Advertisement

ಸಿಸಿಟಿವಿ ಅಳವಡಿಕೆ ನಿರೀಕ್ಷೆಯಲ್ಲಿ ಸಾರ್ವಜನಿಕರು

09:40 AM Feb 10, 2018 | Karthik A |

ಸಿದ್ದಾಪುರ: ಕುಂದಾಪುರ ತಾಲೂಕಿನಲ್ಲಿ ಅತಿ ವೇಗವಾಗಿ ಬೆಳೆಯುತ್ತಿರುವ ಗ್ರಾಮ ಸಿದ್ದಾಪುರ. ಜನ ಓಡಾಟ ನಿರಂತರವಾಗಿದ್ದರೂ ಸುರಕ್ಷತೆ ದೃಷ್ಟಿಯಿಂದ ಇಲ್ಲಿ ಸಿಸಿಟಿವಿ ಕೆಮರಾ ಮಾತ್ರ  ಇಲ್ಲ. ಅಹಿತಕರ ಘಟನೆಗಳು, ಕಳ್ಳತನ ಇಲ್ಲಿ ನಡೆಯುತ್ತಿದ್ದರೂ ಈ ಬಗ್ಗೆ ಸಂಬಂಧಪಟ್ಟವರು ಇನ್ನೂ ಎಚ್ಚೆತ್ತುಕೊಂಡಿಲ್ಲ.  

Advertisement

ಸುರಕ್ಷತೆಗೆ ಬೇಕು ಸಿಸಿಟಿವಿ ಕೆಮರಾ
ಸಿದ್ದಾಪುರ ಘಟ್ಟದ ಮೇಲಿನವರಿಗೆ ಮತ್ತು ಕೆಳಗಿನವರಿಗೆ ವ್ಯಾವಹಾರಿಕ ಪ್ರದೇಶ. ದೊಡ್ಡ ಸಂತೆ ನಡೆಯುವ ಸ್ಥಳವೂ ಹೌದು. ನೂರಾರು ವಾಹನಗಳು ರಾತ್ರಿ ಹಗಲೆನ್ನದೆ ಸಿದ್ದಾಪುರ ಮಾರ್ಗದ ಮೂಲಕವೇ ಕರಾವಳಿ-ಶಿವಮೊಗ್ಗ ಸಂಪರ್ಕಿಸುತ್ತವೆ. ಪ್ರತಿದಿನ 10 ಸಾವಿರಕ್ಕೂ ಹೆಚ್ಚು ಜನ ಇಲ್ಲಿ ವ್ಯವಹಾರಕ್ಕೆ ಬಂದು ಹೋಗುತ್ತಾರೆ. ಆದ್ದರಿಂದ ಇಲ್ಲಿ ಜನಜಂಗುಳಿ ಸಾಮಾನ್ಯವಾಗಿದ್ದು, ಸಿಸಿಟಿವಿ ಕೆಮರಾ ಇಲ್ಲದ್ದರಿಂದ ಅಹಿತಕರ ಘಟನೆ ನಡೆದಲ್ಲಿ ಆರೋಪಿಗಳನ್ನು ಪತ್ತೆಹಚ್ಚುವುದು ಕಷ್ಟವಾಗಿದೆ. ಈಗಾಗಲೇ ಅನೇಕ ಘಟನೆಗಳು ನಡೆದಿದ್ದರೂ ಆರೋಪಿ ಗಳ ಪತ್ತೆ ಇಂದಿಗೂ ಸಾಧ್ಯವಾಗಿಲ್ಲ.

ಪರಾರಿಯಾಗಲು ಸುಲಭ
ಅಕ್ರಮ ಚಟುವಟಿಕೆಯಲ್ಲಿ ತೊಡಗಿಕೊಂಡವರಿಗೂ ಪರಾರಿಯಾಗಲು ಸಿದ್ದಾಪುರ ಸುಲಭ ಮಾರ್ಗವಾಗಿದೆ. ಇಲ್ಲಿ ಸಿಸಿಟಿವಿ ಕೆಮರಾ ಅಳವಡಿಸಿದರೆ ದಂಧೆಗಳಿಗೆ ಬ್ರೇಕ್‌ ಬೀಳಬಹುದು. ಇದು ಸಾರ್ವಜನಿಕರ ಬೇಡಿಕೆಯೂ ಆಗಿದೆ. ಇದಕ್ಕೆ ಸ್ಥಳೀಯಾಡಳಿತ ಸ್ಪಂದಿಸಬೇಕಾಗಿದೆ.

ದಾನಿಗಳು ಸಹಕರಿಸಿ 
ಸಾರ್ವಜನಿಕರ ರಕ್ಷಣೆಗೋಸ್ಕರ ಸಿದ್ದಾಪುರದಲ್ಲಿ ಸಿ.ಸಿ. ಕೆಮರಾ ಅಳವಡಿಸುವ ಬಗ್ಗೆ ಗಮನದಲ್ಲಿದ್ದು ದಾನಿಗಳು ಸಹಕರಿಸಿದರೆ ಅದರೊಂದಿಗೆ ಸ್ಥಳೀಯಾಡಳಿತ ಸಹಕರಿಸಲಿದೆ.  
– ಡಿ. ಭರತ್‌ ಕಾಮತ್‌,  ಉಪಾಧ್ಯಕ್ಷರು ಗ್ರಾ. ಪಂ. ಸಿದ್ದಾಪುರ

ಅಪರಾಧ ತಡೆಗಟ್ಟಲು ಅಗತ್ಯ
ಸಾರ್ವಜನಿಕರ ಹಿತದೃಷ್ಟಿಯಿಂದ ಸಿದ್ದಾಪುರದಲ್ಲಿ ಸಿ.ಸಿ. ಕೆಮರಾ ಅಳವಡಿಸುವುದು ಉತ್ತಮ. ಇದರ ಅಳವಡಿಕೆಯಿಂದ ಅಪರಾಧ ತಡೆಗಟ್ಟಲು ಹಾಗೂ ಪತ್ತೆಹಚ್ಚಲು ಸಹಕಾರಿಯಾಗುತ್ತದೆ. ಇದರ ಬಗ್ಗೆ ಇಲಾಖೆಯ ಮೇಲಧಿಕಾರಿಗಳ ಗಮನಕ್ಕೆ ತರುತ್ತೇವೆ. ಇದಕ್ಕೆ ಸಾರ್ವಜನಿಕರ ಸಹಕಾರವೂ ಬೇಕು.
– ಸುನಿಲ್‌ ಕುಮಾರ್‌,  ಠಾಣಾಧಿಕಾರಿ, ಪೊಲೀಸ್‌ ಠಾಣೆ ಶಂಕರನಾರಾಯಣ

Advertisement

– ಸತೀಶ ಆಚಾರ್‌ ಉಳ್ಳೂರು

Advertisement

Udayavani is now on Telegram. Click here to join our channel and stay updated with the latest news.

Next