Advertisement
ಈ ಸಂದರ್ಭದಲ್ಲಿ ಮಾತನಾಡಿದ ಆಯುಕ್ತ ಕುಲದೀಪ್ ಕುಮಾರ್ ಆರ್.ಜೈನ್ ಅವರು, ಕಳೆದ 5 ತಿಂಗಳಲ್ಲಿ ಕಮಿಷನರೆಟ್ ವ್ಯಾಪ್ತಿಯಲ್ಲಿ 402 ಮಂದಿ ಮೊಬೈಲ್ ಕಳೆದುಕೊಂಡಿರುವ ಬಗ್ಗೆ ದೂರು ನೀಡಿದ್ದಾರೆ. ಆ ಪೈಕಿ 124 ಮೊಬೈಲ್‌ಗಳನ್ನು ಪತ್ತೆ ಹಚ್ಚಲಾಗಿದ್ದು 39 ಮೊಬೈಲ್‌ನ್ನು ಜಪ್ತಿ ಮಾಡಿ ವಾರಸುದಾರರಿಗೆ ಹಸ್ತಾಂತರಿಸಲಾಗುತ್ತಿದೆ. ಇವುಗಳ ಒಟ್ಟು ಮೌಲ್ಯ ಸುಮಾರು 7 ಲ.ರೂ.ಗಳಾಗಿವೆ. ಉಳಿದ ಮೊಬೈಲ್‌ಗಳನ್ನು ಕೂಡ ಶೀಘ್ರದಲ್ಲೇ ಜಪ್ತಿ ಮಾಡಲಾಗುವುದು. ಸಿಇಐಆರ್ ಪೋರ್ಟಲ್‌ನ್ನು ಪೊಲೀಸರು ಅಥವಾ ಮೊಬೈಲ್ ಕಳೆದುಕೊಂಡವರು ನೇರವಾಗಿ ಬಳಕೆ ಮಾಡಬಹುದು. ಇದರಿಂದ ಮೊಬೈಲ್ ಪೋನ್ ಪತ್ತೆಗೆ ಹಾಗೂ ಅದರ ಮಾಲಕರಿಗೆ ಮರಳಿಸಲು ಅನುಕೂಲವಾಗುತ್ತದೆ ಎಂದು ತಿಳಿಸಿದರು.
ಕಳ್ಳತನ ಅಥವಾ ಬೇರೆ ಯಾವುದೇ ರೀತಿಯಲ್ಲಿ ಮೊಬೈಲ್ ಫೋನ್ ಕಳೆದುಕೊಂಡರೆ ಅದನ್ನು ಬ್ಲಾಕ್ ಮಾಡಲು ಕೇಂದ್ರ ಸರಕಾರದ ದೂರಸಂಪರ್ಕ ಇಲಾಖೆ ಜಾರಿಗೆ ತಂದಿರುವ ಹೊಸ ವಿಧಾನವೇ ಸಿಇಐಆರ್ ಪೋರ್ಟಲ್(CEIR- Central Equipment Identity Registration Portal). ಮೊಬೈಲ್ ಫೋನ್ ಕಳೆದುಹೋದ ಕೂಡಲೇ ಹತ್ತಿರದ ಪೊಲೀಸಂ ಠಾಣೆಯಲ್ಲಿ ಅಥವಾ ಕೆಎಸ್‌ಪಿ ಆ್ಯಪ್‌ನಲ್ಲಿ ದೂರು ಸಲ್ಲಿಸಿ ಸ್ವೀಕೃತಿ/ ಡಿಜಿಟಲ್ ಇ-ಸ್ವೀಕೃತಿ ಪಡೆದುಕೊಳ್ಳಬೇಕು. ಕಳೆದುಕೊಂಡಿರುವ ಮೊಬೈಲ್ ನಂಬರ್‌ನ ನಕಲಿ ಸಿಮ್ ಕಾರ್ಡ್‌ನ್ನು ಈ ಹಿಂದೆ ಸೇವೆ ಪಡೆಯುತ್ತಿದ್ದ ಸರ್ವಿಸ್ ಪ್ರೊವೈಡರ್‌ನಿಂದ(ಉದಾ: ಏರ್‌ಟೆಲ್, ಜಿಯೋ, ಬಿಎಸ್‌ಎನ್‌ಎಲ್ ಇತ್ಯಾದಿ) ಕಡ್ಡಾಯವಾಗಿ ಪಡೆದುಕೊಳ್ಳಬೇಕು. ಓಟಿಪಿ ಪಡೆಯಲು ಅದನ್ನು ಚಾಲನೆ ಮಾಡಿಟ್ಟುಕೊಳ್ಳಬೇಕು. ಅನಂತರ //www.ceir.gov.in ವೆಬ್‌ಸೈಟ್‌ನಲ್ಲಿ ಕಳೆದುಕೊಂಡ ಮೊಬೈಲ್ ಫೋನ್‌ನ ಮಾಹಿತಿ ನಮೂದಿಸಬೇಕು. ಮಾಹಿತಿ ನಮೂದಿಸಿದ 24 ಗಂಟೆಗಳೊಳಗೆ ಮೊಬೈಲ್‌ಫೋನ್ ಬ್ಲಾಕ್ ಆಗುತ್ತದೆ. ಒಂದು ವೇಳೆ ಮೊಬೈಲ್ ಫೋನ್ ಪತ್ತೆಯಾದರೆ CEIR ಪೋರ್ಟಲ್‌ನಲ್ಲಿ ಲಾಗಿನ್ ಆಗಿ ಅನ್‌ಬ್ಲಾಕ್ ಮಾಡಿ ಉಪಯೋಗಿಸಬಹುದು.
ಡಿಸಿಪಿಗಳಾದ ಅಂಶುಕುಮಾರ್, ದಿನೇಶ್ ಕುಮಾರ್, ಎಸಿಪಿ ಪಿ.ಎ ಹೆಗಡೆ ಉಪಸ್ಥಿತರಿದ್ದರು.
Related Articles
ಒಂದೂವರೆ ತಿಂಗಳ ಹಿಂದೆ ರಥೋತ್ಸವ ಸಂದರ್ಭ ಮೊಬೈಲ್ ಕಳೆದುಕೊಂಡಿದ್ದೆ. ಬರ್ಕೆ ಠಾಣೆಗೆ ದೂರು ನೀಡಿದ್ದೆ. ಮೊಬೈಲ್ ಸಿಗುವ ವಿಶ್ವಾಸ ಇರಲಿಲ್ಲ. ಪೊಲೀಸರು ಆಧಾರ್‌ಕಾರ್ಡ್, ಮೊಬೈಲ್‌ನ ಐಎಂಇಐ ಸಂಖ್ಯೆ ಕೇಳಿದರು. ಶುಕ್ರವಾರ ಬೆಳಗ್ಗೆ ಮೊಬೈಲ್ ಸಿಕ್ಕಿರುವ ಬಗ್ಗೆ ಪೊಲೀಸರು ಪೋನ್ ಮಾಡುವಾಗ ಆಶ್ಚರ್ಯವಾಯಿತು.
-ಡಾ| ಗಾಯತ್ರಿ ಭಟ್ ಬರ್ಕೆ
Advertisement
6 ತಿಂಗಳ ಹಿಂದೆ ಕಳೆದುಕೊಂಡಿದ್ದೆ ಸೆ.29ಕ್ಕೆ ಕುದ್ರೋಳಿ ಜಾತ್ರೆಯ ಸಂದರ್ಭ ನನ್ನ ಬ್ಯಾಗ್‌ನ ಒಳಗಿದ್ದ ಮೊಬೈಲ್ ಕಳವಾಗಿತ್ತು. ಬಂದರು ಪೊಲೀಸರಿಗೆ ದೂರು ನೀಡಿದ್ದೆ. ಕೊರಗಜ್ಜನಿಗೂ ಪ್ರಾರ್ಥನೆ ಮಾಡಿದ್ದೆ. ನಾನು ಆನ್‌ಲೈನ್‌ನಲ್ಲಿ ಮೊಬೈಲ್ ಪತ್ತೆಯ ಬಗ್ಗೆ ಹುಡುಕುತ್ತಾ ಇದ್ದೆ. ಆಗ ಸಿಇಐಆರ್ ವೆಬ್‌ಸೈಟ್ ಬಗ್ಗೆ ಗೊತ್ತಾಯಿತು. ಅದರಲ್ಲಿ ಪೊಲೀಸ್ ಠಾಣೆಗೆ ನೀಡಿದ ದೂರಿನ ಮಾಹಿತಿ ಹಾಗೂ ಮೊಬೈಲ್‌ಗೆ ಸಂಬಂಧಿಸಿದ ಮಾಹಿತಿ ನಮೂದಿಸಿದ್ದೆ. ಈಗ ನನ್ನ ಮೊಬೈಲ್ ಸಿಕ್ಕಿದೆ.
– ಶ್ರಾವ್ಯಾ, ವಿದ್ಯಾರ್ಥಿನಿ ಬಿಜೈ