ಈ ಹಿಂದೆ ಕಾರ್ಮಿಕರ ಒಕ್ಕೂಟದ ಅಧ್ಯಕ್ಷ ರಾಜೇಶ್ ಬ್ರಹ್ಮಾವರ್ ನೇತೃತ್ವದಲ್ಲಿ ಸೆಲೆಬ್ರಿಟಿಗಳನ್ನು ಒಂದೆಡೆ ಸೇರಿಸಿ ಕ್ರಿಕೆಟ್ ಪಂದ್ಯ ಶುರುಮಾಡಿದ್ದು ಗೊತ್ತೇ ಇದೆ. ಅಷ್ಟೇ ಅಲ್ಲ, ಸುಮಾರು 180 ಜನರಿದ್ದ ಸೆಲೆಬ್ರಿಟಿ ತಂಡ ಕಟ್ಟಿಕೊಂಡು ನಡೆಸಿದ್ದ “ರಾಜ್‌ಕಪ್’ ಫೈನಲ್ ಪಂದ್ಯವನ್ನು ಶ್ರೀಲಂಕಾದಲ್ಲಿ ಯಶಸ್ವಿಯಾಗಿ ನಡೆಸಲಾಗಿತ್ತು. ಈಗ “ಸೆಲಿಬ್ರಿಟಿ ಬಾಕ್ಸ್ ಕ್ರಿಕೆಟ್ ಲೀಗ್’ ಮೂಲಕ ಹೊಸ ಆಟ ಶುರು ಮಾಡಲಾಗುತ್ತಿದೆ.
ಈ ಸೆಲೆಬ್ರಿಟಿ ಬಾಕ್ಸ್ ಕ್ರಿಕೆಟ್ ಲೀಗ್‌ನಲ್ಲಿ ಒಟ್ಟು 12 ತಂಡಗಳು ಭಾಗವಹಿಸಲಿವೆ. ಅದರಲ್ಲಿ ಶಾಸಕರ ತಂಡ, ಪತ್ರಕರ್ತರ ತಂಡ, ನಟರುಗಳ ತಂಡ ಪಾಲ್ಗೊಳ್ಳಲಿದೆ. “ಲೂಸ್ ಮಾದ’ ಯೋಗಿ, “ಶ್ರೀನಗರ’ ಕಿಟ್ಟಿ ಧರ್ಮ ಕೀರ್ತಿರಾಜ್, ಸಂಚಾರಿ ವಿಜಯ್, ಧರ್ಮ, ರವಿಚೇತನ್, ರಾಜುಗೌಡ್ರು, ಸದಾಶಿವ ಶೆಣೈ, ರಾಹುಲ್, “ಶಿಷ್ಯ’ ದೀಪಕ್ ಇವರುಗಳ ತಂಡಗಳು ಲೀಗ್‌ನಲ್ಲಿ ಸೆಣಸಾಟ ನಡೆಸಲಿವೆ.
ಜನವರಿ 5 ರಂದು ನಡೆಯಲಿರುವ ಈ ಲೀಗ್, ಚಾಮರಾಜಪೇಟೆಯಲ್ಲಿರುವ ಒಳಾಂಗಣ ಕ್ರೀಡಾಂಗಣ ಒಂದರಲ್ಲಿ ನಡೆಯಲಿದೆ. ಹೊರ ರಾಜ್ಯದಿಂದಲೂ ಒಂದು ಟೀಮ್ ಆಹ್ವಾನಿಸುವ ಯೋಚನೆ ರಾಜೇಶ್ ಬ್ರಹ್ಮಾವರ್ ಅವರಿಗಿದೆ. ಇದು 5 ಓವರ್‌ಗಳ ಸೀಮಿತ ಪಂದ್ಯವಾಗಿದ್ದು, ಐವರು ಹುಡುಗರು ಹಾಗು ಇಬ್ಬರು ಹುಡುಗಿಯರು ಆಟ ಆಡಲಿದ್ದಾರೆ. ಬೆಳಗ್ಗೆ 8 ಕ್ಕೆ ಶುರುವಾಗುವ ಲೀಗ್ ರಾತ್ರಿ 10 ರವರೆಗೆ ನಡೆಯಲಿದೆ. ಲೀಗ್‌ನಲ್ಲಿ ಜಯಗಳಿಸಿದ ತಂಡಕ್ಕೆ ವಿಶೇಷ ಬಹುಮಾನ ನೀಡಲಾಗುವುದು.
ಇದು ಮೊದಲ ಸೆಲಿಬ್ರಿಟಿ ಬಾಕ್ಸ್ ಕ್ರಿಕೆಟ್ ಲೀಗ್ ಆಗಿದ್ದು, ಎರಡನೇ ವರ್ಷದ ಲೀಗ್ ವಿದೇಶದಲ್ಲಿ ನಡೆಸುವ ಯೋಚನೆ ಅವರದು. ಈ ಲೀಗ್ ವೀಕ್ಷಣೆಗೆ ವಿಐಪಿ ಪಾಸ್ ಇರಲಿದ್ದು, ಚಿತ್ರರಂಗದ ಚಿತ್ರರಂಗದ ಎಲ್ಲಾ ವಿಭಾಗದವರು ಈ ಲೀಗ್‌ನಲ್ಲಿ ಪಾಲ್ಗೊಳ್ಳಲಿದ್ದಾರೆ ಎಂಬುದು ರಾಜೇಶ್ ಮಾತು. ಅಂದಹಾಗೆ, ದರ್ಶನ್, ಶಿವರಾಜಕುಮಾರ್, ಸುದೀಪ್ ಅವರನ್ನೂ ಆಹ್ವಾನಿಸಲು ತಯಾರಿ ನಡೆಸುತ್ತಿದ್ದಾರಂತೆ.