ಜಮ್ಮುಕಾಶ್ಮೀರದ ವಿಶೇಷ ಸ್ಥಾನಮಾನ ರದ್ದುಪಡಿಸಲು 1953ರಲ್ಲೇ ಹೋರಾಟ ನಡೆಸಿದ್ದ, ಭಾರತ ಜನತಾ ಪಕ್ಷದ ಮೂಲಪುರುಷ ಡಾ.ಶ್ಯಾಮಪ್ರಸಾದ್ ಮುಖರ್ಜಿ ಸಂಬಂಧಿಗಳು ಅತೀವ ಸಂಭ್ರಮದಲ್ಲಿದ್ದಾರೆ. ಈ ಹೋರಾಟ ಮಾಡುತ್ತಲೇ ಸಾವನ್ನಪ್ಪಿದ್ದ ಮುಖರ್ಜಿ ಕನಸು ಕಡೆಗೂ ನನಸಾಗಿದ್ದಕ್ಕೆ ಬಂಧುಗಳು ಸಂತಸ ವ್ಯಕ್ತಪಡಿಸಿದ್ದಾರೆ.
ಶ್ಯಾಮಪ್ರಸಾದ್ ಅವರ ರಕ್ತಸಂಬಂಧಿ, ಬಾಂಬೆ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಚಿತ್ತತೋಷ್ ಮುಖರ್ಜಿ ಪ್ರತಿಕ್ರಿಯಿಸಿ, ಇದು ನಮಗೆಲ್ಲರಿಗೂ ಐತಿಹಾಸಿಕ ದಿನ. ಶ್ಯಾಮಪ್ರಸಾದ್ ಅವರ ಕನಸು ಈಗ ಪೂರ್ಣಗೊಂಡಿದೆ ಎಂದು ಸಂಭ್ರಮಿಸಿದ್ದಾರೆ.
1953, ಜೂ.22ರಂದು ಜಮ್ಮುಕಾಶ್ಮೀರದ ರಾಜಧಾನಿ ಶ್ರೀನಗರದ ಬಂದೀಖಾನೆಯಲ್ಲಿ ಶ್ಯಾಮಪ್ರಸಾದ್ ಸಾವಿಗೀಡಾಗಿದ್ದು ಅನುಮಾನಾಸ್ಪದ ಎಂದು ಚಿತ್ತತೋಷ್ ಕರೆದಿದ್ದಾರೆ. “ಆ ಘಟನೆ ನಮಗೆ ಈಗಲೂ ರಹಸ್ಯವಾಗುಳಿದಿದೆ. ಆಗ ಮುಖರ್ಜಿಯವರ ಸಾವನ್ನು ತನಿಖೆ ಮಾಡಲು ಅಂದಿನ ಪ್ರಧಾನಿ ನೆಹರೂ ನಿರಾಕರಿಸಿದ್ದರು’ ಎಂದು ಅವರು ನೆನಪಿಸಿಕೊಂಡಿದ್ದಾರೆ.
ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದನ್ನು ವಿರೋಧಿಸಿ, 1953 ಮೇ 8ರಂದು ಮುಖರ್ಜಿ ಶ್ರೀನಗರಕ್ಕೆ ಹೊರಟಿದ್ದರು. ಮೇ 11ರಂದು ಬಂಧನಕ್ಕೊಳಗಾಗಿದ್ದ ಅವರು ಜೂ.22ರಂದು ನಿಧನರಾಗಿದ್ದರು. ಇದಕ್ಕೆ ಹೃದಯಾಘಾತ ಕಾರಣ ಎಂದು ಹೇಳಲಾಗಿತ್ತು.
ಅದು ಸಾವಲ್ಲ ಕೊಲೆ: ಶ್ಯಾಮಪ್ರಸಾದ್ ಮುಖರ್ಜಿಯವರ ಇನ್ನೊಬ್ಬ ಸಂಬಂಧಿ ಜನತೋಷ್ ಮುಖರ್ಜಿ, ಭಾಜಪಾ ಸಂಸ್ಥಾಪಕರ ಸಾವನ್ನು ಕೊಲೆ ಎಂದು ನೇರವಾಗಿ ಹೇಳಿದ್ದಾರೆ. “ಅದನ್ನು ಸಹಜ ಸಾವು ಎಂದು ನಾವು ಭಾವಿಸುವುದಿಲ್ಲ. ನೆಹರೂ ಮತ್ತು ಶೇಖ್ ಅಬ್ದುಲ್ಲಾ ಅವರ ವಿರುದ್ಧ ಪಿತೂರಿ ನಡೆಸಿದ್ದರು. ಅದು ಕೊಲೆ ಎನ್ನುವುದು ನಮ್ಮ ಬಲವಾದ ನಂಬಿಕೆ’ ಎಂದು ಜನತೋಷ್ ಹೇಳಿದ್ದಾರೆ.