Advertisement

ಜಿಲ್ಲೆಯಲ್ಲಿ ಸಂಭ್ರಮದ ರಥ ಸಪ್ತಮಿ ಆಚರಣೆ

07:28 AM Feb 13, 2019 | |

ಮಾಗಡಿ (ಕುದೂರು): ರಥಸಪ್ತಮಿ ಪ್ರಯುಕ್ತ ಇತಿಹಾಸ ಪ್ರಸಿದ್ಧ ಸೋಮೇಶ್ವರ ಸ್ವಾಮಿ ಬ್ರಹ್ಮ ರಥೋತ್ಸವ ಸಹಸ್ರಾರು ಭಕ್ತರ ನಡುವೆ ವಿಜೃಂಭಣೆಯಿಂದ ನಡೆಯಿತು. ನಾಡಪ್ರಭು ಕೆಂಪೇಗೌಡರು ನಿರ್ಮಿಸಿರುವ ಈ ದೇಗುಲದಲ್ಲಿ ರಥೋತ್ಸವದ ಪ್ರಯುಕ್ತ ಬೆಳಗ್ಗೆಯಿಂದ ಸ್ವಾಮಿಗೆ ಪಂಚಾಮೃತ ಅಭಿಷೇಕ, ಹೋಮ- ಹವನ, ಹೂವಿನ ಅಲಂಕಾರ ಏರ್ಪಡಿಸಲಾಗಿತ್ತು.

Advertisement

ಮಧ್ಯಾಹ್ನ 12.45ಕ್ಕೆ ಶಾಸಕ ಎ.ಮಂಜು ಹಾಗೂ ತಹಶೀಲ್ದಾರ್‌ ರಮೇಶ್‌ ಶಾಸ್ತ್ರೋಕ್ತವಾಗಿ ಪೂಜೆ ಸಲ್ಲಿಸಿ ಬ್ರಹ್ಮರಥೋತ್ಸವಕ್ಕೆ ಚಾಲನೆ ನೀಡಿದರು. ಸೋಮೇಶ್ವರ ಸ್ವಾಮಿ ರಥ ಎಳೆಯುತ್ತಿದ್ದಂತೆ. ಭಕ್ತರು ಹೂವು, ಹಣ್ಣು ದವನ ಎಸೆಯುವ ಮೂಲಕ ದೇವರಿಗೆ ಹರಕೆ ತೀರಿಸಿದರು.

ದೇಗುಲ ಸಮಗ್ರ ಅಭಿವೃದ್ಧಿ: ಶಾಸಕ ಎ.ಮಂಜು ಮಾತನಾಡಿ, ನಾಡಪ್ರಭು ಕೆಂಪೇಗೌಡರು ನಿರ್ಮಿಸಿರುವ ಐತಿಹಾಸಿಕ ದೇವಸ್ಥಾನ ಜೀರ್ಣೋದ್ಧಾರವಾಗಿದ್ದು, ವರ್ಷದಿಂದ ವರ್ಷಕ್ಕೆ ಪ್ರಸಿದ್ಧಿ ಪಡೆಯುತ್ತಿದೆ. ದೇವಾಲಯದ ಮೂಲೆಯಲ್ಲಿನ ಗೋಪುರವನ್ನು ಕಳ್ಳರು ನಿಧಿಯಾಸೆಗೆ ಕೆಡವಿದ್ದು, ಅದನ್ನು ಸದ್ಯದಲ್ಲಿಯೇ ದುರಸ್ತಿ ಮಾಡಿಸಿ ಇನ್ನೊಂದು ವರ್ಷದಲ್ಲಿ ದೇವಾಲಯದ ಸಮಗ್ರ ಅಭಿವೃದ್ಧಿ ಪಡಿಸಲಾಗುವುದು ಎಂದು ಹೇಳಿದರು.

ಉತ್ತಮ ಮಳೆ ಬೆಳೆಗಾಗಿ ಪ್ರಾರ್ಥನೆ: ಸೋಮೇಶ್ವರ ದೇವಾಲಯ ಸೇರಿದಂತೆ ಪಟ್ಟಣದ ಎಲ್ಲೆಡೆ 55 ಲಕ್ಷ ರೂ. ವೆಚ್ಚದಲ್ಲಿ ಶಾಸಕರ ಅನುದಾನದಡಿ ಸಿಸಿ ಕ್ಯಾಮೆರಾ ಅಳವಡಿಸಲು ಕ್ರಮ ಕೈಗೊಳ್ಳಲಾಗಿದೆ. ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಗೆ ದೇವರು ಆಯಸ್ಸು, ಅರೋಗ್ಯ ಸೇರಿದಂತೆ ನಾಡಿನಲ್ಲಿ ಉತ್ತಮ ಮಳೆ, ಬೆಳೆಯಾಗಿ ರೈತರು ನೆಮ್ಮದಿಯಿಂದ ಜೀವನ ನಡೆಸಲು, ಕ್ಷೇತ್ರದ ಸಮಗ್ರ ಅಭಿವೃದ್ಧಿ, ಶೈಕ್ಷಣಿಕ ಅಭಿವೃದ್ಧಿ ಅಧ್ಯಾತ್ಮಿಕ, ಸಾಮಾಜಿಕ ಧಾರ್ಮಿಕ, ಕಾರ್ಯಕ್ರಮಗಳು ನಿರಂತರವಾಗಿ ನಡೆಯಲಿ. ತಾಲೂಕಿನಲ್ಲಿ ನೀರಾವರಿ ಯೋಜನೆಗಳು ಶೀಘ್ರವೇ ಪೂರ್ಣಗೊಳ್ಳಲಿ ಎಂದು ಭಗವಂತನಲ್ಲಿ ಪ್ರಾರ್ಥಿಸಿದ್ದೇನೆ ಎಂದು ತಿಳಿಸಿದರು.

ಪ್ರವಾಸಿ ತಾಣ: ವಿಧಾನ ಪರಿಷತ್‌ ಸದಸ್ಯ ಅ.ದೇವೇಗೌಡ ಮಾತನಾಡಿ, ಕೆಂಪೇಗೌಡರ ಕಾಲದ ಸೋಮೇಶ್ವರ ಸ್ವಾಮಿ ಬ್ರಹ್ಮರಥೋತ್ಸವ ವಿಜೃಂಭಣೆಯಿಂದ ನಡೆಯುತ್ತದೆ. ಯಾರೂ ಹಸಿವಿನಿಂದ ಹೋಗಬಾರದೆಂದು ಹಲವಾರು ಸಮುದಾಯದವರು ಅನ್ನಸಂತರ್ಪಣೆ ಏರ್ಪಡಿಸಿಕೊಂಡು ಬರುತ್ತಿದ್ದು, ಈ ದೇಗುಲವನ್ನು ಮತ್ತಷ್ಟು ಅಭಿವೃದ್ಧಿ ಪಡಿಸಿ ಪ್ರವಾಸಿ ತಾಣವನ್ನಾಗಿ ಮಾಡಲು ಸರ್ಕಾರಕ್ಕೆ ಒತ್ತಾಯಿಸುತ್ತೇನೆ ಎಂದು ವಿವರಿಸಿದರು.

Advertisement

ಮಾಗಡಿ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಕೆ.ಕೃಷ್ಣಮೂರ್ತಿ ಮಾತನಾಡಿ, ತಿರುಮಲೆ ರಂಗನಾಥ ಸ್ವಾಮಿ ಮತ್ತು ಸೋಮೇಶ್ವರ ಸ್ವಾಮಿ ತಾಲೂಕಿನ ಪ್ರಮುಖ ದೇವಾಲಯಗಳು. ಕೆಂಪೇಗೌಡರು ಸುಂದರವಾಗಿ ಸೋಮೇಶ್ವರ ದೇವಾಲಯವನ್ನು ನಿರ್ಮಿಸಿದ್ದಾರೆ. ದೇಗುಲದ ಅಭಿವೃದ್ಧಿಗಾಗಿ ಪ್ರಾಧಿಕಾರದಿಂದ ಒತ್ತು ನೀಡಲಾಗುವುದು ಎಂದು ಹೇಳಿದರು.

ಅರವಟಿಗೆ: ಪ್ರತಿ ವರ್ಷದಂತೆ ಬ್ರಹ್ಮ ರಥೋತ್ಸವದಲ್ಲಿ ವಿವಿಧ ಸಮಾಜ ದವರಿಂದ ಅರವಟಿಗೆ ಏರ್ಪಡಿಸಲಾಗಿತ್ತು. ಸಾವಿರಾರು ಭಕ್ತರಿಗೆ ಕೂಸಂಬರಿ, ಮಜ್ಜಿಗೆ, ಪಾನಕ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು,

ತಹಶೀಲ್ದಾರ್‌ ರಮೇಶ್‌, ಕೆಂಪೇಗೌಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಚ್.ಎಂ.ಕೃಷ್ಣಮೂರ್ತಿ, ಜಿಪಂ ಸದಸ್ಯ ಎಚ್.ಎನ್‌.ಅಶೋಕ್‌, ತಾಪಂ ಸದಸ್ಯ ನಾರಾಯಣ್‌, ಪುರಭೆ ಸದಸ್ಯ ಎಂ.ಎನ್‌.ಮಂಜುನಾಥ್‌, ಮಹೇಶ್‌, ಕೆ.ವಿ.ಬಾಲರಘು, ಹೊಂಬಮ್ಮ, ನರಸಿಂಹಮೂರ್ತಿ, ಶಿರಸ್ತೇದಾರ್‌ ಜಗದೀಶ್‌, ಪುರಸಭಾ ಮಾಜಿ ಅಧ್ಯಕ್ಷ ಪುರುಶೋತ್ತಮ್‌, ತಾಪಂ ಮಾಜಿ ಸದಸ್ಯ ಜಯರಾಂ, ಆನಂದ್‌, ಜಯಕರ್ನಾಟಕ ಅಧ್ಯಕ್ಷ ಕುಮಾರ್‌, ಹೊಸಹಳ್ಳಿ ಶಿವರಾಜು, ನಟರಾಜು, ಅರ್ವಕ ಗೋಪಾಲದೀಕ್ಷಿತ್‌, ಕಿರಣ್‌ ದೀಕ್ಷಿತ್‌ ಆಗಮಿಸಿದ್ದರು.

ಭಕ್ತ ಸಾಗರದ ಮಧ್ಯೆ ವೀರಭದ್ರಸ್ವಾಮಿ ರಥೋತ್ಸವ
ಕುದೂರು:
ಸೂರ್ಯ ಪಥ ಬದಲಾಯಿಸುವ ರಥ ಸಪ್ತಮಿಯ ದಿನವನ್ನು ಭಾವನಾತ್ಮಕವಾಗಿ ಸ್ವೀಕರಿಸುವ ಭಾರತೀಯರಿಗೆ ಪುಣ್ಯದ ದಿನ. ಜಗತ್ತಿನ ಒಳಿತಿಗೆ ಕತ್ತಲು ಕಡಿಮೆ ಮಾಡಿ, ಬೆಳಕು ಹೆಚ್ಚು ಮಾಡುವ ದಿನವಿದು.ಅದಕ್ಕಾಗಿಯೇ ಸೂರ್ಯ ರಥವೇರಿದ್ದಾನೆ ಎಂಬ ನಂಬಿಕೆ ಜನರಲ್ಲಿದೆ ಎಂದು ಬಸವಲಿಂಗ ಸ್ವಾಮೀಜಿ ಹೇಳಿದರು.

ಸೋಲೂರು ಹೋಬಳಿಯ ತಟ್ಟೆಕೆರೆ ಬಿಳಿ ರಂಗನಾಥ ಸ್ವಾಮಿ ಬೆಟ್ಟದಲ್ಲಿ ರಥ ಸಪ್ತಮಿ ಪ್ರಯುಕ್ತ ಏರ್ಪಡಿಸಿದ್ದ ಜಾತ್ರ ಮಹೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಜಾತ್ರೆ ದಿನ ಎಲ್ಲಾ ಜನರು ಒಂದೆಡೆ ಸೇರಿ ಸಂಭ್ರಮಿಸುವ ವಾತಾವರಣ ಆನಂದವನ್ನುಂಟು ಮಾಡುತ್ತದೆ. ಮನಸ್ಸುಗಳನ್ನು ಒಂದಾಗಿಸುವ ಹಬ್ಬ ಮತ್ತು ಜಾತ್ರೆಗಳು ನಮ್ಮ ನಾಡಿನ ಸಂಸ್ಕೃತಿಯಾಗಿವೆ. ಇವನ್ನು ಜತನದಿಂದ ಆಧುನಿಕತೆಯ ಅಬ್ಬರದಲ್ಲೂ ಜಾನಪದದ ಸೊಗಡನ್ನು ಉಳಿಸಿಕೊಂಡು ಬರಲಾಗುತ್ತಿದೆ ಎಂದು ತಿಳಿಸಿದರು.

ದೇಗುಲದ ಪ್ರಾಂಗಣ ಭಕ್ತರ ಆಕರ್ಷಣೆ: ಇಲ್ಲಿನ ರಂಗನಾಥ ಸ್ವಾಮಿ ದೇವಾಲಯದಲ್ಲಿ ಪ್ರತಿ ವರ್ಷ ರಥಸಪ್ತಮಿ ದಿವಸ ವಿಶೇಷ ಜಾತ್ರಾ ಮಹೋತ್ಸವನ್ನು ಹಾಗೂ ರಥೋತ್ಸವವನ್ನು ಏರ್ಪಡಿಸಿಕೊಂಡು ಬರಲಾಗುತ್ತಿದೆ. ದೇವಾಲ ಯದ ಎದುರಿನ ಕಲ್ಯಾಣಿ ದೇವಾಲಯದ ಪ್ರಾಂಗಣದ ಸೂಬಗನು ಹೆಚ್ಚಿಸಿದೆ. ದೇವಾಲಯದಲ್ಲಿರುವ ರಾಮಾನುಜಾಚಾರ್ಯರ ಪ್ರತಿಮೆ, ಗರುಡ ದೇವರ ಪ್ರತಿಮೆ, ಲಕ್ಷ್ಮೀದೇವರ ಪ್ರತಿಮೆಗಳು ಜನಮನಸೂರೆಗೊಳ್ಳುತ್ತವೆ. ಅಲ್ಲದೆ ದೂರ್ವಾಸ ಮುನಿಯು ತಪ್ಪಸ್ಸು ಮಾಡಿದರು ಎಂಬ ಪ್ರತೀತಿಯು ಇದೆ ಎಂದು ಹೇಳಿದರು.

ಸಂಭ್ರಮದ ಆಚರಣೆ: ಅರ್ಚಕ ರಂಗಸ್ವಾಮಿ ಮಾತನಾಡಿ, ಭಾರತೀಯ ಹಬ್ಬಗಳು ಜಾತ್ರೆಗಳಂತೆ ಆಚರಿಸುತ್ತೇವೆ ಎನ್ನುವುದಕ್ಕೆ ರಥಸಪ್ತಮಿ ದಿನ ಸಾವಿರಾರು ಜನರು ಒಂದೆಡೆ ಸೇರಿ ಜಾತ್ರೆಯನ್ನು ಆಚರಿಸಿ ಸಂಭ್ರಮ ಪಡುತ್ತಿರುವುದೇ ಅದಕ್ಕೆ ಸಾಕ್ಷಿ ಎಂದು ತಿಳಿಸಿದರು.

ದೇವಾಲಯ ಟ್ರಸ್ಟ್‌ನ ಅಧ್ಯಕ್ಷ ಗೋವಿಂದರಾಜು ಮಾತನಾಡಿ. ದೇವಾಲಯಗಳಲ್ಲಿ ಮಂಗಳ ಕಾರ್ಯ ನೆಡೆಯುವುದು ಲೋಕ ಕಲ್ಯಾಣಾರ್ಥವಾಗಿ. ಇಲ್ಲಿ ಜಾತಿ ಧರ್ಮ ಭೇದವಿಲ್ಲದೆ ಧಾರ್ಮಿಕ ಕಾರ್ಯಕ್ರಮಗಳನ್ನು ಆಚರಿಸಲಾಗುತ್ತದೆ. ಬೆಟ್ಟದ ಮೇಲಿನ ಶಾಂತ ವಾತಾವರಣದಲ್ಲಿರುವ ಈ ದೇವಾಲಯದ ಸೌಂದರ್ಯ ಕಾಪಾಡ ಬೇಕಾದ ಜವಾಬ್ದಾರಿ ಎಲ್ಲರ ಮೇಲಿದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ದೇಗುಲ ಕಾರ್ಯದರ್ಶಿ ಶ್ರೀನಿವಾಸ್‌, ಗೂರೂರು ಶ್ರೀನಿವಾಸ್‌, ಸಾವಿರಾರು ಭಕ್ತರು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next