Advertisement

ಸಂಭ್ರಮದ ತ್ರಿಪುರ ಸುಂದರಿ ಜಾತ್ರಾ ಮಹೋತ್ಸವ

09:13 PM Jan 10, 2020 | Lakshmi GovindaRaj |

ಮೂಗೂರು (ತಿ.ನರಸೀಪುರ): ಮೂಗೂರು ಗ್ರಾಮದಲ್ಲಿ ಶ್ರೀ ತ್ರಿಪುರ ಸುಂದರಿ ಅಮ್ಮನವರ ಜಾತ್ರಾ ಮಹೋತ್ಸವದ ಅಂಗವಾಗಿ ಶುಕ್ರವಾರ ಸಹಸ್ತ್ರಾರು ಭಕ್ತರ ಸಮ್ಮುಖದಲ್ಲಿ ಬಹಳ ಜೃಂಭಣೆಯಿಂದ ಬಂಡಿ ಉತ್ಸವ ನಡೆಯಿತು. ಜಾತ್ರಾ ಮಹೋತ್ಸವದ ಮೊದಲ ದಿನವಾದ ಶುಕ್ರವಾರ ಬಂಡಿ ಉತ್ಸವದ ಅಂಗವಾಗಿ ಬೆಳಗ್ಗೆಯಿಂದಲೇ ಶ್ರೀ ತ್ರಿಪುರ ಸುಂದರಿ ಅಮ್ಮನವರ ದೇವಾಲಯದಲ್ಲಿ ವಿಶೇಷ ಪೂಜಾ ಕೈಂಕರ್ಯಗಳು ನಡೆದವು.

Advertisement

ಬಂಡಿಗೆ ಈಡುಗಾಯಿ ಹೊಡೆದ ಭಕ್ತರು: ಮಧ್ಯಾಹ್ನ 12.10ರ ವೇಳೆಗೆ ಶ್ರೀ ತ್ರಿಪುರ ಸುಂದರಿ ಅಮ್ಮನವರ ಉತ್ಸವ ಮೂರ್ತಿಯನ್ನು ದೇವಾಲಯ ಆವರಣದಲ್ಲಿ ಸುತ್ತು ಪ್ರದಕ್ಷಿಣೆ ಹಾಕಿ ನಂತರ ರುದ್ರಾಕ್ಷಿ ಮಂಟಪದೊಂದಿಗೆ ಬಂಡಿ ಬೀದಿಗೆ ಮೆರವಣಿಗೆ ಮೂಲಕ ತರಲಾಯಿತು. ನಂತರ ಅಮ್ಮನವರನ್ನು ರುದ್ರಾಕ್ಷಿ ಮಂಟಪದಲ್ಲಿ ಕೂರಿಸಿ ಪೂಜೆ ಸಲ್ಲಿಸಿದ ನಂತರ ಹರಕೆ ಹೊತ್ತ ಭಕ್ತರು ಮೊದಲ ಬಂಡಿಗೆ ಈಡುಗಾಯಿ ಅರ್ಪಿಸಿ ಭಕ್ತಿ ಪರಕಾಷ್ಠೆ ಮೆರೆದರು.

ಮೊದಲ ಬಂಡಿ ಓಟಕ್ಕೆ ಚಾಲನೆ: ಬಂಡಿಗೆ ಎತ್ತುಗಳನ್ನು ಕಟ್ಟಿ ರುದ್ರಾಕ್ಷಿ ಮಂಟಪದ ಜೊತೆ ಬಂಡಿ ಬೀದಿಯಲ್ಲಿ ಉತ್ಸವ ಹೊರಟಿತು, ಬಂಡಿ ಮಂಟಪದಲ್ಲಿ ಅಮ್ಮನವರಿಗೆ ಗ್ರಾಮಸ್ಥರ ಸಮ್ಮುಖದಲ್ಲಿ ಮಹಾಮಂಗಳಾರತಿ ನೆರವೇರಿಸಿ ಮೊದಲ ಬಂಡಿ ಓಟಕ್ಕೆ ಗ್ರಾಮಸ್ಥರು ಚಾಲನೆ ನೀಡಿದರು.

ವಿವಿಧ ರಾಜ್ಯಗಳಿಂದ ಆಗಮಿಸಿದ್ದ ಭಕ್ತರು: ನಂತರ ಸುತ್ತ ಮುತ್ತಲ ಗ್ರಾಮಗಳಿಂದ ಆಗಮಿಸಿದ್ದ ನೂರಾರು ಜನರು ತಮ್ಮ ರಾಸುಗಳನ್ನು ಸಿಂಗರಿಸಿ ಬಂಡಿಗೆ ಕಟ್ಟಿ ಉತ್ಸುಕತೆಯಿಂದಲೇ ಬಂಡಿ ಓಡಿಸಿದರು. ಈ ರೋಚಕ ಓಟದ ಕ್ಷಣಗಳನ್ನು ಕಣ್ತುಂಬಿಕೊಳ್ಳಲು ರಾಜ್ಯದ ನಾನಾ ಭಾಗಗಳಿಂದ ಸಹಸ್ತ್ರಾರು ಮಂದಿ ಆಗಮಿಸಿ ಬಂಡಿ ಬೀದಿಯ ಎರಡು ಬದಿಯಲ್ಲಿ ಜಮಾಯಿಸಿದರು.

ಮೂಗೂರು ಬಂಡಿ ಎಂದೇ ಖ್ಯಾತಿ: ರಾಸುಗಳನ್ನು ಬಂಡಿಗೆ ಕಟ್ಟಿ ಓಡಿಸುವ ವೇಳೆ ಜಮಾಯಿಸಿದ ಭಕ್ತರು ಹರ್ಷೋದ್ಘಾರದಿಂದ ತ್ರಿಪುರಸುಂದರಿ ಅಮ್ಮನವರಿಗೆ ಜೈಕಾರ ಕೂಗ ತೊಡಗಿದರು. ಮೂಗೂರು ಬಂಡಿ ಎಂದೇ ಖ್ಯಾತಿ ಪಡೆದ ಈ ಹಬ್ಬಕ್ಕೆ ರೈತರು ರಾಜ್ಯದ ನಾನಕಡೆಯಿಂದ ಲಕ್ಷಾಂತ ರೂ. ಬೆಲೆ ಬಾಳುವ ಎತ್ತುಗಳನ್ನು ಖರೀದಿಸಿ ತಂದು ಓಟಕ್ಕಾಗಿ ಎತ್ತುಗಳನ್ನು ಇನ್ನಿಲ್ಲದಂತೆ ತಯಾರಿ ಮಾಡಿಕೊಂಡು ಬಂಡಿಗೆ ಕಟ್ಟಿ ಓಡಿಸುವುದು ಈ ಜಾತ್ರೆಯ ಮತ್ತೂಂದು ವಿಶೇಷ.

Advertisement

ತುಂಬಿ ತುಳುಕುತ್ತಿದ್ದ ರಸ್ತೆ: ಬಂಡಿ ಉತ್ಸವಕ್ಕೆ ಆಗಮಿಸಿದ ಭಕ್ತರಿಗೆ ಗ್ರಾಮಸ್ಥರಿಂದ ಅನ್ನ ಸಂತರ್ಪಣೆ ಕಾರ್ಯವನ್ನು ಹಮ್ಮಿಕೊಳ್ಳಲಾಗಿತ್ತು. ಬಂಡಿ ಉತ್ಸವ ಹಿನ್ನೆಲೆಯಲ್ಲಿ ಗ್ರಾಮದ ಬಂಡಿ ಬೀದಿಯನ್ನು ಹಸಿರು ತಳಿರು ತೋರಣಗಳಿಂದ ಸಿಂಗರಿಸಿದ್ದು, ನೆಂಟರಿಷ್ಟರು ಹಾಗೂ ಬಂಧು ಬಳಗದವರಿಂದ ಇಡೀ ಗ್ರಾಮದ ರಸ್ತೆಗಳೆಲ್ಲವೂ ತುಂಬಿ ತುಳುಕಿದ್ದು, ದೇವಾಲಯದ ಆವರಣದಲ್ಲಿ ಭಾರೀ ಜನಸ್ತೋಮವೇ ಸೇರಿತ್ತು.

ಗ್ರಾಮಸ್ಥರಿಂದ ಅನ್ನಸಂತರ್ಪಣೆ: ಮಂಡ್ಯ ಜಿಲ್ಲೆ ಮದ್ದೂರು ತಾಲೂಕು ಬ್ಯಾಡರಹಳ್ಳಿ ಗ್ರಾಮಸ್ಥರಿಂದ ಜಾತ್ರೆಗೆ ಬರುವ ಭಕ್ತಾದಿಗಳಿಗೆ ನಾಲ್ಕು ದಿನಗಳ ಕಾಲ ಅನ್ನಸಂತರ್ಪಣೆ ಹಮ್ಮಿಕೊಳ್ಳಲಾಗಿದೆ. ಗ್ರಾಮದ ಬಸ್‌ ನಿಲ್ದಾಣದಿಂದ ದೇವಾಲಯದವರೆಗೆ ವಿದ್ಯುತ್‌ ದೀಪಾಲಂಕಾರದಿಂದ ಅಲಂಕೃತಗೊಳಿಸಿ ನೋಡುಗರ ಕಣ್ಮನ ಸೆಳೆಯುವಂತೆ ಮಾಡಿದ್ದಾರೆ. ಮಂಡ್ಯ ಶಾಸಕ ಸಿ.ಎಸ್‌ ಪುಟ್ಟರಾಜು ಅವರಿಂದ 5 ದಿನಗಳ ದೇವಾಲಯದ ಆವರಣದಲ್ಲಿ ರಾತ್ರಿ ವೇಳೆ ಹಲವು ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿದೆ.

ಜಾತ್ರಾ ಮಹೋತ್ಸವದ ಕಾರ್ಯಕ್ರಮ: ಶನಿವಾರ ತೆಪ್ಪೋತ್ಸವ, ಭಾನುವಾರ ಅಮ್ಮನವರ ದಿವ್ಯ ಮಹಾ ರಥೋತ್ಸವ, ಸೋಮವಾರ ಅಮ್ಮನವರು ಹೊಸಹಳ್ಳಿಗೆ ದಯೆಮಾಡಿಸಿ ಹೊಸಹಳ್ಳಿ ಗ್ರಾಮದಲ್ಲಿ ಚಿಗುರು ಕಡಿಯುವುದು, ಮಂಗಳವಾರ ಆಳು ಪಲ್ಲಕ್ಕಿ ಉತ್ಸವ, ವೈಮಾಳಿಗೋತ್ಸವ ಕಾರ್ಯಕ್ರಮಗಳು ಜರುಗಲಿವೆ.

Advertisement

Udayavani is now on Telegram. Click here to join our channel and stay updated with the latest news.

Next