Advertisement
– ಲೋಕೇಶ್ ನನ್ನ ಜೊತೆಗೇ ಇದ್ದಾರೆ…– ದೇವರು ನಾನು ಕೇಳಿದ್ದನ್ನೆಲ್ಲಾ ಕೊಟ್ಟಿದ್ದಾನೆ…
– ಸೊಸೆಯಲ್ಲಿ ನನಗೆ ಮಗಳು ಕಾಣಿಸ್ತಾಳೆ…
– ನಾಟಕ ಮಾಡಲು ಅದೆಷ್ಟು ಹಳ್ಳಿ ಸುತ್ತಿದೀನೋ ಗೊತ್ತಿಲ್ಲ…
ನಾನಿರೋದೇ ಹೀಗೆ. ಕಲಾವಿದೆ ಅಂತ ಹಮ್ಮು-ಬಿಮ್ಮು ತೋರಿಸಲು ನನಗೆ ಬರೋದಿಲ್ಲ. ನಿಮ್ಮ ಬಾಲ್ಯದ ಬಗ್ಗೆ ಹೇಳಿ
ನಾನು ಹುಟ್ಟಿದ್ದು, ಬೆಳೆದಿದ್ದು ಬೆಂಗಳೂರಿನಲ್ಲೇ. ನಮ್ಮ ತಂದೆ ಬ್ಯುಸಿನೆಸ್‌ಮನ್ ಆಗಿದ್ದರು. ಬಾಲ್ಯದಲ್ಲಿ ಬಡತನದ ಗಾಳಿಯೂ ನಮ್ಮನ್ನು ಸೋಕಿರಲಿಲ್ಲ. ಆದರೆ, ಇದ್ದಕ್ಕಿದ್ದಂತೆ ತಂದೆಯವರ ವ್ಯಾಪಾರದಲ್ಲಿ ನಷ್ಟವಾಗಿ, ಮನೆ ನಡೆಸುವುದೇ ಕಷ್ಟ ಅನ್ನೋ ಸಂದರ್ಭ ಬಂತು. ಮುಂದೆ ಯಾವ ಕೆಲಸವೂ ಅವರ ಕೈ ಹತ್ತಲೇ ಇಲ್ಲ. ಆಗ ಯಾರೋ ನಮ್ಮಪ್ಪನಿಗೆ ಹೇಳಿದರು, “ಮಗಳಿಗೆ ಹೇಗೂ ನೃತ್ಯ ಗೊತ್ತಿದೆಯಲ್ಲ. ನಾಟಕ ಕಂಪನಿಗೆ ಸೇರಿಸಿ’ ಅಂತ. ನಾನು ಅಮ್ಮನ ಒತ್ತಾಯಕ್ಕೆ ನೃತ್ಯ ಕಲಿತಿದ್ದೆ. ನಮ್ಮಮ್ಮ ಶಾಲಾ ಹೆಡ್‌ಮಾಸ್ಟರ್‌ರ ಮಗಳು. ಆಕೆ ಮೂರು ವರ್ಷವಿದ್ದಾಗ ನಮ್ಮಜ್ಜ ಪ್ಲೇಗ್‌ನಿಂದ ತೀರಿಕೊಂಡರಂತೆ. ಹಾಗಾಗಿ, ಅಮ್ಮನಿಗೆ ಓದುವ ಅವಕಾಶ ಸಿಗಲಿಲ್ಲ. ತಾನು ಕಲಿಯದ ಎಲ್ಲ ವಿದ್ಯೆಗಳನ್ನೂ ತನ್ನ ಮಕ್ಕಳು ಕಲಿಯಬೇಕು ಅಂತ ಅಮ್ಮ ಬಯಸಿದ್ದರು. ಅಮ್ಮನ ಒತ್ತಾಯಕ್ಕೆ ಕಲಿತ ನೃತ್ಯವೇ ಬದುಕಿಗೆ ದಾರಿಯಾಗುತ್ತದೆಂದು ಗೊತ್ತಿರಲಿಲ್ಲ.
Related Articles
ಅಯ್ಯೋ, ಇಲ್ಲಪ್ಪಾ… ನಂಗೆ ವಿದ್ಯೆ ತಲೆಗೆ ಹತ್ತಲೇ ಇಲ್ಲ. ನಾನು ಓದಿದ್ದು ಪ್ರೈವೇಟ್ ಶಾಲೆಯಲ್ಲಿ. ಆಗೆಲ್ಲ ಸ್ಕೂಲ್ ಫೀಸ್ ತಿಂಗಳಿಗೆ 2 ರೂ. ಇತ್ತು. ಫೀ ಕಟ್ಟಿಲ್ಲ ಅಂತ ಸುಮಾರು ಸಲ ಪೆಟ್ಟು ತಿಂದಿದ್ದೇನೆ. ಆದರೂ ಒಂದು ದಿನವೂ ತಪ್ಪಿಸದೆ ಶಾಲೆಗೆ ಹೋಗ್ತಿದ್ದೆ. ಅದೇನು ಕಲಿತೆನೋ ಗೊತ್ತಿಲ್ಲ.
Advertisement
ಮೊದಲು ಸ್ಟೇಜ್ ಹತ್ತಿದ್ದು..?14 ವರ್ಷದವಳಿದ್ದಾಗ, ಈಶ್ವರ ಗೌಡ್ರು ಅನ್ನೋರು ನಡೆಸುತ್ತಿದ್ದ “ಓಂ ಪ್ರಶಾಂತಿ ನಾಟಕ ಮಂಡಳಿ’ಗೆ ಡ್ಯಾನ್ಸರ್ ಆಗಿ ಸೇರಿಕೊಂಡೆ. ಆ ನಾಟಕ ಕಂಪನಿ ಉತ್ತರ ಕರ್ನಾಟಕದಲ್ಲಿ ಪ್ರದರ್ಶನಗಳನ್ನು ನೀಡುತ್ತಿತ್ತು. ನಾಟಕದಲ್ಲಿ ರೆಕಾರ್ಡ್ ಹಾಡಿಗೆ ಡ್ಯಾನ್ಸ್ ಮಾಡಿದ್ದೇ, ನನ್ನ ಮೊದಲ ಪ್ರದರ್ಶನ. ಅಲ್ಲಿ 100-150 ರೂ. ಸಂಬಳ ಕೊಡುತ್ತಿದ್ದರು. ನಮ್ಮಿಡೀ ಕುಟುಂಬ ಅದೇ ಹಣವನ್ನು ಅವಲಂಬಿಸಿತ್ತು. ಆರು ತಿಂಗಳು ಹುಬ್ಬಳ್ಳಿಯಲ್ಲಿದ್ದೆ. ತಂದೆಯವರೂ ನನ್ನ ಜೊತೆಗಿದ್ದರು. ತುಂಬಾ ಹಳ್ಳಿಗಳಲ್ಲಿ ನಾಟಕ ಮಾಡಿದ್ದೀರಿ. ಆ ಅನುಭವ ಹೇಗಿತ್ತು?
ಹಳ್ಳಿಗಳಲ್ಲಿ ನಾಟಕದವರನ್ನು ತುಂಬಾ ಕೇವಲವಾಗಿ ನೋಡ್ತಾ ಇದ್ದರು. ಹಳ್ಳಿ ಹೆಂಗಸರು, “ನಾಟಕದ ಹೆಂಗಸರಿಂದ ನಮ್ಮ ಸಂಸಾರ ಹಾಳಾಗುತ್ತೆ’ ಅಂತ ಭಾವಿಸುತ್ತಿದ್ದರು. ಅಲ್ಲಿನ ಗಂಡಸರೂ ಅಷ್ಟೆ, ನಾಟಕ ತಂಡದ ಮಹಿಳೆಯರಿಗೆ ತಮ್ಮ ಹೆಂಡತಿಯರ ಸೀರೆಯನ್ನೆಲ್ಲ ತಂದು ಕೊಡುತ್ತಿದ್ದರು. ನಮ್ಮ ತಂದೆ ಜೊತೆಗೇ ಇರುತ್ತಿದ್ದುದರಿಂದ ನನಗೆ ಯಾವ ತೊಂದರೆಯೂ ಆಗಲಿಲ್ಲ. ನಾಟಕ ಅಂತ ಅದೆಷ್ಟು ಹಳ್ಳಿಗಳನ್ನು ಸುತ್ತಿದ್ದೇನೋ ಲೆಕ್ಕವೇ ಇಲ್ಲ! ದಿನಕ್ಕೆ ನಾಲ್ಕು ನಾಟಕ ಮಾಡಿದ್ದೂ ಇದೆ. ಡ್ಯಾನ್ಸ್‌ನಿಂದ ನಾಟಕದ ಕಡೆಗೆ ಹೊರಳಿದ್ದು ಯಾವಾಗ?
ಹುಬ್ಬಳ್ಳಿಯಿಂದ ವಾಪಸ್ ಬಂದಮೇಲೆ, ತಂದೆಯ ಗೆಳೆಯರೊಬ್ಬರ ಶಿಫಾರಸಿನಿಂದ “ಬಬ್ರುವಾಹನ’ ನಾಟಕದಲ್ಲಿ ಉಲೂಚಿಯ ಪಾತ್ರ ಸಿಕ್ಕಿತು. ಅಲ್ಲಿಯವರೆಗೂ ನೃತ್ಯವಷ್ಟೇ ಗೊತ್ತಿದ್ದಿದ್ದು. ಆ ನಾಟಕ ಮುಗಿಯುವಷ್ಟರಲ್ಲಿ ಕೈ ತುಂಬಾ ಆಫರ್‌ಗಳು ಬಂದವು. ತಮಿಳು, ತೆಲುಗು, ಮಲಯಾಳಂ, ಉರ್ದು ನಾಟಕದಲ್ಲಿಯೂ ನಟಿಸಿದೆ. ಬಿ.ವಿ. ಕಾರಂತರ “ಜೋಕುಮಾರಸ್ವಾಮಿ’ ನಾಟಕದ ಪಾತ್ರ ತುಂಬಾ ಜನಪ್ರಿಯತೆ ತಂದುಕೊಟ್ಟಿತು. ಅದರಲ್ಲಿ ಗಿರೀಶ್ ಕಾರ್ನಾಡ್‌ರನ್ನು ಅನುಕರಣೆ ಮಾಡಿದ್ದೆ. ಅದಂತೂ ಪ್ರೇಕ್ಷಕರಿಗೆ ಭಾರೀ ಇಷ್ಟವಾಯ್ತು. ಆಮೇಲೆ ಪ್ರಭಾತ್ ಕಲಾವಿದರ ತಂಡದಲ್ಲಿ ಸೇರಿಕೊಂಡೆ. ಅನೇಕ ದಿಗ್ಗಜರನ್ನು ಭೇಟಿ ಆಗುವ ಅವಕಾಶ ಸಿಕ್ಕಿದ್ದು ಅಲ್ಲಿಯೇ. ಲೋಕೇಶ್ ಅವರನ್ನೂ ಅಲ್ಲೇ ಭೇಟಿಯಾಗಿದ್ದು. ನಿಮ್ಮದು ಲವ್ ಮ್ಯಾರೇಜ್ ಅಂತ ಕೇಳಿದ್ವಿ…
“ಲೋಕೇಶ್ ಯಾರ ಜೊತೆಗೂ ಮಾತೇ ಆಡಲ್ಲ’ ಅಂತ ಎಲ್ಲರೂ ಹೇಳ್ತಿದ್ದರು. ನಾನು ಆಗ ಗೆಳತಿಯರ ಬಳಿ, “ನೋಡ್ರೇ, ಒಂದಿನ ನಾನೇ ಹೋಗಿ ಅವರನ್ನ ಮಾತಾಡಿಸ್ತೀನಿ’ ಅಂತ ಹೇಳಿ, ಅವರ ಬಳಿ ಹೋಗಿ “ನಮಸ್ಕಾರ ಸಾರ್’ ಅಂದಿದ್ದೆ. ಆಗ ಅವರು ಬರೀ ಹೂಂಗುಟ್ಟಿದ್ದರು. ಅವರು ಮೌನಿ. ನಾನೋ ಪಟಪಟ ಅಂತ ಮಾತಾಡೋ ಹುಡುಗಿ. ಕ್ರಮೇಣ ನಾವಿಬ್ಬರೂ ಸ್ನೇಹಿತರಾದೆವು. ಅವರು ತುಂಬಾ ಸ್ನೇಹಜೀವಿ. ಆದರೆ, ಅಷ್ಟೇ ಗಂಭೀರ ವ್ಯಕ್ತಿತ್ವದವರು. ಆದರೆ, ಮದುವೆಯಾಗೋ ಯೋಚನೆ ನನಗಿರಲಿಲ್ಲ. ಒಮ್ಮೆ ಅವರೇ, “ಮದುವೆ ಮಾಡಿಕೊಳ್ಳೋಣ’ ಅಂದಾಗ, ನಾನು- “ಏನು, ಮದುವೇನಾ? ಅದೆಲ್ಲಾ ಸಾಧ್ಯ ಇಲ್ಲ. ನಂಗೆ ನ್ಯಾಷನಲ್ ಅವಾರ್ಡ್ ತಗೋಬೇಕು ಅಂತ ಆಸೆ ಇದೆ. ಆಮೇಲೆ ಮದುವೆ ಬಗ್ಗೆ ಯೋಚಿಸಿದರಾಯ್ತು’ ಅಂದಿದ್ದೆ. ಅವರು, “ಸರಿ, ಪರವಾಗಿಲ್ಲ. 2 ವರ್ಷ ಟೈಮ್ ತಗೋ’ ಅಂದರು. ಹಾಗೇ ನಿಮಗೆ ನ್ಯಾಷನಲ್ ಅವಾರ್ಡ್ ಕೂಡಾ ಬಂತು…
ಹೌದು, ನಾನು ನಟಿಸಿದ ಎರಡನೇ ಚಿತ್ರ “ಅಬಚೂರಿನ ಪೋಸ್ಟಾಫೀಸು’ ಸಿನಿಮಾಕ್ಕೆ, ರಾಷ್ಟ್ರಪ್ರಶಸ್ತಿ ಸಿಕ್ಕಿತು. ರಾಷ್ಟ್ರಪತಿಗಳಿಂದ ನಾವೂ ಸ್ಮರಣಿಕೆ ಪಡೆದೆವು. ಅದನ್ನು ತಗೊಳ್ಳೋದಿಕ್ಕೆ ಅಣ್ಣನ ಜೊತೆ ರೈಲಿನಲ್ಲಿ ದೆಹಲಿಗೆ ಹೋಗಿದ್ದೆ. ರೈಲು ಹತ್ತಿಸಿದ್ದು ಲೋಕೇಶ್ ಅವರೇ! ಫಸ್ಟ್ ಕ್ಲಾಸ್ ಬೋಗಿಯಲ್ಲಿ ಪ್ರಯಾಣ. ಅದೇ ದೊಡ್ಡ ಖುಷಿ. ವಾಪಸ್ ಬಂದಮೇಲೆ ಮದುವೆಗೆ ಒಪ್ಪಿಕೊಂಡೆ. “ಭೂತಯ್ಯನ ಮಗ ಅಯ್ಯು’ ನಂತರ ಅವರೂ ದೊಡ್ಡ ಸ್ಟಾರ್ ಆಗಿದ್ದರು. ಮದುವೆ ನಂತರ 14 ವರ್ಷ ನಟನೆಯಿಂದ ದೂರವೇ ಇದ್ರಂತೆ…
ಲೋಕೇಶ್ ಅವರದ್ದು ಕೂಡು ಕುಟುಂಬ. ನಾನೇ ಹಿರಿಯ ಸೊಸೆ. ಮನೆ ಬಿಟ್ಟು ಹ್ಯಾಗೆ ಬರೋಕೆ ಸಾಧ್ಯ? ನಟನೆಗೂ ನನಗೂ ಸಂಬಂಧವೇ ಇಲ್ಲ ಅಂತ ಸಂಸಾರದಲ್ಲಿ ತೊಡಗಿಸಿಕೊಂಡೆ. ಆಮೇಲೆ ಮಗ-ಮಗಳು ಅಂತ ವರ್ಷಗಳು ಉರುಳಿದ್ದೇ ಗೊತ್ತಾಗಲಿಲ್ಲ. ಆಮೇಲೆ ಪಾರ್ವತಮ್ಮ ರಾಜಕುಮಾರ್, ನೀನು ನಟಿಸಲೇಬೇಕು ಅಂತ ಒತ್ತಾಯಿಸಿದರು. ಮೊದಲು ಒಪ್ಪೇ ಇರಲಿಲ್ಲ. ಆಮೇಲೆ ನೋಡಿದ್ರೆ, ಅವರ “ನಂಜುಂಡಿ ಕಲ್ಯಾಣ’ ಸಿನಿಮಾಕ್ಕೆ ಡೇಟ್ಸ್ ಹೊಂದಿಸೋಕೆ ಕಷ್ಟ ಆಗುವಷ್ಟು ಬ್ಯುಸಿ ಆಗಿಬಿಟ್ಟೆ. ನಿಮಗ್ಗೊತ್ತಾ, ಒಟ್ಟಿಗೆ 12 ಧಾರಾವಾಹಿಗಳಲ್ಲಿ ನಟಿಸಿದ್ದೇನೆ. ಲೋಕೇಶ್ ಅವರಲ್ಲಿ ನಿಮಗಿಷ್ಟವಾಗಿದ್ದ ಗುಣ..?
ಅವರು ಮುಖವಾಡ ಧರಿಸಿ ಬದುಕಿದವರಲ್ಲ. ಯಾರನ್ನೋ ಮೆಚ್ಚಿಸುವ ಸಲುವಾಗ ತಮ್ಮ ವ್ಯಕ್ತಿತ್ವವನ್ನು ಬಿಟ್ಟು ಕೊಡುತ್ತಿರಲಿಲ್ಲ. ಮಾತು ಕಡಿಮೆ. ಮನೆಯಲ್ಲಿ ಅತ್ತೆ- ಸೊಸೆ ನಡುವೆ ಜಗಳ ಆಗೋದು ಯಾವ ವಿಷಯಕ್ಕೆ?
ಸೊಸೆ ಕೆಲಸ ಮಾಡಲ್ಲ ಅನ್ನೋದು ಎಲ್ಲ ಅತ್ತೆಯಂದಿರ ದೂರು. ಆದರೆ, ಸೊಸೆ ಕೆಲಸ ಮಾಡೋಕೆ ಬಿಡಲ್ಲ ಅನ್ನೋದು ನನ್ನ ತಕರಾರು. ಅದೇ ವಿಷಯಕ್ಕೆ ಕಿತ್ತಾಡುತ್ತೇವೆ. ಸ್ವಲ್ಪ ಹೊತ್ತಲ್ಲಿ ಮುನಿಸು ಮರೆತೇ ಹೋಗಿರುತ್ತೆ. ಸೊಸೆಯಲ್ಲಿ ಮಗಳನ್ನು, ಅತ್ತೆಯಲ್ಲಿ ಅಮ್ಮನನ್ನು ಕಂಡರೆ ಎಲ್ಲವೂ ಸುಲಭ. ನಿಮ್ಮ ಪ್ರಕಾರ, ಸಂತೃಪ್ತ ಬದುಕಿಗೆ ಏನು ಬೇಕು?
ಹೊಟ್ಟೆ ತುಂಬಾ ಊಟ, ಕೈ ತುಂಬಾ ಕೆಲಸ, ಕಣ್ತುಂಬಾ ನಿದ್ದೆ- ಸಂತೃಪ್ತ ಜೀವನಕ್ಕೆ ಇಷ್ಟೇ ಸಾಕು. ಸಿರಿತನ ಅಂದರೆ ಇಷ್ಟೇ ಅಂತ ಅಮ್ಮ ನನಗೆ ಹೇಳಿಕೊಟ್ಟಿದ್ದಳು. ನಾನು ದೇವರಲ್ಲಿ ಕೇಳಿಕೊಂಡಿದ್ದು ಇಷ್ಟನ್ನೇ. ಆದರೆ ದೇವರು ನೂರು ಪಟ್ಟು ಹೆಚ್ಚು ಕೊಟ್ಟಿದ್ದಾನೆ. ಮದುವೆಯ ದಿನವೇ ಅಪ್ಪ- ಮಗಳಾಗಿ ನಟಿಸಿದ್ದೆವು…
ನಮ್ಮ ಮದುವೆಯ ದಿನವೇ “ಕಾಕನಕೋಟೆ’ ನಾಟಕದ 25ನೇ ಶೋ. ಲೋಕೇಶ್, “ಭೂತಯ್ಯನ ಮಗ ಅಯ್ಯು’ ಸಿನಿಮಾದ ತಮಿಳು, ತೆಲುಗು, ಹಿಂದಿ ಶೂಟಿಂಗ್‌ನಲ್ಲಿ ಬ್ಯುಸಿಯಾಗಿದ್ದರು. ಶೂಟಿಂಗ್ ಚಿಕ್ಕಮಗಳೂರಿನ ಕಳಸಾಪುರದಲ್ಲಿ ನಡೆಯುತ್ತಿತ್ತು. ಅವರು ಬೆಳಗಿನ ಜಾವ ಬೆಂಗಳೂರಿಗೆ ಬಂದರು. ಬೆಳಗ್ಗೆ 8 ಗಂಟೆಗೆ ಸಜ್ಜನರಾವ್ ಸರ್ಕಲ್‌ನ ಶ್ರೀನಿವಾಸ ದೇವಸ್ಥಾನದಲ್ಲಿ ಮದುವೆ ನಡೆಯಿತು. ನಂತರ ಒಂಬತ್ತು ಗಂಟೆಗೆ ರವೀಂದ್ರ ಕಲಾಕ್ಷೇತ್ರದಲ್ಲಿ, ಅಪ್ಪ- ಮಗಳಾಗಿ ನಟಿಸಿದೆವು. ಪ್ರದರ್ಶನದ ನಂತರ, ಸ್ಟೇಜ್ ಮೇಲೆ ಹಾರ ಬದಲಾಯಿಸಿಕೊಂಡೆವು. ಎಲ್ಲರಿಗೂ ಆಶ್ಚರ್ಯ. “ಹೆಣ’ಕ್ಕೆ ಸಿಕ್ಕ ಬಹುಮಾನ
ಮಲಯಾಳಂ ನಾಟಕವೊಂದರಲ್ಲಿ ಒಬ್ಬ ತನ್ನ ಹೆಂಡತಿಯ ಮೇಲೆ ಅನುಮಾನಪಟ್ಟು ಆಕೆಯನ್ನು ಕೊಲೆ ಮಾಡುತ್ತಾನೆ. ನಂತರ ಅವನಿಗೆ ತಾನಂದುಕೊಂಡಿದ್ದು ನಿಜವಲ್ಲ ಅಂತ ಗೊತ್ತಾಗುತ್ತೆ. ಆಗ ಪಶ್ಚಾತ್ತಾಪವಾಗಿ ಆತ ಹೆಂಡತಿಯ ಹೆಣದ ಮುಂದೆ ರೋದಿಸುವ ದೃಶ್ಯ. ನನ್ನದು ಹೆಂಡತಿಯ ಪಾತ್ರ. ಜಾಸ್ತಿ ಡೈಲಾಗ್ ಇರಲಿಲ್ಲ. ಗಂಡನ ಪಾತ್ರಧಾರಿ “ಏಳು, ಏಳು’ ಅಂತ ನ್ನನ್ನು ಆಚೆ ಈಚೆ ಹೊರಳಾಡಿಸಿ, ಮೈಮೇಲೆ ಬಿದ್ದು ಗೋಳಾಡಿಬಿಟ್ಟ. ನೋಡಿದವರೆಲ್ಲಾ, ಪಾಪ ಅನ್ನುತ್ತಿದ್ದರು. ನಾನು ಥೇಟ್ ಹೆಣದಂತೆ ಮಲಗಿದ್ದೆ. ಕೊನೆಗೆ ನೋಡಿದರೆ, ನನಗೆ ಬಹುಮಾನ ಬಂದಿತ್ತು! ಸ್ಟೇಜ್ ಮೇಲೆ ದಾಳಿ
ಉತ್ತರಕರ್ನಾಟಕದ ಒಂದು ಹಳ್ಳಿಗೆ ನಾಟಕಕ್ಕೆ ಹೋಗಿದ್ದೆವು. ಆ ಊರಿನಲ್ಲಿ ಎರಡು ಗುಂಪುಗಳ ನಡುವೆ ಜಗಳ ನಡೆಯುತ್ತಿತ್ತು. ಒಂದು ಗುಂಪಿನವರು ನಮ್ಮನ್ನು ಕರೆಸಿದ್ದರು. ನಾಟಕ ನಡೆಯುತ್ತಿದ್ದಾಗಲೇ, ಇನ್ನೊಂದು ಗುಂಪಿನವರು ಕತ್ತಿ, ಚೂರಿ ತಗೊಂಡು ಸೀದಾ ವೇದಿಕೆಗೇ ನುಗ್ಗಿ, ನನ್ನ ಪಕ್ಕದಲ್ಲಿ ನಿಂತಿದ್ದ ಪಾತ್ರಧಾರಿ ಹೊಟ್ಟೆಗೆ ಇರಿದರು. ಆತ ವೇದಿಕೆ ಮೇಲೆಯೇ ಸತ್ತು ಹೋದ! ಕಣ್ಮುಚ್ಚಿ ಬಿಡೋದ್ರಲ್ಲಿ ಒಬ್ಬ ನರಪಿಳ್ಳೆಯೂ ಅಲ್ಲಿರಲಿಲ್ಲ. ಎಲ್ಲರೂ ಚೆಲ್ಲಾಪಿಲ್ಲಿಯಾಗಿ ಓಡಿಹೋಗಿದ್ದರು. ನಾನು, ಅಪ್ಪ, ಒಂದು ಕಡೆ ಬಚ್ಚಿಟ್ಟುಕೊಂಡೆವು. ಕೊನೆಗೆ, ಸ್ಥಳೀಯನೊಬ್ಬನ ನೆರವಿನಿಂದ ಭತ್ತದ ಹೊಟ್ಟು ತುಂಬಿದ್ದ ಗೋದಾಮಿನಲ್ಲಿ ರಾತ್ರಿ ಕಳೆದೆವು. ಏಣಿ ಸಹಾಯದಿಂದ ಕಿಟಕಿಯೊಳಗೆ ತೂರಿ ಗೋದಾಮಿನ ಒಳಗೆ ಹೋದ ನೆನಪು ಈಗಲೂ ಇದೆ. ಲೋಕೇಶ್ ಜೊತೆಗೇ ಇದ್ದಾರೆ…
ದಿವಗಂತ ಲೋಕೇಶ್ ಅನ್ನೋದು ನಂಗೆ ಇಷ್ಟವಾಗಲ್ಲ. ಅವರು ನಮ್ಮ ಬಳಿಯೇ ಇದ್ದಾರೆ. ಅವರು ತೀರಿಕೊಂಡ 13ನೇ ದಿನದ ಕಾರ್ಯ ನಡೆಸುವಾಗಲೇ, ಅವರ ನೇತ್ರದಾನದ ಸರ್ಟಿಫಿಕೇಟ್ ಮನೆಗೆ ಬಂತು. ಅವರ ಕಣ್ಣುಗಳಿನ್ನೂ ಈ ಜಗತ್ತನ್ನು ನೋಡುತ್ತಿವೆ. ಅವರ ದೇಹದ ಪ್ರತಿ ಅಂಗವೂ ಉಪಯೋಗವಾಗಿದೆ. ಅಂದ್ಮೇಲೆ ಅವರಿಲ್ಲ ಅನ್ನೋದು ಸರೀನಾ? ಪ್ರಿಯಾಂಕ ಎನ್.