Advertisement

ನಾಡಿನೆಲ್ಲೆಡೆ ಸಂಭ್ರಮದ ಮಹಾಶಿವರಾತ್ರಿ

10:52 PM Feb 21, 2020 | Team Udayavani |

ಉಡುಪಿ: ಮಹಾಶಿವರಾತ್ರಿ ಹಿಂದೂ ಸಂಸ್ಕೃತಿಯ ಪವಿತ್ರ ಹಬ್ಬಗಳಲ್ಲಿ ಒಂದು. ಹಗಲು ಉಪವಾಸವಿದ್ದು ರಾತ್ರಿ ವೇಳೆ ಜಾಗರಣೆ ಮಾಡಿ ಶಿವಧ್ಯಾನದ ಮೂಲಕ ಶಿವನ ಕೃಪೆಗೆ ಪಾತ್ರರಾಗುವ ಶುಭದಿನ. ಹಾಗೇ ಉಡುಪಿಯ ನಗರಾದ್ಯಂತ ಶುಕ್ರವಾರ ಬೆಳಗ್ಗಿನಿಂದಲೇ ಹಬ್ಬದ ವಾತಾವರಣ ಮನೆಮಾಡಿತ್ತು. ಉಡುಪಿ ರಥಬೀದಿಯ ಅನಂತೇಶ್ವರ, ಚಂದ್ರಮೌಳೀಶ್ವರ, ಬನ್ನಂಜೆ ಮಹಾಲಿಂಗೇಶ್ವರ, ಪರ್ಕಳ ಶ್ರೀ ಮಹಾಲಿಂಗೇಶ್ವರ, ಹೆರ್ಗ ತ್ರ್ಯಂಬಕೇಶ್ವರ , ಶಿವಪಾಡಿ ಉಮಾಮಹೇಶ್ವರ ದೇಗುಲ, ಸಗ್ರಿ ಚಕ್ರತೀರ್ಥ ಉಮಾಮಹೇಶ್ವರ, ಕಲ್ಯಾಣಪುರ ಮಡಿ ಮಲ್ಲಿಕಾರ್ಜುನ ಮೊದಲಾದ ದೇವಸ್ಥಾನಗಳಲ್ಲಿ ಬೆಳಗ್ಗಿನಿಂದಲೆ ಪೂಜಾ ಕೈಂಕರ್ಯಗಳು ಜರಗಿದವು.

Advertisement

ಮುಂಜಾನೆಯಿಂದಲ್ಲೇ ಭಕ್ತರು ಶ್ರದ್ಧಾ ಭಕ್ತಿಯಿಂದ ವಿವಿಧ ದೇವಸ್ಥಾನಗಳಿಗೆ ತೆರಳಿ ಬಿಲ್ವಪತ್ರೆ, ಎಳ್ಳೆಣ್ಣೆ ಸೇವೆ, ರುದ್ರಾಭಿಷೇಕ ಸೇರಿದಂತೆ ವಿವಿಧ ಸೇವೆಗಳನ್ನು ಸಲ್ಲಿಸಿ ಶಿವದರ್ಶನ ಪಡೆದು ಪುನೀತರಾದರು. ಬಗೆ ಬಗೆಯ ಹೂವಿನಿಂದ ಅಲಂಕಾರಗೊಂಡಿದ್ದ ದೇಗುಲಗಳು ಭಕ್ತರ ಗಮನ ಸೆಳೆದವು.

ಶ್ರೀ ಅನಂತೇಶ್ವರ, ಚಂದ್ರಮೌಳೀಶ್ವರ
ಅನಂತೇಶ್ವರ ಚಂದ್ರಮೌಳೀಶ್ವರ ದೇಗುಲದಲ್ಲಿ ಫೆ. 20ರಿಂದ ಫೆ. 27ರ ವರೆಗೆ ಶಿವರಾತ್ರಿ ಮಹೋತ್ಸವ ಹಾಗೂ ವಾರ್ಷಿಕ ರಥೋತ್ಸವ ಕಾರ್ಯಕ್ರಮ ನಡೆಯುತ್ತಿದ್ದು, ಶುಕ್ರವಾರ ಮಹಾ ಶಿವರಾತ್ರಿಯಂದು ಧ್ವಜಾರೋಹಣ, ಕಲಶಾಭಿಷೇಕ, ಮಧ್ಯಾಹ್ನ ಮಹಾಪೂಜೆ, ಪ್ರಧಾನ ಹೋಮ, ಭಜನೆ, ಧಾರ್ಮಿಕ ಪ್ರವಚನ, ವೀಣಾವಾದನ, ಸ್ಯಾಕ್ಸೋಫೋನ್‌ ವಾದನ, ಭರತನಾಟ್ಯ, ಯಕ್ಷಗಾನ ಮೊದಲಾದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

ಪರ್ಕಳ ಮಹಾಲಿಂಗೇಶ್ವರ ಮಹಾಗಣಪತಿ
ಪರ್ಕಳ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇಗುಲದಲ್ಲಿ ಸಾಮೂಹಿಕ ಶತರುದ್ರಾಭಿಷೇಕ, ಗಣಪತಿ ಸನ್ನಿಧಿಯಲ್ಲಿ 1008 ಕಾಯಿ ಮೂಡು ಗಣಪತಿ ಸೇವೆ, 40ನೇ ವರ್ಷದ ಭಜನ ಮಂಗಲೋತ್ಸವ ರಂಗಪೂಜೆ ಕಾರ್ಯಕ್ರಮಗಳು ನಡೆದವು.

ಸಗ್ರಿ ಉಮಾಮಹೇಶ್ವರ
ಕಾನನದ ಮಧ್ಯೆ ನೆಲೆನಿಂತ ಪುರಾತನ ದೇಗುಲ, ಉದ್ಭವ ಲಿಂಗ ರೂಪದಲ್ಲಿರುವ ಸಗ್ರಿ ಉಮಾಮಹೇಶ್ವರ ದೇವಸ್ಥಾನದಲ್ಲಿ ಸಂಭ್ರಮದಿಂದ ಶಿವರಾತ್ರಿ ಆಚರಣೆ ನಡೆಯಿತು. ಪಂಚಾಮೃತಾಭಿಷೇಕ, ಬಿಲ್ವಾರ್ಚನೆ ಮೊದಲಾದ ಧಾರ್ಮಿಕ ಹಾಗೂ ಭಜನೆ ಕಾರ್ಯಕ್ರಮಗಳು ನಡೆದವು.

Advertisement

ಬನ್ನಂಜೆ ಮಹಾಲಿಂಗೇಶ್ವರ
ಶಿವರಾತ್ರಿ ಪ್ರಯುಕ್ತ ಅರ್ಘ್ಯಪ್ರದಾನ, ಉತ್ಸವ ಬಲಿ, ರಥೋತ್ಸವ, ಮಹಾರಂಗಪೂಜೆ, ಯಕ್ಷಗಾನ ಮೊದಲಾದ ಕಾರ್ಯಕ್ರಮಗಳು ನಡೆದವು. ಮುಂಜಾನೆಯಿಂದಲೆ ಶ್ರದ್ಧಾ ಭಕ್ತಿಯಿಂದ ಸಹಸ್ರಾರು ಭಕ್ತರು ದೇಗುಲಕ್ಕೆ ಭೇಟಿ ನೀಡಿ ಸೇವಾ ಕೈಂಕರ್ಯದಲ್ಲಿ ತೊಡಗಿ ಕೊಂಡರು. ಶನಿವಾರ ಮಧ್ಯಾಹ್ನ ಅನ್ನಸಂತರ್ಪಣೆ ಜರಗಲಿದೆ.

ಹೆರ್ಗ ತ್ರ್ಯಂಬಕೇಶ್ವರ
ತ್ರ್ಯಂಬಕೇಶ್ವರ ದೇಗುಲದಲ್ಲಿ ನವಕ ಪ್ರಧಾನ ಹೋಮ, ಸಾಮೂಹಿಕ ಶತರುದ್ರಾಭಿಷೇಕ, ಭಜನೆ ಹಾಗೂ ರಂಗಪೂಜೆಗಳು ನಡೆದವು. ನೂರಾರು ಭಕ್ತರು ಧಾರ್ಮಿಕ ಕಾರ್ಯಕ್ರಮ ಗಳಲ್ಲಿ ಪಾಲ್ಗೊಂಡರು.

ಶಿವಪಾಡಿ ಉಮಾಮಹೇಶ್ವರ
ಮಣಿಪಾಲ ಶಿವಪಾಡಿ ಶ್ರೀಉಮಾಮಹೇಶ್ವರ ದೇಗುಲದಲ್ಲಿ ರುದ್ರಾಭಿಷೇಕ, ವಿಶೇಷ ಪೂಜೆ, ಪಂಚಾಮೃತಾಭಿಷೇಕ, ಸಹಸ್ರ ಬಿಲ್ವಾರ್ಚನೆ, ಮಹಾ ರಂಗಪೂಜಾದಿಗಳು ನಡೆದವು.

ಮಡಿ ಮಲ್ಲಿಕಾರ್ಜುನ ದೇಗುಲ
ಕಲ್ಯಾಣಪುರ ಸಮೀಪದ ನಯಂಪಳ್ಳಿ ಮಡಿ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ವರ್ಷಂಪ್ರತಿ ಮಹಾಶಿವರಾತ್ರಿಯನ್ನು ವಿಜೃಂಭಣೆಯಿಂದ ಆಚರಿಸಿಕೊಂಡು ಬರಲಾಗುತ್ತಿದ್ದು ಈ ಬಾರಿ 52ನೇ ವರ್ಷದ ಭಜನಾ ಮಂಗಲೋತ್ಸವದ ಪ್ರಯುಕ್ತ ಶುಕ್ರವಾರ ಸೂರ್ಯೋದಯದಿಂದ ಮರು ದಿನ ಸೂರ್ಯೋದಯದವರೆಗೆ ಅಖಂಡ ಭಜನೆ ಸಂಪನ್ನಗೊಂಡಿತು. ಪುರಾತನವಾದ ಈ ದೇಗುಲಕ್ಕೆ ಅಸಂಖ್ಯ ಭಕ್ತರು ಭೇಟಿ ನೀಡಿ ಪ್ರಸಾದ ಸ್ವೀಕರಿಸಿದರು. ಶನಿವಾರ ಮಧ್ಯಾಹ್ನ ಅನ್ನಸಂತರ್ಪಣೆ ಜರಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next