Advertisement

ಗವಿಮಠದಲ್ಲಿ ಸಂಭ್ರಮದ ತೆಪ್ಪೋತ್ಸವ; ಶತಾಯುಷಿ ಬಸಮ್ಮ ಭೂಸನೂರಮಠರಿಂದ ಚಾಲನೆ

10:04 PM Jan 05, 2023 | Team Udayavani |

ಕೊಪ್ಪಳ: ದಕ್ಷಿಣ ಭಾರತದ ಕುಂಭಮೇಳ ಎಂದೇ ಪ್ರಸಿದ್ದಿ ಪಡೆದಿರುವ ಕೊಪ್ಪಳದ ಶ್ರೀ ಗವಿಸಿದ್ದೇಶ್ವರ ಜಾತ್ರಾ ಮಹೋತ್ಸವದ ಪ್ರಯುಕ್ತ ಗುರುವಾರ ಗವಿಮಠದ ಕೆರೆಯಲ್ಲಿ ಸಂಜೆ ಶ್ರೀ ಗವಿಸಿದ್ದೇಶ್ವರ ಮೂರ್ತಿಯ ತೆಪ್ಪೋತ್ಸವವು ಸಂಭ್ರಮ, ಸಡಗರದಿಂದ ನೆರವೇರಿತು. ಈ ಬಾರಿಯ ತೆಪ್ಪೋತ್ಸವಕ್ಕೆ ಶತಾಯುಷಿ ಬಸಮ್ಮ ಮಡಿವಾಳಯ್ಯ ಭೂಸನೂರಮಠ, ಅಕ್ಕಮಹಾದೇವಿ ವೀರಣ್ಣ ಮುದಗಲ್ ಅವರು ಪೂಜೆ ನೆರವೇರಿಸಿ ಚಾಲನೆ ನೀಡಿದರು.

Advertisement

ಪ್ರತಿ ವರ್ಷವೂ ತೆಪ್ಪೋತ್ಸವಕ್ಕೆ ವಿಶೇಷ ಸಾಧಕರು ಹಾಗೂ ಹಿರಿಯ ಚೇತನರ ಮೂಲಕ ಚಾಲನೆ ಕೊಡಿಸಲಾಗುತ್ತಿದ್ದು, ಅದರಂತೆ ಈ ವರ್ಷದ ಗುರುವಾರ ನಡೆದ ತೆಪ್ಪೋತ್ಸವಕ್ಕೆ ಇಬ್ಬರು ಹಿರಿಯ ಚೇತನರು ಚಾಲನೆ ನೀಡಿದರು. ಬಸಮ್ಮ ಭೂಸನೂರಮಠ ಅವರು ದೇಶದ ಮೊದಲ ಚುನಾವಣೆಯಿಂದ ಇತ್ತೀಚೆಗೆ ನಡೆದ ಚುನಾವಣೆಯ ವರೆಗೂ ತಪ್ಪದೇ ಮತದಾನ ಚಲಾಯಿಸಿದ್ದು, ಅವರ ಮತ ಜಾಗೃತಿ ಕುರಿತು ಭಾರತದ ಚುನಾವಣಾ ಆಯೋಗವು ಗಮನಿಸಿ ಅವರಿಗೆ ವಿಶೇಷ ಪ್ರಮಾಣ ಪತ್ರ ನೀಡಿ ಗೌರವಿಸಿದೆ. ಅವರ ಅಮೃತ ಹಸ್ತದಿಂದ ಈ ಬಾರಿಯ ತೆಪ್ಪೋತ್ಸವಕ್ಕೆ ಪೂಜೆ, ಸಂಕಲ್ಪದ ಮೂಲಕ ಚಾಲನೆ ಕೊಡಿಸಲಾಯಿತು.

ವಿದ್ಯುತ್ ದೀಪಗಳಲ್ಲಿ ಅಲಂಕಾರಗೊಂಡ ಶ್ರೀ ಗವಿಸಿದ್ದೇಶ್ವರ ಮೂರ್ತಿ ಪ್ರತಿಷ್ಠಾಪನೆಗೊಂಡು ವಿರಾಜಮಾನವಾಗಿ ಪುಷ್ಪಗಳೊಂದಿಗೆ ಅಲಂಕಾರಗೊಂಡ ತೆಪ್ಪವನ್ನು ಅಂಬಿಗರು ಭಕ್ತಿ, ಭಾವ, ಶ್ರದ್ದೆಯಿಂದ ಕೆರೆಯ ಸುತ್ತಲೂ ಸಾಗಿಸಿದರು. ಈ ವೇಳೆ ಕೆರೆ ದಡದಲ್ಲಿ ಸುತ್ತಲೂ ಸೇರಿದ್ದ ಭಕ್ತ ಸಮೂಹವು ಭಕ್ತಿಯಿಂದಲೇ ಮೂರ್ತಿಗೆ ನಮಿಸಿ ತಮ್ಮ ಇಷ್ಟಾರ್ಥ ಸಂಕಲ್ಪಗಳನ್ನು ಬೇಡಿಕೊಂಡರು. ಮಕ್ಕಳು, ವೃದ್ಧರು, ಹಿರಿಯರು ಸೇರಿ ಯುವಕರು ಸೇರಿದಂತೆ ಸಹ್ರಾರು ಸಂಖ್ಯೆಯ ಭಕ್ತವೃಂದವು ತೆಪ್ಪೋತ್ಸವದ ಸಂಭ್ರಮವನ್ನು ಕಣ್ಮನ ತುಂಬಿಕೊಂಡು ಪುನೀತರಾದರು.

Advertisement

Udayavani is now on Telegram. Click here to join our channel and stay updated with the latest news.

Next