ತಮಿಳುನಾಡಿನ ಕೂನೂರಿನಲ್ಲಿ ಅತ್ಯಾಧುನಿಕ ಎಂಐ 17ವಿ5 ಹೆಲಿಕಾಪ್ಟರ್ ಪತನದಲ್ಲಿ ದೇಶದ ಮೂರು ಸಶಸ್ತ್ರ ಪಡೆಗಳ ಮುಖ್ಯಸ್ಥ ಜ.ಬಿಪಿನ್ ರಾವತ್, ಅವರ ಪತ್ನಿ ಮಧುಲಿಕಾ ರಾವತ್ ಹಾಗೂ 11 ಮಂದಿ ಸಾವನ್ನಪ್ಪಿದ್ದು, ಈ ಅಫಘಾತ ರಕ್ಷಣಾ ವಲಯ ಸೇರಿದಂತೆ ದೇಶದ ಜನರಲ್ಲಿ ಹಲವು ಅನುಮಾನಗಳನ್ನು ಹುಟ್ಟುಹಾಕಿದೆ.
ಇದನ್ನೂ ಓದಿ:ಮೊದಲ ಡೋಸ್ ವ್ಯಾಕ್ಸಿನೇಷನ್ ನಲ್ಲಿ ಕರ್ನಾಟಕ ನಂ. 1 ಸ್ಥಾನಕ್ಕೆ: ಸಚಿವ ಸುಧಾಕರ್
ಗುರುವಾರ(ಡಿಸೆಂಬರ್ 09) ತನಿಖಾಧಿಕಾರಿಗಳಿಗೆ ಹೆಲಿಕಾಪ್ಟರ್ ಪತನಗೊಂಡ ಸ್ಥಳದಲ್ಲಿ ಬ್ಲ್ಯಾಕ್ ಬಾಕ್ಸ್ (ಕಪ್ಪುಪೆಟ್ಟಿಗೆ) ಪತ್ತೆಯಾಗಿದೆ. ಅಧಿಕಾರಿಗಳ ಮಾಹಿತಿ ಪ್ರಕಾರ, ದುರಂತ ನಡೆದ ಸ್ಥಳದಿಂದ ಒಂದು ಕಿಲೋ ಮೀಟರ್ ದೂರದಲ್ಲಿ ಬ್ಯ್ಲಾಕ್ ಬಾಕ್ಸ್ ಪತ್ತೆಯಾಗಿರುವುದಾಗಿ ತಿಳಿಸಿದ್ದಾರೆ.
ಏನಿದು ಬ್ಲ್ಯಾಕ್ ಬಾಕ್ಸ್:
ಹವಾಮಾನ ವೈಪರೀತ್ಯ, ತಾಂತ್ರಿಕ ದೋಷ ಸೇರಿದಂತೆ ಇತರ ಕಾರಣಗಳಿಂದ ಕೆಲವೊಮ್ಮೆ ಸಂಭವಿಸುವ ವಿಮಾನ, ಹೆಲಿಕಾಪ್ಟರ್ ದುರಂತದ ನಂತರ ಯಾವ ಕಾರಣದಿಂದ ದುರಂತ ಸಂಭವಿಸಿದೆ ಎಂಬುದನ್ನು ಪತ್ತೆ ಹಚ್ಚಲು ಬ್ಲ್ಯಾಕ್ ಬಾಕ್ಸ್ ತನಿಖಾಧಿಕಾರಿಗಳಿಗೆ ಹೆಚ್ಚಿನ ರೀತಿಯಲ್ಲಿ ನೆರವಾಗಲಿದೆ.
ಬ್ಲ್ಯಾಕ್ ಬಾಕ್ಸ್ ನಲ್ಲಿ ಎರಡು ಭಾಗಗಳಿದ್ದು, ಒಂದು ಡಿಜಿಟಲ್ ಕಾಕ್ ಪಿಟ್ ವಾಯ್ಸ್ ರೆಕಾರ್ಡರ್ (ಸಿವಿಆರ್) ಹಾಗೂ ಫ್ಲೈಟ್ ಡಾಟಾ ರೆಕಾರ್ಡರ್(ಎಫ್ ಡಿಆರ್). ಇದೊಂದು ಹಾರ್ಡ್ ಡಿಸ್ಕ್ ನಂತಿರುವ ಉಪಕರಣವಾಗಿದೆ. ಅಷ್ಟೇ ಅಲ್ಲ ಬ್ಲ್ಯಾಕ್ ಬಾಕ್ಸ್ ಅತ್ಯಂತ ರಕ್ಷಣಾತ್ಮಕ ಯಂತ್ರವಾಗಿದೆ. ಕಪ್ಪುಪೆಟ್ಟಿಗೆಯಲ್ಲಿರುವ ವಾಯ್ಸ್ ರೆಕಾರ್ಡರ್ ನಲ್ಲಿ ಕಾಕ್ ಪಿಟ್ ನಲ್ಲಿ ನಡೆದ ಎಲ್ಲಾ ಸಂಭಾಷಣೆಯೂ ದಾಖಲಾಗಿರುತ್ತದೆ. ಪೈಲಟ್ ಪ್ರಯಾಣಿಕರಿಗೆ ನೀಡುವ ಹವಾಮಾನದ ಮುನ್ಸೂಚನೆ, ರೆಡಿಯೋ ಟ್ರಾಫಿಕ್, ಸಿಬಂದಿಗಳ ಜತೆಗಿನ ಸಂಭಾಷಣೆ ಎಲ್ಲವೂ ವಾಯ್ಸ್ ರೆಕಾರ್ಡ್ ನಲ್ಲಿ ದಾಖಲಾಗಿರುತ್ತದೆ.
ಫ್ಲೈಟ್ ಡಾಟಾದಲ್ಲಿ ವಿಮಾನ ಹಾರಾಟ ನಡೆಸುತ್ತಿದ್ದ ಎತ್ತರ, ಹವಾಮಾನ, ಗಾಳಿ, ಎಂಜಿನ್ ಸೇರಿದಂತೆ ಎಲ್ಲಾ ಮಾಹಿತಿಯೂ ಬ್ಲ್ಯಾಕ್ ಬಾಕ್ಸ್ ನಲ್ಲಿ ದಾಖಲಾಗಿರುತ್ತದೆ. ಈ ಮಾಹಿತಿಗಳ ಮೂಲಕ ವಿಮಾನ ದುರಂತಕ್ಕೆ ಪ್ರಮುಖ ಕಾರಣ ಏನೆಂಬುದನ್ನು ತನಿಖಾಧಿಕಾರಿಗಳು ಪತ್ತೆ ಹಚ್ಚುತ್ತಾರೆ ಎಂದು ವರದಿ ವಿವರಿಸಿದೆ.
ಬ್ಲ್ಯಾಕ್ ಬಾಕ್ಸ್ ಬೆಂಕಿ ತಗುಲಿದರೂ ಹಾನಿಗೊಳಗಾಗುವುದಿಲ್ಲ, ನೀರಿನಲ್ಲಿ ಮುಳುಗಿದರೂ ಯಾವುದೇ ಮಾಹಿತಿ ನಷ್ಟವಾಗುವುದಿಲ್ಲ. ಬ್ಲ್ಯಾಕ್ ಬಾಕ್ಸ್ ಅನ್ನು ವಿಮಾನ ಬಾಲದ ಸಮೀಪ ಅತ್ಯಂತ ಭದ್ರವಾಗಿ ಅಳವಡಿಸಲಾಗಿರುತ್ತದೆ. ಒಂದು ವೇಳೆ ಅಪಘಾತ ಸಂಭವಿಸುವ ಮೊದಲು ವಿಮಾನದಲ್ಲಿ ವಿದ್ಯುತ್ ಸೌಲಭ್ಯ ನಿಂತು ಹೋಗಿದ್ದರೆ, ಆ ಸಮಯದಲ್ಲಿನ ರೆಕಾರ್ಡಿಂಗ್ ಲಭ್ಯವಾಗುವುದಿಲ್ಲ.
ಒಂದು ವೇಳೆ ಸಮುದ್ರ ಪ್ರದೇಶದಲ್ಲಿ ಅಪಘಾತ ಸಂಭವಿಸಿ, ವಿಮಾನ ಪತನಗೊಂಡಿದ್ದರೂ ಕೂಡಾ ಬ್ಲ್ಯಾಕ್ ಬಾಕ್ಸ್ ಅನ್ನು ಪತ್ತೆ ಹಚ್ಚಬಹುದಾಗಿದೆ. ಸಮುದ್ರದ ಆಳದಲ್ಲಿ ಮುಳುಗಿದ್ದರೂ ಕೂಡಾ ಬ್ಲ್ಯಾಕ್ ಬಾಕ್ಸ್ ಸುಮಾರು ಎರಡು ಕಿಲೋ ಮೀಟರ್ ಸುತ್ತಳತೆವರೆಗೆ ರೇಡಿಯಸ್ ಸಿಗ್ನಲ್ ಮೂಲಕ ಸಂಪರ್ಕ ಸಾಧಿಸಲು ಸಾಧ್ಯವಾಗುತ್ತದೆ. ಸಮುದ್ರದಲ್ಲಿ ಸುಮಾರು 6,000 ಮೀಟರ್ ಆಳದಲ್ಲಿ ಹುದುಗಿದ್ದರೂ ಕೂಡಾ ಬ್ಲ್ಯಾಕ್ ಬಾಕ್ಸ್ ನೀರಿನ ಒತ್ತಡವನ್ನು ತಡೆದುಕೊಳ್ಳಬಲ್ಲದು.
ಜನರಲ್ ಬಿಪಿನ್ ರಾವತ್ ಅವರು ಪ್ರಯಾಣಿಸುತ್ತಿದ್ದ ಎಂ17 ವಿ5 ಹೆಲಿಕಾಪ್ಟರ್ ಪತನಗೊಂಡಿರುವ ಕಾರಣ ಇನ್ನೂ ನಿಗೂಢವಾಗಿದೆ. ಇದೀಗ ಬ್ಲ್ಯಾಕ್ ಬಾಕ್ಸ್ ಪತ್ತೆಯಾಗಿರುವುದರಿಂದ ಯಾವ ಕಾರಣದಿಂದ ಹೆಲಿಕಾಪ್ಟರ್ ಪತನಗೊಂಡಿದೆ ಎಂಬ ನಿಖರ ಕಾರಣ ತಿಳಿಯಬಹುದಾಗಿದೆ.