ಬೆಂಗಳೂರು: ಸಿಡಿ ಪ್ರಕರಣ ಸಂಬಂಧ ವಿಶೇಷ ತನಿಖಾ ತಂಡ ಶುಕ್ರವಾರ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರಿಗೆ ಏ.20ರಂದು ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಜಾರಿ ಮಾಡಿದೆ.
ರಮೇಶ್ ಜಾರಕಿಹೊಳಿ ಅವರಿಗೆ ಕೊರೊನಾ ಸೋಂಕು ತಗುಲಿ ಸದ್ಯ ಹೋಮ್ ಕ್ವಾರಂಟೈನ್‌ನಲ್ಲಿರುವ ಹಿನ್ನೆಲೆಯಲ್ಲಿ ಅವರ ಪರವಾಗಿ ಸಹೋದರ ಬಾಲಚಂದ್ರ ಜಾರಕಿಹೊಳಿ ಎಸ್‌ಐಟಿಯಿಂದ ನೋಟಿಸ್ ಸ್ವೀಕರಿಸಿದ್ದಾರೆ.
ಈಗಾಗಲೇ ಸಿಡಿಯಲ್ಲಿರುವ ಯುವತಿಯನ್ನು ಹಲವು ಬಾರಿ ವಿಚಾರಣೆ ನಡೆಸಿರುವ ಎಸ್‌ಐಟಿ ಅಧಿಕಾರಿಗಳು ಸಿಡಿ ಕೇಸ್‌ನ ಹಿಂದಿನ ಹಲವು ರಹಸ್ಯಗಳನ್ನು ಕೆದಕಿ ಸಾಕ್ಷ್ಯ ಕಲೆ ಹಾಕಿದ್ದಾರೆ.
ರಮೇಶ್ ಜಾರಕಿಹೊಳಿ ವಿಚಾರಣೆಗೆ ಹಾಜರಾದರೆ ಅವರಿಂದ ಯಾವೆಲ್ಲ ಮಾಹಿತಿ ಕಲೆ ಹಾಕಬೇಕು ಎಂಬ ಬಗ್ಗೆ ಈಗಾಗಲೇ ಸಿದ್ಧತೆ ನಡೆಸಲಾಗಿದೆ. ಅವರ ವಿಚಾರಣೆ ನಡೆಸಿದ ಬಳಿಕವಷ್ಟೇ ಪ್ರಕರಣದ ತನಿಖೆ ಪ್ರಗತಿ ಸಾಧಿಸಲಿದೆ ಎಂದು ಮೂಲಗಳು ತಿಳಿಸಿವೆ.
ಇದನ್ನೂ ಓದಿ :ಏಪ್ರಿಲ್ 18 ರಂದು ಸಿಎಂ ಜೊತೆ ನಡೆಯಬೇಕಿದ್ದ ಸರ್ವಪಕ್ಷ ಸಭೆ ಮುಂದೂಡಿಕೆ!
ಎರಡು ದಿನಗಳ ಹಿಂದಷ್ಟೇ ಯುವತಿ ಪರ ವಕೀಲ ಸೂರ್ಯ ಮುಕುಂದ ರಾಜ್ ರಮೇಶ್ ಜಾರಕಿಹೊಳಿ ವಿಚಾರಣೆ ನಡೆಸುವವರೆಗೂ ತಮ್ಮ ಕಕ್ಷಿದಾರರಾದ ಯುವತಿ ವಿಚಾರಣೆಗೆ ಹಾಜರಾಗುವುದಿಲ್ಲ ಎಂದು ಹೇಳಿಕೆ ನೀಡಿದ್ದರು. ಈ ಬೆನ್ನಲ್ಲೇ ಎಸ್‌ಐಟಿ ಅವರಿಗೆ ನೋಟಿಸ್ ಜಾರಿ ಮಾಡಿದೆ ಎಂದು ಹೇಳಲಾಗಿದೆ.