Advertisement
ಪ್ರತಿ ಶುಕ್ರವಾರ ಖಾದಿ ದಿನ ಆಚರಿಸುತ್ತಿರುವ ಗ್ರಾಮೀಣಾಭಿವೃದ್ಧಿ ವಿವಿಯಲ್ಲಿ ಆ ದಿನ ಕುಲಪತಿಯಿಂದ ವಿದ್ಯಾರ್ಥಿಗಳವರೆಗೆ ಎಲ್ಲರೂ ಖಾದಿ ವಸ್ತ್ರ ಬಳಸುವ ಮೂಲಕ ದೇಸಿಯತೆ ಸೊಗಡು ಮೂಡುವಂತೆ ಮಾಡುತ್ತಿದೆ. ಇದೀಗ ಮತ್ತೂಂದು ಹೆಜ್ಜೆ ಮುಂದೆ ಇರಿಸಿದ್ದು, ಪ್ರತಿ ಮಂಗಳವಾರ ಸಿರಿಧಾನ್ಯ ದಿನವಾಗಿ ಪರಿಗಣಿಸಿ, ಸಿರಿಧಾನ್ಯಗಳಿಂದ ತಯಾರಿಸಿದ ಉಪಹಾರ, ಆಹಾರ ಸೇವಿಸಲಾಗುತ್ತದೆ. ಕುಲಪತಿ ಪ್ರೊ|ವಿಷ್ಣುಕಾಂತ ಚಟಪಲ್ಲಿ ಚಿಂತನೆ, ಪ್ರೇರಣೆಯೊಂದಿಗೆ ಇಂತಹ ಮಹತ್ವದ ಕಾರ್ಯಕ್ಕೆ ವಿವಿ ಮುಂದಾಗಿದ್ದು, ವಿವಿ ಅಧಿಕಾರಿಗಳು, ಪ್ರಾಧ್ಯಾಪಕರು, ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಮಹತ್ವದ ಸಾಥ್ ನೀಡುತ್ತಿದ್ದಾರೆ.
Related Articles
Advertisement
ಮಂಗಳವಾರ ಸಿರಿಧಾನ್ಯಮಯ: ಗದಗಿನ ಗ್ರಾಮೀಣಾಭಿವೃದ್ಧಿ ವಿಶ್ವವಿದ್ಯಾಲಯ ಪ್ರತಿ ಮಂಗಳವಾರ ಸಿರಿಧಾನ್ಯ ದಿನವಾಗಿ ಆಚರಿಸುತ್ತಿದ್ದು, ಆ ದಿನದಂದು ಇಡೀ ವಿವಿ ಆವರಣ ಸಿರಿಧಾನ್ಯ ಕಂಪು ಬೀರುತ್ತದೆ. ಸಿರಿಧಾನ್ಯ ಮಹತ್ವ-ಮೌಲ್ಯವನ್ನು ಇತರರಿಗೆ ಹೇಳುವ ಮೊದಲು ತಾನು ಸಿರಿಧಾನ್ಯಗಳ ಉತ್ಪನ್ನ, ಮೌಲ್ಯವರ್ಧನೆ ಯತ್ನ, ಬಳಕೆ ಕೈಗೊಳ್ಳಬೇಕು ಎಂಬ ಉದ್ದೇಶದೊಂದಿಗೆ ಮಹತ್ವದ ಹೆಜ್ಜೆಗಳನ್ನು ಇರಿಸಿದೆ. ವಿವಿ ವ್ಯಾಪ್ತಿಯ ಜಮೀನಿನಲ್ಲಿ ನವಣೆ, ಹಾರಕ, ಊದಲು, ಬರುಗು, ಸಾಮೆ, ಕೊರಲೆ, ರಾಗಿ ಇನ್ನಿತರ ಸಿರಿಧಾನ್ಯಗಳನ್ನು ಪ್ರಯೋಗಾರ್ಥವಾಗಿ ಬೆಳೆದಿದೆ.
ಸಾವಯವ ಪದ್ಧತಿಯಲ್ಲಿಯೇ ಬೆಳೆದ ಸಿರಿಧಾನ್ಯಗಳ ಫಸಲು ಬಂದಿದ್ದು, ಅವುಗಳ ಮೌಲ್ಯವರ್ಧನೆಗೂ ಮುಂದಾಗಿದೆ. ಸಿರಿಧಾನ್ಯಗಳ ಬೆಳೆ, ಮೌಲ್ಯವರ್ಧನೆ ಮೂಲಕ ರೈತರಿಗೆ ಅದನ್ನು ಮನವರಿಕೆ ಮಾಡುವ ಕಾರ್ಯಕ್ಕೆ ವಿವಿ ಮುಂದಾಗಿದೆ. ಕೇವಲ ಸಿರಿಧಾನ್ಯ ಬೆಳೆಯಿರಿ ಎಂದು ಹೇಳಿದರೆ ಸಾಲದು, ಬೆಳೆದ ಉತ್ಪನ್ನವನ್ನು ಬಳಕೆ ಮಾಡದಿದ್ದರೂ ಪ್ರಯೋಜವಿಲ್ಲ ಎಂದು ಅರಿತಿರುವ ವಿವಿ ಮೊದಲು ತಾನು ಇವುಗಳನ್ನು ಕೈಗೊಳ್ಳುವ ಮೂಲಕ ಮಾದರಿಯಾಗಬೇಕು ಅನಂತರ ಬೋಧನೆಗೆ ಮುಂದಾಗಬೇಕು ಎಂಬ ನಿಲುವು ತಾಳಿದೆ.
ಸಿರಿ ಧಾನ್ಯಗಳ ಉಪಹಾರ: ಪ್ರತಿ ಮಂಗಳವಾರ ಗ್ರಾಮೀಣಾಭಿವೃದ್ಧಿ ವಿಶ್ವವಿದ್ಯಾಲಯದ ಕುಲಪತಿ ಅವರಿಂದ ಹಿಡಿದು ವಿದ್ಯಾರ್ಥಿಗಳವರೆಗೆ ಬಹುತೇಕರು ಅಂದು ಬೆಳಗಿನ ಉಪಹಾರ, ಮಧ್ಯಾಹ್ನ-ರಾತ್ರಿಯ ಊಟಕ್ಕೆ ಸಿರಿಧಾನ್ಯಗಳಿಂದ ಮಾಡಿದ್ದನ್ನು ಸೇವಿಸುತ್ತಾರೆ. ಮಂಗಳವಾರ ವಿವಿಯ ವಿದ್ಯಾರ್ಥಿಗಳು, ವಿದ್ಯಾರ್ಥಿನಿಯರ ಹಾಸ್ಟೆಲ್ ಗಳು, ವಿವಿ ಆವರಣದಲ್ಲಿನ ಕ್ಯಾಂಟಿನ್, ವಿವಿ ಅಧಿಕಾರಿಗಳು, ಸಿಬ್ಬಂದಿ ಕುಟುಂಬಗಳಲ್ಲಿಯೂ ಆ ದಿನ ಸಿರಿಧಾನ್ಯಗಳನ್ನು ಬಳಸಿಯೇ ಉಪಹಾರ, ಊಟ ತಯಾರಿಸಲಾಗುತ್ತದೆ.
ಪ್ರತಿ ಮಂಗಳವಾರ ಸಿರಿಧಾನ್ಯ ದಿನವಾಗಿ ಆಚರಿಸುವ ವಿಚಾರದಲ್ಲಿ ವಿವಿ ಕಡ್ಡಾಯ ಎಂಬಂತೆ ಕಟ್ಟಪ್ಪಣೆ ಮಾಡದಿದ್ದರೂ ಆರೋಗ್ಯ, ಉತ್ತಮ ಆಹಾರ ದೃಷ್ಟಿಯಿಂದ ಮಾನಸಿಕವಾಗಿಯೇ ವಿವಿ ಸಿಬ್ಬಂದಿ, ವಿದ್ಯಾರ್ಥಿಗಳು ಒಂದು ದಿನದ ಮಟ್ಟಿಗೆ ಸಿರಿಧಾನ್ಯಗಳನ್ನು ಬಳಸಿಕೊಂಡು ಉಪಹಾರ-ಊಟ ಸೇವನೆಗೆ ಮುಂದಾಗಿರುವುದು ಪ್ರೇರಕ ಹಾಗೂ ಮಾದರಿ ಕಾರ್ಯವಾಗಿದೆ. ವಿದ್ಯಾರ್ಥಿಗಳ ಮಂಗಳವಾರದ ಊಟದ ಮೆನುವಿನಲ್ಲಿ ಸಿರಿಧಾನ್ಯಗಳನ್ನು ಬಳಸಿ ಮಾಡಿದ ಇಡ್ಲಿ, ದೋಸೆ, ಉಪ್ಪಿಟ್ಟು, ಬಿಸಿ ಬೇಳೆಬಾತ್, ಪೊಂಗಲ್ ಇನ್ನಿತರ ಪದಾರ್ಥಗಳನ್ನು ನೀಡಲು ಯೋಜಿಸಲಾಗಿದ್ದು, ಸಿರಿಧಾನ್ಯಗಳನ್ನೇ ಬಳಸಿಕೊಂಡು ಇನ್ನಷ್ಟು ತಿನಿಸು, ಪದಾರ್ಥಗಳನ್ನು ತಯಾರಿಸಲು ಸಹ ಚಿಂತಿಸಲಾಗಿದೆ.
ಸಿರಿಧಾನ್ಯಗಳು ಕೇವಲ ಬರನಿರೋಧಕ ಬೆಳೆಗಳಲ್ಲದೆ, ಆರೋಗ್ಯ ದೃಷ್ಟಿಯಿಂದ ಸಮೃದ್ಧತೆಯನ್ನು ಹೊಂದಿವೆ. ಸಿರಿಧಾನ್ಯಗಳು ಶೇ.7-12ರಷ್ಟು ಪ್ರೊಟೀನ್, ಶೇ.2ರಷ್ಟು ಕೊಬ್ಬು, ಶೆ.65-75ರಷ್ಟು ಕಾರ್ಬೋಹೈಡ್ರೈಟ್, ಶೇ.10-15ರಷ್ಟು ಫೈಬರ್ ಹೊಂದಿದ್ದು, ಆರೋಗ್ಯ ದೃಷ್ಟಿಯಿಂದ ಅತ್ಯುತ್ತಮ ಆಹಾರ ಧಾನ್ಯಗಳಾಗಿದ್ದು, ಇದನ್ನು ಮನವರಿಕೆ ಮಾಡಿಕೊಡುವ ಕಾರ್ಯವನ್ನು ವಿವಿ ಮಾಡಲಿದೆ ಎಂಬುದು ಸಿರಿಧಾನ್ಯಗಳ ಬೆಳೆ, ಮೌಲ್ಯವರ್ಧನೆ ಕಾಯಕದಲ್ಲಿ ತಮ್ಮದೇ ಶ್ರಮ ಹಾಕುತ್ತಿರುವ ಗ್ರಾಮೀಣ ವಿವಿಯ ಡಾ. ರಂಗಪ್ಪ, ಡಾ. ದೀಪಾ ಪಾಟೀಲ ಅವರ ಅನಿಸಿಕೆಯಾಗಿದೆ.
ಸಿರಿ ಧಾನ್ಯ ಬೆಳೆ ಜಮೀನು ವಿಸ್ತರಿಸಲು ಉತ್ತೇಜನ
ವಿಶ್ವವಿದ್ಯಾಲಯದ ಈ ಯತ್ನ ಸಿರಿಧಾನ್ಯಗಳ ಬಳಕೆ ಹೆಚ್ಚಳದ ಜತೆಗೆ ರೈತರಲ್ಲಿ ಸಿರಿಧಾನ್ಯ ಬೆಳೆಯುವ ಇದ್ದ ಬೆಳೆಯ ಜಮೀನು ವಿಸ್ತರಿಸುವ ಉತ್ತೇಜನ ನೀಡುತ್ತದೆ. ಭತ್ತ, ಗೋಧಿಯ ಮೇಲಿನ ಅವಲಂಬನೆ ಕುಗ್ಗಿಸಲು, ಭೂಮಿಗೆ ಮಿತಿಮೀರಿದ ನೀರುಣಿಸುವ, ಅಗತ್ಯಕ್ಕಿಂತ ಹೆಚ್ಚಿನ ರಸಗೊಬ್ಬರ, ಕ್ರಿಮಿನಾಶಕ ಬಳಕೆಯನ್ನು ತಪ್ಪಿಸಿ, ಭೂತಾಯಿ ಒಡಿಲನ್ನು ವಿಷಮುಕ್ತವಾಗಿಸಲು ತನ್ನದೇ ಕೊಡುಗೆ ನೀಡಲಿದೆ ಸಿರಿ ಧಾನ್ಯಗಳು ನಮ್ಮ ಪೂರ್ವಜರ ಪ್ರಮುಖ ಆಹಾರ ಧಾನ್ಯಗಳಾಗಿದ್ದವು. ಬದಲಾದ ಜೀವನ ಶೈಲಿ, ಪಿಜ್ಜಾ-ಬರ್ಗರ್ ಮಾಯೆ, ಪಾಶ್ಚಾತ್ಯ ಆಹಾರ ಸಂಸ್ಕೃತಿ, ಭತ್ತ, ಗೋಧಿ ಅಬ್ಬರದಿಂದಾಗಿ ಸಿರಿಧಾನ್ಯಗಳು ಮೌನಕ್ಕೆ ಜಾರುವಂತಾಗಿದ್ದವು.
ಸಿರಿಧಾನ್ಯಗಳು ಆರೋಗ್ಯಕ್ಕೆ ಪೂರಕವಾಗಿವೆ ಇದರ ಮನವರಿಕೆಗಾಗಿ ವಿವಿ ಮಹತ್ವದ ಪ್ರಯೋಗಕ್ಕೆ ಮುಂದಾಗಿದ್ದು, ಅದರ ಭಾಗವಾಗಿ ಪ್ರತಿ ಮಂಗಳವಾರ ಸಿರಿಧಾನ್ಯ ದಿನವಾಗಿ ಆಚರಿಸುತ್ತಿದ್ದು, ಇಡೀ ಕ್ಯಾಂಪಸ್ ಅಷ್ಟೇ ಅಲ್ಲ, ವಿವಿ ಸಿಬ್ಬಂದಿ ಕುಟುಂಬದವರು ಸಹ ಪ್ರತಿ ಮಂಗಳವಾರ ಕನಿಷ್ಟ ಒಂದು ಊಟ ಇಲ್ಲವೇ ಉಪಹಾರದಲ್ಲಿ ಸಿರಿಧಾನ್ಯ ಬಳಕೆಗೆ ಮುಂದಾಗಿರುವುದು ಸಂತಸ ಮೂಡಿಸಿದೆ. ವಿವಿಯ ಹಾಸ್ಟೆಲ್ ಮತ್ತು ಕ್ಯಾಂಟಿನ್‌ನಲ್ಲಿ ಮಾತ್ರ ಇಡೀ ದಿನದ ಮೆನು ಸಿರಿಧಾನ್ಯಗಳದ್ದೆ ಆಗಿರುತ್ತದೆ. -ಪ್ರೊ|ವಿಷ್ಣುಕಾಂತ ಚೆಟಪಲ್ಲಿ, ಕುಲಪತಿ,
-ಅಮರೇಗೌಡ ಗೋನವಾರ