್‌ ಮಾಡುತ್ತೀರ? ಶೂಟಿಂಗ್‌ ಸೆಟ್‌ ಅನುಭವ ಹೇಗಿದೆ?
15- 20 ದಿನ ಶೂಟ್‌ ಮಾಡುತ್ತೇನೆ. ನಮ್ಮ ಧಾರಾವಾಹಿಯಲ್ಲಿ ಮಹಾನ್‌ ಕಲಾವಿದರ ದಂಡೇ ಇದೆ. ಅವರೆಲ್ಲಾ ಅಷ್ಟೊಂದು ಸಾಧನೆ ಮಾಡಿದ್ದರೂ ತುಂಬಾ ಸರಳವಾಗಿ ಇರುತ್ತಾರೆ. ಕಿರಿಯ ನಟರನ್ನು ಪ್ರೀತಿಯಿಂದ ಕಾಣುತ್ತಾರೆ. ಮೊದಲೆಲ್ಲಾ ಅವರನ್ನು ನೋಡುವಾಗ ಅಚ್ಚರಿ ಆಗುತ್ತಿತ್ತು. ಈಗ ನನಗೆ ಅವರೆಲ್ಲಾ ಮನೆಯವರಂತೆ ಆಗಿದ್ದಾರೆ. ಸುಧಾ ಅಮ್ಮ, ಶಾರದಮ್ಮ ಅವರ ಡಬ್ಬಿ ಕಿತ್ತುಕೊಂಡು ಅವರು ತಂದಿರುವ ಊಟ ತಿನ್ನುತ್ತಿದ್ದೆ. ಇವಳು ನಮಗೇನೂ ಉಳಿಸುವುದಿಲ್ಲ ಎಂದು ಈಗ ಅವರೇ ನನಗೊಂದು ಡಬ್ಬಿ ಕಟ್ಟಿಕೊಂಡು ಬರುತ್ತಾರೆ. ನನ್ನ ನಟನೆ, ಭಾಷೆಯನ್ನು ಸೀತಾರಾಂ ಸರ್‌ಇಂದ ಹಿಡಿದು ಎಲ್ಲಾ ಹಿರಿ, ಕಿರಿ ಕಲಾವಿದರೂ ತಿದ್ದಿದ್ದಾರೆ. ಮೊದಲೆಲ್ಲಾ ಒಂದು ಟೇಕ್‌ಗೆ ಗಂಟೆಗಟ್ಟಲೆ ಸಮಯ ತೆಗೆದುಕೊಳ್ಳುತ್ತಿದ್ದೆ. ಹಿರಿಯರೂ ಚೂರೂ ಬೇಸರಿಸಿಕೊಳ್ಳದೇ ಸಹಕಾರ ನೀಡಿದ್ದಾರೆ. ಈಗ ನೀವು ತೆರೆ ಮೇಲೆ ನೋಡುತ್ತಿರುವ ಜಾನಕಿಯ ಗೆಲುವಿನ ಹಿಂದೆ ಅರೆಲ್ಲಾ ಇದ್ದಾರೆ.

ಹೊರಗಡೆ ನಿಮ್ಮನ್ನು ನೋಡಿ ಜನ ಹೇಗೆ ಪ್ರತಿಕ್ರಿಯೆ ನೀಡುತ್ತಾರೆ?
ನನ್ನನ್ನು ಹಲವರು ಗುರುತಿಸುತ್ತಾರೆ. ಜಾನಕಿ ಪಾತ್ರದ ಪ್ರಭಾವವೋ ಏನೋ ಗೊತ್ತಿಲ್ಲ. ಎಲ್ಲರೂ ನನ್ನನ್ನು ಅತ್ಯಂತ ಪ್ರೀತಿ ಮತ್ತು ಗೌರವದಿಂದ ಮಾತನಾಡಿಸುತ್ತಾರೆ. ಮಧ್ಯ ವಯಸ್ಕ ಹೆಂಗಸರು ಅಪ್ಪಿ ಮುದ್ದಾಡುತ್ತಾರೆ. ಪ್ರಪಂಚದಲ್ಲಿ ಏನನ್ನಾದರೂ ಗಳಿಸಬಹುದು ಆದರೆ ಪ್ರೀತಿ ಗಳಿಸುವುದು ಎಲ್ಲದಕ್ಕಿಂತ ಹೆಚ್ಚು ಖುಷಿಕೊಡುವ ಸಂಗತಿ. 

ದಿನಾ ಸೀರೆ ಉಟ್ಟೂಉಟ್ಟು ಬೇಜಾರಾಗಿಲ್ವಾ? 
“ಮಗಳು ಜಾನಕಿ’ಯಲ್ಲಿ ನಟಿಸುವವರೆಗೂ ನನ್ನ ಬಳಿ ಒಂದೇ ಒಂದು ಸೀರೆ ಇರಲಿಲ್ಲ. ನಾನು ಫ‌ಂಕ್ಷನ್‌ಗಳಲ್ಲಿ ಪಾಲ್ಗೊಳ್ಳುವುದೂ ಕಡಿಮೆ ಇತ್ತು. ಯಾವುದೇ ಕಾರ್ಯಕ್ರಮಕ್ಕೆ ಹೋದರೂ ಸಾಂಪ್ರದಾಯಿಕ ಉಡುಗೆ ಧರಿಸುತ್ತಿರಲಿಲ್ಲ. ಈಗ ನನ್ನ ಬಳಿ ನೂರಕ್ಕೂ ಹೆಚ್ಚು ಸೀರೆ ಇವೆ. ಹೆಣ್ಣುಮಕ್ಕಳಿಗೆ ಸೀರೆ ನೀಡುವ ಮೆರುಗನ್ನು ಬೇರೆ ಯಾವ ಡ್ರೆಸ್‌ ಕೂಡ ಕೊಡುವುದಿಲ್ಲ. ಈಗ ಸೀರೆಯೇ ನನ್ನ ನೆಚ್ಚಿನ ಉಡುಗೆ. 

ಅಮ್ಮನ ಕೈಯಡುಗೆ ಮಿಸ್‌ ಮಾಡ್ಕೊಳಲ್ವಾ?
ತುಂಬಾ ಮಿಸ್‌ ಮಾಡ್ಕೊತೀನಿ. ಅಕ್ಕಿ ರೊಟ್ಟಿ, ಕಡುಬು, ಕೆಸ ಎಲ್ಲಾ ಇಲ್ಲಿ ತಿನ್ನಲು ಸಿಗುವುದು ಬಾರಿ ಅಪರೂಪ.

ನಮ್ಮ ಡಯೆಟ್‌, ತ್ವಚೆ ಆರೈಕೆ ಬಗ್ಗೆ ಹೇಳಿ…
ಜಿಮ್‌ಗೆ ಹೋಗಿ ವರ್ಕೌಟ್‌ ಮಾಡುವುದಿಲ್ಲ. ಜಾನಕಿ ಪಾತ್ರಕ್ಕೆ ನಾನು ತೀರಾ ಸಪೂರ ಇರುವುದು ಬೇಕಿಲ್ಲ. ಮನೆಯಲ್ಲೇ ಬೇಸಿಕ್‌ ಎಕ್ಸರ್‌ಸೈಸ್‌ ಮಾಡುತ್ತೇನೆ. ಬೆಳಗ್ಗೆ ವಾಕಿಂಗ್‌, ಜಾಗಿಂಗ್‌, ಬ್ರಿಥಿಂಗ್‌ ಎಕ್ಸರ್‌ಸೈಸ್‌ ಮಾಡುತ್ತೇನೆ. ಸೆಟ್‌ನಲ್ಲೂ ಸಮಯ, ಸ್ಥಳ ಸಿಕ್ಕರೆ ವಾಕಿಂಗ್‌ ಅಥವಾ ಜಾಗಿಂಗ್‌ ಮಾಡುತ್ತೇನೆ. ಜಂಕ್‌ಫ‌ುಡ್‌ ತಿನ್ನುವುದೇ ಇಲ್ಲ. ಹೆಚ್ಚು ಹಣ್ಣುಗಳು, ಹಣ್ಣಿನ ಜ್ಯೂಸ್‌ ಕುಡಿಯುತ್ತೇನೆ. ಪುರುಸೊತ್ತಿನಲ್ಲಿದ್ದಾಗ ಡ್ಯಾನ್ಸ್‌ ಮಾಡ್ತಾ ಇರುತ್ತೇನೆ. ಅದು ಎಲ್ಲದಕ್ಕಿಂತ ಬೆಸ್ಟ್‌ ಎಕ್ಸರ್‌ಸೈಸ್‌. ಚರ್ಮಕ್ಕೆ ಕೆಮಿಕಲ್‌ ಬಳಕೆ ಭಾರಿ ಕಡಿಮೆ. ಆಲೂಗಡ್ಡೆ, ಅರಿಶಿನ, ಜೇನುತುಪ್ಪ, ಚಕ್ಕೆ ಪುಡಿ ಅಂಥದ್ದನ್ನೇ ಬಳಸುತ್ತೇನೆ. ಕ್ಲೆನ್ಸರ್‌, ಟೋನರ್‌ ಯಾವೂ ನನ್ನ ಬಳಿ ಇಲ್ಲ. 

ನೀವು ಜಾನಕಿ ಅಪ್ಪ- ಅಮ್ಮನಾ?
ಸಮಾಜದ ಒತ್ತಡಗಳು ಏನೇ ಇದ್ದರೂ ಅದನ್ನೆಲ್ಲ ಪಕ್ಕಕ್ಕಿಟ್ಟು ಅಪ್ಪ, ಅಮ್ಮ ನನಗೆ ಯಾವಾಗಲೂ ನನಗೆ ಪ್ರೋತ್ಸಾಹ ನೀಡುತ್ತಾ ಬಂದಿದ್ದಾರೆ. ನನ್ನ ಮೇಲೆ ನಂಬಿಕೆ ಇಟ್ಟಿದ್ದಾರೆ. ಅವರು ನನ್ನ ಬಗ್ಗೆ ಹೆಮ್ಮೆ ಪಡುವಂತೆ ನಾನು ಸಾಧನೆ ಮಾಡಬೇಕು ಎಂಬುದು ನನ್ನ ಯಾವಾಗಿನ ಬಯಕೆ. ಈಗ ಅಪ್ಪ ಅಮ್ಮ ಎಲ್ಲೇ ಹೋದರೂ ಅವರನ್ನು ನನ್ನ ಅಪ್ಪ- ಅಮ್ಮ ಎಂದು ಗುರುತಿಸುತ್ತಾರಂತೆ. ನಾನು ಎಂದರೆ ಗಾನವಿ ಅಲ್ಲ “ಮಗಳು ಜಾನಕಿ’. ನನ್ನ ಪೋಷಕರು ಈಗ “ಮಗಳು ಜಾನಕಿ’ಯ ಅಪ್ಪ- ಅಮ್ಮ ಎಂದೇ ಫೇಮಸ್‌ ಆಗಿದ್ದಾರೆ. 

ಒಂದೇ ಒಂದು ಆಡಿಷನ್‌ ಪಾಸಾಗಿರಲಿಲ್ಲ!
2-3 ವರ್ಷಗಳಿಂದ ಆಡಿಷನ್‌ಗಾಗಿ ಅಲೆದಾಡುತ್ತಿದ್ದೆ. ಯಾವ ಆಡಿಷನ್‌ ಕೂಡ ಪಾಸು ಮಾಡಿರಲಿಲ್ಲ. ಕೆಲವು ಆಡಿಷನ್‌ಗಳಲ್ಲಿ ಮುಖದ ಮೇಲೆ ಹೊಡೆದಂತೆ ನೀನು ಇದಕ್ಕೆ ಲಾಯಕ್ಕಿಲ್ಲ ಎಂಬಂತೆ ಮಾತನಾಡಿ ಕಳಿಸಿದ್ದರು. “ಮಗಳು ಜಾನಕಿ’ ಆಡಿಷನ್‌ ಇರುವುದು ಪರಿಚಿತರಿಂದ ತಿಳಿಯಿತು. ಬೇರೆ ಆಡಿಷನ್‌ಗಳನ್ನೇ ಪಾಸು ಮಾಡದವಳು ಟಿ.ಎನ್‌. ಸೀತಾರಾಮ್‌ ಅವರ ಆಡಿಷನ್‌ನಲ್ಲಿ ಸೆಲೆಕ್ಟ್ ಆಗ್ತಿನಾ ಅಂತ ಡೌಟ್‌ ಇತ್ತು. ಇರಲಿ, ಇದೂ ಒಂದು ಪ್ರಯತ್ನ ಅಂತ ಹೋಗಿದ್ದೆ. ಸೆಲೆಕ್ಟ್ ಆಗುವ ಕನಸನ್ನೂ ಕಂಡಿರಲಿಲ್ಲ. ಮುಖದಲ್ಲಿದ್ದ ನಾಚಿಕೆ, ಭಯ ಎಲ್ಲವನ್ನೂ ಮರೆಮಾಚಿ ಆಡಿಷನ್‌ ಕೊಟ್ಟೆ. “ಆಗುತ್ತೆ ಮಾಡಮ್ಮಾ’ ಅಂತ ಸೀತಾರಾಂ ಸರ್‌ ಹುರಿದುಂಬಿಸುತ್ತಿದ್ದರು. ಆಡಿಷನ್‌ ಆಗಿ, ಸೆಲೆಕ್ಟ್ ಆದ ಮೇಲೂ ನನಗೆ ನಾನು ಹಿರೋಯಿನ್‌ ಪಾತ್ರಕ್ಕೆ ಸೆಲೆಕ್ಟ್ ಆಗಿರುವುದು ಅಂತ ಗೊತ್ತಿರಲಿಲ್ಲ. ಪಾತ್ರದ ಹೆಸರೇ ಟೈಟಲ್‌ ಆದಾಗಂತೂ ನನಗೆ ಆದ ಸಂತೋಷ ಅಷ್ಟಿಷ್ಟಲ್ಲ. 

ಚೇತನ ಜೆ.ಕೆ.

Advertisement

Udayavani is now on Telegram. Click here to join our channel and stay updated with the latest news.

Next