ಬಾಗಲಕೋಟೆ: ಬಂಜಾರಾ ಸಮುದಾಯದ ಕುಲಗುರು, ಸಂತ ಸೇವಾಲಾಲರ 283ನೇ ಜಯಂತಿಯನ್ನು ಫೆ.15ರಂದು ಜಿಲ್ಲೆಯ ಪ್ರತಿಯೊಂದು ತಾಂಡಾಗಳಲ್ಲಿ ಭಕ್ತಭಾವದಿಂದ ಆಚರಿಸಬೇಕು ಎಂದು ಜಿ.ಪಂ. ಮಾಜಿ ಅಧ್ಯಕ್ಷ ಹೂವಪ್ಪ ರಾಠೊಡ ಮನವಿ ಮಾಡಿದರು.
ಸೇವಾಲಾಲ ಜಯಂತಿ ಅಂಗವಾಗಿ ಜಿಲ್ಲಾಡಳಿತದಿಂದ ನಡೆದ ಪೂರ್ವಭಾವಿ ಸಭೆಯ ಬಳಿಕ ಸಮಾಜದ ಪ್ರಮುಖರ ಸಭೆಯಲ್ಲಿ ಅವರು ಮಾತನಾಡಿದರು.
ಜಿಲ್ಲೆಯ 9 ತಾಲೂಕು ವ್ಯಾಪ್ತಿಯಲ್ಲಿ 47 ತಾಂಡಾಗಳಿವೆ. ಎಲ್ಲಾ ತಾಂಡಾಗಳಲ್ಲೂ ಸಂತ ಸೇವಾಲಾಲ ಹಾಗೂ ವಿವಿಧ ಮಠ-ಮಂದಿರಗಳಿವೆ. ಸಮಾಜ ಬಾಂಧವರು ಈ ದೇವಾಲಯ, ಮಠಗಳಿಗೆ ಸುಣ್ಣ-ಬಣ್ಣ ಬಳಿದು ಗೋ ಮಾತೆಯ ಅಮೃತದಿಂದ ದೇವಸ್ಥಾನ ಮಡಿ ಮಾಡಬೇಕು. ಬಳಿಕ ದೇವಾಲಾಲ ಮಹಾರಾಜರ ಜಯಂತಿಗೆ ಎಲ್ಲ ರೀತಿಯ ಸಿದ್ಧತೆ ಮಾಡಿಕೊಳ್ಳಲು ಹಿರಿಯ ನಾಯಕ, ಕಾರಭಾರಿಗಳು ಸನ್ನದ್ಧರಾಗಬೇಕು ಎಂದು ಮನವಿ ಮಾಡಿದರು.
ರಾಜ್ಯದಲ್ಲಿ ಕೊರೊನಾ 3ನೇ ಅಲೆ ಹಾಗೂ ಓಮಿಕ್ರಾನ್ ವೈರಸ್ ಹರಡುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರದ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲನೆ ಮಾಡಬೇಕು. ಸಮಾಜ ಬಾಂಧವರು ಭಕ್ತಿಯಿಂದ ಪೂಜಿಸುವ ಜಗನ್ಮಾತೆ ಮರಿಯಮ್ಮ ಹಾಗೂ ಜಗದ್ಗುರು ಸಂತ ಸೇವಾಲಾಲರ ಆಶೀರ್ವಾದದಿಂದ ರಾಜ್ಯ ಹಾಗೂ ಜಿಲ್ಲೆಗೆ ಕೊರೊನಾ 3ನೇ ಅಲೆಯ ತೊಂದರೆ ತೀವ್ರವಾಗಿಲ್ಲ.
ಆದರೂ ಮುಂಜಾಗೃತೆ ವಹಿಸಿ, ಪ್ರತಿ ತಾಂಡಾದಲ್ಲಿ ಸಾಂಕ್ರಾಮಿಕ ರೋಗ ದೂರ ಮಾಡಲು ಪೂಜೆ, ಪುನಸ್ಕಾರ ನಡೆಸಬೇಕು. ಜತೆಗೆ ಪ್ರತಿಯೊಬ್ಬರೂ ಸಮಾನತೆಗಾಗಿ, ಶಾಂತಿಗಾಗಿ, ಉತ್ತಮ ಬೆಳೆ, ಆರ್ಥಿಕ ವೃದ್ಧಿ, ಸಾಮಾಜಿಕ ಉನ್ನತ, ಆರೋಗ್ಯಭಾಗ್ಯ, ಶೈಕ್ಷಣಿಕ ಏಳ್ಗೆಗಾಗಿ ಪ್ರಾರ್ಥಿಸಬೇಕು ಎಂದು ಕೋರಿದರು.
ಜಿ.ಪಂ. ಸಭಾ ಭವನದಲ್ಲಿ ಜಿಲ್ಲಾಡಳಿತದ ಸಹಯೋಗದಿಂದ ಸಂತ ಸೇವಾಲಾಲ ಜಯಂತಿ ನಡೆಯಲಿದ್ದು, ಜಿಲ್ಲೆಯ ಪ್ರತಿಯೊಬ್ಬ ಸಮಾಜ ಬಾಂಧವರು ಭಾಗವಹಿಸಬೇಕು ಎಂದೂ ಮನವಿ ಮಾಡಿದರು.
ಶಿರೂರ-ನೀಲಾನಗರದ ಕುಮಾರ ಮಹಾರಾಜ, ಕೃಷ್ಣಪ್ಪ ಲಮಾಣಿ, ಸಮಾಜದ ಪ್ರಮುಖರಾದ ಬಲರಾಮ ನಾಯಕ, ರಾಜು ನಾಯಕ, ರಮೇಶ ನಾಯಕ, ಲಿಂಗರಾಜ ನಾಯಕ, ಸೇವಾಲಾಲ ಮಾಲಾಧಾರಿಗಳಾದ ಅನಿಲ ಕಾರಬಾರಿ, ಸುರೇಶ ನಾಯಕ ಮುಂತಾದವರು ಪಾಲ್ಗೊಂಡಿದ್ದರು.
ಕೊರೊನಾ ಹಿನ್ನೆಲೆಯಲ್ಲಿ ಕಳೆದೆರಡು ವರ್ಷದಿಂದ ಸೇವಾಲಾಲ ಮಹಾರಾಜರ ಜಯಂತಿಯನ್ನು ಸರಳವಾಗಿ ಆಚರಿಸಲಾಗಿದೆ. ಈ ವರ್ಷವೂ ಸರ್ಕಾರದ ನಿಯಮಾವಳಿ ಪ್ರಕಾರ, ಜಿಲ್ಲೆಯಾದ್ಯಂತ ಫೆ. 15ರಂದು ಜಯಂತಿ ಭಕ್ತಿ-ಭಾವ ಹಾಗೂ ಸಡಗರದಿಂದ ಆಚರಿಸಬೇಕು. ಇದಕ್ಕಾಗಿ ಪ್ರತಿಯೊಂದು ತಾಂಡಾದ ದೇವಸ್ಥಾನಗಳನ್ನು ಸುಣ್ಣ-ಬಣ್ಣದಿಂದ ಸ್ವತ್ಛಗೊಳಿಸಿ, ಗೋಮಾತೆಯ ಅಮೃತದಿಂದ ಶುಚಿ ಮಾಡಬೇಕು.
ಹೂವಪ್ಪ ರಾಠೊಡ,
ಜಿಪಂ. ಮಾಜಿ ಅಧ್ಯಕ್ಷ