Advertisement
ಗುರುವಾರ ಬೆಳಗ್ಗೆ ತಮ್ಮ ಪರ ವಕೀಲರ ಜತೆ ಆಗಮಿಸಿದ ಸಂತ್ರಸ್ತೆಯನ್ನು ತನಿಖಾಧಿಕಾರಿ ಕವಿತಾ ನೇತೃತ್ವದ ತಂಡ ಹಾಗೂ ವಿಧಿ ವಿಜ್ಞಾನ ಪ್ರಯೋಗಾಲಯದ ಅಧಿಕಾರಿಗಳು ಆರ್.ಟಿ.ನಗರದ ಗಂಗಾನಗರದಲ್ಲಿರುವ ಪಿ.ಜಿ.ಗೆ ಕರೆದೊಯ್ದು 11 ಗಂಟೆಯಿಂದ ಮಧ್ಯಾಹ್ನ 2 ಗಂಟೆವರೆಗೆ ತಪಾಸಣೆ ನಡೆಸಿದರು.
Related Articles
Advertisement
ಹೆತ್ತವರ ಭೇಟಿಗಾಗಿ ಕಣ್ಣೀರು! :
ಸ್ಥಳ ಮಹಜರು ಸಂದರ್ಭದಲ್ಲಿ ಯುವತಿ ವಿಚಾರಣೆಗೆ ವಿಚಲಿತಗೊಂಡು, ತನ್ನ ಪೋಷಕರ ಭೇಟಿಗೆ ಪಟ್ಟು ಹಿಡಿದಿದ್ದರು ಎನ್ನಲಾಗಿದೆ. ಈ ವೇಳೆ ಪೋಷಕರ ಭೇಟಿಗೆ ಅವಕಾಶ ನೀಡಿದರೆ ತನಿಖಾ ಸಂಸ್ಥೆ ಮೇಲೆ ಅನುಮಾನ ಬರುತ್ತದೆ ಎಂದು ತನಿಖಾಧಿಕಾರಿಗಳು ಹೇಳಿದರು. ಆದರೂ ಪಟ್ಟು ಬಿಡದ ಯುವತಿ ಭೇಟಿಗೆ ಮನವಿ ಮಾಡಿ ಕಣ್ಣೀರು ಹಾಕಿದರು. ತಮ್ಮ ಪರ ವಕೀಲರ ಮೂಲಕ ಪತ್ರ ಕಳುಹಿಸಿದರೆ ಅವಕಾಶ ನೀಡುವುದಾಗಿ ಅಧಿಕಾರಿಗಳು ಹೇಳಿದ್ದಾರೆಂದು ತಿಳಿದು ಬಂದಿದೆ.
ಯುವತಿ ಕೊಠಡಿ ಮೊದಲೇ ಸೀಲ್ :
ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಯುವತಿ ವಾಸವಾಗಿದ್ದ ಪಿ.ಜಿ. ಕೊಠಡಿ ಮೇಲೆ ದಾಳಿ ನಡೆಸಿದ್ದ ಎಸ್‌ಐಟಿ ಅಧಿಕಾರಿಗಳು, 9 ಲ.ರೂ. ಹಾಗೂ ಕೆಲವು ವಸ್ತುಗಳನ್ನು ವಶಕ್ಕೆ ಪಡೆದು ಕೊಠಡಿಯನ್ನು ಸೀಲ್ ಮಾಡಲಾಗಿತ್ತು.
ಇಬ್ಬರು ಎಸ್ಪಿಪಿ : ಸಿ.ಡಿ. ಪ್ರಕರಣದಲ್ಲಿ ಎಸ್‌ಐಟಿ ಪರ ವಾದ ಮಂಡನೆಗೆ ಹೈಕೋರ್ಟ್ ವಕೀಲ ಎಸ್. ಕಿರಣ ಜವಳಿ ಮತ್ತು ಸಿಬಿಐ ಪರ ರಾಜ್ಯದ ವಕೀಲ ಪಿ. ಪ್ರಸನ್ನಕುಮಾರ್ ಅವರನ್ನು ವಿಶೇಷ ಅಭಿಯೋಜಕರನ್ನಾಗಿ ನೇಮಿಸಲಾಗಿದೆ.
ಜಗದೀಶ್ ರಾಜ್ಯದ ಬಾರ್ ಕೌನ್ಸಿಲ್ನಲ್ಲಿ ನೋಂದಾಯಿಸಿಕೊಂಡಿಲ್ಲ :
ಬೆಂಗಳೂರು: ಯುವತಿ ಪರ ವಕಾಲತ್ತು ವಹಿಸಿರುವ ಕೆ.ಎನ್ ಜಗದೀಶ್ ಕುಮಾರ್ ಹೊಸ ವಿವಾದಕ್ಕೆ ಸಿಲುಕಿದ್ದು, ಅವರು ಕರ್ನಾಟಕ ರಾಜ್ಯ ವಕೀಲರ ಪರಿಷತ್ತಿನಲ್ಲಿ (ಬಾರ್ ಕೌನ್ಸಿಲ್) ನೋಂದಾಯಿಸಿಕೊಂಡಿಲ್ಲ ಎನ್ನಲಾಗಿದೆ. ಜತೆಗೆ ಈ ಹೆಸರಿನಲ್ಲಿ ಯಾವುದೇ ವಕೀಲಿಕೆ ಸನ್ನದು ವರ್ಗಾವಣೆ ಕೋರಿ ಮನವಿ ಬಂದಿಲ್ಲ ಎಂದು ರಾಜ್ಯ ವಕೀಲರ ಪರಿಷತ್ತು ತಿಳಿಸಿದೆ.
ಒಂದು ವೇಳೆ ಜಗದೀಶ್ ಬೇರೆ ಯಾವುದೇ ರಾಜ್ಯ ವಕೀಲರ ಪರಿಷ ತ್ತಿನಲ್ಲಿ ನೋಂದಾಯಿಸಿಕೊಂಡಿದ್ದರೆ, ಅವರು ಭಾರತೀಯ ವಕೀಲರ ಪರಿಷತ್ತಿನ ನಿಯಮಗಳ ಪ್ರಕಾರ 6 ತಿಂಗಳ ಬಳಿಕ ರಾಜ್ಯದಲ್ಲಿ ವಕೀಲಿಕೆ ಮುಂದುವರಿಸುವಂತಿಲ್ಲ ಎಂದು ರಾಜ್ಯ ವಕೀಲರ ಪರಿಷತ್ತು ಸ್ಪಷ್ಟನೆ ನೀಡಿದೆ.
ವಕೀಲ ಕೆ.ಎನ್ ಜಗದೀಶ್ ರಾಜ್ಯ ವಕೀಲರ ಪರಿಷತ್ತಿನಲ್ಲಿ ನೋಂದಾಯಿಸಿಕೊಂಡಿರುವ ಕುರಿತು ಮಾಹಿತಿ ನೀಡುವಂತೆ ರಾಜ್ಯ ವಕೀಲರ ಪರಿಷತ್ತಿನ ಹಿರಿಯ ಸದಸ್ಯರಾದ ಎಸ್. ಬಸವರಾಜು ಮನವಿ ಸಲ್ಲಿಸಿದ್ದರು. ಅದಕ್ಕೆ ಮಾಹಿತಿ ನೀಡಿರುವ ಪರಿಷತ್ತು ಕೆ.ಎನ್ ಜಗದೀಶ್ ಕುಮಾರ್ ರಾಜ್ಯದ ಬಾರ್ ಕೌನ್ಸಿಲ್‌ನಲ್ಲಿ ನೋಂದಣಿ ಮಾಡಿಸಿಕೊಂಡಿಲ್ಲ ಎಂದು ಮಾಹಿತಿ ನೀಡಿದೆ.
ಜಗದೀಶ್ ಸ್ಪಷ್ಟನೆ :
ಕರ್ನಾಟಕ ಬಾರ್ ಕೌನ್ಸಿಲ್‌ನಲ್ಲಿ ನೋಂದಣಿ ವಿಚಾರ ಸಂಬಂಧಿಸಿ ಕೆ.ಎನ್.ಜಗದೀಶ್ ಸ್ಪಷ್ಟನೆ ನೀಡಿದ್ದು, ಯುವತಿ ಪರ ವಕಾಲತ್ತು ಹಾಕಲು ನಾವು ಯೋಗ್ಯರಿದ್ದೇವೆ. ಆಲ್ ಇಂಡಿಯಾ ಬಾರ್ ಪರೀಕ್ಷೆ ಪಾಸ್ ಮಾಡಿದ್ದೇನೆ.ಯಾರಾದರೂ ತೋಳಿನಲ್ಲಿ ತಾಕತ್ತು ಇದ್ದರೆ ದೂರು ನೀಡಬಹುದು ಮಕ್ಕಳೇ. ಅವರಿಗೆ ಮುಂದಿನ ದಿನಗಳಲ್ಲಿ ಉತ್ತರಿಸುತ್ತೇನೆ ಎಂದರು. ಕರ್ನಾಟಕ ಕಾನೂನು ವಿಶ್ವವಿದ್ಯಾನಿಲಯದಿಂದ ಎಲ್‌ಎಲ್‌ಬಿ ಪದವಿ ಪಡೆದುಕೊಂಡಿದ್ದೇನೆ. ದಿಲ್ಲಿ ಬಾರ್ ಕೌನ್ಸಿಲ್‌ನಲ್ಲಿ ನೋಂದಣಿಯಾಗಿದೆ ಎಂದು ಸ್ಪಷ್ಟಪಡಿಸಿದರು.