ಬೆಂಗಳೂರು: ದರೋಡೆ ಹಾಗೂ ಎದುರಾಳಿ ಗುಂಪಿನ ರೌಡಿಶೀಟರ್ ನನ್ನು ಕೊಲೆಗೈಯಲು ಸಂಚು ರೂಪಿಸಿದ್ದ ಕುಖ್ಯಾತ ರೌಡಿಶೀಟರ್ ಸೋಮ ಅಲಿಯಾಸ್ ಕಾಡುಬೀಸನಹಳ್ಳಿ ಸೋಮ ಮತ್ತು ಆತನ ಮೂವರು ಸಹಚರರನ್ನು ಕೇಂದ್ರ ಅಪರಾಧ ವಿಭಾಗ(ಸಿಸಿಬಿ) ಪೊಲೀಸರು ಬಂಧಿಸಿದ್ದಾರೆ.
ಸೋಮ ಅಲಿಯಾಸ್ ಕಾಡುಬೀಸನಹಳ್ಳಿ ಸೋಮ (40), ಒಡಗೆರೆ ನಿವಾಸಿ ಮಧು(24), ಸರ್ಜಾಪುರದ ಸುಮಂತ್ ಕುಮಾರ್ (24) ಮತ್ತು ವರ್ತೂರಿನ ಮುನಿಯಲ್ಲಪ್ಪ ಅಲಿಯಾಸ್ ಮಚ್ಚು ಮುನಿಯ (33) ಬಂಧಿತರು. ಆರೋಪಿಗಳಿಂದ ಕೃತ್ಯಕ್ಕೆ ಬಳಸಿದ್ದ ಮಾರಕಾಸ್ತ್ರಗಳನ್ನು ವಶಕ್ಕೆ ಪಡೆಯಲಾಗಿದೆ.
ಆರೋಪಿಗಳ ಪೈಕಿ ಸೋಮ ಮಾರತ್ತಹಳ್ಳಿ ಠಾಣೆಯ ರೌಡಿಶೀಟರ್ ಆಗಿದ್ದು,ಈತನ ವಿರುದ್ಧ ಎಚ್‌ಎಎಲ್ ಠಾಣೆಯಲ್ಲಿ ಒಂದ ಜೋಡಿ ಕೊಲೆ, ಕೊಲೆ ಯತ್ನ, ನಾಲ್ಕು ಬೆದರಿಕೆ, ದರೋಡೆ ಸೇರಿ 9 ಪ್ರಕರಣಗಳು ದಾಖಲಾಗಿವೆ. ಮಧು ವರ್ತೂರು ಠಾಣೆಯ ರೌಡಿಶೀಟರ್ ಆಗಿದ್ದು, ಈತನ ವಿರುದ್ಧ ಕೊಲೆ, ಕೊಲೆಯತ್ನ ಪ್ರಕರಣಗಳು, ಮುನಿಯಲ್ಲಪ್ಪ ವಿರುದ್ಧ ಕಾಡುಗೋಡಿ ಠಾಣೆಯಲ್ಲಿ ಒಂದು ಕೊಲೆ ಯತ್ನ ಪ್ರಕರಣ ದಾಖಲಾಗಿವೆ ಎಂದು ಪೊಲೀಸರು ಹೇಳಿದರು.
ಇದನ್ನೂ ಓದಿ :ಜೂನ್ ನಲ್ಲಿ 10 ಕೋಟಿ ಡೋಸ್ ಕೋವಿಶೀಲ್ಡ್ ಲಸಿಕೆ ಪೂರೈಸುತ್ತೇವೆ : ಕೇಂದ್ರಕ್ಕೆ ಎಸ್ಐಐ ಭರವಸೆ
ಸೋಮ ತನ್ನ ಎದುರಾಳಿ ಮಾರತ್ತಹಳ್ಳಿ ಠಾಣೆಯ ರೌಡಿಶೀಟರ್ ಆಗಿರುವ ರೋಹಿತ್ ಅಲಿಯಾಸ್ ಕಾಡುಬೀಸನಹಳ್ಳಿ ರೋಹಿತ್ ಕೊಲೆಗೆ ತನ್ನ ಸಹಚರರ ಜತೆ ಸೇರಿಕೊಂಡು ಸಂಚು ರೂಪಿಸಿ ವರ್ತೂರು ಕೆರೆ ಕೋಡಿ ರಸ್ತೆಯಲ್ಲಿ ಹೋಗುತ್ತಿರುವ ಮಾಹಿತಿ ಮೇರೆಗೆ ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು.
ಈ ಹಿಂದೆ ರೋಹಿತ್, ಸೋಮನ ಕೊಲೆಗೈಯಲು ಮಂಗಳೂರಿನಿಂದ ಯುವಕರನ್ನು ಕರೆಸಿ ಎರಡು ಪಿಸ್ತೂಲ್ ಮತ್ತು ಮಾರಕಾಸ್ತ್ರಗಳನ್ನು ಇಟ್ಟುಕೊಂಡು ಸಂಚು ಹಾಕಿದ್ದ. ಈ ಮಾಹಿತಿ ಮೇರೆಗೆ ಅವರನ್ನು ಬಂಧಿಸಿ ಜೈಲಿಗೆ ಕಳುಹಿಸಲಾಗಿತ್ತು ಎಂದು ಸಿಸಿಬಿ ಪೊಲೀಸರು ಹೇಳಿದರು.