Advertisement

ವಾರ್ಷಿಕ ಜಾತ್ರೆಯ ಸಂಭ್ರಮ; ಮೊಗವೀರ ಮಕ್ಕಳ ಮಹಾ ಮಾತೆ ಬೆಣ್ಣೆಕುದ್ರು ಕುಲಮಹಾಸ್ತ್ರೀ ಅಮ್ಮ

11:03 AM Dec 17, 2022 | Team Udayavani |

ಗುರುಪೀಠ ಮತ್ತು ಪರಂಪರೆ ಆಸ್ತಿಕರಾದ ಮೊಗವೀರ ಸಮುದಾಯದವರಿಗೆ ದೈವ-ದೇವರು, ಆತ್ಮಗಳ ಮೇಲೆ ಅಚಲವಾದ ನಂಬಿಕೆ ಇದೆ. ಬೆಣ್ಣೆಕುದ್ರು ಕುಲಮಹಾಸ್ತ್ರೀ, ಬಗ್ವಾಡಿ ಮಹಿಷಾಸುರಮರ್ದಿನಿ ದೇವಿ, ಉಚ್ಚಿಲ ಮಹಾಲಕ್ಷ್ಮೀ ದೇವಿಯು ಮೊಗವೀರರ ಕುಲಮಾತೆಯರು. ಉರ್ವ ಮಾರಿಕಾಂಬ, ಉಳ್ಳಾಲ ವ್ಯಾಘ್ರ ಚಾಮುಂಡೇಶ್ವರಿ ದೇವಸ್ಥಾನ ಈ ಸಮುದಾಯದವರಿಂದ ಪೂಜಿಸಲ್ಪಡುವ ಇನ್ನೆರಡು ಪ್ರಮುಖ ದೇವಾಲಯ ಎಂಬುವುದು ಉಲ್ಲೇಖನೀಯ.

Advertisement

ಕ್ಷೇತ್ರ ಪರಿಚಯ
ರಾಜ ಮಹಾರಾಜರ ಆಳ್ವಿಕೆಯ ಕಾಲದಲ್ಲಿ ರಾಜಧಾನಿಯಾಗಿ ಎಲ್ಲಾ ವೈಭವದಿಂದ ಮೆರೆದು ಇತಿಹಾಸ ಪುಟದಲ್ಲಿ ತನ್ನದೇ ಆದ ಅಧ್ಯಾಯ ಗಿಟ್ಟಿಸಿಕೊಂಡು ಬಾರಕೂರು ಸಂಸ್ಥಾನದ ಬೆಣ್ಣೆಕುದ್ರು ಮೊಗವೀರ ಸಮಾಜದ ಗುರುಪೀಠ ಮತ್ತು ಗುರುಪರಂಪರೆಗೆ ನಾಂದಿ ಹಾಡಿದ ಕ್ಷೇತ್ರವಾಗಿದೆ. ಹಿಂದೆ ಇದು ಪ್ರಮುಖ ಸೇನಾ ನೆಲೆಯಾಗಿದ್ದು ಇಲ್ಲಿ ವಾಸಿಸುತ್ತಿದ್ದ ಸೇನಾಧಿಪತಿಗಳು ತಮ್ಮ ರಕ್ಷಣೆಗಾಗಿ ವೀರಭದ್ರ ಸ್ವಾಮಿಯನ್ನು ಆರಾಧಿಸಿಕೊಂಡು ಬರುತ್ತಿದ್ದರು.

ವೀರಭದ್ರ ಸ್ವಾಮಿಯ ಸನ್ನಿಧಾನಕ್ಕೆ ಭಿಕ್ಷುಕಿಯ ರೂಪದ ಮುದುಕಿಯೊಬ್ಬಳ ಆಗಮನವಾದಾಗ ಕೆಲವೊಂದು ಪವಾಡ ಸದೃಶ ಘಟನೆಗಳು ಸಂಭವಿಸಿದವು. ಶಕ್ತಿ ಸಂಕೇತದಂತೆ ಗೋಚರಿಸಿದ ಸ್ತ್ರೀ ಶಕ್ತಿಯ ನಿಗೂಢತೆ ಅರಿಯಲು ಗುರುವೊಬ್ಬರ ಮೊರೆ ಹೋದಾಗ ಅವರು ತಮ್ಮ ದಿವ್ಯದೃಷ್ಠಿಯಿಂದ ಆ ಶಕ್ತಿಯನ್ನು ಮನಗೊಂಡರು. ಬಳಿಕ ಗುರುಗಳ ಮಾರ್ಗದರ್ಶನದಂತೆ ವೀರಭದ್ರ ಸ್ವಾಮಿಯ ಸಾನಿಧ್ಯದಲ್ಲೇ ಆ ಮಹಾ ಸ್ತ್ರೀ ಶಕ್ತಿಯನ್ನು ಪ್ರತಿಷ್ಠಾಪಿಸಲಾಯಿತು ಎಂದು ಐತಿಹ್ಯ ಲಭ್ಯವಿದೆ.

ಗುರು ಪರಂಪರೆ
ಸಾವಿರಾರು ವರ್ಷಗಳ ಹಿಂದೆ ಉತ್ತರ ಭಾಗದ (ಕಾರವಾರ- ಗೋವಾ ಪ್ರಾಂತ) 240 ಕಿ.ಮೀ. ದೂರದಿಂದ ಒಬ್ಬ ಮಹಿಳೆ ಕೆಲವೊಂದು ಪರಿವಾರ ದೈವಗಳ ಬಿಂಬಗಳೊಂದಿಗೆ ಸಹೋದರನ (ತಮ್ಮ) ಸಮೇತ ಬೆಣ್ಣೆಕುದ್ರುವಿಗೆ ಬಂದು ಈಗಾಗಲೇ ಶಕ್ತಿ ಸ್ವರೂಪಿತಳಾಗಿ ಪ್ರತಿಷ್ಠಾನೆಗೊಂಡಿದ್ದ ಮಹಾಸ್ತ್ರೀ ಅಮ್ಮನನ್ನು ಆರಾಧಿಸತೊಡಗಿದಳು. ಕ್ರಮೇಣ ಸಹೋದರಿಯ ಮರಣಾನಂತರ ಆ ಸಹೋದರ ಶ್ರೀ ದೇವಿ ಮತ್ತು ಪರಿವಾರ ದೈವಗಳ ಪೂಜಾ ಕೈಂಕರ್ಯ ಮುಂದುವರೆಸಿಕೊಂಡು ಹೋಗ ತೊಡಗಿದರು. ಹೀಗೆ ಉತ್ತರದಿಂದ ಬಂದ ಈ ಆಗಂತುಕ ಸಹೋದರಿ-ಸಹೋದರ ಮೊಗವೀರ ಸಮುದಾಯಕ್ಕೆ ಸೇರಿದವರಾದ್ದರಿಂದ ಶ್ರೀ ಮಹಾಸ್ತ್ರೀಯನ್ನು ಇಲ್ಲಿನ ಮೊಗವೀರ ಸಮುದಾಯದವರು ಕುಲಮಾತೆಯನ್ನಾಗಿ ಆರಾಧಿಸ ತೊಡಗಿದರು. ದೇವಿಯ ಪೂಜೆ ಮಾಡಿ ಅರ್ಚಕರಾಗಿ ಕಾರ್ಯ ನಿರ್ವಹಿಸಿದ್ದ “ಅಜ್ಜಮ್ಮ’ಳ ಸಹೋದರನನ್ನೇ ಕುಲಗುರುವಾಗಿ ಸ್ವೀಕರಿಸಲಾಗಿದೆ ಎಂಬುವುದನ್ನು ಅಷ್ಟಮಂಗಳ ಪ್ರಶ್ನೆಯಲ್ಲಿ ತಿಳಿದು ಬಂದಿದೆ. ಹೀಗೆ ಗುರು ಪೀಠ ಮತ್ತು ಗುರು ಪರಂಪರೆ ಪ್ರಾರಂಭವಾಯಿತು.

ಒಂಭತ್ತು ಗುರುಗಳ ಪ್ರತಿಮೆ
ದೇವಾಲಯದಲ್ಲಿ ಈವರೆಗೆ ಪ್ರಧಾನವಾಗಿ 9 ಮಂದಿ ಗುರುಗಳು ಪೂಜೆ ಮಾಡಿರುತ್ತಾರೆ ಎಂಬುವುದು ತಿಳಿದು ಬರುತ್ತದೆ. ಇದಕ್ಕೆ ಪೂರಕವಾಗಿ ಕ್ಷೇತ್ರದಲ್ಲಿ 9 ಗುರುಗಳ ಪ್ರತಿಮೆ ಕಾಣಬಹುದು. 24 ವರ್ಷದೊಳಗೆ ದೈವಾಧೀನರಾದ ಗುರುಗಳ ಪ್ರತಿಮೆ ಅನಾವರಣ ಮಾಡುವ ಪದ್ಧತಿ ಇಲ್ಲ ಎಂಬುವುದು ಕೆಲವು ಹಿರಿಯರ ಅನಿಸಿಕೆ.

Advertisement

ಮಂಗಳ ಪೂಜಾರ್ಯ ಎಂಬ ಸರ್‌ ನೇಮ್‌ ಒಂಭತ್ತು ಗುರುಗಳಲ್ಲಿ 5 ಮಂದಿಯ ಹೆಸರು ಮಾತ್ರ ಲಭ್ಯ. ಇವರ ಹೆಸರಿನ ಮುಂದೆ “ಮಂಗಲ ಪೂಜಾರ್ಯ’ ಎಂಬ ಸರ್‌ ನೇಮ್‌ ಇರುತ್ತದೆ. ಒಂದೊಂದು ವಿಮರ್ಶಾತ್ಮಕ ವಿಚಾರವೂ ಹೌದು. ಮೂಲ ಗುರುವಿನ ಹೆಸರು ಮಂಗಳ ಪೂಜಾರ್ಯ ಎಂಬುವುದಾಗಿ ಇದ್ದು ಇದೇ
ಹೆಸರು ಉಳಿದವರ ಸರ್‌ ನೇಮ್‌ ಆಗಿದೆ ಎಂಬ ಅಭಿಪ್ರಾಯವೂ ಇದೆ.

ಲಭ್ಯ ಹೆಸರುಗಳು ಈ ರೀತಿಯಾಗಿವೆ.1) ಲಿಂಗ ಮಂಗಳ ಪೂಜಾರ್ಯ,2) ಅಂತಯ್ಯ ಮಂಗಲ ಪೂಜಾರ್ಯ 3) ಕೃಷ್ಣ ಮಂಗಲ ಪೂಜಾರ್ಯ,4) ಅಣ್ಣಪ್ಪ ಮಂಗಳ ಪೂಜಾರ್ಯ,5) ಮಾಧವ ಮಂಗಳ ಪೂಜಾರ್ಯ. ಇವರಲ್ಲಿ ಮಾಧವ ಮಂಗಳ ಪೂಜಾರ್ಯ ಅವರು 9ನೇ ಮತ್ತು ಕೊನೆಯ ಕುಲಗುರುಗಳಾಗಿದ್ದು ಎಲ್ಲರೂ ಒಂದೇ ಕುಟುಂಬಕ್ಕೆ ಸೇರಿದವರಾಗಿದ್ದು, ಅಳಿಯ ಸಂತಾನ ಕಟ್ಟು ಕುಟುಂಬ ಪದ್ಧತಿಯಂತೆ ವಂಶಪಾರಂಪ ರ್ಯವಾಗಿ ಮಾವನಿಂದ ಅಳಿಯನಿಗೆ (ಸಹೋದರಳಿಯ) ಗುರುಸ್ಥಾನ ಲಭಿಸಿದೆ.

ದೇವಸ್ಥಾನದ ಸಮಗ್ರ ಜೀರ್ಣೋದ್ಧಾರವು ಆಡಳಿತ ಮಂಡಳಿಯ ಅಧ್ಯಕ್ಷರಾದ, ಉಡುಪಿಯ ಖ್ಯಾತ ಉದ್ಯಮಿಗಳಾದ ನಾಡೋಜ ಡಾ| ಜಿ. ಶಂಕರ್‌ ಅವರ ನೇತೃತ್ವದಲ್ಲಿ ಸುಮಾರು 1 ಕೋಟಿ ರೂ. ಗಳಿಗೂ ಅಧಿಕ ಮೊತ್ತದಿಂದ ಸುಂದರ ಗುರುಪೀಠ ಮತ್ತು ಧ್ಯಾನ ಮಂದಿರ, ಅಮೃತಶಿಲೆಯಲ್ಲಿ ಶ್ರೀಮಂಗಳ ಪೂಜಾರರ ಪ್ರತಿಮೆ ಸ್ಥಾಪನೆ ಈಗಾಗಲೇ ಲೋಕಾರ್ಪಣೆಯಾಗಿದೆ. ಹೀಗೆ ಅಭಿವೃದ್ಧಿ ಕಾಮಗಾರಿಗಳು ನಿರಂತರವಾಗಿ ಜರಗಿ ಧಾರ್ಮಿಕ ಕೇಂದ್ರದೊಂದಿಗೆ ಪ್ರೇಕ್ಷಣೀಯ ಸ್ಥಳವಾಗಿ ಗುರುತಿಸಿಕೊಂಡಿದೆ.ಸಂಕ್ರಮಣ , ವಾರ್ಷಿಕ ಉತ್ಸವ, ನವರಾತ್ರಿ ಪೂಜೆಗಳು ವಿಜೃಂಭಣೆಯಿಂದ ನಡೆಯುತ್ತಿದೆ.

ಆಧಾರ: ಮೊಗವೀರ ಸಿಂಚನ ಗ್ರಂಥ

Advertisement

Udayavani is now on Telegram. Click here to join our channel and stay updated with the latest news.

Next