Advertisement

ಮಂತ್ರಿಗಿರಿಗಾಗಿ CD ಬ್ಲ್ಯಾಕ್ ಮೇಲ್, ಹಣಕೊಟ್ಟು ಸಚಿವಸ್ಥಾನ ಪಡೆದಿದ್ದಾರೆ: ಯತ್ನಾಳ್ ಆರೋಪ

02:29 PM Jan 13, 2021 | Team Udayavani |

ವಿಜಯಪುರ‌:ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸಲು ನನ್ನ ಬೆಂಬಲ ಕೋರಿದ್ದ ಮೂವರು ಇದೀಗ ಸಿ.ಡಿ ತೋರಿಸಿ ಬ್ಲ್ಯಾಕ್ ಮೇಲ್ ಮಾಡಿ, ಹಣ ನೀಡಿ ಸಚಿವ ಸ್ಥಾನ ಪಡೆದುಕೊಂಡು ಸಂಪುಟ ಸೇರಿದ್ದಾರೆ ಎಂದು ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಗಂಭೀರವಾಗಿ ಆರೋಪಿಸಿದ್ದಾರೆ.

Advertisement

ಬುಧವಾರ(ಜನವರಿ 13, 2021) ಸಂಪುಟ ವಿಸ್ತರಣೆಯಾದ ಬೆನ್ನಲ್ಲೇ ತಮಗೆ ಅವಕಾಶ ಸಿಗದ ಹಿನ್ನೆಲೆಯಲ್ಲಿ ಅಸಮಧಾನ ಹೊರ ಹಾಕಿದ ಯತ್ನಾಳ, ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸುವ ಕುತಂತ್ರ ನಡೆಸಿ ಬ್ಲ್ಯಾಕ್ ಮೇಲ್ ಮಾಡಿದ ಮೂವರು ಇದೀಗ ಸಚಿವ ಸ್ಥಾನ‌ ಪಡೆದಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಇದೇ ಮೂವರು ಈ ಹಿಂದೆ ನನ್ನ ಭೇಟಿಯಾಗಿದ್ದರು. ನಾವೆಲ್ಲರೂ ಒಗ್ಗೂಡಿ ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸೋಣ, ನಮಗೆ ಬೆಂಬಲ ನೀಡಿ ಎಂದು ಕೋರಿದ್ದರು.ಅವರ ಮಾತು ಕೇಳಿ ನನಗೆ ಆಶ್ಚರ್ಯವಾಗಿತ್ತು. ಈಗಲೂ ಅಷ್ಟೇ ಅಚ್ಚರಿಯಾಗಿದೆ ಎಂದ ಯತ್ನಾಳ, ಆದರೆ ಬ್ಲ್ಯಾಕ್ ಮೇಲ್ ಮಾಡಿದ ಮೂವರಲ್ಲಿ ಯಾರೊಬ್ಬರ ಹೆಸರು ಹೇಳದೇ ವಾಗ್ದಾಳಿ ನಡೆಸಿದರು.

ಹಣ ನೀಡಿದವರಿಗೆ,  ಬ್ಲ್ಯಾಕ್ ಮೇಲ್ ಮಾಡಿದವರಿಗೆ ಸಚಿವ ಸ್ಥಾನ ಸಿಕ್ಕಿದೆ. ಕೆಲವರು ಸಿಡಿ ತೋರಿಸಿ ಯಡಿಯೂರಪ್ಪ ಅವರನ್ನು ಹೆದರಿಸಿ ಸಚಿವರಾಗಿದ್ದಾರೆ. ಇನ್ನು ಕೆಲವರು ಅಪಾರ ಪ್ರಮಾಣದ ಹಣ ನೀಡಿ ಸಚಿವರಾಗಿದ್ದಾರೆ ಎಂದು ದೂರಿದರು.

ಮುಖ್ಯಮಂತ್ರಿ ಯಡಿಯೂರಪ್ಪ ವೀರಶೈವ-ಲಿಂಗಾಯತ ಸಮಾಜದ ಮರ್ಯಾದೆಯನ್ನ ಕಳೆದಿದ್ದಾರೆ. ಸಿಎಂ ಯಡಿಯೂರಪ್ಪ ಅವರಿಗೆ ನೈತಿಕತೆ ಇದ್ದರೆ ರಾಜೀನಾಮೆ ನೀಡಿ ಹೊರಬರಲಿ ಎಂದು ಸವಾಲು ಹಾಕಿದರು.

Advertisement

ವೀರಶೈವ ಲಿಂಗಾಯತ ಮಠಗಳಿಗೆ ಹಣ ನೀಡಿರುವ ಯಡಿಯೂರಪ್ಪ, ಅಧಿಕಾರದಿಂದ ತಮ್ಮನ್ನು ಕೆಳಗೆ ಇಳಿಸಿದರೆ ತಮ್ಮಿಂದ ಹಣ ಪಡೆದ ಮಠಗಳು ಕೇಂದ್ರದ ವಿರುದ್ಧ ಬಂಡೇಳುವಂತೆ ಯೋಜನೆ ರೂಪಿಸಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು. ಸಂಕ್ರಮಣದ ಉತ್ತರಾಯಣದ ಮೂಲಕ ಸಿಎಂ ಯಡಿಯೂರಪ್ಪ ಅವರ ರಾಜಕೀಯ ಅಧಪತನ ಆರಂಭವಾಗಿದೆ, ಕಾದು ನೋಡಿ ಎಂದು ಭವಿಷ್ಯ ನುಡಿದರು.

Advertisement

Udayavani is now on Telegram. Click here to join our channel and stay updated with the latest news.

Next