ಕಾಬೂಲ್: ತಾಲಿಬಾನ್ ಉಗ್ರರು ಸಂಭ್ರಮಾಚರಣೆಗಾಗಿ ಕಾಬೂಲ್ ನಲ್ಲಿ ವೈಮಾನಿಕ ಗುಂಡಿನ ಸುರಿಮಳೆ ನಡೆಸಿದ್ದು, ಇದರಿಂದಾಗಿ ಮಕ್ಕಳು ಸೇರಿದಂತೆ ಹಲವಾರು ಜನರು ಸಾವನ್ನಪ್ಪಿದ್ದಾರೆ ಮತ್ತು ಗಾಯಗೊಂಡಿದ್ದಾರೆ ಎಂದು ಸ್ಥಳೀಯ ಅಫಘಾನ್ ಸುದ್ದಿ ಸಂಸ್ಥೆ ಅಶ್ವಕ ವರದಿ ಮಾಡಿದೆ.
ಪಂಜ್ ಶೀರ್ ಕಣಿವೆಯ ಮೇಲೆ ತಾವು ನಿಯಂತ್ರಣ ಸಾಧಿಸಿದ್ದು, ಅಫ್ಘಾನಿಸ್ತಾನದ ನ್ಯಾಷನಲ್ ರೆಸಿಸ್ಟೆನ್ಸ್ ಫ್ರಂಟ್ (NRFA) ಅನ್ನು ಸೋಲಿಸಲಾಗಿದೆ ಎಂದು ತಾಲಿಬಾನ್ ಹೇಳಿಕೊಂಡಿದೆ. ಇದರ ನಂತರ ಶುಕ್ರವಾರ ಕಾಬೂಲ್ ನಾದ್ಯಂತ ಭಾರೀ ಸಂಭ್ರಮದ ಗುಂಡಿನ ಸದ್ದು ಕೇಳಿಸಿದೆ. ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿರುವ ಫೋಟೋಗಳು ಮತ್ತು ವೀಡಿಯೋಗಳಲ್ಲಿ ಜನರು ಗಾಯಗೊಂಡ ತಮ್ಮ ಸಂಬಂಧಿಕರನ್ನು ಆಸ್ಪತ್ರೆಗೆ ಕರೆದೊಯ್ಯುತ್ತಿರುವುದು ಕಂಡುಬಂದಿದೆ.
” ಅಲ್ಲಾಹನ ಕೃಪೆಯಿಂದ, ನಾವು ಇಡೀ ಅಫ್ಘಾನಿಸ್ತಾನದ ಮೇಲೆ ನಿಯಂತ್ರಣ ಹೊಂದಿದ್ದೇವೆ. ನಮಗೆ ತೊಂದರೆ ನೀಡಿದವರನ್ನು ಸೋಲಿಸಲಾಗಿದೆ. ಪಂಜಶೀರ್ ನಲ್ಲೀಗ ನಮ್ಮ ನೇತೃತ್ವವಿದೆ” ಎಂದು ತಾಲಿಬಾನ್ ಕಮಾಂಡರ್ ನ ಹೇಳಿಕೆಯನ್ನು ರಾಯಿಟರ್ಸ್ ವರದಿ ಮಾಡಿದೆ.
Related Articles
ಇದನ್ನೂ ಓದಿ:ಹಳೇ ರಾಗ ಶುರು ಮಾಡಿದ ತಾಲಿಬಾನ್ ನಂಬಿಕೆಗೆ ಅನರ್ಹ
ಆದರೆ, ಪಂಜಶೀರ್‌ನಲ್ಲಿನ ತಾಲಿಬಾನ್ ವಿಜಯವನ್ನು ಪ್ರತಿರೋಧ ಪಡೆಗಳ ನಾಯಕ ಅಹ್ಮದ್ ಮಸೂದ್ ಅಲ್ಲಗಳೆದಿದ್ದಾರೆ. “ಪಂಜಶೀರ್ ವಿಜಯದ ಸುದ್ದಿಗಳು ಪಾಕಿಸ್ತಾನದ ಮಾಧ್ಯಮಗಳಲ್ಲಿ ಹರಿದಾಡುತ್ತಿವೆ. ಇದು ಸುಳ್ಳು” ಎಂದು ಅಹ್ಮದ್ ಮಸೂದ್ ಹೇಳಿದ್ದಾರೆ.