Advertisement
ಇಂದು, ಕ್ರೀಡೆ ಕೇವಲ ಕ್ರೀಡೆ ಮಾತ್ರವೇ ಅಲ್ಲ. ಅದೊಂದು ಉದ್ಯಮ ಎನ್ನುವುದು ಎಲ್ಲರೂ ಒಪ್ಪಿಕೊಳ್ಳಲೇಬೇಕಾದ ಕಹಿ ಸತ್ಯ. ಕ್ರೀಡೆಯ ಸುತ್ತ ಒಂದು ದೊಡ್ಡ ಮಾರುಕಟ್ಟೆಯೇ ಸೃಷ್ಟಿಯಾಗಿದೆ. ಇದರಲ್ಲಿ ಕ್ರಿಕೆಟ್ನದುಸಿಂಹಪಾಲು. ಕ್ರಿಕೆಟ್ ಆಟದ ಸುತ್ತ ಸೃಷ್ಟಿಯಾಗಿರುವ ಮಾರುಕಟ್ಟೆಯಲ್ಲಿ ಕ್ರೀಡೆಗಿಂತ ಕ್ರೀಡಾಪಟುಗಳೇ ದೊಡ್ಡದಾಗಿ ಕಾಣಿಸುತ್ತಿದ್ದಾರೆ. ಇವತ್ತು ಕ್ರಿಕೆಟ್ ಆಟದ ಗಮ್ಮತ್ತನ್ನು ಸವಿಯಲೆಂದು ಟಿ.ವಿ ಮುಂದೆ ಕುಳಿತುಕೊಳ್ಳುವವರಿಗಿಂತ, ಧೋನಿ ಆಡುತ್ತಿದ್ದಾನೆ ಅಂತಲೋ, ಕೊಹ್ಲಿ ಆಡುತ್ತಿದ್ದಾನೆ ಅಂತಲೋ ಆಟ ನೋಡುವವರೇ ಹೆಚ್ಚು. ಇದರಿಂದಾಗಿ ಕ್ರಿಕೆಟ್ ಮಂಡಳಿಗೂ ಆಯಾ ಆಟಗಾರನಿಗೆ ವಿರಾಮ ಕೊಡದೆ ಮೈದಾನಕ್ಕಿಳಿಸಲೇಬೇಕಾದ ಅನಿವಾರ್ಯತೆ ಮತ್ತು ಒತ್ತಡ ಸೃಷ್ಟಿಯಾಗುತ್ತಿದೆ. ಈ ಒತ್ತಡ, ವೀಕ್ಷಕರನ್ನು ಉಳಿಸಿಕೊಳ್ಳುವ ಸಲುವಾಗಿ, ಆ ಮೂಲಕ ಕ್ರೀಡೆಯ ಜನಪ್ರಿಯತೆಯನ್ನು ಉಳಿಸಿಕೊಳ್ಳುವ ಸಲುವಾಗಿ, ಎಲ್ಲಕ್ಕಿಂತ ಮುಖ್ಯವಾಗಿ ಆದಾಯದ ಮೂಲವಾಗಿರುವ ಜಾಹೀರಾತುದಾರ ಕಂಪನಿಗಳ ಸಖ್ಯ ಉಳಿಸಿಕೊಳ್ಳುವ ಸಲುವಾಗಿ.
“ಕ್ರಿಕೆಟ್‌ನ ದೇವರು’ ಎಂಬ ಪಟ್ಟವನ್ನೇ ಪಡೆದ ಸಚಿನ್ ತೆಂಡೂಲ್ಕರ್ ಇಂದು ಧೋನಿ ಮತ್ತು ವಿರಾಟ್ ಕೊಹ್ಲಿಯ ಅಬ್ಬರದ ನಡುವೆ ನಿಜಕ್ಕೂ ಕುಬjರಾಗಿ ಕಾಣುತ್ತಿದ್ದಾರೆ. ಇದರಿಂದಾಗಿ, ಯಾವನೇ ಕ್ರಿಕೆಟ್ ಆಟಗಾರ ಮೈದಾನದಲ್ಲಿದ್ದರೆ ಮಾತ್ರ ಆತನಿಗೆ ಬೆಲೆ ಎಂಬುದು ಸಾಬೀತಾದಂತಾಯ್ತಲ್ಲವೇ? ಆಟಗಾರನೊಬ್ಬ ನಿವೃತ್ತಿ ಪಡೆಯುತ್ತಾನೆಂದರೆ ಅವನಿಗಿಂತ ಹೆಚ್ಚಾಗಿ, ಆತ ಸಹಿ ಹಾಕಿರುವ ಜಾಹೀರಾತುದಾರರಿಗೇ ಹೆಚ್ಚಿನ ತಲೆಬಿಸಿ. ಉದಾಹರಣೆಯಾಗಿ ಧೋನಿಯನ್ನೇ ತೆಗೆದು ಕೊಳ್ಳುವುದಾದರೆ, ಸದ್ಯ ಆತ ಮೂವತ್ತು ಬ್ರ್ಯಾಂಡ್‌ಗಳ ಒಡೆಯ. ಆತ ಮೈದಾನದಲ್ಲಿ ಆಡಿದರೆ ಮಾತ್ರ ಆತನ ಜಾಹೀರಾತುಗಳನ್ನು ಜನರು ನೋಡುವುದು, ಆತ ತೋರಿಸುವ ಉತ್ಪನ್ನಗಳನ್ನು ಖರೀದಿಸುವುದು. ಯಾವಾಗ ಆತ ನಿವೃತ್ತಿ ಪಡೆದು ತೆರೆಮರೆಗೆ ಸರಿಯುತ್ತಾನೋ ಆ ಕ್ಷಣದಿಂದಲೇ ಆತನ ಜಾಹೀರಾತುಗಳನ್ನು ಜನರು ನೋಡಲಿಚ್ಛಿಸುವುದಿಲ್ಲ, ಇನ್ನು ಆ ಉತ್ಪನ್ನಗಳನ್ನು ಖರೀದಿಸುವುದು ದೂರದ ಮಾತು. ಸೆಲಬ್ರಿಟಿ ಎಂಡಾರ್ಸ್‌ಮೆಂಟ್ ಎಂದರೆ…
“ಸೆಲಬ್ರಿಟಿ ಎಂಡಾರ್ಸ್‌ಮೆಂಟ್’ ಭಾರತೀಯ ಮಾರುಕಟ್ಟೆಯನ್ನು ಎಂದಿನಿಂದಲೂ ಆಳುತ್ತಿದೆ. ಕಂಪನಿ ತನ್ನ ಉತ್ಪನ್ನಗಳ ಪ್ರಚಾರಕ್ಕೆ ಸೆಲಬ್ರಿಟಿಗಳನ್ನು ಬಳಸಿಕೊಳ್ಳುವುದನ್ನೇ “ಸೆಲಬ್ರಿಟಿ ಎಂಡಾರ್ಸ್‌ಮೆಂಟ್’ ಎಂದು ಕರೆಯುತ್ತಾರೆ. ಅಮೆರಿಕದಲ್ಲಿ ಒಟ್ಟು ಮಾರುಕಟ್ಟೆಯಲ್ಲಿ ಶೇ.20ರಷ್ಟು ಮಾತ್ರವೇ ಸೆಲಬ್ರಿಟಿ ಎಂಡಾರ್ಸ್‌ಮೆಂಟ್ ಆದರೆ, ಭಾರತದಲ್ಲಿ ಶೇ. 50ರಷ್ಟು ಜಾಹೀರಾತುಗಳಿಗೆ ಸೆಲಬ್ರಿಟಿಗಳನ್ನೇ ಆರಿಸಿಕೊಳ್ಳಲಾಗುತ್ತಿದೆ. ಅದರಲ್ಲೂ 2010ರಿಂದ ಡಿಜಿಟಲ್ ಕೇಬಲ್ ಟಿವಿ ಮೀಡಿಯಾ ಮತ್ತು ಸಾಮಾಜಿಕ ಜಾಲತಾಣಗಳ ವ್ಯವಸ್ಥಿತ ಬಳಕೆಯಿಂದ ಕಂಪನಿಗಳು ಹಿಂದೆಂದಿಗಿಂತಲೂ ಪರಿಣಾಮಕಾರಿಯಾಗಿ ಪ್ರಚಾರಕಾರ್ಯದಲ್ಲಿ ನಿರತವಾಗಿವೆ. 2007ರಲ್ಲಿ,
ಸೆಲಬ್ರಿಟಿಗಳು ನಟಿಸಿದ ಜಾಹೀರಾತುಗಳ ಸಂಖ್ಯೆ 650 ಇದ್ದರೆ, 2017ರಲ್ಲಿ 1660ಕ್ಕೆ ಏರಿತ್ತು. ಭಾರತದಲ್ಲಿ ಏರ್ಪಡುವ ಸೆಲಬ್ರಿಟಿ ಎಂಡಾರ್ಸ್ ಮೆಂಟ್‌ಗಳಲ್ಲಿ ಶೇ. 76ರಷ್ಟು ಪಾಲನ್ನು ಸಿನಿತಾರೆಯರು ಆಕ್ರಮಿಸಿ ಕೊಂಡಿದ್ದಾರೆ. ಕ್ರೀಡಾಪಟುಗಳ ಪಾಲು ಶೇ. 12.
Related Articles
ಎಂಡಾರ್ಸ್‌ಮೆಂಟ್ ಕಾಂಟ್ರ್ಯಾಕುಗಳಲ್ಲಿ ಎರಡು ರೀತಿ ಇವೆ. ಒಂದು- ಫಿಕ್ಸೆಡ್ ಫೀ, ಇನ್ನೊಂದು- ಫಿಕ್ಸೆಡ್ ಟರ್ಮ್ ಎಂಗೇಜೆಟ್. ಫಿಕ್ಸೆಡ್ ಫೀ, ಎಂದರೆ ಒಂದು ಸಲದ ಒಪ್ಪಂದ. ಅಂದರೆ ಒಂದೆರಡು ಜಾಹೀರಾತುಗಳಿಗೆ ಅದು ಸೀಮಿತ. ಇತ್ತೀಚಿಗೆ ಫಿಪ್‌ಕಾರ್ಟ್ ಸಂಸ್ಥೆ, ತನ್ನ “ಬಿಗ್ ಬಿಲಿಯನ್ ಡೇ’ ದಿನಕ್ಕೆಂದು ಒಂದು ದಿನದ ಮಟ್ಟಿಗೆ ಸೆಲಬ್ರಿಟಿಗಳನ್ನು ಜಾಹೀರಾತಿಗೆ ಬಳಸಿಕೊಂಡಿದ್ದನ್ನು ನೆನಪಿಸಿಕೊಳ್ಳಬಹುದು. ಆದರೆ ಫಿಕ್ಸೆಡ್ ಎಂಗೇಜೆಟ್ ಎಂದರೆ ಹಾಗಲ್ಲ. ಅದು ವರ್ಷಗಳ ಕಾಲ ಸೆಲಬ್ರಿಟಿ ಜೊತೆ ಒಪ್ಪಂದ ಮಾಡಿಕೊಳ್ಳುವುದು. ಈ ಸಂದರ್ಭದಲ್ಲಿ ಸೆಲಬ್ರಿಟಿಗಳನ್ನು ಆಯಾ ಕಂಪನಿಯ ಬ್ರ್ಯಾಂಡ್ ಅಂಬಾಸಿಡರ್ ಎಂದು ಘೋಷಿಸಲಾಗುತ್ತದೆ
Advertisement
ಕಂಪನಿ ಸಾರ್ವಜನಿಕ ವಲಯದಲ್ಲಿ ಕೆಟ್ಟ ಇಮೇಜನ್ನು ಹೊಂದಿದ್ದರೆ, ವಿವಾದಾತ್ಮಕವಾಗಿದ್ದರೆ ಆ ಕಂಪನಿಗಳ ಜಾಹೀರಾತುಗಳಲ್ಲಿ ಕಾಣಿಸಿಕೊಳ್ಳಲು ಸೆಲಬ್ರಿಟಿಗಳು ತಮ್ಮ ಮಾರುಕಟ್ಟೆ ಮೌಲ್ಯಕ್ಕಿಂತ ಹೆಚ್ಚು ಶುಲ್ಕವನ್ನು ಪಡೆಯುತ್ತಾರೆ. ಅದೇ ರೀತಿ, ಯಾವ ಬ್ರ್ಯಾಂಡ್‌ನ ಜಾಹೀರಾತುಗಳಲ್ಲಿ ಜಗತ್ತಿನಖ್ಯಾತನಾಮರೆಲ್ಲ ಕಾಣಿಸಿಕೊಂಡಿದ್ದಾರೋ ಆ ಕಂಪನಿಯ ಜೊತೆ ಗುರುತಿಸಿಕೊಳ್ಳುವ ಸಲುವಾಗಿ ಸೆಲಬ್ರಿಟಿಗಳು ತಮ್ಮ ಶುಲ್ಕವನ್ನು ಇಳಿಸಿ ಕೊಳ್ಳುವುದೂ ಇದೆ. ಇದರಿಂದ, ಅವರು ಕಡಿಮೆ ಶುಲ್ಕ ಪಡೆದರೂ ಅವರ ಬ್ರ್ಯಾಂಡ್ ಮೌಲ್ಯ ಹೆಚ್ಚುವುದು. ಯಾವ ರೀತಿಯಿಂದ ನೋಡಿದರೂ ಅವರಿಗೆ ಲಾಭವೇ. ಅವರದೇ ಸ್ವಂತ ಕಂಪನಿಗಳೂ ಇವೆ
ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತನಾಮ ಕ್ರೀಡಾಪಟುಗಳಾದ ಮೈಕೆಲ್ ಜೋರ್ಡಾನ್, ಕ್ರಿಶ್ಚಿಯಾನೋ ರೊನಾಲ್ಡೊ, ವೀನಸ್ ವಿಲಿಯಮ್ಸ್, ಮುಂತಾದವರು ತಮ್ಮದೇ ಸ್ವಂತ ಲೈಫ್ಸ್ಟೈಲ್/ ಫ್ಯಾಷನ್ ಬ್ರ್ಯಾಂಡ್‌ಗಳನ್ನು ಸ್ಥಾಪಿಸಿ ಯಶ ಕಂಡಿದ್ದಾರೆ. ಭಾರತದಲ್ಲಿ ಆ ಟ್ರೆಂಡ್ ಇದೀಗ ಶುರುವಾಗಿದೆ. ಭಾರತೀಯ ಕ್ರಿಕೆಟಿಗರು ಇತರೆ ಬ್ರ್ಯಾಂಡ್ ಜಾಹೀರಾತುಗಳಲ್ಲಿ
ಕಾಣಿಸಿಕೊಳ್ಳುವುದರ ಜೊತೆಗೆ ತಮ್ಮದೇ ಸ್ವಂತ ಬ್ರ್ಯಾಂಡ್‌ಗಳನ್ನೂ ಸ್ಥಾಪಿಸುತ್ತಿದ್ದಾರೆ. ಧೋನಿ ಮಾತ್ರವಲ್ಲದೆ, ವಿರಾಟ್ ಕೊಹ್ಲಿ, ಯುವರಾಜ್ ಸಿಂಗ್, ವೀರೇಂದರ್ ಸೆಹ್ವಾಗ್, ಕೆ.ಎಲ್. ರಾಹುಲ್ ಈ ಪೈಕಿ ಮುಂಚೂಣಿಯಲ್ಲಿದ್ದಾರೆ. ಸಿನಿಮಾ ಕ್ಷೇತ್ರದವರೂ ಈ ವಿಚಾರದಲ್ಲಿ ಸೀನಿಯರ್ ಎನ್ನಬಹುದು. ಸಲ್ಮಾನ್‌ಖಾನ್ ಅವರ “ಬೀಯಿಂಗ್ ಹ್ಯೂಮನ್’, ಹೃತಿಕ್ ರೋಷನ್ “ಎಚ್‌ಆರ್‌ಎಕ್ಸ್'(ಫ್ಯಾಷನ್ ಬ್ರ್ಯಾಂಡ್) ಅವಕ್ಕೆ ಉದಾಹರಣೆ. ಅಂದಹಾಗೆ, ವಿರಾಟ್ ಕೊಹ್ಲಿ ರನ್ ಗಳಿಕೆಯಲ್ಲಿ ಮಾತ್ರವಲ್ಲ, ಕಂಪನಿಗಳ ಒಡೆತನ ಹೊಂದುವ ವಿಚಾರದಲ್ಲೂ ಮುಂಚೂಣಿಯಲ್ಲಿದ್ದಾರೆ. ದೀರ್ಘ ಕಾಲದ ಒಪ್ಪಂದ ಯಾಕೆ ಮಾಡಿಕೊಳ್ತಾರೆ?
ಕ್ರಿಕೆಟ್‌ನಲ್ಲಿ ಈಗಿನ ಟ್ರೆಂಡ್ ಎಂದರೆ ಕ್ರೀಡಾಪಟುಗಳನ್ನು ಒಂದೆರಡು ಜಾಹೀರಾತು ಕ್ಯಾಂಪೇನ್‌ಗಳಿಗೆ ಬುಕ್ ಮಾಡುವುದಕ್ಕೆ ಬದಲಾಗಿ ವರ್ಷಗಳ ಕಾಲ ಒಪ್ಪಂದ ಮಾಡಿಕೊಂಡು, ತನ್ನ ಕಂಪನಿಯಲ್ಲೇ ಇಂತಿಷ್ಟು ಪಾಲುದಾರಿಕೆ ನೀಡುವುದು. ಹೀಗೆ ಮಾಡುವುದರಿಂದ ಕಂಪನಿಗಳಿಗೂ ಲಾಭ. ಇದೊಂದು ರೀತಿಯಲ್ಲಿ ಸಗಟು ವ್ಯಾಪಾರದ ಹಾಗೆ. ಯಾವುದೇ ವಸ್ತುವನ್ನು ಬಿಡಿಯಾಗಿ ಕೊಂಡರೆ ಹೆಚ್ಚು ಬೆಲೆ ತೆರಬೇಕು. ಅದೇ ಹೋಲ್‌ಸೇಲ್ ಆಗಿ ಕೊಂಡರೆ, ಲಾಭ. ಉದಾಹರಣೆಗೆ, ಧೋನಿ ಒಂದು ಜಾಹೀರಾತಿಗೆ 2ರಿಂದ 3 ಕೋಟಿ ರು. ತನಕ ಶುಲ್ಕ ಪಡೆಯುತ್ತಾರೆ. ಹೀಗಾಗಿ ವಾರದ ಶೂಟಿಂಗ್‌ಗೆ 15 ಕೋಟಿವರೆಗೆ ತೆರುವುದಕ್ಕಿಂತ, ಅದರ ಮೇಲೆ 5 ಕೋಟಿ ಹೆಚ್ಚಿಗೆ ಕೊಟ್ಟು, ಕಂಪನಿಯಲ್ಲಿ ಶೇ. 10 ಪಾಲುದಾರಿಕೆ ನೀಡುವುದರಿಂದ ವರ್ಷಗಳ ಕಾಲ ಅವರನ್ನು ಬಳಸಿಕೊಳ್ಳಬಹುದು. ಇದು ಕಂಪನಿಯ ಭವಿಷ್ಯದ ದೃಷ್ಟಿಯಿಂದಲೂ ಬಹಳ ಒಳ್ಳೆಯ ತಂತ್ರ. ಮಲ್ಟಿನ್ಯಾಷನಲ್ ಕಂಪನಿಗಳ ಲೆಕ್ಕಾಚಾರ ಅಡಗಿರುವುದೇ ಅಲ್ಲಿ. ಕ್ರೀಡಾಪಟು ಹಾಗೂ ಕಂಪನಿ ಎರಡೂ ಕಡೆಯಿಂದ ನೋಡಿದರೂ ಇದು ಲಾಭದಾಯಕ ಸ್ಥಳೀಯರನ್ನು ಮರೆತಿಲ್ಲ
ಕಂಪನಿಗಳು ಪ್ರಾದೇಶಿಕ ಮಾರುಕಟ್ಟೆಯನ್ನೂ ವಶಪಡಿಸಿ ಕೊಳ್ಳುವುದರಲ್ಲಿಯೂ ಹಿಂದೆ ಬಿದ್ದಿಲ್ಲ. ಜೇಮ್ಸ್ ಬಾಂಡ್ ನಟ ಪಿಯರ್ಸ್ ಬ್ರಾಸ್ನನ್, ಹಾಲಿವುಡ್ ನಟಿ ನಿಕೋಲ್ ಕಿಡ್‌ಮನ್‌ನಂಥ ಅಂತಾರಾಷ್ಟ್ರೀಯ ಮಟ್ಟದ ಸೆಲಬ್ರಿಟಿಗಳನ್ನು ಬ್ರ್ಯಾಂಡ್ ಅಂಬಾಸಿಡರ್ ಆಗಿಸಿಕೊಳ್ಳುವುದಷ್ಟೇ ಅಲ್ಲದೆ ಪ್ರಾದೇಶಿಕ ಸೆಲಬ್ರಿಟಿಗಳನ್ನೂ ಕಂಪನಿಗಳು ತನ್ನ ಬ್ರ್ಯಾಂಡ್ ಅಂಬಾಸಿಡರ್‌ಗಳ ಪಟ್ಟಿಗೆ ಸೇರಿಸಿಕೊಂಡಿದೆ. ಪುನೀತ್ ರಾಜಕುಮಾರ್, ಮಹೇಶ್ ಬಾಬು, ತಮನ್ನಾ, ಅಲ್ಲು ಅರ್ಜುನ್ ಅವರೂ ಮಲ್ಟಿನ್ಯಾಷನಲ್ ಕಂಪನಿಗಳ ಜಾಹೀರಾತುಗಳಲ್ಲಿ ಕಾಣಿಸಿಕೊಂಡಿರುವುದನ್ನು ಈ ಸಂದರ್ಭದಲ್ಲಿ ಉದಾಹರಿಸಬಹುದು. ವಿವಿಧ ಕಾಲಘಟ್ಟದ, ಭಾರತದ ಬ್ರಾಂಡೆಡ್ ಕ್ರಿಕೆಟಿಗರು
* ಫಾರೂಕ್ ಎಂಜಿನಿಯರ್
* ಸುನಿಲ್ ಗವಾಸ್ಕರ್
* ಕಪಿಲ್ ದೇವ್
* ಸಚಿನ್ ತೆಂಡೂಲ್ಕರ್
* ರಾಹುಲ್ ದ್ರಾವಿಡ್
* ಎಂ.ಎಸ್.ಧೋನಿ
* ವಿರಾಟ್ ಕೊಹ್ಲಿ ಟಾಪ್ 10 ಬ್ರ್ಯಾಂಡೆಡ್ ಸೆಲಬ್ರಿಟಿಗಳು
(ಒಟ್ಟು ಮೌಲ್ಯ- ಕೋಟಿ ರು.ಗಳಲ್ಲಿ)
ವಿರಾಟ್ ಕೊಹ್ಲಿ 1,000
ದೀಪಿಕಾ ಪಡುಕೋಣೆ 702
ಅಕ್ಷಯ್ ಕುಮಾರ್ 461
ರಣ್‌ವೀರ್ ಸಿಂಗ್ 434
ಶಾರುಖ್ ಖಾನ್ 417
ಸಲ್ಮಾನ್ ಖಾನ್ 385
ಅಮಿತಾಭ್ ಬಚ್ಚನ್ 282
ಆಲಿಯಾ ಭಟ್ 248
ವರುಣ್ ಧವನ್ 220
ಹೃತಿಕ್ ರೋಷನ್ 213 ಹರ್ಷವರ್ಧನ್ ಸುಳ್ಯ