ಬೀದರ: ಗಣೇಶೋತ್ಸವ ಆಚರಣೆಗೆ ಸಂಬಂಧಿಸಿದಂತೆ ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ಆದೇಶ ಹೊರಡಿಸಿ ತಿಳಿಸಿದ ಮಾರ್ಗಸೂಚಿಯಂತೆ ಜಿಲ್ಲೆಯಲ್ಲಿ ಗಣೇಶೋತ್ಸವ ಆಚರಣೆಗೆ ಸಹಕರಿಸಬೇಕು ಎಂದು ಜಿಲ್ಲಾಧಿಕಾರಿ ರಾಮಚಂದ್ರನ್ ಆರ್. ಅವರು ತಿಳಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ಜಿಲ್ಲೆಯ ಗಣೇಶೋತ್ಸವ ಮಂಡಳದ ಪದಾಧಿಕಾರಿಗಳೊಂದಿಗೆ ಸಭೆ ನಡೆಸಿ ಮಾತನಾಡಿದ ಅವರು, ರಾಜ್ಯದಲ್ಲಿ ಈಗ ಕೋವಿಡ್-19 ಸೋಂಕು ಹರಡುತ್ತಿರುವುದರಿಂದ ಗಣೇಶೋತ್ಸವವನ್ನು ಸರಳ ರೀತಿಯಲ್ಲಿ ಭರ್ಕಿ ಪೂರ್ವಕವಾಗಿ ಆಚರಿಸಬೇಕು. ಎಂದು ಜನರಲ್ಲಿ ಮನವಿ ಮಾಡಿದರು.
ನಮ್ಮ ಮುಂದಿನ ಪೀಳಿಗೆಗೆ ಸುರಕ್ಷಿತ ಪರಿಸರ ಕಲ್ಪಿಸಿಕೊಡುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಆದ್ದರಿಂದ ಗಣೇಶೋತ್ಸವ ಆಚರಣೆ ವೇಳೆ ಸುರಕ್ಷತೆಗೆ ಸಾಕಷ್ಟು ಒತ್ತು ಕೊಡಬೇಕು ಎಂದು ತಿಳಿಸಿದ ಡಿಸಿ, ಇದಕ್ಕೆ ಸಂಬಂಧಿಸಿದಂತೆ ಜೆಸ್ಕಾಂ ಹಾಗೂ ಅಗ್ನಿಶಾಮಕ ಅಧಿಕಾರಿಗಳಿಗೆ ಮಾರ್ಗಸೂಚಿ ಪಾಲನೆಗೆ ಸೂಚಿಸಲಾಗುವುದು ಎಂದರು. ಹಬ್ಬ ಆಚರಣೆ ವೇಳೆ ಗುಂಪು ಸೇರಿದರೆ ಒಬ್ಬರಿಂದ ಎಲ್ಲರಿಗೂ ಈ ಮಹಾಮಾರಿ ಕೋರೊನಾ ವೈರಸ್ ಹರಡುತ್ತದೆ ಎಂಬುದನ್ನು ಎಲ್ಲರೂ ಅರಿಯಬೇಕು. ಸಾಮಾಜಿಕ ಅಂತರ ಪಾಲನೆ ಮಾಡಬೇಕು ಎಂದು ಸೂಚಿಸಿದರು.
ಎಸ್‌ಪಿ ನಾಗೇಶ ಡಿ.ಎಲ್. ಮಾತನಾಡಿ, ಕೋವಿಡ್ ಪ್ರಕರಣಗಳು ದಿನೇ ದಿನೇ ಹೆಚ್ಚುತ್ತಿರುವುದರಿಂದ ಸಾರ್ವಜನಿಕರ ಆರೋಗ್ಯ ಹಿತದೃಷ್ಟಿಯಿಂದ ಹೆಚ್ಚಿನ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಬೇಕಾದ ಅನಿವಾರ್ಯತೆ ಇರುವುದರಿಂದ, ಸರಳ ಆಚರಣೆ ನಡೆಸಿ ಸಹಕರಿಸಲು ಮನವಿ ಮಾಡಿದರು. ಮಾರ್ಗಸೂಚಿ ಅನುಸಾರ ಗಣೇಶೋತ್ಸವ ಆಚರಣೆಗೆ ಸಹಕರಿಸುವುದಾಗಿ ಗಣೇಶ ಮಹಾಮಂಡಳದ ಅಧ್ಯಕ್ಷ ಚಂದ್ರಶೇಖರ ಪಾಟೀಲ, ಪ್ರಧಾನ ಕಾರ್ಯದರ್ಶಿ ಬಾಬು ವಾಲಿ, ಪದಾಧಿಕಾರಿಗಳಾದ ಸೂರ್ಯಕಾಂತ ಶೆಟಕಾರ, ರಜನೀಶ ವಾಲಿ, ವೀರಶೆಟ್ಟಿ, ವೆಂಕಟೇಶ ಮೋರ್ಕಂಡಿ ತಿಳಿಸಿದರು.
ದೊಡ್ಡ ದೊಡ್ಡ ಗಾತ್ರದ ಗಣೇಶ ಮೂರ್ತಿಗಳು ಹೈದ್ರಾಬಾದ್ ಮತ್ತು ಇನ್ನಿತರ ಕಡೆಗಳಿಂದ ಬೀದರಗೆ ಬರುವುದನ್ನು ಜಿಲ್ಲಾಡಳಿತ ಬ್ಯಾನ್ ಮಾಡಬೇಕು. ಇನ್ನುಳಿದ ಎಲ್ಲ ನಿಯಮಗಳ ಪಾಲನೆಗೆ ಕ್ರಮವಹಿಸಬೇಕು. ಸರ್ಕಾರದ ಮಾರ್ಗಸೂಚಿಯಂತೆ ಚಿಕ್ಕ ಚಿಕ್ಕ ಮಣ್ಣಿನ ಗಣಪತಿ ಪ್ರತಿಷ್ಠಾಪನೆಗೆ ಅವಕಾಶ ಮಾಡಿದರೆ ಮುಂದಿನ ವರ್ಷದಿಂದ ಜನರು ಇದೇ ನಿಯಮ ಪಾಲನೆ ಮಾಡುವುದರಿಂದ ಪರಿಸರಕ್ಕೆ ಅನುಕೂಲವಾಗಲಿದೆ ಎಂದು ಮಹಾಮಂಡಳದ ಎಲ್ಲ ಸದಸ್ಯರು ಜಿಲ್ಲಾಧಿಕಾರಿಗಳಲ್ಲಿ ಮನವಿ ಮಾಡಿದರು.
ಧರ್ಮದ ವಿರುದ್ಧ ಮಾಡಿರುವ ಮಾರ್ಗಸೂಚಿ ಎಂದು ಯಾರೂ ಕೂಡ ತಪ್ಪಾಗಿ ಭಾವಿಸದೇ, ನಮ್ಮೆಲ್ಲರ ಆರೋಗ್ಯ ಹಿತದೃಷ್ಟಿಯಿಂದ ಮಾಡಿದ ಮಾರ್ಗಸೂಚಿ ಎಂದು ತಿಳಿದು ಸಾರ್ವಜನಿಕರು ಸಹಕರಿಸಬೇಕು.
-ಆರ್. ರಾಮಚಂದ್ರನ್, ಜಿಲ್ಲಾಧಿಕಾರಿ