ಭಟ್ಕಳ: ತಾಲೂಕಿನ ಹಾಡವಳ್ಳಿಯ ಕುರುಂದೂರಿನ ಬಸವನಬಾಯಿ ಮಹಾಗಣಪತಿ ದೇವರ ಕುರಿತು ಮಂಜುಸುತ ಜಲವಳ್ಳಿಯವರು ರಚಿಸಿದ ಭಕ್ತಿಗೀತೆಗಳ ಸಿ.ಡಿ. ಜಲಧಾರೆಯನ್ನು ದೇವರ ವರ್ಧಂತಿ ಉತ್ಸವದಂದು ಲೋಕಾರ್ಪ ಣೆಗೊಳಿಸಲಾಯಿತು.
ಮಂಜುಸುತ ಜಲವಳ್ಳಿ ಎರಡು ಗೀತೆಗಳನ್ನು ವಾಚಿಸಿ, ಭಗವಂತನ ಪ್ರೇರಣೆ ಮತ್ತು ಅನುಗ್ರಹವೇ ಗೀತೆ ರಚನೆಗೆ ಕಾರಣವಾಗಿದೆ. ಎಲ್ಲಿಯದೋ ಗಿಡದ ಹೂವು ದೇವರ ಪಾದ ಸೇರುವಂತೆ ಎಲ್ಲಿಯವನೋ ಆದ ನಾನು ಈ ಕ್ಷೇತ್ರಕ್ಕೆ ಬಂದು ಶ್ರೀ ದೇವರ ಗೀತೆಗಳನ್ನು ರಚಿಸಿದಂತಾಗಿದೆ. ಇದಕ್ಕೆಲ್ಲವರೂ ದೇವರ ಕೃಪೆಯೇ ಕಾರಣವಾಗಿದೆ ಎಂದರು.
ಇದನ್ನೂ ಓದಿ:ವಿದ್ಯಾರ್ಥಿ ಬಸ್‌ಪಾಸ್ ಪಡೆಯಲು ಹರಸಾಹಸ
ಕೃತಿ ಹಾಗೂ ಕೃತಿಕಾರರನ್ನು ಪರಿಚಯಿಸಿದ ಪ್ರಾರ್ಥನಾ ಪ್ರತಿಷ್ಠಾನದ ಅಧ್ಯಕ್ಷ ಗಂಗಾಧರ ನಾಯ್ಕ ಮಾತನಾಡಿ ಮಂಜುಸುತ ತಾವು ಸಂದರ್ಶಿಸಿದ ಪುಣ್ಯಕ್ಷೇತ್ರಗಳ ಕುರಿತು ಗೀತೆಗಳನ್ನು ರಚಿಸಿ ಅವುಗಳನ್ನು ದಾನಿಗಳ ಅಥವಾ ಸ್ವಂತ ಖರ್ಚಿನಲ್ಲಿ ಮುದ್ರಿಸಿ ಸಂಬಂಧಿಸಿದ ದೇವಾಲಯಗಳಿಗೆ ಉಚಿತ ವಿತರಣೆಗಾಗಿ ಅರ್ಪಿಸುವ ಓರ್ವ ಭಕ್ತಕವಿ. ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದ ಅವರು ಈಗಾಗಲೇ ಈ ದಿಸೆಯಲ್ಲಿ ಮೂವತ್ತಕ್ಕೂ ಹೆಚ್ಚು ಕೃತಿಗಳನ್ನು ರಚಿಸಿ ಬೇರೆ ಬೇರೆ ದೇಗುಲಗಳಿಗೆ ಅರ್ಪಿಸಿದ್ದಾರೆ. ಅವುಗಳಲ್ಲಿ ಭಟ್ಕಳದ ಶ್ರೀಧರ ಪದ್ಮಾವತಿ ದೇವಿ ಹಾಗೂ ನಿತ್ಛಲಮಕ್ಕಿ ತಿರುಮಲ ವೆಂಕಟರಮಣ ದೇವರ ಗೀತೆಗಳು ಧ್ವನಿಸುರುಳಿಗಳಾಗಿ ಬಿಡುಗಡೆಯಾಗಿದೆ ಎಂದರು.
ದೇವಸ್ಥಾನದ ಸಮಿತಿಯಿಂದ ಮಂಜುಸುತ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ದೇವಸ್ಥಾನ ಸಮಿತಿ ಅಧ್ಯಕ್ಷ ಮಂಜುನಾಥ ನಾಯ್ಕ, ಮಾಜಿ ಅಧ್ಯಕ್ಷ ಗಿರೀಶ ನಾಯ್ಕ, ಶಂಕರ ನಾಯ್ಕ ಮುಠ್ಠಳ್ಳಿ, ಮುಖಂಡರಾದ ಮಂಜುನಾಥ ನಾಯ್ಕ ಕರಾವಳಿ, ಎಂ.ಪಿ. ಶೈಲೇಂದ್ರ ಗೌಡ, ಮಾದೇವ ನಾಯ್ಕ ಹಿತ್ತಲಗದ್ದೆ, ಈರಪ್ಪ ನಾಯ್ಕ ಹಾಡವಳ್ಳಿ, ಮಂಜುನಾಥ ನಾಯ್ಕ ಹಂಡೀಮನೆ, ಪ್ರಧಾನ ಅರ್ಚಕ ಗಜಾನನ ಭಟ್, ಗಣಪತಿ ನಾಯ್ಕ ಮುಠ್ಠಳ್ಳಿ ಸೇರಿದಂತೆ ನೂರಾರು ಭಕ್ತರು ಉಪಸ್ಥಿತರಿದ್ದರು.